Ugadi 2024: ಕ್ರೋಧಿನಾಮ ಸಂವತ್ಸರದಲ್ಲಿ ಬರುವ ಪ್ರಮುಖ ಹಬ್ಬಗಳು ಯಾವುವು, ಈ ಹಬ್ಬಗಳ ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ
Apr 02, 2024 06:30 AM IST
ಕ್ರೋಧಿನಾಮ ಸಂವತ್ಸರದಲ್ಲಿ ಬರುವ ಪ್ರಮುಖ ಹಬ್ಬಗಳು ಯಾವುವು
- ಈ ವರ್ಷ ಹಿಂದೂಗಳ ಹೊಸ ವರ್ಷ ಯುಗಾದಿ ಏಪ್ರಿಲ್ 9ರಂದು ಬಂದಿದೆ. ಅಂದಿನಿಂದ ಹೊಸ ಸಂವತ್ಸರ ಅಂದರೆ ಕ್ರೋಧಿನಾಮ ಸಂವತ್ಸರ ಆರಂಭವಾಗುತ್ತದೆ. ಈ ಕ್ರೋಧಿನಾಮ ಸಂವತ್ಸರದಲ್ಲಿ ಬರುವ ಪ್ರಮುಖ ಹಬ್ಬಗಳು, ಅವುಗಳ ದಿನಾಂಕ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
ಯುಗಾದಿ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಹೊಸ ಯುಗದ ಆರಂಭವಾದ ಯುಗಾದಿಯನ್ನು ಹಿಂದೂಗಳು ಹೊಸ ವರ್ಷ ಎಂದು ಆಚರಿಸುತ್ತಾರೆ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯಂದು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2024 ರಲ್ಲಿ ಏಪ್ರಿಲ್ 9ರಂದು ಯುಗಾದಿ ಹಬ್ಬವಿದೆ. ಬ್ರಹ್ಮದೇವನು ಚೈತ್ರ ಮಾಸದ ಮೊದಲ ದಿನದಿಂದ ವಿಶ್ವದ ಸೃಷ್ಟಿಯನ್ನು ಪ್ರಾರಂಭಿಸಿದನು ಎಂದು ಪುರಾಣಗಳು ಹೇಳುತ್ತವೆ.
ತಾಜಾ ಫೋಟೊಗಳು
ದೇಶದ ಬೇರೆ-ಬೇರೆ ರಾಜ್ಯಗಳಲ್ಲಿ ಬೇರೆ-ಬೇರೆ ಹೆಸರಿನಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿ ಆಚರಿಸಿದರೆ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ನೆರೆ ರಾಜ್ಯ ಕೇರಳ ಮುಂತಾದೆಡೆ ಸೌರಮಾನ ಯುಗಾದಿ (ವಿಶು) ಆಚರಣೆ ಇದೆ. ಹಿಂದೂ ಧರ್ಮಿಯರು ಈ ಹೊಸವರ್ಷವನ್ನು ತಮ್ಮದೇ ವಿಶಿಷ್ಟ ಸಂಪ್ರದಾಯಗಳ ಮೂಲಕ ಆಚರಿಸುತ್ತಾರೆ.
ಭಾರತವು ಹಬ್ಬಗಳ ನಾಡು ಎಂದು ಕರೆದರೆ ತಪ್ಪಿಲ್ಲ. ಪ್ರತಿ ವರ್ಷ ಇಲ್ಲಿ ಅನೇಕ ಹಬ್ಬಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಹೊಸ ವರ್ಷ ಯುಗಾದಿಯನ್ನು ಬರಮಾಡಿಕೊಂಡ ನಂತರವೇ ಉಳಿದ ಹಬ್ಬಗಳು ಆರಂಭವಾಗುತ್ತದೆ. ಈ ವರ್ಷ ಯಗಾದಿಯಿಂದ ಕ್ರೋಧಿನಾಮ ಸಂವತ್ಸರ ಆರಂಭವಾಗುತ್ತದೆ. ಈ ಕ್ರೋಧಿ ನಾಮ ಸಂವತ್ಸರದಲ್ಲಿ ಬರುವ ಪ್ರಮುಖ ಹಬ್ಬಗಳು ಯಾವುವು, ದಿನಾಂಕ ಎಂದು ಎಂಬಿತ್ಯಾದಿ ವಿವರ ಇಲ್ಲಿದೆ.
1. ರಾಮನವಮಿ: ಹೊಸ ವರ್ಷ ಯುಗಾದಿ ನಂತರ ಬರುವ ಪ್ರಮುಖ ಹಬ್ಬ ರಾಮನವಮಿ. ಈ ಸಂವತ್ಸರದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, 2024ರ ಏಪ್ರಿಲ್ 17 ರಂದು ರಾಮನವಮಿ ಹಬ್ಬವನ್ನು ಆಚರಿಸಲಾಗುತ್ತದೆ.
2. ಅಕ್ಷಯ ತೃತೀಯ: ಹಿಂದೂಗಳಿಗೆ ಪವಿತ್ರ ಹಬ್ಬವಾಗಿರುವ ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಷ ಪಕ್ಷದ ಮೂರನೆಯ ದಿನ ಅಂದ್ರೆ ತದಿಗೆಯಂದು ಆಚರಿಸಲಾಗುತ್ತದೆ. ಈ ದಿನ ಖರೀದಿಸಿದ ಚಿನ್ನವು ಅಕ್ಷಯವಾಗಿ ಉಳಿಯುತ್ತದೆ ಎನ್ನುವ ನಂಬಿಕೆ ಹಿಂದೂಗಳದ್ದು. ಈ ಸಂವತ್ಸರದಲ್ಲಿ ಮೇ 10 ರಂದು ಆಚರಿಸಲಾಗುತ್ತದೆ.
3. ಭೀಮನ ಅಮವಾಸ್ಯೆ ಅಥವಾ ಆಟಿ (ಆಷಾಢ ಅಮವಾಸ್ಯೆ): ಆಷಾಢದ ಕೊನೆಯ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇದು ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಅಂತಲೂ ಕರೆಯಲ್ಪಡುತ್ತದೆ. ಸಂವತ್ಸರದಲ್ಲಿ ಆಗಸ್ಟ್ 4ರಂದು ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ (ಆಷಾಢ) ಅಮಾವಾಸ್ಯೆಯನ್ನು ಈ ದಿನ ಆಚರಿಸುತ್ತಾರೆ.
4. ನಾಗರ ಪಂಚಮಿ: ಶ್ರಾವಣ ಮಾಸದಲ್ಲಿ ಬರುವ ಮೊದಲನೇ ಹಬ್ಬವೇ ನಾಗರ ಪಂಚಮಿ. ಈ ದಿನದಂದು ನಾಗದೇವತೆಯನ್ನು ಪೂಜಿಸಲಾಗುತ್ತದೆ. ಈ ವರ್ಷ ಆಗಸ್ಟ್ 9ನೇ ತಾರೀಕಿನಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
5. ರಕ್ಷಾ ಬಂಧನ: ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ಬೆಸೆಯುವ ಹಬ್ಬವನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 19ರಂದು ಆಚರಿಸಲಾಗುತ್ತದೆ.
6. ಶ್ರೀ ಕೃಷ್ಣ ಜನ್ಮಾಷ್ಟಮಿ: ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಭಗವಂತ ಕೃಷ್ಣನ ಜನನವಾಯಿತು. ಭಗವಾನ್ ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ವರ್ಷ ಆಗಸ್ಟ್ 26ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
7. ಗಣೇಶ ಚತುರ್ಥಿ: ಶಿವ-ಪಾರ್ವತಿಯರ ಪುತ್ರ ಗಣೇಶನಿಗೆ ಸಮರ್ಪಿತವಾದ ಚತುರ್ಥಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ (ಚತುರ್ಥಿ)ಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂವತ್ಸರದಲ್ಲಿ ಸೆಪ್ಟೆಂಬರ್ 7ರಂದು ಆಚರಿಸಲಾಗುತ್ತದೆ.
8. ಓಣಂ ಹಬ್ಬ: ಈ ಹಬ್ಬವು ಕೇರಳ ರಾಜ್ಯದ ಅತಿ ದೊಡ್ಡ ಹಬ್ಬವಾಗಿದೆ. ಈ ವರ್ಷ ಸೆಪ್ಟೆಂಬರ್ 15ರಂದು ಆಚರಿಸಲಾಗುತ್ತದೆ.
9. ಶರನ್ನವರಾತ್ರಿ ಆರಂಭ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ಅಕ್ಟೋಬರ್ 3ರಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
9. ಮಹಾನವಮಿ/ಆಯುಧ ಪೂಜೆ: ಆಶ್ವಿಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ ಈ ಮಹಾನವಮಿ/ಆಯುಧ ಪೂಜೆಯನ್ನು ಆಚರಿಸುತ್ತಾರೆ. ಈ ದಿನದಂದು ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಈ ವರ್ಷ ಆಯುಧ ಪೂಜೆಯು ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ.
10. ವಿಜಯದಶಮಿ: ಆಶ್ವಯುಜ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 12ರಂದು ಆಚರಿಸಲಾಗುತ್ತದೆ.
11. ತಲಕಾವೇರಿ ತೀರ್ಥೋದ್ಭವ: ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲದ ತಲಕಾವೇರಿಯಲ್ಲಿ ದಕ್ಷಿಣ ಭಾರತದ ಪ್ರಮುಖ ನದಿಯಾಗಿರುವ ಕಾವೇರಿಯ ಉಗಮ ಸ್ಥಾನ. ತುಲಾ ಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ಆವಿರ್ಭವಿಸುತ್ತಾಳೆ. ಈ ವರ್ಷ ಅಕ್ಟೋಬರ್ 17ರಂದು ತೀರ್ಥೋದ್ಭವವಾಗಲಿದೆ.
12. ನರಕ ಚತುರ್ದಶಿ: ನರಕ ಚತುರ್ದಶಿ ಹಬ್ಬವನ್ನು ಆಶ್ವಯುಜ ಕೃಷ್ಣಪಕ್ಷ ಚತುರ್ದಶಿ ದಿನ ಆಚರಿಸಲಾಗುತ್ತದೆ. ದೀಪಾವಳಿಯ ಹಿಂದಿನ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ.
13. ದೀಪಾವಳಿ ಅಮಾವಾಸ್ಯೆ: ಬೆಳಕಿನ ಹಬ್ಬ ಅಂತಾಲೇ ಕರೆಯಲ್ಪಡುವ ದೀಪಾವಳಿ ದಿನದಂದು ಬರುವ ಅಮಾವಾಸ್ಯೆಯನ್ನು ದೀಪಾವಳಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆಯ ಈ ವರ್ಷ ನವೆಂಬರ್ 1ರಂದು ಆಚರಿಸಲಾಗುತ್ತದೆ.
14. ಬಲಿ ಪಾಡ್ಯಮಿ: ದೀಪಾವಳಿಯ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಬಲೀಂದ್ರ ರಾಜನನ್ನು ಆರಾಧಿಸಲಾಗುತ್ತದೆ. 2024ರ ನವೆಂಬರ್ 2ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
15. ತುಳಸಿ ಪೂಜೆ: ಕಾರ್ತಿಕ ಮಾಸದ ದ್ವಾದಶ ತಿಥಿಯಂದು ತುಳಸಿ ವಿವಾಹ ಅಥವಾ ಪೂಜೆಯನ್ನು ಮಾಡಲಾಗುತ್ತದೆ. ಈ ವರ್ಷ ನವೆಂಬರ್ 13ರಂದು ಆಚರಿಸಲಾಗುತ್ತದೆ.
16. ಮಕರ ಸಂಕ್ರಾಂತಿ: ಸುಗ್ಗಿಯ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಜನವರಿ 14ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
17. ಮಹಾಶಿವರಾತ್ರಿ: ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಸಂವತ್ಸರದಲ್ಲಿ 2025ರ ಫೆಬ್ರವರಿ 26ರಂದು ಆಚರಿಸಲಾಗುತ್ತದೆ.
18. ಹೋಳಿ: ಉತ್ತರ ಭಾರತದಲ್ಲಿ ಹೋಳಿಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಈ ಸಂವತ್ಸರದಲ್ಲಿ 2025ರ ಮಾರ್ಚ್ 14ರಂದು ಹೋಳಿ ಹಬ್ಬ ಅಥವಾ ಕಾಮನ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಎಲ್ಲವೂ ಕ್ರೋಧಿ ನಾಮ ಸಂವತ್ಸರದಲ್ಲಿ ಬರುವ ಪ್ರಮುಖ ಹಬ್ಬಗಳು. ಭಾರತದಲ್ಲಿ ಈ ಎಲ್ಲಾ ಹಬ್ಬಗಳನ್ನು ಭಕ್ತಿ, ಭಾವ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.