ಬೇಡವೆಂದರು ಬಿಡದೇ ಕಾಡುವ ಸೋಮಾರಿತನಕ್ಕೆ ಕಾರಣವೇನು; ಆಲಸಿ ಮನೋಭಾವದಿಂದ ಹೊರಬರಲು ಮಾಡಬೇಕಾಗಿದ್ದಿಷ್ಟು – ಕಾಳಜಿ ಅಂಕಣ
Oct 26, 2024 09:51 AM IST
ಡಾ. ರೂಪಾ ರಾವ್: ಕಾಳಜಿ ಅಂಕಣ
- ರೂಪಾ ರಾವ್ ಬರಹ: ವಿಕಾಸವಾದದ ಪ್ರಕಾರ ಮನುಷ್ಯ ಮೂಲತಃ ಸೋಮಾರಿ ಅಲ್ಲ. ಆತ ತನ್ನ ಶಕ್ತಿಯನ್ನು ಹೆಚ್ಚು ಆರಾಮವಾಗಿರುವುದರ ಮುಖಾಂತರ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದ. ಏಕೆಂದರೆ ಅನಿರೀಕ್ಷಿತವಾಗಿ ಕಾಡುಪ್ರಾಣಿ, ಮತ್ತಿತರ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಅವನಿಗೆ ತನ್ನ ಶಕ್ತಿ ವ್ಯಯವಾಗದಂತೆ ನೋಡಿಕೊಳ್ಳುವ ಅಗತ್ಯ ಇತ್ತು. ಇದೇ ಮನೋಭಾವ ಈಗಲೂ ಬಹಳಷ್ಟು ಜನರಿಗೆ ಇದೆ.
ಪ್ರಶ್ನೆ: ಮೇಡಂ, ಸೋಮಾರಿತನ ಬಿಡೋದು ಹೇಗೆ? ಈ ಪ್ರಶ್ನೆ ನನಗೆ ಮೊದಲಿನಿಂದಲೂ ಕಾಡುತ್ತಿದೆ. ಏನೇ ಕೆಲಸ ಮಾಡಬೇಕು ಎಂದುಕೊಂಡರೂ ಕೂಡಲೇ ಮಾಡಲಾಗುವುದಿಲ್ಲ. ಆಮೇಲೆ ಮಾಡೋಣ, ನಾಳೆ ನೋಡೋಣ, ಇನ್ನೂ ಸಮಯ ಇದೆ ಅಂತೆಲ್ಲಾ ಮುಂದೂಡುತ್ತಾ ಬರುತ್ತೇನೆ. ಕೊನೆಗೆ ಆ ಕೆಲಸ ಮಾಡದೆ ಅದರಿಂದ ಸಮಸ್ಯೆ ಆಗಿ ಕುತ್ತಿಗೆಗೆ ಬರುತ್ತಿದೆ ಎಂದಾಗ ಕೆಲಸ ಮಾಡಲು ಶುರು ಮಾಡುತ್ತೇನೆ. ಅಷ್ಟರಲ್ಲಿ ಎಲ್ಲಾ ಅನಾಹುತಗಳು ಶುರುವಾಗಿರುತ್ತವೆ. ಮನೆಯಲ್ಲಿ ಆಲಸಿ, ವಿಳಂಬ ಪ್ರವೃತ್ತಿಯವ ಎಂದೆಲ್ಲಾ ಕರೆಯುತ್ತಾರೆ. ನನಗೂ ನಾನು ವಿಳಂಬ ಪ್ರವೃತ್ತಿಯವನು ಹಾಗೂ ಆಲಸಿ ಅಂತ ಗೊತ್ತಿದೆ. ಒಪ್ಪುವೆ, ಆದರೆ ನನಗೆ ಅದರಿಂದ ಹೊರಗೆ ಬರಲು ಆಗುತ್ತಿಲ್ಲ. ನಾನೇಕೆ ಹೀಗೆ? ದಯವಿಟ್ಟು ಸಹಾಯ ಮಾಡಿ, ಆಲಸಿ ಮನೋಭಾವದಿಂದ ಹೊರ ಬರಲು ಏನು ಮಾಡಬೇಕು?
ಸೋಮಶೇಖರ, ಶಿವಮೊಗ್ಗ
ಉತ್ತರ: ಮೊದಲಿಗೆ ನೀವು ಸೋಮಾರಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಜ ಹೇಳಬೇಕೆಂದರೆ ಸೋಮಾರಿತನ ಎಂಬುದು ಸಾಮಾನ್ಯ ಜನ ಕೊಟ್ಟ ಹೆಸರಷ್ಟೇ. ಪ್ರಾಕೃತಿಕವಾಗಿ ಸೋಮಾರಿತನ ಎಂಬುದೇ ಇಲ್ಲ. ಹೌದು, ನೀವು ಪ್ರಾಣಿ ಪಕ್ಷಿಗಳ ದಿನಚರಿಯನ್ನು ನೋಡಿ . ಅವು ಆಹಾರಕ್ಕಾಗಿ, ವಸತಿಗಾಗಿ, ಪ್ರಾಣಕ್ಕೆ ಅಪಾಯ ಇದೆ ಎಂದಾಗ ಅಥವಾ ತಮ್ಮ ಮನರಂಜನೆಗಾಗಿ ಮಾತ್ರ ಕೆಲಸ ಮಾಡುತ್ತವೆ. ಮನುಷ್ಯನೂ ಅಷ್ಟೇ ತನಗೆ ಆಹಾರ ವಸತಿ, ಲೈಂಗಿಕ ವಿಚಾರ ಇವುಗಳನ್ನು ಬಿಟ್ಟರೆ ದಿಢೀರ್ ಲಾಭದಾಯಕ ವಿಷಯ ಅಥವಾ ತೀರಾ ಕುತ್ತಿಗೆಗೆ ಬಂದಾಗ ಮಾತ್ರ ತನ್ನ ಶಕ್ತಿಯನ್ನು ಅದಕ್ಕಾಗಿ ವಿನಿಯೋಗಿಸುವುದು, ಇದು ಶಿಲಾಯುಗದಿಂದಲೂ ಬಂದ ಮನುಷ್ಯನ ಪ್ರವೃತ್ತಿ.
ವಿಕಾಸವಾದದ ಪ್ರಕಾರ ಮನುಷ್ಯ ಮೂಲತಃ ಸೋಮಾರಿ ಅಲ್ಲ. ಆತ ತನ್ನ ಎನರ್ಜಿಯನ್ನು ಹೆಚ್ಚು ಹೆಚ್ಚು ಆರಾಮವಾಗಿರುವುದರ ಮುಖಾಂತರ ಸೇವ್ ಮಾಡಿಟ್ಟುಕೊಳ್ಳುತ್ತಿದ್ದ. ಏಕೆಂದರೆ ಅನಿರೀಕ್ಷಿತವಾಗಿ ಕಾಡುಪ್ರಾಣಿ, ಮತ್ತಿತರ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಅವನಿಗೆ ತನ್ನ ಶಕ್ತಿ ವ್ಯಯವಾಗದಂತೆ ನೋಡಿಕೊಳ್ಳುವ ಅಗತ್ಯ ಇತ್ತು. ಇದೇ ಮನೋಭಾವ ಈಗಲೂ ಬಹಳಷ್ಟು ಜನರಿಗೆ ಇದೆ. ಆದ್ದರಿಂದಲೇ ನೀವು ಹೇಳಿದಂತೆ ಕುತ್ತಿಗೆಗೆ ಬರುವ ತನಕ ಬಹಳಷ್ಟು ಜನರು ಕೆಲಸವನ್ನು ಮುಂದೂಡುತ್ತಿರುತ್ತಾರೆ.
ಆದರೆ ಮನುಷ್ಯ ಬೆಳೆದಂತೆಲ್ಲಾ ಅವನ ಬೇಕುಗಳು, ಅಗತ್ಯಗಳು, ಅನಿವಾರ್ಯತೆಗಳು, ಇಷ್ಟಗಳು ಎಲ್ಲವೂ ಬೆಳೆದವು. ಮಾಸ್ಲೋನ ನೀಡ್ ಹೈರಾರ್ಕಿಯ ಪ್ರಕಾರ ಮನುಷ್ಯನ ಅವಶ್ಯಕತೆಗಳು ಹೀಗಿವೆ:
1. ಊಟ ವಸತಿ
2. ಭದ್ರತೆ
3. ಪ್ರೀತಿ ಮತ್ತು ಗುಂಪಿಗೆ ಸೇರುವ ಇಚ್ಛೆ
4. ಆತ್ಮವಿಶ್ವಾಸ, ಸಾಧನೆ, ಸ್ವಾಭಿಮಾನ, ಸ್ವಮೌಲ್ಯ ಇತ್ಯಾದಿ
5. ಕೊನೆಯದು ಆತ್ಮ ಸಾಕ್ಷಾತ್ಕಾರದ ಅನ್ವೇಷಣೆ, ಸೃಜನಾತ್ಮಕ ಮನೋಭಾವ, ಕ್ರಿಯಾಶೀಲತೆ, ಧಾರ್ಮಿಕ ಮನೋಭಾವ ಇತ್ಯಾದಿ. ಇದರ ವಿವರಗಳಿಗೆ ಹೆಚ್ಚು ಹೋಗುವುದು ಬೇಡ.
ಬಹುತೇಕರ ವಿಳಂಬತನಕ್ಕೆ ಕಾರಣ ಈ ಐದರಲ್ಲಿ ಯಾವುದೋ ಒಂದು ಅವರಿಗೆ ಸಿಕ್ಕಿಲ್ಲ ಅಥವಾ ಬಹುವಾಗಿ ಸಿಗುತ್ತಿದೆ ಎಂಬುದು. ಅಂದರೆ ಒಂದೋ ಕಂಪರ್ಟ್‌ಜೋನ್‌ನಲ್ಲಿ ಇದ್ದಾರೆ, ಅಲ್ಲಿಂದ ಹೊರಬರಲು ಅಥವಾ ಮೇಲಿನ ಹಂತಕ್ಕೆ ಹೋಗಲು ಭಯ ಅಥವಾ ತಾವು ಮಾಡಬೇಕೆಂದಿರುವ ಕೆಲಸದಲ್ಲಿ ಮೇಲಿನ ಯಾವುದೋ ಒಂದು ಅವರಿಗೆ ಸಿಗುತ್ತಿಲ್ಲ ಎಂಬುದು.
ಉದಾಹರಣೆಗೆ: ಒಬ್ಬ ವಿದ್ಯಾರ್ಥಿ ಓದುವುದನ್ನು ಮುಂದೂಡುತ್ತಿದ್ದಾನೆ ಎಂದರೆ ಅದರ ಅರ್ಥ ಹೀಗಿದೆ:
1. ಅವನಿಗೆ ವಿಡಿಯೊ ನೋಡುವುದು, ಟಿವಿ ನೋಡುವುದು ಅಥವಾ ಸುಮ್ಮನೆ ಮಲಗುವುದು ಅಥವಾ ಬೇರೆ ಇಷ್ಟೊಂದು ಕೆಲಸ ಮಾಡುವುದು ಅಥವಾ ಸುಮ್ಮನೆ ಚಿಂತೆ ಆತಂಕ ಪಡುತ್ತಾ ಮಲಗುವುದು ಕಂಫರ್ಟ್‌ಜೋನ್.
2. ಆ ವಿಷಯ ಏನು ಮಾಡಿದರೂ ಅರ್ಥ ಆಗುತ್ತಿಲ್ಲ. ಹಾಗಾಗಿ ಆ ವಿಷಯ ಓದುವುದರಿಂದ ಯಾವುದೇ ಉಪಯೋಗವಿಲ್ಲ.
3. ಆ ವಿಷಯಕ್ಕೆ ಅವನು ಹೆಚ್ಚು ಮಹತ್ವ ಕೊಡುತ್ತಿಲ್ಲ.
ಇದೇ ರೀತಿ ಒಬ್ಬ ಹುಡುಗಿ ತನಗೆ ಅನಿವಾರ್ಯವಿದ್ದರೂ ಕೆಲಸ ಹುಡುಕುವುದು ಅಥವಾ ಅರ್ಜಿ ಹಾಕುವುದು ಯಾವುದನ್ನೂ ಮಾಡುತ್ತಿಲ್ಲಎಂದರೆ ಆಕೆಗೆ,
1. ಈ ಕೆಲಸದಲ್ಲಿ ಆಸಕ್ತಿ ಬರುತ್ತಿಲ್ಲ
2. ಅವರಿಗೆ ಕೆಲಸದಿಂದ ಸಿಗುವ ಆಹಾರ ಇನ್ನಿತರ ಸೌಲಭ್ಯಗಳು ಈಗಾಗಲೇ ಸಿಗುತ್ತಿವೆ. ಹಾಗಾಗಿ ಅದರ ಅಗತ್ಯವಿಲ್ಲ.
3. ಅವರಿಗೆ ಆ ಕೆಲಸಕ್ಕೆ ಹೋಗಿ ಅಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಎಂಬ ಭಯ
4. ತಿರಸ್ಕೃತಳಾಗುವ ಭಯ
ಹಾಗೆಯೇ ಮನೆಯಲ್ಲಿ ಇತರೆ ಕೆಲಸಗಳನ್ನು ಮಾಡುವಾಗಲೂ ಅಷ್ಟೇ ಬಲವಾದ ದೈಹಿಕ ತೊಂದರೆಗಳನ್ನು ಬಿಟ್ಟರೆ ವಿಳಂಬತೆಗೆ ಕಾರಣ ಮೇಲಿನ ಮಾಸ್ಕೋ ನೀಡ್ಸ್ ಆಫ್ ಪಿರಮಿಡ್‌ನ ಒಳಗೇ ಸುತ್ತುತ್ತವೆ.
ಆಲಸಿ ಮನೋಭಾವ ದೂರಾಗಲು ಹೀಗೆ ಮಾಡಿ
ನಿಮ್ಮ ವಿಳಂಬ ನೀತಿಗೆ ಮೇಲಿನ 5 ವಿಚಾರಗಳಲ್ಲಿ ಯಾವುದು ಕಾರಣ ಎಂದು ತಿಳಿಯಿರಿ. ನಂತರ ಅದಕ್ಕೆ ತಕ್ಕಂತೆ ಪರಿಹಾರ ಕಂಡುಹಿಡಿಯಿರಿ.
ಇದನ್ನು ಕಂಡು ಹಿಡಿಯಲು ಸುಲಭವಾಗಲಿ ಎಂದು ವಿವಿಧ ಮುಂದೂಡಿಕೆಯ ವಿಧಗಳನ್ನೂ, ಆ ವಿಧದ ಜನರು ಕೆಲಸ ಮುಂದೂಡಲು ಸಾಮಾನ್ಯವಾಗಿ ಹೇಳುವ ನೆಪಗಳು ಮತ್ತು ಅದಕ್ಕೆ ಅನುಗುಣವಾಗಿ ಒಂದಷ್ಟು ಪರಿಹಾರ ತಂತ್ರಗಳನ್ನು ಕೊಟ್ಟಿರುವೆ. ತಂತ್ರಗಳು ಬೇಕಾದಷ್ಟಿವೆ. ಸಮಯ ಹಾಗೂ ಸ್ಥಳಾವಕಾಶದ ಕೊರತೆಯಿಂದ ಒಂದಷ್ಟನ್ನು ಮಾತ್ರ ಹೇಳುತ್ತಿರುತ್ತೇವೆ.
1. ಬೇಡದ ಮನಸ್ಥಿತಿ, ಕ್ರಾಂತಿಕಾರಿ ಮನೋಭಾವ
ನೆಪ: ನಾನು ಮಾಡಲ್ಲ, ಬೇಕಾಗಿಲ್ಲ, ನನಗೆ ಮಾಡಲು ಇಷ್ಟವಿಲ್ಲ. ಡೋಂಟ್ ಕೇರ್, ಮಾಡದಿದ್ದರೂ ಪರವಾಗಿಲ್ಲ.
ಪರಿಹಾರ: ಹೀಗೆ ದ್ವಂದ್ವ ಮನಸ್ಥಿತಿ ಇರುವವರಲ್ಲಿ ಸರಿಯಾದ ನಿಚ್ಚಳ ಗುರಿ ಇರುವುದಿಲ್ಲ, ನಿಮ್ಮ ಗುರಿ ಬದುಕಿನ ಆದ್ಯತೆ ಹಾಗೂ ಧ್ಯೇಯಗಳನ್ನು ಗುರುತಿಸಿಕೊಳ್ಳಿ: SMART goal ಅಂದರೆ ನಿಖರವಾದ ಗುರಿ (ಯಾವುದು, ಹೇಗೆ, ಎಲ್ಲಿ ಯಾವತ್ತು ಇತ್ಯಾದಿ) ಯಾವುದು ಎಂದು ಕಂಡುಹಿಡಿಯಿರಿ.
2. ವೈಫಲ್ಯದ ಭಯ: ಎಲ್ಲಿ ವಿಫಲರಾಗಿಬಿಡುತ್ತೇನೋ, ಜನರಿಂದ ಅವಮಾನಕ್ಕೆ ಒಳಗಾಗುತ್ತೇನೋ ಎನ್ನುವ ಭಯ.
ನೆಪ: ಸರಿಯಾಗಿ ಓದಲಾಗಿಲ್ಲ, ಇನ್ನೂ ಪ್ರಿಪೇರ್ ಆಗಬೇಕು, ನನಗೆ ನನ್ನ ಮೇಲೆ ನಂಬಿಕೆ ಇಲ್ಲ ಆದ್ದರಿಂದ ಮಾಡಲ್ಲ, ಇದನ್ನು ಪ್ರಾರಂಭಿಸಲು ನನಗೆ ಹೆಚ್ಚಿನ ಮಾಹಿತಿ ಬೇಕು.
ಟೆನ್ಶನ್ ಆಗುತ್ತದೆ
ಪರಿಹಾರ: ನಿಮ್ಮನ್ನು ಕಾಡುತ್ತಿರುವ ಭಯ ಯಾವುದು. ಆ ಕೆಲಸದ ಬಗ್ಗೆ ಆತ್ಮವಿಶ್ವಾಸದ ಕೊರತೆಯೇ ಅಥವಾ ಪರಿಪೂರ್ಣತೆಯ ಹಂಬಲವೇ ನೋಡಿಕೊಳ್ಳಿ.
ಆತ್ಮವಿಶ್ವಾಸಕ್ಕೆ ಸರಿಯಾದ ಸಿದ್ಧತೆ ಯಾವಾಗಲೂ ಉತ್ತರ. ಯಾರೂ ಪರಿಪೂರ್ಣರಲ್ಲ ಒಂದು ವೇಳೆ ಈ ಸಲ ನೀವು ಎಡವಿದರೂ ಮತ್ತೆ ಕಲಿತು ಪ್ರಯತ್ನಿಸಬಹುದು. ಬೀಳದೇ ನಡೆದವರು ಯಾರೂ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ಮನರಂಜನೆ ಹುಡುಕುವುದು, ಮಾಡುವ ಕೆಲಸದಲ್ಲಿ ಖುಷಿ ಸಿಗದವ
ನೆಪ: ಅದು ಬೋರು, ಮನರಂಜನೆಯಲ್ಲಿ ಆಸಕ್ತಿ ಟಿವಿ, ಮೊಬೈಲ್, ಹರಟೆ ಇಲ್ಲಿ ಸಿಗುವ ಖುಷಿ ಮಾಡಬೇಕಾದ ಕಡೆ ಸಿಗುವದಿಲ್ಲ.
ನೆಪ: ಇನ್ನೂ ಬೇಕಾದಷ್ಟು ಸಮಯ ಇದೆ, ಆಮೇಲೆ ನೋಡೋಣ. ಈ ಸಿನಿಮಾ, ಈ ಮೆಸೇಜ್ ಮಾಡಿ ಆಮೇಲೆ ಇದನ್ನು ಶುರು ಮಾಡೋಣ
ಓದಲು ಕೂತರೆ ನಿದ್ದೆ ಬರುತ್ತದೆ.
ಪರಿಹಾರ: ನೀವು ಮಾಡಬೇಕೆಂದಿರುವ ಕೆಲಸ ಮುಖ್ಯವೇ ಇಲ್ಲವೇ? ಒಂದು ವೇಳೆ ನೀವು ಓದದಿದ್ದರೆ ಅಥವಾ ಈ ಕೆಲಸ ಮಾಡದೇ ಇದ್ದರೆ ನಿಮಗಾಗುವ ಲಾಭವೇನು, ನಷ್ಟವೇನು ಯೋಚಿಸಿ.
ಸಾಮಾನ್ಯವಾಗಿ ಮನರಂಜನೆಗಳಿಂದ ಸಿಗುವ ಲಾಭ ತಾತ್ಕಾಲಿಕ ಆದರೆ ದೂರದೃಷ್ಟಿಯಿಂದ ಅದರಿಂದ ನಷ್ಟವೇ ಜಾಸ್ತಿ. ಹಾಗಾಗಿ ನಿಮಗೇನು ಬೇಕು ದೀರ್ಘವಧಿಯ ಲಾಭವೇ ಈಗಿನ ಲಾಭವೇ? ಯೋಚಿಸಿ. ನಿಮ್ಮ ಆಯ್ಕೆ ನಿಮ್ಮದಾಗಿದ್ಧಾಗ ಅದರಿಂದ ಬರುವ ಪರಿಣಾಮಗಳೂ ನಿಮ್ಮದೇ.
ಗೆಲುವಿನ ಭಯ; ಹೌದು ತಾನು ಗೆದ್ದರೆ ಜನ ಇನ್ನೂ ತನ್ನಿಂದ ನಿರೀಕ್ಷೆ ಮಾಡಬಹುದು, ತಾನು ಅವರ ನಿರೀಕ್ಷೆಯನ್ನು ಹುಟ್ಟುತ್ತಲೇ ಇರಬೇಕು ಎಂಬ ಭಯ.
ನೆಪ: ಟೆನ್ಷನ್ ಆಗುತ್ತದೆ, ಈಗ ಬೇಡ ಮುಂದೆ ನೋಡೋಣ.
ಒಮ್ಮೆ ಗೆದ್ದು ನೋಡಿ ಅದರ ಹಿಂದೆ ಇನ್ನಷ್ಟು ಗೆಲುವುಗಳು ಬರುತ್ತದೆಯೋ ಇಲ್ಲವೋ ಅವುಗಳ ಪರಿಣಾಮವನ್ನೂ ನೀವು ನಿರ್ವಹಿಸುವ ಆತ್ಮವಿಶ್ವಾಸ ಬರುತ್ತದೆ
ಆ ಕೆಲಸ ಮಾಡಲು ಯಾವುದೇ ಮೋಟಿವೇಶನ್ ಇಲ್ಲದೇ ಇರುವುದು: ಹೆಚ್ಚು ಸಂಬಳ ಅಥವಾ ಪ್ರಶಂಸೆ ಇಲ್ಲದೆ ಇರುವುದು, ಜನರ ಮೆಚ್ಚುಗೆ ಸಿಗದೇ ಇರುವುದು ಯಾಂತ್ರಿಕತೆ. ಕ್ರಿಯೇಟಿವಿಟಿ ಇಲ್ಲದೇ ಇರುವುದು ಇತ್ಯಾದಿ.
ನೆಪ: ನನಗೆ ಹಾಗೆ ಮಾಡಲು ಇಷ್ಟವಿಲ್ಲ. ಈ ಕೆಲಸ ಬೋರು, ತಲೆ ನೋವು ಇತ್ಯಾದಿ
ಪರಿಹಾರ: ನೀವು ಕೆಲಸ ಬದಲಿಸುವ ಆಯ್ಕೆ ಇದ್ದಲ್ಲಿ ಕೂಡಲೇ ಬದಲಿಸಿ ಇಲ್ಲದಿದ್ದಲ್ಲಿ ಅಲ್ಲಿಂದ ಬೇರೆಡೆಗೆ ವರ್ಗವಾಗುವ ಮಾರ್ಗಗಳನ್ನು ಹುಡುಕಿಕೊಳ್ಳಿ.
ಇಷ್ಟವಿಲ್ಲದ ಕೆಲಸ ಮಾಡುವುದು ಮಾನಸಿಕವಾಗಿ ಬೇರೆ ತೊಂದರೆಗಳನ್ನು ಕೊಡಬಹುದು. ಇಲ್ಲವಾದಲ್ಲಿ ಈ ಕೆಲಸವನ್ನೇ ಇಷ್ಟವಾಗಿ ಪ್ರೀತಿಸಿ.
ಅಸಮರ್ಪಕ ಸಮಯ ನಿರ್ವಹಣೆ
ನೆಪ: ನಾನು ಸಿಕ್ಕಾಪಟ್ಟೆ ಕೆಲಸವಿಟ್ಟುಕೊಂಡಿದ್ದೇನೆ ಮತ್ತು ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ನನಗೆ ಈಗ ಸಮಯವಿಲ್ಲ. ನನಗೆ ಮರೆತು ಹೋಗುತ್ತದೆ.
ಪರಿಹಾರ: 80:20 ನಿಯಮ ಬಳಸಿ ಅಂದರೆ ನಿಮ್ಮ ಶೇ 20 ಅತ್ಯಂತ ಮುಖ್ಯವಾದ ಕೆಲಸಗಳು ನಿಮ್ಮ ಶೇ 80 ಫಲಿತಾಂಶ ಕೊಡುತ್ತದೆ. ನಿಮಗೆ ಸಮಯವಿಲ್ಲ ಅಂದರೆ ನಿಮ್ಮ ಸಮಯ ನುಂಗುತ್ತಿರುವ ಆ ಶೇ 80 ಕೆಲಸಗಳು ಯಾವುವು ಎಂದು ಕಂಡುಹಿಡಿದು ಪಟ್ಟಿ ಮಾಡಿ ವ್ಯರ್ಥ ಅನಿಸಿದವುಗಳನ್ನು ತೆಗೆದು ಹಾಕಿ, ಬೇರೆಯವರು ಮಾಡಬಹುದು ಎಂದೆನಿಸಿದರೆ ಇತರರಿಗೆ ವಹಿಸಿ. ಆಗ ನಿಮಗೆ ಸಮಯ ಉಳಿಯುತ್ತದೆ. ನೀವು ಮುಂದೂಡುತ್ತಿರುವ ಕೆಲಸ ಬಹಳ ಮುಖ್ಯವೆನಿಸಿದರೆ ಈಗ ಉಳಿದ ಸಮಯದಲ್ಲಿ ಮಾಡಬಹುದು.
ಇನ್ನೊಂದು ಟೆಕ್ನಿಕ್ ನಿಮ್ಮ ತಲೆಯಲ್ಲಿ ಬಹಳಷ್ಟು ಯೋಜನೆಗಳು ಯೋಚನೆಗಳಿದ್ದಲ್ಲಿ ಗೊಂದಲವಿದ್ದಾಗಲೂ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ ಆಗಿ ಅವುಗಳನ್ನು ಮೊದಲು ಒಂದು ನೋಟ್ ಬುಕ್‌ನಲ್ಲಿ ಬರೆಯುತ್ತಾ ಬನ್ನಿ. ನಿಮಗೆ ಸ್ಪಷ್ಟವಾಗುತ್ತಾ ನೀವು ಯಾವ ಕೆಲಸಗಳನ್ನು ಮೊದಲು ಮಾಡಬೇಕೆಂದು ಹೊಳೆಯುತ್ತದೆ.
ಹೀಗೆ ವಿಳಂಬ ನೀತಿಗೆ ಕಾರಣ ನಿಜ ಈ ಕೊಡುವ ನೆಪ ಯಾವುದು ಹಾಗು ಅದಕ್ಕೆ ಪರಿಹಾರಗಳನ್ನು ಬಳಸಿ. ಇಷ್ಟಾದರೂ ಆಗುತ್ತಿಲ್ಲ ಎಂದಾದಲ್ಲಿ ಒಮ್ಮೆ ಈ ಕಾರಣಕ್ಕಾಗಿ ಆಪ್ತ ಸಮಾಲೋಚನೆಗೆ ಹೋಗುವುದು ಒಳ್ಳೆಯದು.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990