Rishi Panchami: ಕುಟುಂಬದಲ್ಲಿ ಸಂತೋಷದಿಂದ ದೀರ್ಘ ಸುಮಂಗಲಿಯವರೆಗೆ; ಋಷಿ ಪಂಚಮಿಯ ವ್ರತದಿಂದ ಸಿಗುವ ಲಾಭಗಳಿವು
Sep 08, 2024 08:20 PM IST
Rishi Panchami: ಕುಟುಂಬದಲ್ಲಿ ಸಂತೋಷದಿಂದ ದೀರ್ಘ ಸುಮಂಗಲಿಯವರೆಗೆ; ಋಷಿ ಪಂಚಮಿಯ ವ್ರತದಿಂದ ಸಿಗುವ ಲಾಭಗಳಿವು
- Rishi Panchami: ಋಷಿ ಪಂಚಮಿ ವ್ರತ ಮಾಡಿದರೆ ಕೌಟುಂಬಿಕ ಜೀವನದ ಕಷ್ಟ ನಷ್ಟಗಳು ದೂರವಾಗಿ ಸುಖ ಸಂತೋಷವು ನೆಲೆಸುವುದಲ್ಲದೆ, ದೀರ್ಘ ಸುಮಂಗಲಿಯಾಗುವ ವರವನ್ನು ಪಡೆಯುತ್ತಾರೆ. ಈ ವ್ರತಾಚರಣೆಯಿಂದ ಇನ್ನೂ ಏನೆಲ್ಲಾ ಲಾಭಗಳಿವೆ. ವ್ರತದ ಕಥೆಯನ್ನು ಜ್ಯೋತಿಷಿ ಎಚ್ ಸತೀಶ್ ಅವರು ತಿಳಿಯಿರಿ.
Rishi Panchami 2024: ಭಾದ್ರಪದ ಮಾಸದ ಶುದ್ಧ ಪಂಚಮಿಯ ದಿನದಂದು ಋಷಿ ಪಂಚಮಿಯನ್ನು ಆಚರಿಸುತ್ತೇವೆ. ಈ ಬಾರಿ ಸೆಪ್ಟಂಬರ್ ತಿಂಗಳ 8 (ಭಾನುವಾರ) ರಂದು ಋಷಿಪಂಚಮಿ ಆಚರಿಸಲಾಗಿದೆ. ಈ ದಿನ ಮಧ್ಯಾಹ್ನ 3.16 ರವರೆಗು ಪಂಚಮಿ ಇರುವ ಕಾರಣ ಈ ದಿನ ಋಷಿಪಂಚಮಿ ವ್ರತವನ್ನು ಆಚರಿಸಲಾಗುತ್ತೆ. ಈ ದಿನದಂದು ವಿಶೇಷವಾಗಿ ಸಪ್ತ ಋಷಿಗಳನ್ನು ಪೂಜಿಸುತ್ತಾರೆ. ಆ ನಂತರ ಆಹಾರವನ್ನು ಸೇವಿಸಬೇಕು. ಇದನ್ನು ಮದುವೆಯಾಗಿರುವ ಮಹಿಳೆಯರು ಮಾತ್ರ ಆಚರಿಸುತ್ತಾರೆ. ಇದರಿಂದ ಅವರ ಕೌಟುಂಬಿಕ ಜೀವನದ ಕಷ್ಟ ನಷ್ಟಗಳು ದೂರವಾಗಿ ಸುಖ ಸಂತೋಷವು ನೆಲೆಸುವುದಲ್ಲದೆ, ದೀರ್ಘ ಸುಮಂಗಲಿಯಾಗುವ ವರವನ್ನು ಪಡೆಯುತ್ತಾರೆ. ಉಪಾಕರ್ಮದಲ್ಲಿನ ಆಚರಣೆಯಂತೆ ಈ ದಿನವೂ ಸಪ್ತರ್ಷಿಗಳಾದ ವಶಿಷ್ಠ, ಕಶ್ಯಪ, ವಿಶ್ವಾಮಿತ್ರ, ಅತ್ರಿ, ಜಮದಗ್ನಿ, ಗೌತಮ ಮತ್ತು ಭಾರಧ್ವಜರನ್ನು ಪೂಜಿಸಲಾಗುತ್ತದೆ. ಈದಿನ ದಿನವಿಡೀ ಜಾಗರಣೆ ಮಾಡಬೇಕಾಗುತ್ತದೆ.
ತಾಜಾ ಫೋಟೊಗಳು
ಶ್ರೀಕೃಷ್ಣನು ಧರ್ಮರಾಜನಿಗೆ ಹೇಳಿದ ವ್ರತವಿದು
ಈ ವ್ರತದ ಆಚರಣೆಯಿಂದ ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪವು ನಿವಾರಣೆಯಾಗುತ್ತವೆ. ಶ್ರೀಕೃಷ್ಣನು ಪಾಂಡವರಿಗೆ ಹಲವಾರು ವ್ರತಗಳ ಬಗ್ಗೆ ಹೇಳಿರುತ್ತಾನೆ. ಆದರೆ ಒಮ್ಮೆ ಧರ್ಮರಾಯನೇ ಕೃಷ್ಣನನ್ನು ಕುರಿತು ಹಿಂದಿನ ಜನ್ಮಗಳಲ್ಲಿ ಮಾಡಿರುವ ಸಕಲ ಪಾಪಗಳಿಂದ ದೂರವಾಗಲು ಮಾಡಬಹುದಾದ ವ್ರತವೊಂದನ್ನು ತಿಳಿಸಲು ಕೇಳುತ್ತಾನೆ. ಆಗ ಶ್ರೀಕೃಷ್ಣನು ಧರ್ಮರಾಜನಿಗೆ ಹೇಳುವ ವ್ರತವೇ ಈ ಋಷಿಪಂಚಮಿ ವ್ರತ. ಇದರ ಬಗ್ಗೆ ಕಥೆಯೊಂದಿದೆ.
ಋಷಿ ಪಂಚಮಿ ಕಥೆಯನ್ನೂ ಕೇಳಿ
ವಿದರ್ಭ ಎಂಬುದು ಒಂದು ದೇಶ. ಆ ದೇಶದಲ್ಲಿ ಉದಂಕ ಮತ್ತು ಸುಶೀಲೆ ಎಂಬ ದಂಪತಿಗಳು ವಾಸವಾಗಿದ್ದರು. ಸುಶೀಲೆಗೆ ಒಬ್ಬ ಮಗಳು ಮತ್ತು ಒಬ್ಬ ಮಗನಿರುತ್ತಾರೆ. ಮಗನು ಬುದ್ಧಿವಂತಿಕೆಯಿಂದ ಪ್ರತಿಯೊಂದು ವಿದ್ಯೆಯನ್ನು ಕಲಿತು ಜನಾನುರಾಗಿಯಾತ್ತಾನೆ. ದಿನ ಕಳೆದಂತೆ ಮಗಳಿಗೆ ಯೋಗ್ಯವರನನ್ನು ಹುಡುಕಿ ವಿವಾಹವನ್ನು ಮಾಡುತ್ತಾರೆ. ಆದರೆ ದುರದೃಷ್ಟವಶಾತ್ ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಂದ ಆಕೆಯ ಪತಿಯು ಅಸು ನೀಗುತ್ತಾನೆ.
ಬೇರೆ ದಾರಿ ಇಲ್ಲದೆ ಆಕೆಯು ತಂದೆ ತಾಯಿಯ ಸೇವೆ ಮಾಡಿಕೊಂಡು ತವರು ಮನೆಯಲ್ಲಿ ನೆಲೆಸುತ್ತಾಳೆ. ಈ ನೋವನ್ನು ಭರಿಸಲಾಗದೆ ಉದಂಕನು ಮನೆಯನ್ನು ತೊರೆದು ಗಂಗಾ ನದಿಯ ತೀರದ ಒಂದು ಗ್ರಾಮದಲ್ಲಿ ಜೀವನ ನಡೆಸುತ್ತಿರುತ್ತಾನೆ. ಒಂದು ದಿನ ಮಲಗಿದ್ದ ಮಗಳ ಶರೀರದಲ್ಲಿ ಹುಳುಗಳು ತುಂಬುತ್ತವೆ. ಇದನ್ನು ಕಂಡ ಉದಂಕನ ಶಿಷ್ಯರು ಸುಶೀಲೆಗೆ ಇದರ ಬಗ್ಗೆ ತಿಳಿಸುತ್ತಾರೆ. ಮಗಳ ಸ್ಥಿತಿಯನ್ನು ನೋಡಿ ನೊಂದು ಹೋದ ಸುಶೀಲಯು ಇರುವ ವಿಚಾರವನ್ನು ಪತಿಗೆ ತಿಳಿಸುತ್ತಾಳೆ. ಆಗ ಸುಶೀಲೆಯ ಪತಿಯು ತನ್ನ ದಿವ್ಯ ಜ್ಞಾನದಿಂದ ಮಗಳು ಏಳು ಜನ್ಮಗಳ ಹಿಂದೆ ಸ್ತ್ರೀಯಾಗಿದ್ದು ರಸಜ್ವಾಲೆಯಾಗಿದ್ದಾಗ ಮಾಡಿದ ಪಾಪದಿಂದ ಈ ತೊಂದರೆ ಉಂಟಾಗಿದೆ ಎಂದು ತಿಳಿಸುತ್ತಾನೆ. ಇದರಿಂದ ಪಾರಾಗಲು ಋಷಿಪಂಚಮಿ ವ್ರತವನ್ನು ಆಚರಿಸಬೇಕು ಎಂದು ಹೇಳುತ್ತಾನೆ.
ಇದನ್ನು ಗೃಹಿಣಿಯರೇ ಆಚರಿಸಬೇಕೆಂದು ತಿಳಿಸುತ್ತಾನೆ. ಅಂದಿನ ದಿನ ಉಪವಾಸವಿರಬೇಕು. ಸೂರ್ಯೋದಯಕ್ಕೆ ಮುನ್ನವೇ ಎದ್ದು ಮುಂಬಾಗಿಲಿನಲ್ಲಿ ರಂಗೋಲಿ ಬಿಡಿಸಬೇಕು. ಪೂಜೆ ಮಾಡುವ ಸ್ಥಳದಲ್ಲಿಯೂ ರಂಗೋಲಿ ಹಾಕಬೇಕು. ಆನಂತರ ಸರ್ವತೋಭದ್ರವಾದ ಮಂಡಲವನ್ನು ರಚಿಸಬೇಕು. ಆನಂತರ ತಾಮ್ರ, ಬೆಳ್ಳಿ, ಚಿನ್ನದ ಪಾತ್ರೆಗಳಲ್ಲಿ ಯಾವುದಾದರೂ ಒಂದರಲ್ಲಿ ನೀರನ್ನು ತುಂಬಿ, ಸಪ್ತ ಋಷಿಗಳಿಗೆ ಪೂಜೆ ಸಲ್ಲಿಸಬೇಕು. ಮುಖ್ಯ ವಿಚಾರವೆಂದರೆ ಆರಂಭದಲ್ಲಿ ಅಥವಾ ಅಂತ್ಯದಲ್ಲಿ ಉದ್ಯಾಪನೆಯನ್ನು ಮಾಡಬೇಕು.
ಬಂಗಾರದಲ್ಲಿ ಅಥವಾ ಇನ್ನಾವುದಾದರು ಲೋಹದಲ್ಲಿ ಏಳು ಋಷಿಗಳ ಪ್ರತಿಮೆ ಮಾಡಿಸಿ ಅವುಗಳ ಜೊತೆಯಲ್ಲಿ ಏಳು ಕಳಶಗಳನ್ನು ಇಟ್ಟು ಸಪ್ತ ಋಷಿಗಳನ್ನು ಪೂಜಿಸಬೇಕು. ಉಪವಾಸ ಮತ್ತು ಜಾಗರಣೆಯನ್ನು ಮಾಡಿ ಮಾರನೆಯ ದಿನ ತಿಲಹೋಮವನ್ನು ಮಾಡಿಸಬೇಕು. ಆನಂತರ ಕಲಶ, ಪ್ರತಿಮೆ ಮತ್ತು ಇನ್ನಿತರ ವಸ್ತುಗಳನ್ನು ಏಳು ಜನರಿಗೆ ದಾನ ನೀಡಬೇಕು. ಇದರೊಂದಿಗೆ ಗೋದಾನವನ್ನು ಮಾಡಬೇಕು. ಸಾಧ್ಯವಾಗದ ಪಕ್ಷದಲ್ಲಿ ಹಸುವಿನ ಪ್ರತಿಮೆಯನ್ನು ದಾನ ನೀಡಬೇಕು. ಆನಂತರ ಅನಾಥರಿಗೆ ಭೋಜನದ ವ್ಯವಸ್ಥೆ ಮಾಡಬೇಕು. ಈ ವ್ರತದಿಂದ ಜನ್ಮಜನ್ಮಾಂತರದ ಶಾಪವು ಪರಿಹಾರವಾಗುವುದು ಎಂದುಕೃಷ್ಣನು ಧರ್ಮರಾಯನಿಗೆ ತಿಳಿಸುತ್ತಾನೆ. ಇದು ಅತ್ಯಂತ ಕಠಿಣ ವ್ರತವಾಗಿದ್ದು ಆ ದಿನ ಉಪವಾಸ ಮಾಡುವುದಲ್ಲದೆ ಮತ್ತು ಜಾಗರಣೆ ಇರಬೇಕು. ನಂತರದ ಮಾರನೆಯ ದಿನವೂ ಹೋಮ ಮಾಡುವವರೆಗೂ ಉಪವಾಸ ಇರಬೇಕಾಗುತ್ತದೆ.