ಕೋವಿಡ್ ಸೋಂಕಿತರಿಗಿಂತ ಡೆಂಗ್ಯೂ ರೋಗಿಗಳಿಗೆ ಹೃದ್ರೋಗದ ಅಪಾಯ ಹೆಚ್ಚು; ಸಿಂಗಾಪುರ ತಜ್ಞರಿಂದ ಅಚ್ಚರಿಯ ಮಾಹಿತಿ
Sep 06, 2024 10:50 PM IST
ಕೋವಿಡ್ ಸೋಂಕಿತರಿಗಿಂತ ಡೆಂಗ್ಯೂ ರೋಗಿಗಳಿಗೆ ಹೃದ್ರೋಗದ ಅಪಾಯ ಹೆಚ್ಚು
- Dengue and Heart attack: ಡೆಂಗ್ಯೂ ಪ್ರಕರಣಗಳು ಕರ್ನಾಟಕ ಮಾತ್ರವಲ್ಲದೆ ಭಾರತದಲ್ಲಿ ವರದಿಯಾಗುತ್ತಿವೆ. ವಾರಗಟ್ಟಲೆ ಸುಸ್ತಿನಿಂದ ಮಲಗಿಸುವ ಡೆಂಗ್ಯೂ, ಚಿಕಿತ್ಸೆ ನೀಡಿದರೆ ಗುಣವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಒಮ್ಮೆ ಗುಣವಾದರೆ, ಅಲ್ಲಿಗೆ ಅಪಾಯ ಮುಗಿಯುವುದಿಲ್ಲ. ಹೊಸ ಅಧ್ಯಯನವೊಂದು ಭವಿಷ್ಯದಲ್ಲಿಯೂ ಎದುರಾಗಬಹುದಾದ ಆರೋಗ್ಯ ಸಮಸ್ಯೆ ಕುರಿತು ತಿಳಿಸಿದೆ.
ಭಾರತದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಈ ಬಾರಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಮಕ್ಕಳು ಡೆಂಗ್ಯೂಗೆ ತುತ್ತಾಗುತ್ತಿದ್ದಾರೆ. ಈ ಜ್ವರವು ತೀವ್ರ ಸುಸ್ತು ಹಾಗೂ ನಿತ್ರಾಣಗೊಳ್ಳುವಂತೆ ಮಾಡುತ್ತಿದೆ. ಡೆಂಗ್ಯೂ ರೋಗಿಗಳ ರೋಗನಿರೋಧಕ ಶಕ್ತಿ ತೀರಾ ಕಡಿಮೆಯಾಗುತ್ತದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತದೆ. ಇದು ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಡೆಂಗ್ಯೂವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಸೂಕ್ತ ಚಿಕಿತ್ಸೆ, ಆಹಾರಕ್ರಮ ಪಾಲಿಸುವ ಮೂಲಕ ಅಗತ್ಯ ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಅನಿವಾರ್ಯ.
ಇದೀಗ, ಅಧ್ಯಯನವೊಂದು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ. ಕೋವಿಡ್‌ನಿಂದ ಚೇತರಿಸಿಕೊಳ್ಳುವವರಿಗಿಂತ ಡೆಂಗ್ಯೂನಿಂದ ಚೇತರಿಸಿಕೊಂಡವರು ಭವಿಷ್ಯದಲ್ಲಿ ಗಂಭೀರ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಿಂಗಾಪುರದ ವೈದ್ಯರು ನಡೆಸಿದ ಅಧ್ಯಯನ ಹೇಳಿದೆ.
ಕೋವಿಡ್ 19 ಮಹಾಮಾರಿ ಜಗತ್ತಿಗೆ ವ್ಯಾಪಿಸಿದ ಬಳಿಕ ಕೋವಿಡ್ ಬಗ್ಗೆ ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಕೋವಿಡ್‌ನಿಂದ ಬಾಧಿತರಾದವರಲ್ಲಿ ಭವಿಷ್ಯದಲ್ಲಿ ಹೃದ್ರೋಗ ಸಮಸ್ಯೆ ಸಾಮಾನ್ಯವಾಗಿದೆ ಎಂದು ಅನೇಕ ವರದಿಗಳು ಹೇಳಿವೆ. ಆದರೆ ಕೋವಿಡ್‌ಗಿಂತ ಡೆಂಗ್ಯೂ ಹೆಚ್ಚು ಅಪಾಯಕಾರಿ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡವರಿಗೆ ಭವಿಷ್ಯದಲ್ಲಿ ತೀವ್ರ ಹೃದ್ರೋಗ ಬರುವ ಸಾಧ್ಯತೆ ಶೇ.55ರಷ್ಟು ಇರುತ್ತದೆ ಎಂದು ಹೇಳಲಾಗಿದೆ. ಮಾನವನ ಹೃದಯದ ಮೇಲೆ ಡೆಂಗ್ಯೂ ತೀವ್ರ ಪರಿಣಾಮ ಬೀರುತ್ತದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ.
ಸಿಂಗಾಪುರದ ವಿಜ್ಞಾನಿಗಳು ಹೇಳಿದ್ದೇನು?
ಸಿಂಗಾಪುರದ ವಿಜ್ಞಾನಿಗಳ ಪ್ರಕಾರ, ಕೋವಿಡ್‌ಗೆ ಹೋಲಿಸಿದರೆ ಡೆಂಗ್ಯೂ ಪೀಡಿತರು ಹೃದಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಸಿಂಗಾಪುರದ ಸಂಶೋಧಕರು ಡೆಂಗ್ಯೂ ಸೋಂಕು ಕಾಣಿಸಿಕೊಂಡ ನಂತರ ರೋಗಿಗಳ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ತೀವ್ರ ಪ್ರಮಾಣದ ಡೆಂಗ್ಯೂ ಜ್ವರ ಬಂದವರಲ್ಲಿ ಈ ಅಪಾಯ ಹೆಚ್ಚು.
ಸುಮಾರು 12 ಲಕ್ಷ ಜನರ ಮೇಲೆ ಈ ಅಧ್ಯಯನ ನಡೆಸಲಾಯ್ತು. ಆ ಬಳಿಕವೇ ಡೆಂಗ್ಯೂ ಪೀಡಿತರು ಹೃದ್ರೋಗದಿಂದ ಬಳಲುತ್ತಿರುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ. ಡೆಂಗ್ಯೂ ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಕಡಿಮೆ ಪ್ಲೇಟ್ಲೆಟ್ ಸಂಖ್ಯೆಗೆ ಕಾರಣವಾಗುತ್ತದೆ. ಆಂತರಿಕ ರಕ್ತಸ್ರಾವ ಮತ್ತು ಅಂಗಗಳಿಗೆ ಹಾನಿ ಸಂಭವಿಸುತ್ತದೆ. ಡೆಂಗ್ಯೂ ಕೆಲವು ಜನರಲ್ಲಿ ಡೆಂಗ್ಯೂ ಶಾಕ್ ಸಿಂಡ್ರೋಮ್ ಅನ್ನು ಉಂಟುಮಾಡಬಹುದು. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಡೆಂಗ್ಯೂ ಕಡಿಮೆಯಾದ ನಂತರ ನಿರಂತರವಾಗಿ ಸುಸ್ತಾಗುವುದು, ಸ್ನಾಯು ನೋವು ಮತ್ತು ಕೀಲು ನೋವು ಇದ್ದರೆ ತಕ್ಷಣ ತಪಾಸಣೆಗೆ ಒಳಗಾಗಬೇಕು. ಇದನ್ನು ಪೋಸ್ಟ್ ಡೆಂಗ್ಯೂ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಕೆಲವು ಸಂದರ್ಭಗಳಲ್ಲಿ ಯಕೃತ್ತಿನ ಹಾನಿಗೆ ಕಾರಣವಾಗಬಹುದು. ನರಗಳ ಸಮಸ್ಯೆಗಳು ಕೂಡಾ ಬರಬಹುದು.
ಡೆಂಗ್ಯೂ ಸಾಂಕ್ರಾಮಿಕ ರೋಗ. ಈ ಸೋಂಕು ಹರಡುವುದನ್ನು ತಪ್ಪಿಸಿ ಆರೋಗ್ಯವಾಗಿರಲು ಕಲುಷಿತ ವಾತಾವರಣದಿಂದ ದೂರವಿರಬೇಕು. ಮನೆಯ ಬಳಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸಂಜೆ ವೇಳೆ ಮನೆಯೊಳಗೆ ಕಿಟಕಿ-ಬಾಗಿಲು ಮುಚ್ಚಿರಬೇಕು. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ಎಚ್ಚರ ವಹಿಸಬೇಕು.