ಕನ್ನಡ ಸುದ್ದಿ  /  ಜೀವನಶೈಲಿ  /  ಎದ್ದ ತಕ್ಷಣ ಮೊಬೈಲ್‌ ಸ್ಪರ್ಶವಾಗದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತೆ, ಆ ಚಟದಿಂದ ಆಚೆ ಬರಲಾಗ್ತಿಲ್ಲ, ಏನು ಮಾಡ್ಲಿ? ಮನದ ಮಾತು ಅಂಕಣ

ಎದ್ದ ತಕ್ಷಣ ಮೊಬೈಲ್‌ ಸ್ಪರ್ಶವಾಗದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತೆ, ಆ ಚಟದಿಂದ ಆಚೆ ಬರಲಾಗ್ತಿಲ್ಲ, ಏನು ಮಾಡ್ಲಿ? ಮನದ ಮಾತು ಅಂಕಣ

ಪ್ರತಿಯೊಬ್ಬರ ನಿತ್ಯದ ಜೀವನದಲ್ಲಿ ಮೊಬೈಲ್‌ ಹಾಸುಹೊಕ್ಕಾಗಿದೆ. ಕೆಲವರು ಈ ಮೊಬೈಲ್‌ಗೆ ಶರಣಾಗಿದ್ದಾರೆ, ದಾಸರಾಗಿ ಚಟಕ್ಕೆ ಅಂಟಿಕೊಂಡಿದ್ದಾರೆ. ಇಂಥ ಒಂದು ವ್ಯಸಕ್ಕೆ ಮುಕ್ತಿ ಹೇಗೆ? ಈ ಪ್ರಶ್ನೆಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಉತ್ತರ ನೀಡಿದ್ದಾರೆ.

ಎದ್ದ ತಕ್ಷಣ ಮೊಬೈಲ್‌ ಸ್ಪರ್ಶವಾಗದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತೆ, ಆ ಚಟದಿಂದ ಆಚೆ ಬರಲಾಗ್ತಿಲ್ಲ, ಏನು ಮಾಡ್ಲಿ? ಮನದ ಮಾತು ಅಂಕಣ
ಎದ್ದ ತಕ್ಷಣ ಮೊಬೈಲ್‌ ಸ್ಪರ್ಶವಾಗದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತೆ, ಆ ಚಟದಿಂದ ಆಚೆ ಬರಲಾಗ್ತಿಲ್ಲ, ಏನು ಮಾಡ್ಲಿ? ಮನದ ಮಾತು ಅಂಕಣ

ಪ್ರಶ್ನೆ: ನಾನು ದಿನವಿಡೀ ಮೊಬೈಲನ್ನು ಬಳಕೆ ಮಾಡುತ್ತೇನೆ. ಬೆಳ್ಳಿಗ್ಗೆ ಎದ್ದು ಮೊದಲು ನೋಡುವುದೇ ಮೊಬೈಲು. ಅದರ ಸ್ಪಶ೯ವಾಗದಿದ್ದರೆ ಮನಸ್ಸು ಕಿರಿಕಿರಿ, ಒಂದು ತರಹದ ವೇದನೆ. ರಾತ್ರಿ ಮಲಗುವ ತನಕ ಮೊಬೈಲ್ ನೋಡಿಕೊಂಡೆ ಮಲಗುವುದು. ಮೊಬೈಲ್ ನೋಡುವಾಗ ಏನೋ ನೆಮ್ಮದಿ ಕ್ಷಣಿಕ ಸುಖ. ಆದರೆ ನೋಡಿ ಬಿಟ್ಟ ನಂತರ ಏನೋ ಬೇಸರ, ಕಳವಳ, ಆಲಸ್ಯ ಮತ್ತು ಅಪರಾಧಿ ಮನೋಭಾವನೆ ಕಾಡುತ್ತದೆ. ಬೆಳ್ಳೆಗೆ ಎದ್ದು ಕಣ್ಣು ತೆಗೆಯುವ ಮುಂಚೆಯೇ ಮೊಬೈಲ್ ಸ್ಪಶ೯ವಾಗಬೇಕು. ಹೇಗೆ ನಾನು ಈ ಸಮಸ್ಯೆಯಿಂದ ಪಾರಗಬೇಕು ಹೇಳಿ.

ಉತ್ತರ: ಮೊಬೈಲ್ ಬಳಕೆಯಿಂದ ನೀವು ವ್ಯಸನಕ್ಕೆ (ಚಟ) ಈಡಾದಂತೆ ಕಾಣುತ್ತಿದೆ. ಇದರಿಂದ ನಿಮಗೆ ಅಸಹಾಯಕ ಮನಸ್ಥಿತಿ ಉಂಟಾಗಿದೆ. ನಿಮ್ಮ ದಿನಚರಿಯಲ್ಲಿ ಒಗ್ಗೂಡಿರುವ ಈ ಒಂದು ಚಟ ನಿಮಗೆ ಉಭಯಸಂಕಟದಲ್ಲಿ ಸಿಲುಕಿಸಿದೆ. ಬಿಡಬೇಕೆಂಬ ಬಯಕೆ. ಆದರೆ ಬಿಟ್ಟು ಬದುಕಿಲಾರದ ಸಂಕಟ. ಮೊಬೈಲ್ ಎಂಬ ಒಂದು ಚಿಕ್ಕ ಯಂತ್ರ ಮಾನವನ ಮನಸ್ಸನ್ನೇ ನಿಯಂತ್ರಿಸುತ್ತಿದೆ.

ಈ ಚಟವು ಒಂದು ಅಥವಾ ಎರಡು ದಿನವಲ್ಲ ಆದರೆ ಬಹಳ ತಿಂಗಳು/ ವಷ೯ಗಳಿಂದ ಬೆಳೆಸಿರುವಂತದ್ದು. ಹಾಗಾಗಿ ಈ ಚಟವು ನಿಮ್ಮ ಬದುಕಿನಲ್ಲಿ ಆಳವಾಗಿ ಒಗ್ಗೂಡಿರುತ್ತದೆ. ಇದರಿಂದ ಹೊರ ಬರುವುದಕ್ಕೆ ಸ್ವಲ್ಪ ಕಾಲವಕಾಶ ಮತ್ತು ಸಂಯಮದ ಅಗತ್ಯವಿದೆ. ಮೊಬೈಲ್‌ನಲ್ಲಿ ಸದಾ ಮಾತನಾಡಿಕೊಂಡು ಬಹಳ ಕಾಲ ಹರಟೆ ಹೊಡೆಯುವುದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಮಯ ಕಳೆಯುವುದು ನಿಮಗೆ ಗೊತ್ತಿಲ್ಲದೆ ಚಟವಾಗಿ ರೂಪುಗೊಳ್ಳುತ್ತದೆ.

ಟ್ರೆಂಡಿಂಗ್​ ಸುದ್ದಿ

ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆದರೆ ಅತಿಯಾಗಿ ಯೋಚಿಸುವುದು (Over thinking), ನಕಾರಾತ್ಮಕ ಚಿಂತನೆ (Negative thinking) ಸವೇ೯ಸಾಮಾನ್ಯ. ಮನಸ್ಸು ಕಿರಿಕಿರಿಯಾಗುವುದು, ವಿನಾಕಾರಣ ಕೋಪ, ಕೂತಲ್ಲೆ ಕೂತಿರುವುದು, ನಿರುತ್ಸಾಹ, ಆಲಸ್ಯ, ನಿದ್ರಾ ಹೀನತೆ, ವಿಪರೀತ ಆಹಾರ ಸೇವನೆ ಹೀಗೆ ಹಲವಾರು ಅನಾರೋಗ್ಯಕರ ಬೆಳವಣಿಗೆಗಳಿಗೆ ಮನುಷ್ಯ ತುತ್ತಾಗುತ್ತಾನೆ. ಪರಿಣಾಮವಾಗಿ ಸಂಬಧ ಹಾಗೂ ಕೆಲಸ ಕಾರ್ಯಗಳ ಮೇಲೂ ಪರಿಣಾಮ ಬೀಳುತ್ತದೆ. ಹೀಗಾಗಿ, ಮೊಬೈಲ್ ಇಲ್ಲದಿದ್ದಲ್ಲಿ ಒಂದು ರೀತಿಯ ನ್ಯೂನ್ಯತೆ ಅನ್ನಿಸುತ್ತದೆ. ಸ್ವಲ್ಪ ಹೊತ್ತಾದರೂ ಬಿಟ್ಟಿರೋಣವೆಂದರೆ ದೇಹದ ಅಂಗವಿಕಲತೆಯಂತೆ ಅಪೂರ್ಣವೆನ್ನಿಸುತ್ತದೆ. ಮನಸ್ಸಿಗೆ ಕಳವಳ ಮತ್ತು ಚಿತ್ತಭ್ರಾಂತಿಯಾಗುತ್ತದೆ. ಈ ಗುಣಲಕ್ಷಣಗಳಿದ್ದರೆ ಇದ್ದನೆ ಮೊಬೈಲ್ ವ್ಯಸನವೆಂದು ಕರೆಯಲಾಗುತ್ತದೆ.

ಆದರೆ, ಇದರ ಬಗ್ಗೆ ಅರಿವಿಟ್ಟುಕೊಂಡು ಮತ್ತು ನಿಮ್ಮ ವ್ಯಸನವನ್ನು ಒಪ್ಪಿಕೊಂಡು, ಇದರಿಂದ ಹೊರಗೆ ಬರಲು ಮನಸ್ಸು ಮಾಡಿದರೆ, ನಿಸ್ಸಂಶಯವಾಗಿ ಹೊರಬಹುದು. ಕೆಲವು ಕಟ್ಟುನಿಟ್ಚು ನಿಯಮಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಮೊಬೈಲ್ ಚಟದಿಂದ ಹೊರಬಹುದು

ಟಿಪ್ಸ್

 • 1. ನಿಗದಿತ ವೇಳೆ - ಮೊಬೈಲ್ ಬಳಕಗೆ ಸಮಯವನ್ನು ನಿಗದಿತಗೊಳಿಸಿ. ಅಗತ್ಯ ಹಾಗೂ ತುತು೯ ಕರೆಗಳನ್ನು ಹೊರತುಪಡಿಸಿ ವಾಟ್ಸಾಪ್/ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಕೆಯನ್ನು ಕೆಲಸಕಾಯ೯ಗಳ ನಡುವೆ ಮಾಡುವುದನ್ನು ತಡೆಯಿರಿ.
 • 2. ⁠ವಾಕಿಂಗ್, ಯೋಗ, ದೈಹಿಕ ವ್ಯಾಯಾಮಗಳ ವೇಳೆಯಲ್ಲಿ ಆದಷ್ಟು ಮೊಬೈಲುಗಳನ್ನು ಉಪಯೋಗಿಸಬೇಡಿ. ಮೊಬೈಲಿನಲ್ಲಿ ಸದಾ ಮಾತಾನಾಡಿಕೊಂಡು ಅಥವಾ ವಿಡೀಯೋಗಳನ್ನು ವೀಕ್ಷಿಸಿಕೊಂಡು ವ್ಯಾಯಾಮ ಮಾಡಿದರೆ ದೇಹ ಮತ್ತು ಮನಸ್ಸಿನ ಮೇಲೆ ಆಗುವ ಲಾಭದಾಯಕಗಳು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ದೇಹದ ಮೇಲೆ ನಿಗವಿಟ್ಟು, ಮನಸ್ಸನ್ನು ಸಹ ವ್ಯಾಯಾಮದ ಮೇಲೆ ನಿಗ್ರಹಿಸಿ, ಗಮನವಿಟ್ಟು ಮಾಡಬೇಕು. ಇಲ್ಲದಿದ್ದರೆ, ವ್ಯಾಯಮದ ನಂತರ ಮನಸ್ಸಿಗೆ ದೊರಕಬೇಕಾದ ಉಲ್ಲಾಸ ಮತ್ತು ಫ್ರೆಶ್ ನೆಸ್ ಸಿಗುವುದಿಲ್ಲ.
 • 3. ಧ್ಯಾನ ಅಥವಾ ಪ್ರಾಣಾಯಾಮ- ಮನಸ್ಸನ್ನು ನಿಯಂತ್ರಣಗೊಳ್ಳಿಸುವುದಕ್ಕೆ ಧ್ಯಾನ ಹಾಗೂ ಪ್ರಾಣಯಾಮ ಬಹಳ ಉಪಯುಕ್ತ. ಚಂಚಲ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ, ಪದೇ ಪದೇ ಮೊಬೈಲನ್ನು ವಿನಾಕಾರಣ ಬಳಕೆ ಮಾಡುವುದನ್ನು ಅಥವಾ ಅನಾಗತ್ಯ. ಇತರೆ ಯಾವುದೇ ಚಟುವಟಿಕೆ ತಡೆಯುವುದಕ್ಕೆ ಧ್ಯಾನ ಅವಶ್ಯಕ.
 • 4. ಆಹಾರ ಸೇವನೆ ಮತ್ತು ನಿದ್ರಾ ಸಮಯ - ಮೊಬೈಲನ್ನು ಆಹಾರ ಸೇವಿಸುವಾಗ ದೂರವಿಡಿ ಮತ್ತು ನಿದ್ರೆ ಮಾಡುವ ಒಂದು ತಾಸಿನ ಹಿಂದೆಯೇ ದೂರವಿಡಿ. ಮೊಬೈಲನ್ನು ನೋಡದೆ, ಅದರಲ್ಲಿ ಮಾತನಾಡದೆ ಗಮನವಿಟ್ಟು ಆಹಾರವನ್ನು ಜಗಿದು ಸೇವಿಸಿ ಮತ್ತು ಅನಗತ್ಯ ಚಿಂತೆಗಳಿಲ್ಲದೇ ನಿದ್ರೆಯನ್ನೂ ಸಹ ಚೆನ್ನಾಗಿ ಮಾಡಿ. ಬೆಳ್ಳಿಗೆ ಎದ್ದ ತಕ್ಷಣವೇ ಮೊಬೈಲನ್ನು ಹುಡಕ ಬೇಡಿ, ಸ್ವಲ್ಪ ಸಮಯದ ನಂತರ ಬಳಕೆ ಮಾಡಿ
 • 5. ಫಾಮಿಲಿ ಟೈಮ್ - ದಿನಕ್ಕೊಂದು ತಾಸು ಎಲ್ಲರೂ ನಿಮ್ಮ ಮೊಬೈಲ್ಲನ್ನು ದೂರವಿಟ್ಟು ಒಟ್ಟಿಗೆ ಕುಳಿತು ಸಮಯವನ್ನು ಕಳೆಯಿರಿ, ಇದರಿಂದ ಸಂಬಂಧಗಳು ಬೆಸೆಯುತ್ತವೆ. ಮನಸ್ಥಾಪಗಳು ಕಡಿಮೆಯಾಗುತ್ತವೆ.

ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ..

ನಿಮ್ಮ ದಿನಚರಿಯ ಬಗ್ಗೆ ಗಮನವಿರಲಿ. ಮೊಬೈಲಿನ ಬಳಕೆ ನಿಮ್ಮ ಕೆಲಸ ಕಾಯ೯ಗಳಿಗೆ ಅಡ್ಡಿ ಬರದಂತೆ ನೋಡಿಕೊಳ್ಳಿ. ಆದರೂ ನಿಮ್ಮ ಮನಸ್ಸು ನಿಯಂತ್ರಣಕ್ಕೆ ಬರಲಿಲ್ಲವಾದರೆ ಈ ಕೆಳಕಂಡ ಪ್ರಶ್ನೆಗಳನ್ನು ನಿಮಗೆ ನೀವೆೇ ಕೇಳಿಕೊಳ್ಳಿ

 • ನನ್ನ ದಿನಚರಿ ಹೇಗಿದೆ?

ನಾನು ದಿನದ ಸಮಯವನ್ನು ಹೇಗೆ ಉಪಯೋಗ ಮಾಡುಕೊಳ್ಳುತ್ತಿದ್ದೇನೆ?

 • ಪ್ರತಿದಿನ ನಾನು ಮೊಬೈಲಿನಲ್ಲಿ ಎಷ್ಟು ಸಮಯವನ್ನು ಕಳೆಯುತ್ತೇನೆ?
 • ಯಾವ ಯಾವ ಕಾರಣಗಳಿಗಾಗಿ ನಾನು ಮೊಬೈಲ್ ಬಳಕೆ ಮಾಡುತ್ತೇನೆ?
 • ಮೊಬೈಲ್ ಬಳಕೆ ಹೆಚ್ಚಾಗಿದ್ದರಿಂದ ನನಗೆ ಅನುಕೂಲವಾಗಿದೆಯೇ ಅಥವಾ ಅನಾನುಕೂಲವಾಗಿದೆಯೇ ?
 • ಮೊಬೈಲ್ ಬಳಕೆಯಲ್ಲಿ ಸಮಯ ವ್ಯಥ೯ ಮಾಡುತ್ತಿದ್ದೇನೆಂದು ಪಾಪ ಪ್ರಜ್ಞೆ ಕಾಡುತ್ತದೆಯೇ ?
 • ನನ್ನ ಉಳಿದ ಕೆಲಸ ಕಾರ್ಯಗಳಿಗೆ ನನ್ನ ಮೊಬೈಲ್ ಬಳಕೆಯಿಂದ ಅಡಚಣೆಯುಂಟಾಗಿದೆಯೇ?
 • ನನ್ನ ಬದುಕಿನ ಗುರಿಗಳು ಮತ್ತು ನನ್ನ ದಿನಚರಿಯ ನಡುವೆ ಹೊಂದಾಣಿಕೆ ಇದೆಯೇ? ನಾನು ಸಾಕಷ್ಟು ಸಮಯ ನನ್ನ ಗುರಿಯ ಕಡೆಗೆ ಕೊಡುತ್ತಿದ್ದೇನೆಯೇ ?
 • ಪ್ರತಿ ರಾತ್ರಿ ಮಲಗುವ ಮುನ್ನ, ಇಡೀದಿನ ಸಮಯ ವ್ಯಥ೯ಮಾಡಿದೆನೆಂದು ಪಶ್ಚಾತ್ತಾಪ ಪಡುತ್ತೇನೆಯೇ? ನನ್ನ ಮನಸ್ಥಿತಿ ಹೇಗಿರುತ್ತದೆ?

ಈ ಪ್ರಶ್ನೆಗಳಿಗೆ ಉತ್ತರ ದೊರಕಿದಾಗ ನೀವು ಮೊಬೈಲನ್ನು ಹೆಚ್ಚು ಪ್ರಜ್ಞಾ ಪೂವ೯ಕವಾಗಿ ಮಿತಿಯಿಂದ ಬಳಕೆ ಮಾಡಲು ಸುಲಭವಾಗುತ್ತದೆ. ಒಂದು ಪಕ್ಷ ನೀವು ಸಫಲವಾಗದಿದ್ದರೆ ಆಪ್ತ ಸಮಾಲೋಚಕರನ್ನು ಸಂಪಕಿ೯ಸಿ ಪರಿಹಾರ ಕಂಡುಕೊಳ್ಳಿ.

ಲೇಖಕರ ಬಗ್ಗೆ

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.