ಬೆಳಗಾವಿ ಭೀಮಗಢ ಅರಣ್ಯ ನಿವಾಸಿಗಳ ಸ್ಥಳಾಂತರ; ಕರ್ನಾಟಕ ಅರಣ್ಯ ಇಲಾಖೆ ಯೋಜನೆ, ಪ್ರತಿ ಕುಟುಂಬಕ್ಕೆ ಸಿಗಲಿದೆ ಭರ್ಜರಿ ಪ್ಯಾಕೇಜ್‌
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿ ಭೀಮಗಢ ಅರಣ್ಯ ನಿವಾಸಿಗಳ ಸ್ಥಳಾಂತರ; ಕರ್ನಾಟಕ ಅರಣ್ಯ ಇಲಾಖೆ ಯೋಜನೆ, ಪ್ರತಿ ಕುಟುಂಬಕ್ಕೆ ಸಿಗಲಿದೆ ಭರ್ಜರಿ ಪ್ಯಾಕೇಜ್‌

ಬೆಳಗಾವಿ ಭೀಮಗಢ ಅರಣ್ಯ ನಿವಾಸಿಗಳ ಸ್ಥಳಾಂತರ; ಕರ್ನಾಟಕ ಅರಣ್ಯ ಇಲಾಖೆ ಯೋಜನೆ, ಪ್ರತಿ ಕುಟುಂಬಕ್ಕೆ ಸಿಗಲಿದೆ ಭರ್ಜರಿ ಪ್ಯಾಕೇಜ್‌

ಕರ್ನಾಟಕದ ಮಹಾರಾಷ್ಟ್ರ ಹಾಗೂ ಗೋವಾ ಗಡಿಗೆ ಹೊಂದಿಕೊಂಡಂತೆ ಇರುವ ಭೀಮಾ ಅರಣ್ಯ ಪ್ರದೇಶದಲ್ಲಿನ ನಿವಾಸಿಗಳನ್ನು ಕಾಡಿನಿಂದ ಹೊರಗೆ ಸ್ಥಳಾಂತರಿಸಲು ಸಿದ್ದತೆಗಳು ಶುರುವಾಗಿವೆ.

ಬೆಳಗಾವಿ ಜಿಲ್ಲೆ ಭೀಮಗಡ ಅಭಯಾರಣ್ಯದ ಒಳಭಾಗದಲ್ಲಿ ನೆಲೆಸಿರುವ ನಿವಾಸಿಗಳನ್ನು ಅರಣ್ಯದಿಂದ ಹೊರಕ್ಕೆ ಸ್ಥಳಾಂತರಿಸಲು ಸಿದ್ದತೆ ಶುರುವಾಗಿವೆ.
ಬೆಳಗಾವಿ ಜಿಲ್ಲೆ ಭೀಮಗಡ ಅಭಯಾರಣ್ಯದ ಒಳಭಾಗದಲ್ಲಿ ನೆಲೆಸಿರುವ ನಿವಾಸಿಗಳನ್ನು ಅರಣ್ಯದಿಂದ ಹೊರಕ್ಕೆ ಸ್ಥಳಾಂತರಿಸಲು ಸಿದ್ದತೆ ಶುರುವಾಗಿವೆ.

ಬೆಳಗಾವಿ: ಕರ್ನಾಟಕದ ನಾಗರಹೊಳೆ, ಬಂಡೀಪುರ, ಅಣಶಿ, ಬಿಳಿಗಿರಿ ರಂಗನಬೆಟ್ಟ ಭದ್ರಾ ಸಹಿತ ಹಲವು ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ನಿವಾಸಿಗಳನ್ನು ಅರಣ್ಯದಿಂದ ಹೊರಕ್ಕೆ ಸ್ಥಳಾಂತರಿಸಿದರೆ ಕರ್ನಾಟಕ- ಗೋವಾ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಂತೆ ಇರುವ ಭೀಮಗಢ ಅರಣ್ಯ ಪ್ರದೇಶದೊಳಗೆ ಇರುವ ಗ್ರಾಮಗಳ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲು ಕರ್ನಾಟಕ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಈ ಭಾಗದಲ್ಲಿ ಶತಮಾನಗಳಿಂದಲೂ ಬದುಕು ಕಂಡುಕೊಂಡಿರುವ ನಿವಾಸಿಗಳಿಗೆ ಅರಣ್ಯದ ಹೊರ ಭಾಗದಲ್ಲಿ ಸೂಕ್ತ ಮನೆ, ಜಮೀನು ನೀಡಿ ಪರಿಹಾರವನ್ನು ಒದಗಿಸುವ ಕೇಂದ್ರ ಸರ್ಕಾರದ 15 ಲಕ್ಷ ರೂ. ಅಡಿ ನೆಲೆ ಕಲ್ಪಿಸುವ ಚಟುವಟಿಕೆಯನ್ನು ಆರಂಭಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆ, ಮಾತುಕತೆಗೆ ಹಲವರು ಪೂರಕವಾಗಿ ಸ್ಪಂದಿಸಿದ್ದಾರೆ.

ಎಷ್ಟು ನಿವಾಸಿಗಳಿದ್ದಾರೆ

ಪ್ರಸ್ತುತ ಭೀಮಗಢ ದಟ್ಟಾರಣ್ಯದೊಳಗೆ ಒಟ್ಟು 13 ಜನವಸತಿಗಳಲ್ಲಿ 754 ಕುಟುಂಬಗಳಿದ್ದು, 3059 ಜನ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಈಶ್ವರ ಖಂಡ್ರೆ, ಪೂರ್ಣ ಗ್ರಾಮದ ಜನರು ಸ್ಥಳಾಂತರಕ್ಕೆ ಸಮ್ಮತಿಸಿದರೆ ಅಂತಹ ಗ್ರಾಮಗಳ ಜನರಿಗೆ ಪುನರ್ವಸತಿ ಪರಿಹಾರ ನೀಡಿ ಸ್ಥಳಾಂತರಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಕೊಂಗಲದಲ್ಲಿ 63 ಕುಟುಂಬಗಳು, ಪಸ್ತೋಲಿಯಲ್ಲಿ 36, ಗವಾಳಿಯಲ್ಲಿ 90, ಅಬನಾಳಿಯಲ್ಲಿ 81, ಜಾಮಗಾವ್ ನಲ್ಲಿ 82, ಹೆಮ್ಮಡಗದಲ್ಲಿ 128, ತಾಳೆವಾಡಿಯಲ್ಲಿ 13, ದೇಗಾವ್ ನಲ್ಲಿ 31, ಪಾಲಿಯಲ್ಲಿ 73, ಮೆಂಡಿಲ್ ನಲ್ಲಿ 40, ಕೃಷ್ಣಾಪುರದಲ್ಲಿ 12, ಹೋಲ್ಡಾದಲ್ಲಿ 7 ಹಾಗೂ ಅಮಗಾವ್ ನಲ್ಲಿ 98 ಕುಟುಂಬಗಳಿದ್ದು, ಈ ಪೈಕಿ 1530 ಪುರುಷರು, 1443 ಮಹಿಳೆಯರು ಸೇರಿ ಒಟ್ಟು 3059 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಹಳ್ಳಗಳು ತುಂಬಿ ಹರಿಯುವ ಕಾರಣ ಕೆಲವು ಜನವಸತಿಗಳು ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಇದರಿಂದ ಅವರಿಗೂ ಸುಸ್ಥಿರ ಬದುಕು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆರೂಪಿಸಲಾಗಿದೆ.

ಸಚಿವರ ಸೂಚನೆ ಏನು

ಬೆಳಗಾವಿ ಅಧಿವೇಶನದ ನಡುವೆಯೇ ಸೋಮವಾರ ರಾತ್ರಿ ತಾಳೇವಾಡಿಗೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಭೇಟಿ ನೀಡಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ,

ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಸಿದ್ಧವಿದ್ದು, ಅರಣ್ಯವಾಸಿಗಳು ಸ್ವಯಂ ಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸಬೇಕು. ಸರ್ಕಾರ ಅರಣ್ಯವಾಸಿಗಳಿಗೆ ಸ್ಥಳಾಂತರಕ್ಕಾಗಿ ನೀಡುವ ಪುನರ್ವಸತಿ ಪರಿಹಾರದ ಹಣ ಅನ್ಯರ ಪಾಲಾಗದಂತೆ ಎಚ್ಚರವಹಿಸುವಂತೆ ಮತ್ತು ಅರಣ್ಯದ ಹೊರಗೆ ಕಂದಾಯ ಭೂಮಿ ಖರೀದಿಸಿ ಬದುಕು ಕಟ್ಟಿಕೊಳ್ಳುವಂತೆ, ಬ್ಯಾಂಕ್ ಖಾತ್ರಿಯಲ್ಲಿ ನಿಶ್ಚಿತ ಠೇವಣಿ ಇಡುವಂತೆ ಸಲಹೆ ನೀಡಿದರು.

ಮಹಿಳೆಯರೊಂದಿಗೆ ಮಾತುಕತೆ

ಭೀಮಗಢಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನೊಳಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಸಮಸ್ಯೆ ವಿಚಾರಿಸಿದ ಸಚಿವರು ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ಪಡೆದರು. ಪರಿಹಾರ ಪಡೆದು ಕಾಡಿನಿಂದ ಸ್ಥಳಾಂತರಗೊಳ್ಳುವಂತೆ ಅವರ ಮನವೊಲಿಸಿದರು.

ಇದಕ್ಕೂ ಮುನ್ನ ಮಾರ್ಗಮಧ್ಯೆ ಅರಣ್ಯ ಸಚಿವರು ಮಹಾದಾಯಿ ನದಿಯ ವೀಕ್ಷಣೆ ಮಾಡಿ, ಹೆಮ್ಮಡಗಾದ ಭೀಮಗಢ ವನ್ಯಜೀವಿಧಾಮದ ಶಿಬಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು.

Whats_app_banner