ದೀಪಾವಳಿಯಲ್ಲಿ ಬಲಿಪಾಡ್ಯಮಿ ಯಾಕೆ ಆಚರಿಸಲಾಗುತ್ತದೆ? ಕಥೆ, ಶುಭ ಮುಹೂರ್ತ, ಆಚರಣೆಯ ವಿಧಾನ ಇಲ್ಲಿದೆ
Oct 03, 2024 02:26 PM IST
ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಬಲಿಪಾಡ್ಯಮಿಯ ಕಥೆಯನ್ನು ತಿಳಿಯಿರಿ
- 2024ರ ದೀಪಾವಳಿಯಲ್ಲಿ ಬಲಿಚಕ್ರವರ್ತಿಯ ನೆನಪಿಗಾಗಿ ಬಲಿಪಾಡ್ಯಮಿಯನ್ನು ಯಾಕೆ ಆಚರಿಸುತ್ತಾರೆ. ಇದರ ಕಥೆ, ಮಹತ್ವ ಹಾಗೂ ಶುಭ ದಿನ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. (ವರದಿ: ಎಚ್ ಸತೀಶ್, ಜ್ಯೋತಿಷಿ)
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆಗೆ ಸಿದ್ಧತೆಗಳು ನಡೆಯುತ್ತಿವೆ. ಹಬ್ಬ ಸಮೀಪಿಸುತ್ತಿರುವ ನಿಟ್ಟಿನಲ್ಲಿ ಬಲಿಪಾಡ್ಯಮಿಯನ್ನು ಯಾಕೆ ಆಚರಿಸುತ್ತಾರೆ, ಇದರ ಕಥೆ, ಹಬ್ಬದ ಮಹತ್ವವನ್ನು ಇಲ್ಲಿ ನೀಡಲಾಗಿದೆ. ಬಲಿಪಾಡ್ಯಮಿಯನ್ನು ಬಲಿಚಕ್ರವರ್ತಿಯ ನೆನಪಿಗಾಗಿ ಆಚರಿಸುತ್ತೇವೆ. ಬಲಿಚಕ್ರವರ್ತಿಯು ಶಕ್ತಿಶಾಲಿಯಾದಂತಹ ವ್ಯಕ್ತಿಯಾಗಿರುತ್ತಾನೆ. ಇವನನ್ನು ಯುದ್ಧದಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೂ ಸಹ ಒಮ್ಮೆ ಇಂದ್ರನು ಸೋಲಿಸುತ್ತಾನೆ. ಅಲ್ಲದೆ ಅವನ ಬಳಿ ಇದ್ದ ಧನಕನಕಾದಿ ಐಶ್ವರ್ಯವನ್ನಲ್ಲ ಕಬಳಿಸುತ್ತಾನೆ. ಅಂತಿಮ ಹಣಾಹಣಿಯಲ್ಲಿ ಇಂದ್ರನು ಬಲಿಚಕ್ರವರ್ತಿಯನ್ನು ಸಂಹರಿಸುತ್ತಾನೆ. ಅದರೆ ಅಸುರರ ಗುರುಗಳಾದ ಶುಕ್ಲಾಚಾರ್ಯರು ತಮ್ಮ ಸಂಜೀವಿನಿ ವಿದ್ಯೆಯಿಂದ ಅವನನ್ನು ಬದುಕಿಸುತ್ತಾರೆ. ಆಗ ಬಲಿ ಚಕ್ರವರ್ತಿ ತನ್ನಲ್ಲಿದ್ದ ಸರ್ವಸ್ವವನ್ನು ಶುಕ್ರಾಚಾರ್ಯರಿಗೆ ಸಮರ್ಪಿಸುತ್ತಾನೆ.
ತಾಜಾ ಫೋಟೊಗಳು
ಶುಕ್ಲಾಚಾರ್ಯರ ಆಶ್ರಯದಲ್ಲಿ ಬಲಿ ಚಕ್ರವರ್ತಿಯು ವಿಶ್ವಜಿತು ಎಂಬ ಯಜ್ಞವನ್ನು ಮಾಡುತ್ತಾನೆ. ಆ ಕ್ಷಣದಲ್ಲಿ ಹಸಿರು ಬಣ್ಣದ ಕುದುರೆಗಳು ಇರುವಚಿನ್ನದಿಂದ ಅಲಂಕೃತವಾದ ರಥವೊಂದು ಯಜ್ಞಕುಂಡದಿಂದ ಹೊರಬರುತ್ತದೆ. ಆ ರಥವನ್ನು ಏರಿ ಬಲಿಚಕ್ರವರ್ತಿಯು ದಂಡಯಾತ್ರೆಗೆ ಹೊರಡುತ್ತಾನೆ. ಮೊದಲು ಬಲಿಚಕ್ರವರ್ತಿಯು ದೇವತೆಗಳ ರಾಜಧಾನಿಯಾದ ಅಮರಾವತಿಯನ್ನು ವಶಪಡಿಸಿಕೊಳ್ಳುತ್ತಾನೆ. ಆಶ್ಚರ್ಯ ಉಂಟಾಗುತ್ತದೆ. ಬಲಿಚಕ್ರವರ್ತಿಗೆ ಈ ಸಮಾರ್ಥ್ಯವು ಗುರುವಿನ ಆಶೀರ್ವಾದದಿಂದ ಬಂದಿತೆಂದು ಎಲ್ಲರಿಗೂ ತಿಳಿಯುತ್ತದೆ. ಇವನನ್ನು ಸದೆಬಡೆಯಲು ಭಗವಾನ್ ವಿಷ್ಣುವಿಗೆ ಮಾತ್ರ ಸಾಧ್ಯ ಎಂದು ತಿಳಿಯುತ್ತಾರೆ.
ಬೇರೆ ವಿಧಿ ಇಲ್ಲದೆ ದೇವತೆಗಳೆಲ್ಲರೂ ಸ್ವರ್ಗವನ್ನು ಬಿಟ್ಟು ಹೊರಟು ಹೊರ ಹೋಗುತ್ತಾರೆ. ಆನಂತರ ಬಲಿ ಚಕ್ರವರ್ತಿಯು ಮೂರು ಲೋಕಗಳನ್ನು ವಶಪಡಿಸಿಕೊಳ್ಳುತ್ತಾನೆ. ತನ್ನ ಮಕ್ಕಳಿಗೆ ಒದಗಿದ ತೊಂದರೆಯನ್ನು ಕಂಡು ಅದಿತಿಗೆ ಯೋಚನೆ ಉಂಟಾಗುತ್ತದೆ. ದೈವಾನುಗ್ರಹದಿಂದ ಆಕೆಯ ಉದರದಲ್ಲಿ ವಾಮನನ ಜನನವಾಗುತ್ತದೆ. ವಾಮನನು ಎಲ್ಲರಂತೆ ಎತ್ತರವಾಗಿ ಸಪೂರವಾಗಿರುತ್ತಾನೆ. ಆದರೆ ತನ್ನ ನಿಜ ರೂಪವನ್ನು ತೊರೆದು ವಾಮನನಾಗಿ ಕುಳ್ಳಬ್ರಹ್ಮಚಾರಿಯಾಗಿ ಬದಲಾಗುತ್ತಾನೆ. ಇವನಿಗೆ ಗಾಯಿತ್ರಿ ಮಂತ್ರದ ಅಧಿಪತಿಯಾದ ಸವಿತೃ ಗಾಯಿತ್ರಿ ಮಂತ್ರವನ್ನು ಉಪದೇಶಿಸುತ್ತಾನೆ. ಬೃಹಸ್ಪತಿ ಇವನಿಗೆ ಯಜ್ಞೋಪವೀತವನ್ನು ನೀಡುತ್ತಾನೆ. ದೇವಿ ಭಗವತಿಯೇ ಈತನಿಗೆ ಮೊದಲ ಭಿಕ್ಷೆಯನ್ನು ನೀಡುತ್ತಾಳೆ.
ಬಲಿ ಚಕ್ರವರ್ತಿಗೆ ಆನಂದಕ್ಕೆ ಈ ಅಂಶವೂ ಕಾರಣವಾಗಿತ್ತು
ಚಕ್ರವರ್ತಿಯನ್ನು ಸಂಹರಿಸಲು ವಾಮನನಾಗಿ ಜನಿಸಿದ ವಿಷ್ಣುವಿಗೆ, ಗುರು ಹಿರಿಯರ ಆದೇಶದಂತೆ ಬಲಿ ಚಕ್ರವರ್ತಿಯು ಅಶ್ವಮೇಧಯಾಗಗಳನ್ನು ಮಾಡುತ್ತಿರುವ ವಿಚಾರವು ತಿಳಿಯುತ್ತದೆ, ಸರ್ವಶಕ್ತನಾದ ವಾಮನನ್ನು ಬಲಿಚಕ್ರವರ್ತಿಯ ಅರಮನೆಯ ಕಡೆ ತೆರಳುತ್ತಾನೆ, ನರ್ಮದಾ ನದಿಯ ದಡದಲ್ಲಿ ವಾಮನನು ಯಜ್ಞಶಾಲೆಯನ್ನು ಪ್ರವೇಶಿಸಿದಾಗ ಅಲ್ಲಿದ್ದ ಋತ್ತಿಕರು ವಾಮನನ ಮುಖದಲ್ಲಿ ಸೂರ್ಯನ ತೇಜಸ್ಸನ್ನು ಕಾಣುತ್ತಾರೆ. ಶುಕ್ರಾಚಾರ್ಯರು ಸಹ ವಾಮನನ ಬಗ್ಗೆ ಏನು ಅರಿಯದೆ ಹೋಗುತ್ತಾರೆ. ಛತ್ರಿ ಮತ್ತು ಕಮಂಡಲವನ್ನು ಹಿಡಿದ ವಾಮನನು ಎಲ್ಲರ ಗೌರವಗಳಿಗೆ ಪಾತ್ರನಾಗುತ್ತಾನೆ. ಈತನನ್ನು ಕಂಡ ಬಲಿ ಚಕ್ರವರ್ತಿಗೆ ಆನಂದ ಉಂಟಾಗುತ್ತದೆ. ಅವನಲ್ಲಿ ಕಾಣುತ್ತಿದ್ದ ಬ್ರಹ್ಮತೇಜಸ್ಸು ಎಲ್ಲರನ್ನೂಮೂಕರನ್ನಾಗಿಸುತ್ತದೆ.
ಸಕಲ ಕುಶಲ ಪ್ರಶ್ನೆಗಳನ್ನು ಕೇಳಿದ ನಂತರ ಬಲಿ ಚಕ್ರವರ್ತಿ ನಮಸ್ಕರಿಸುತ್ತಾ, ಪಾದಗಳನ್ನು ಶುಭ್ರವಾದ ನೀರಿನಿಂದ ತೊಳೆದು, ಅದನ್ನು ತನ್ನ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾನೆ. ಭಯ ಭಕ್ತಿಗಳಿಂದ ಬ್ರಹ್ಮಚಾರಿಗೆ ನಮಿಸಿದ ಬಲಿಚಕ್ರವರ್ತಿಯು ವಾಮನನನ್ನು ನಿಮ್ಮನ್ನು ನೋಡಿದರೆ ಬ್ರಹ್ಮರ್ಷಿಗಳನ್ನು ಕಂಡಂತೆ ಭಾಸವಾಗುತ್ತಿದೆ. ನೀವು ನನ್ನ ಈ ಯಾಗಕ್ಕೆ ಆಗಮಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಕಾರಣವೆಂದು ತಿಳಿಯುತ್ತೇನೆ. ನಿಮ್ಮಿಂದ ನನ್ನ ದೇಶವು ಪವಿತ್ರವಾಯಿತು. ನನ್ನ ಪೂರ್ವ ಜನ್ಮದ ಪಾಪಗಳು ಮರೆಯಾದವು. ಇದಕ್ಕೆ ಬದಲಾಗಿ ನಿಮಗೆ ನಾನು ಏನನ್ನು ನೀಡಬಲ್ಲೆ. ನನ್ನಲ್ಲಿರುವ ಯಾವುದೇ ವಸ್ತುವನ್ನಾದರೂ ಕೇಳಿದರೂ, ನನ್ನ ಈ ರಾಜ್ಯವನ್ನೇ ಕೇಳಿದರೂ ಒಂದು ಕ್ಷಣವೂ ತಡ ಮಾಡದೆ ಅದನ್ನು ನಿಮಗೆ ಒಪ್ಪಿಸುತ್ತೇನೆ ಎಂದು ತಿಳಿಸುತ್ತಾನೆ.
ನಸುನಕ್ಕ ವಾಮನನು, ನನಗೆ ಅತಿಯಾದ ಆಸೆ ಇಲ್ಲ. ನನಗೆ ಕೇವಲ ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗವನ್ನು ನಿನ್ನ ರಾಜ್ಯದಲ್ಲಿ ನೀಡು ಎಂದು ಕೇಳುತ್ತಾನೆ. ಆಶ್ಚರ್ಯ ಚಕಿತನಾದ ಬಲಿ ಚಕ್ರವರ್ತಿಯು ಬಾಲಕನಾದ ನಿನ್ನ ಹೆಜ್ಜೆಗಳು ಬಲು ಚಿಕ್ಕವು. ಆದರೂ ನನ್ನ ಕರ್ತವ್ಯದಂತೆ ನಿನ್ನ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಹೇಳುತ್ತಾನೆ. ಮೂರು ಹೆಜ್ಜೆಗಳನ್ನು ಇಡುವಷ್ಟು ಭೂಮಿಯನ್ನು ಧಾರೆ ಎರೆಯಲು ಕಮಂಡಲವನ್ನು ತೆಗೆದುಕೊಳ್ಳುತ್ತಾನೆ. ಭಗವಾನ್ ವಿಷ್ಣುವಿನ ಮನಸ್ಸನ್ನ ಅರಿತ ಶುಕ್ಲಾಚಾರ್ಯರು ಕಮಂಡಲವನ್ನು ಪ್ರವೇಶಿಸಿ ಅದರಲ್ಲಿದ್ದ ನೀರು ಬರುವ ರಂದ್ರವನ್ನು ಮುಚ್ಚುತ್ತಾರೆ. ಆಗ ಧಾರೆ ಎರೆಯಲು ಅವಶ್ಯಕವಾದ ನೀರು ಬರುವುದಿಲ್ಲ. ಇದನ್ನು ಅರಿತ ವಾಮನನ ರೂಪದಲ್ಲಿದ್ದ ಭಗವಾನ್ ವಿಷ್ಣು ಕಮಂಡಲದ ರಂಧ್ರಕ್ಕೆ ದರ್ಭೆಯ ತುದಿಯಿಂದ ಚುಚ್ಚುತ್ತಾನೆ. ಆಗ ಕಮಂಡಲದಲ್ಲಿ ಇದ್ದ ಶುಕ್ರಾಚಾರ್ಯರು ನೋವನ್ನು ತಾಳದೆ ಹೊರ ಬರುತ್ತಾರೆ.
ದರ್ಭೆಯಿಂದ ಕಣ್ಣಿಗೆ ಚುಚ್ಚಿದ ಪರಿಣಾಮ ಅವರ ಒಂದು ಕಣ್ಣು ದೃಷ್ಟಿಯನ್ನು ಕಳೆದುಕೊಳ್ಳುತ್ತದೆ. ಇತ್ತ ವಾಮನನು ಒಂದು ಹೆಜ್ಜೆಯನ್ನು ಇಡೀ ಭೂಮಂಡಲವನ್ನು ಆಕ್ರಮಿಸುತ್ತಾನೆ. ಎರಡನೆಯ ಹೆಜ್ಜೆಯಿಂದ ಸ್ಪರ್ಗ ಲೋಕವನ್ನು ಆಕ್ರಮಿಸುತ್ತಾನೆ. ಮೂರನೇ ಹೆಜ್ಜೆಗೆ ಜಾಗವೇ ಇಲ್ಲದಂತೆ ಆಗುತ್ತದೆ. ಆಗ ಮೂರನೆ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟು ಅವನನ್ನು ನರಕಕ್ಕೆ ತಳ್ಳಿತ್ತಾನೆ. ಆನಂತರ ಬರೀ ಚಕ್ರವರ್ತಿಯು ಭಗಮಾನ ವಿಷ್ಣುವನ್ನು ಸ್ತುತಿಸಿ ತನ್ನ ಜನರೊಂದಿಗೆ ಸ್ವರ್ಗಕ್ಕೆ ತೆರಳುತ್ತಾನೆ. ಆದ್ದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂಬ ಹೆಸರಿನಿಂದ ಹಬ್ಬವನ್ನಾಗಿ ಆಚರಿಸುತ್ತೇವೆ. ಕೆಲವೊಂದು ಪಂಚಾಂಗಗಳ ಪ್ರಕಾರ, 2024ರ ದೀಪಾವಳಿ ಅಥವಾ ಬಲಿಪಾಡ್ಯಮಿಯನ್ನು ನವೆಂಬರ್ 2ರ ಶನಿವಾರ ಆಚರಿಸಲಾಗುತ್ತದೆ. (ವರದಿ: ಎಚ್ ಸತೀಶ್, ಜ್ಯೋತಿಷಿ)