logo
ಕನ್ನಡ ಸುದ್ದಿ  /  ಜೀವನಶೈಲಿ  /  ದೈಹಿಕ ದೌರ್ಜನ್ಯವಾಗಲಿ, ಮಾನಸಿಕ ಶೋಷಣೆಯಾಗಲಿ ತಪ್ಪು ಅಂದ್ರೆ ತಪ್ಪಷ್ಟೇ, ಎಂದಿಗೂ ಸಹಿಸಬೇಡಿ -ಮನದ ಮಾತು

ದೈಹಿಕ ದೌರ್ಜನ್ಯವಾಗಲಿ, ಮಾನಸಿಕ ಶೋಷಣೆಯಾಗಲಿ ತಪ್ಪು ಅಂದ್ರೆ ತಪ್ಪಷ್ಟೇ, ಎಂದಿಗೂ ಸಹಿಸಬೇಡಿ -ಮನದ ಮಾತು

D M Ghanashyam HT Kannada

Aug 28, 2024 07:16 AM IST

google News

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

    • ಭವ್ಯಾ ವಿಶ್ವನಾಥ್: ದೌರ್ಜನ್ಯ ಅಥವಾ ಶೋಷಣೆಯಲ್ಲಿ ಒಂದೇ ಮಾದರಿಯಿಲ್ಲ. ಎಷ್ಟೋ ರೀತಿಯಲ್ಲಿ ಮನಸ್ಸನ್ನು ಹಿಂಸಿಸುವ ಶೋಷಣೆಯನ್ನು ಸಹಿಸಿಕೊಳ್ಳುವುದು ಸಹಜವೂ ಅಲ್ಲ. ಶೋಷಣೆ ಎಂದರೆ ಏನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ಕಾಡುವ ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಗೆ ಬರಲು ಸಾಧ್ಯ.
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಸಾಮಾನ್ಯವಾಗಿ ದೌರ್ಜನ್ಯ (abuse) ಎಂದರೆ ದೈಹಿಕ ಹಿಂಸೆ, ಬಲಾತ್ಕಾರವೆಂದು ಪರಿಗಣಿಸುತ್ತೇವೆ. ಆದರೆ ದೌರ್ಜನ್ಯ ಎನ್ನುವುದು ದೇಹಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಅದು ಮಾನಸಿಕ ಮತ್ತು ಆರ್ಥಿಕ ವಿಚಾರಗಳಿಗೂ ಸಂಬಂಧಪಟ್ಟಿದೆ. ಇವೆಲ್ಲವೂ ಸಹ ದೌರ್ಜನ್ಯವೇ ಆಗಿರುತ್ತದೆ. ಏಕೆಂದರೆ ಈ ಪ್ರತಿ ದೌರ್ಜನ್ಯವೂ ಸಂತ್ರಸ್ತ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಸಂಬಂಧಗಳಲ್ಲಿ, ಇನ್ನೊಬ್ಬರ ಮೇಲೆ ಅಧಿಕಾರವನ್ನು ಪಡೆಯಲು, ಹಿಡಿತ ಅಥವಾ ನಿಯಂತ್ರಣ ಸಾಧಿಸುವ ಉದ್ದೇಶದಿಂದ ದೌರ್ಜನ್ಯ ಎಸಗುತ್ತಾರೆ.

ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯು ಬದುಕಿನಲ್ಲಿ ಒಟ್ಚಾರೆ ಕುಗ್ಗುತ್ತಾಳೆ / ನೆ. ಮತ್ತು ಅವರ ಎಲ್ಲಾ ರೀತಿಯ ಬೆಳವಣಿಗೆಯು ಸಹ ಕುಂಠಿತವಾಗುತ್ತದೆ. ದೀರ್ಘಕಾಲದವರೆಗೆ ದೌರ್ಜನ್ಯದ ಅಡಿಯಲ್ಲಿಯೇ ಬದುಕುವುದು ಅಭ್ಯಾಸವಾದರೆ, ವ್ಯಕ್ತಿಯು ತನ್ನ ಆತ್ಮವಿಶ್ವಾಸ ಮತ್ತು ಗೌರವ ಕಳೆದುಕೊಂಡು ಗುಲಾಮಗಿರಿ ಮನೋಭಾವದಿಂದ ಬದುಕಬೇಕಾಗುತ್ತದೆ. ಇಂಥವರು ಸ್ವ-ಕೀಳರಿಮೆಯಿಂದ ನರಳುತ್ತಾರೆ. ಅಪರಾಧಿಯು ಯಾವ ರೀತಿಯ ದೌರ್ಜನ್ಯವನ್ನಾದರೂ ತನ್ನ ಅನುಕೂಲ, ಅಭ್ಯಾಸ ಮತ್ತು ನಂಬಿಕೆಗಳನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು.

ನಾನಾ ರೀತಿಯಲ್ಲಿ ದೌರ್ಜನ್ಯವು ರೂಪುಗೊಳ್ಳುತ್ತದೆ. 5 ಬಗೆಯ ದೌರ್ಜನ್ಯಗಳ ಗುಣ-ಲಕ್ಷಣಗಳು ಹೀಗಿವೆ

1) ದೈಹಿಕ ದೌರ್ಜನ್ಯ: ಇಲ್ಲಿ ಶೋಷಕನು (abuser) ಇನ್ನೊಬ್ಬರನ್ನು ದೈಹಿಕವಾಗಿ ಹಿಂಸಿಸುತ್ತಾನೆ. ಇನ್ನೊಬ್ಬರ ಅನುಮತಿಯಿಲ್ಲದೆ, ಅವರ ನೋವನ್ನು ಲೆಕ್ಕಿಸದೇ ದೌಜ೯ನ್ಯ ಎಸಗುತ್ತಾನೆ. ಉದಾಹರಣೆಗೆ ತಳ್ಳುವುದು, ಹೊಡೆಯುವುದು, ಗಿಲ್ಲುವುದು, ಒದೆಯುವುದು, ಕೂದಲು ಎಳೆಯುವುದು, ಕಪಾಳಕ್ಕೆ ಹೊಡೆಯುವುದು, ಕತ್ತು ಹಿಸುಕುವುದು, ಗುದ್ದುವುದು ಇತ್ಯಾದಿಗಳು.

ಗಾಡಿ ಓಡಿಸುವಾಗ (ಡ್ರೈವಿಂಗ್) ಇನ್ನೊಬ್ಬರಿಗೆ ಅಪಾಯ ಆಗುವ ಹಾಗೆ ಚಲಿಸಿ ಅವರು ದೈಹಿಕವಾಗಿ ನರಳುವಂತೆ ಮಾಡುವುದು ಸಹ ಇದೇ ವ್ಯಾಪ್ತಿಗೆ ಬರುತ್ತದೆ. ಅವಲಂಬಿತರಿಗೆ ಆಹಾರ ಮತ್ತು ನೀರು ಕೊಡದಿರುವುದು, ವೃದ್ಧರು ಅಥವಾ ಮಕ್ಕಳಿಗೆ ಔಷಧಿ ಕೊಡದಿರುವುದು, ಅಸಹಾಯಕರಿಗೆ ಬೆಳಕು ಮತ್ತು ಗಾಳಿ ಸಿಗದಿರುವಂತೆ ಮಾಡುವುದು, ಕೊಠಡಿಯಲ್ಲಿ ಕೂಡಿ ಹಾಕುವುದು ಸಹ ಹೀಗೆಯೇ ಅನ್ನಿಸಿಕೊಳ್ಳುತ್ತದೆ.

2) ಮಾನಸಿಕ ದೌರ್ಜನ್ಯ: ಇಲ್ಲಿ ಸಂತ್ರಸ್ತರ ದೇಹವನ್ನು ಯಾವುದೇ ರೀತಿಯಲ್ಲಿ ಸ್ಪರ್ಶಿಸದೆ, ಅಂತರವನ್ನು ಕಾಯ್ದುಕೊಂಡು ಭಾವಾತ್ಮತವಾಗಿ ಮತ್ತು ಮಾನಸಿಕವಾಗಿ ದೌರ್ಜನ್ಯ ಮಾಡಲಾಗುತ್ತದೆ. ಸಾಮಾನ್ಯವಾಗಿ ಮಾನಸಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯು ತನ್ನ ಮೇಲೆಯೇ ನಂಬಿಕೆ, ಆತ್ಮವಿಶ್ವಾಸ ಕಳೆದುಕೊಳ್ಳುವ ಅಪಾಯ ಇರುತ್ತದೆ.

ಮಾನಸಿಕ ದೌರ್ಜನ್ಯವನ್ನು ಭಾವನಾತ್ಮಕ ನಿಂದನೆಯೆಂದು ಕರೆಯಬಹುದು. ಇದರಲ್ಲಿ ಶೋಷಕನು ಇನ್ನೊಬ್ಬ ವ್ಯಕ್ತಿಯನ್ನು ಅವಮಾನಿಸುತ್ತಾನೆ ಮತ್ತು ಸಾಮಾನ್ಯವಾಗಿ ವ್ಯಕ್ತಿಯನ್ನು ನಿಯಂತ್ರಿಸಲು ಭಯವನ್ನು ಸಹ ಹುಟ್ಟುಹಾಕುತ್ತಾನೆ. ಬೇರೆಯವರು ತಮ್ಮನ್ನು ದುರುಪಯೋಗ ಪಡೆದುಕೊಂಡಾಗ ಅದು ತಮ್ಮ ಸ್ವಂತ ವೈಫಲ್ಯ ಎಂದು ಭಾವಿಸುತ್ತಾರೆ. ಒಬ್ಬ ವ್ಯಕ್ತಿಯು ಸಂಬಂಧದಲ್ಲಿ ತಂತ್ರಗಳನ್ನು (Manipulation) ಬಳಸಿ ಅಧಿಕಾರ (ಮೇಲುಗೈ) ಅಥವಾ ನಿಯಂತ್ರಣ ಪಡೆಯಲು ಮಾನಸಿಕ ದೌರ್ಜನ್ಯ ಮಾಡಬಹುದು.

ಇಂತಹ ವ್ಯಕ್ತಿಯನ್ನು ತಂತ್ರಗಾರನೆಂದು (ಮ್ಯಾನಿಪುಲೇಟರ್) ಕರೆಯಲಾಗುತ್ತದೆ. ಇಂತಹ ಮ್ಯಾನಿಪುಲೇಷನ್ ಎಲ್ಲಾ ತರಹದ ಸಂಬಧಗಳಲ್ಲೂ ಉದ್ಭವಿಸಬಹುದು. ಹೀಗೆ ಮಾಡುವವರು ಪುರುಷರಷ್ಟೇ ಅಲ್ಲ; ಮಹಿಳೆಯರೂ ಆಗಿರಬಹುದು. ಉದ್ಯೋಗ, ವ್ಯಾಪಾರ, ಸ್ನೇಹ, ಪ್ರಣಯ ಸಂಬಂಧಗಳಲ್ಲಿ, ಪೋಷಕರು ಮತ್ತು ಮಕ್ಕಳ ನಡುವೆಯೂ ಸಹ ಮ್ಯಾನಿಪುಲೇಷನ್ ಆಗುವ ಇರುವ ಸಾಧ್ಯತೆಯಿದೆ.

ಉದಾ: ತಾವು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕಿ ಪಾಪಪ್ರಜ್ಞೆಯಿಂದ ನರಳುವಂತೆ ಮಾಡುವುದು, ಮೋಸ, ವಂಚನೆ, ಕುಹಕ, ಕೆಟ್ಟ ಪದಗಳನ್ನು ಬಳಸಿ ನಿಂದಿಸುವುದು, ಇನ್ನೊಬ್ಬರ ದೇಹದ ಕುರಿತು ಕೆಟ್ಟದಾಗಿ ಕಮೆಂಟ್ ಮಾಡುವುದು, ಟೀಕಿಸುವುದು, ಅಸಭ್ಯ ಮೆಸೇಜ್ ಅಥವಾ ಚಿತ್ರಗಳನ್ನು ಕಳಿಸುವುದು, ಅಸಭ್ಯವಾಗಿ ಮಾತನಾಡುವುದು ಮತ್ತು ವರ್ತಿಸುವುದು, ಕಣ್ಣು ಹೊಡೆಯುವುದು, ಮುಜುಗರ ಆಗುವಂತೆ ಗುರಾಯಿಸುವುದು ಇತ್ಯಾದಿ.

3) ಆರ್ಥಿಕ ದೌರ್ಜನ್ಯ: ಇಂಥ ಸಂದರ್ಭಗಳಲ್ಲಿ ಇನ್ನೊಬ್ಬ ವ್ಯಕ್ತಿಯ ಆರ್ಥಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಉದ್ದೇಶವಿರುತ್ತದೆ. ಇನ್ನೊಬ್ಬರು ಹಣವನ್ನು ಪಡೆಯುವ ಅಥವಾ ಬಳಸಿಕೊಳ್ಳುವ ಅಥವಾ ಪ್ರಯೋಜನ ಪಡೆಯುವ ಅಧಿಕಾರವನ್ನು ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ಮೋಸ, ವಂಚನೆಯ ಮೂಲಕ ಇನ್ನೊಬ್ಬರ ಹಣವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಬಳಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.

ಉದಾ: ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಕುಲಂಕಷವಾಗಿ ಸಂಗ್ರಹಿಸುವುದು, ಪಾಸ್‌ವರ್ಡ್‌ಗಳನ್ನು ಬಲವಂತವಾಗಿ ತಿಳಿದುಕೊಂಡು ದುರುಪಯೋಗ ಮಾಡಿಕೊಳ್ಳುವುದು, ಇನ್ನೊಬ್ಬರ ಹೆಸರಿನಲ್ಲಿ ದೆೊಡ್ಡ ಮೊತ್ತದ ಸಾಲವನ್ನು ತೆಗೆದುಕೊಂಡು ತೀರಿಸದೆ ಇರುವುದು ಇದರಲ್ಲಿ ಸೇರುತ್ತದೆ.

4) ಲೈಂಗಿಕ ದೌರ್ಜನ್ಯ: ಲೈಂಗಿಕ ದೌರ್ಜನ್ಯ ಅಥವಾ ನಿಂದನೆಯು ದೈಹಿಕ ದೌರ್ಜನ್ಯದ ಒಂದು ರೂಪವಾಗಿದ್ದರೂ, ನಾವು ಅದನ್ನು ಬೇರೆಯ ವರ್ಗಕ್ಕೆ ಸೇರಿಸುತ್ತೇವೆ. ಏಕೆಂದರೆ ಅದು ದೈಹಿಕ ಮತ್ತು ಭೌತಿಕವಲ್ಲದ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಅತ್ಯಾಚಾರ ಅಥವಾ ಇತರ ಬಲವಂತದ ಲೈಂಗಿಕ ಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇನ್ನೊಬ್ಬರ ದೌರ್ಬಲ್ಯವನ್ನು ದುರುಗಪಯೋಗ ಮಾಡಿಕೊಂಡು ಅಪರಾಧಿಯು ಲೈಂಗಿಕತೆಯನ್ನು ಒಂದು ಸಾಧನವಾಗಿ ಬಳಸಿ ತನ್ನ ಬಲವನ್ನು ತೋರಿಸುತ್ತಾನೆ. ಮಹಿಳೆಯರಲ್ಲಿಯೂ ಇಂಥವರು ಇರಬಹುದು.

ಲೈಂಗಿಕ ದೌರ್ಜನ್ಯದಲ್ಲಿ ಎರಡು ವಿಧ ಇದೆ. i) ಸ್ಪರ್ಶದಿಂದ ಮಾಡುವ ಲೈಂಗಿಕ ದೌರ್ಜನ್ಯ. ii) ಮುಟ್ಟದೆ ಮಾಡುವ ಲೈಂಗಿಕ ದೌರ್ಜನ್ಯ.

ಈ ಎರಡೂ ವಿಧಗಳ ಪೈಕಿ ಮೊದಲನೆಯದ್ದು ನಮಗೆಲ್ಲರಿಗೂ ಗೊತ್ತು. ಮಾಧ್ಯಮಗಳಲ್ಲಿ ಸುದ್ದಿಯಾಗುವ ಬಹುತೇಕ ಲೈಂಗಿಕ ದೌರ್ಜನ್ಯಗಳು ಇದೇ ಮಾದರಿಗೆ ಸೇರುತ್ತವೆ. ಆದರೆ ಮುಟ್ಟದೆ ಮಾಡುವ ಲೈಂಗಿಕ ದೌರ್ಜನ್ಯವನ್ನು ಗುರುತಿಸುವುದು, ತಡೆಯುವುದು ಕಷ್ಟ. ಇದರಲ್ಲಿ ಲೈಂಗಿಕ ಸುಖದ ಅಭಾವ ಸೃಷ್ಟಿಸುವುದು, ಅಸಭ್ಯ ಸಿನಿಮಾಗಳನ್ನು ನೋಡಲು ಬಲವಂತಪಡಿಸುವುದು ಸಹ ಸೇರುತ್ತವೆ.

ಹೆಂಗಸರ, ಮಕ್ಕಳ ಅಸಹಾಯಕತೆ ಮತ್ತು ಅಮಾಯಕತೆಯನ್ನು ಅವರ ದೌರ್ಬಲ್ಯವೆಂದು ಪರಿಗಣಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತದೆ. ಸಂಗಾತಿಯೊಬ್ಬರ ಲೈಂಗಿಕ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲದಿದ್ದರೆ, ಟೀಕೆ, ಅವಹೇಳನ, ಮೂದಲಿಕೆ ಮಾತುಗಳ ಮೂಲಕ ನಿಂದಿಸುವುದು ಸಹ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತದೆ. ಮದುವೆಯಾದ ನಂತರ ನಾಲ್ಕು ಗೋಡೆಗಳ ಒಳಗೆ ನಡೆಯುವ ಎಷ್ಟೋ ದೌರ್ಜನ್ಯಗಳು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತವೆ. 'ಮದುವೆಯಾದವರು ಏನು ಬೇಕಾದರೂ ಮಾಡಿಕೊಳ್ತಾರೆ' ಎಂದು ಸಮಾಜ ಅದನ್ನು ಹಕ್ಕೆಂದು ಮಾನ್ಯ ಮಾಡಿದೆ. ಇಂಥ ದೌರ್ಜನ್ಯಗಳು ಸಹ ಮಾನಸಿಕವಾಗಿ ದುಷ್ಪರಿಣಾಮಗಳನ್ನು ಬೀರುತ್ತವೆ.

5) ತಾಂತ್ರಿಕ ದೌರ್ಜನ್ಯ (Technical Abuse): ಇತ್ತೀಚಿನ ದಿನಗಳಲ್ಲಿ ಈ ಬಗೆಯ ದೌರ್ಜನ್ಯ ಹೆಚ್ಚಾಗುತ್ತಿದೆ. ಅಪರಾಧಿಯು ಟೆಕ್ನಾಲಜಿ ಬಳಸಿಕೊಂಡು ದೌಜ೯ನ್ಯ ಮಾಡುತ್ತಾನೆ/ಳೆ. ಫೋನ್ ಅಥವಾ ಇಮೇಲ್ ಮೂಲಕ ಅಸಭ್ಯ ಮೆಸೇಜ್, ಫೋಟೊ, ವಿಡಿಯೊ ಕಳಿಸುವುದು, ಪಾಸ್‌ವರ್ಡ್‌ಗಳನ್ನು ದುರುಪಯೋಗ ಮಾಡಿಕೊಳ್ಳುವುದು, ಹ್ಯಾಕ್ (hacking) ಮಾಡುವುದು, ಇನ್ನೊಬ್ಬರ ಚಲನವಲನಗಳನ್ನು ಅವರಿಗೆ ತಿಳಿಯದಂತೆ ಗಮನಿಸುವುದು (ಟ್ರಾಕ್ ಮಾಡುವುದು), ಗೊತ್ತಾಗದ ಹಾಗೆ ಸಂಭಾಷಣೆ, ಜಗಳ ಮತ್ತು ಖಾಸಗಿ (private) ಸಂಗತಿಗಳನ್ನು ರೆಕಾಡ್೯ ಮಾಡುವುದು, ಫೋಟೊ ಅಥವಾ ವೀಡಿಯೊ ರೆಕಾಡ್೯ ಮಾಡಿಕೊಳ್ಳುವುದು, ಸೇವ್ ಮಾಡಿ ಇರಿಸುವುದು ಹೀಗೆ ಅನೇಕ ರೀತಿಯಲ್ಲಿ ಟೆಕ್ನಾಲಾಜಿಯನ್ನು ದುಬ೯ಳಕೆ ಮಾಡಿಕೊಂಡು ದೌಜ೯ನ್ಯ ಮಾಡಿ ಕಿರುಕುಳ ಕೊಡುತ್ತಾರೆ.

ಎಚ್ಚರ ಇರಲಿ, ಸಹಾಯ ಪಡೆಯಲು ಹಿಂಜರಿಕೆ ಬೇಡ

ದೌರ್ಜನ್ಯದಲ್ಲಿ ಒಂದೇ ಮಾದರಿಯಿಲ್ಲ ಎನ್ನುವುದು ಈ ಹೊತ್ತಿಗೆ ನಿಮಗೆಲ್ಲರಿಗೂ ಮನವರಿಕೆಯಾಗಿರುತ್ತದೆ. ಅದೇ ರೀತಿ ಪರಿಹಾರವೂ ಒಂದೇ ರೀತಿ ಇಲ್ಲ. ನಿಮ್ಮನ್ನು ಯಾರಾದರೂ ಶೋಷಿಸುತ್ತಿರಬಹುದು, ನಿಮ್ಮ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರಬಹುದು ಎನ್ನುವ ಅನುಮಾನ ಬಂದರೆ ಸರಿಯಾದ ಕ್ರಮದಲ್ಲಿ ಪ್ರತಿಕ್ರಿಯಿಸುವುದು ಬಹಳ ಮುಖ್ಯ. ಶೋಷಣೆಯನ್ನು ದೀರ್ಘಕಾಲ ಅನುಭವಿಸುವುದು ಮಾನಸಿಕತೆಯನ್ನೇ ಅಲುಗಾಡಿಸುತ್ತದೆ. ಇಂಥ ಸಂದರ್ಭದಲ್ಲಿ ಯಾವುದೇ ಮುಜುಗರವಿಲ್ಲದೆ ಆಪ್ತಸಮಾಲೋಚಕರ ನೆರವು ಪಡೆದುಕೊಳ್ಳಿ.

ಶೋಷಣೆ ಸಹಜವಲ್ಲ, ಎಂದಿಗೂ ಸಹಿಸಿಕೊಳ್ಳಬಾರದು. ಮನದ ಮಾತು ಅಂಕಣ

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ