ಭಾರತ vs ಬಾಂಗ್ಲಾದೇಶ ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯವಾಗಬಹುದು; ನಿವೃತ್ತಿ ಖಚಿತಪಡಿಸಿದ ಹಿರಿಯ ಆಲ್‌ರೌಂಡರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಬಾಂಗ್ಲಾದೇಶ ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯವಾಗಬಹುದು; ನಿವೃತ್ತಿ ಖಚಿತಪಡಿಸಿದ ಹಿರಿಯ ಆಲ್‌ರೌಂಡರ್

ಭಾರತ vs ಬಾಂಗ್ಲಾದೇಶ ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯವಾಗಬಹುದು; ನಿವೃತ್ತಿ ಖಚಿತಪಡಿಸಿದ ಹಿರಿಯ ಆಲ್‌ರೌಂಡರ್

‌ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸೀನಿಯರ್‌ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ ಈಗಾಗಲೇ ಟಿ20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಕಾನ್ಪುರದಲ್ಲಿ ನಡೆಯಲಿರುವ ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.

ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್ ನನ್ನ ಕೊನೆಯ ಪಂದ್ಯ; ನಿವೃತ್ತಿ ಖಚಿತಪಡಿಸಿದ ಆಲ್‌ರೌಂಡರ್
ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್ ನನ್ನ ಕೊನೆಯ ಪಂದ್ಯ; ನಿವೃತ್ತಿ ಖಚಿತಪಡಿಸಿದ ಆಲ್‌ರೌಂಡರ್ (AFP)

ಭಾರತ ಮತ್ತು ಬಾಂಗ್ಲಾದೇಶ (India vs Bangladesh 2nd Test) ನಡುವಿನ ಎರಡನೇ ಟೆಸ್ಟ್ ಪಂದ್ಯವೇ ತನ್ನ ಕೊನೆಯ ಟೆಸ್ಟ ಪಂದ್ಯವಾಗಬಹುದು ಎಂದು ಹಿರಿಯ ಆಲ್‌ರೌಂಡರ್‌ ಹೇಳಿದ್ದಾರೆ. ಸೆಪ್ಟೆಂಬರ್‌ 27ರ ಶುಕ್ರವಾರ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಕಾನ್ಪುರದಲ್ಲಿ ಆರಂಭವಾಗಲಿದೆ. ಈಗಾಗಲೇ ಟಿ20 ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವ ಬಾಂಗ್ಲಾದೇಶದ ಸೀನಿಯರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಭಾರತ ವಿರುದ್ಧದ ಕಾನ್ಪುರ ಟೆಸ್ಟ್ ತಮ್ಮ ಕೊನೆಯ ಕೆಂಪು ಚೆಂಡಿನ ಪಂದ್ಯ ಆಗಬಹುದು ಎಂದು ಬಹಿರಂಗಪಡಿಸಿದ್ದಾರೆ. ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ತಿಳಿಸಿದ್ದಾರೆ.

ತವರಿನ ಮೈದಾನ ಮೀರ್‌ಪುರದಲ್ಲಿ ತಮ್ಮ ತವರು ಪ್ರೇಕ್ಷಕರ ಮುಂದೆ ದೀರ್ಘ ಸ್ವರೂಪಕ್ಕೆ ವಿದಾಯ ಹೇಳುವ ಬಯಕೆ ಕುರಿತು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಶಕೀಬ್ ಹೇಳಿದರು. ಆದರೆ, ಒಂದು ವೇಳೆ ಈ ಆಸೆ ಈಡೇರದಿದ್ದರೆ, ಭಾರತ ವಿರುದ್ಧದದ ಪಂದ್ಯವೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಕೊನೆಯ ಪಂದ್ಯವಾಗಲಿದೆ.

“ಮೀರ್‌ಪುರದಲ್ಲಿ ನನ್ನ ಕೊನೆಯ ಟೆಸ್ಟ್ ಆಡುವ ಬಯಕೆಯನ್ನು ನಾನು ವ್ಯಕ್ತಪಡಿಸಿದ್ದೇನೆ. ಅದು ಸಾಧ್ಯವಾಗದಿದ್ದರೆ, ಭಾರತ ವಿರುದ್ಧದ ಎರಡನೇ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಆಗಿರುತ್ತದೆ” ಎಂದು ಶಕೀಬ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಬಾಂಗ್ಲಾದೇಶ ಕ್ರಿಕೆಟ್ ನನಗೆ ತುಂಬಾ ನೀಡಿದೆ. ನಾನು ಸುದೀರ್ಘ ಸ್ವರೂಪದಲ್ಲಿ ನನ್ನ ಕೊನೆಯ ಪಂದ್ಯವನ್ನು ತವರಿನಲ್ಲಿ ಆಡಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಭಾರತದ ವಿರುದ್ಧವೇ ಚೊಚ್ಚಲ ಪಂದ್ಯ

ಕುತೂಹಲಕಾರಿ ಅಂಶವೆಂದರೆ, ಶಕೀಬ್ ಅಲ್ ಹಸನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಕೂಡಾ ಭಾರತದ ವಿರುದ್ಧವೇ ಆಡಿದ್ದಾರೆ. ಬಾಂಗ್ಲಾದೇಶ ಪರ ಮೊದಲ ಟೆಸ್ಟ್‌ ಪಂದ್ಯವನ್ನು 2007ರ ಮೇ ತಿಂಗಳಲ್ಲಿ ಚಟ್ಟೋಗ್ರಾಮ್‌ನಲ್ಲಿ ಆಡಿದ್ದರು. ಬಾಂಗ್ಲಾ ಪರ ಅವರು ಈವರೆಗೆ 70 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು 31 ಅರ್ಧಶತಕಗಳು ಸೇರಿದಂತೆ ಒಟ್ಟು 4,600 ರನ್‌ ಗಳಿಸಿದ್ದಾರೆ. ಇದು ಬಾಂಗ್ಲಾದೇಶದ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್.

ಬೌಲಿಂಗ್ ವಿಭಾಗದಲ್ಲಿಯೂ ಶಕೀಬ್ ಸಾಧನೆ ಅಮೋಘ. ಬರೋಬ್ಬರಿ 242 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿಯನ್ನು ದಾಟಿದ ಬಾಂಗ್ಲಾದೇಶದ ಏಕೈಕ ಬೌಲರ್ ಆಗಿ ಅವರು ಉಳಿದಿದ್ದಾರೆ. ದೇಶ ಕಂಡ ಅತ್ಯುತ್ತಮ ಆಲ್‌ರೌಂಡರ್‌ ಆಗಿ ಈಗಲೂ ದೇಶದ ಕ್ರಿಕೆಟ್‌ ಖ್ಯಾತಿಯನ್ನು ಹೆಚ್ಚಿಸಿದ್ದಾರೆ.

ಟಿ20 ನಿವೃತ್ತಿ

ಈ ಹಿಂದೆ ಟಿ20 ವಿಶ್ವಕಪ್ ಸಮಯದಲ್ಲಿ ಬಾಂಗ್ಲಾದೇಶ ಪರ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿರುವುದಾಗಿ ಶಕೀಬ್ ಹೇಳಿಕೊಂಡಿದ್ದರು. ದೇಶದ ಪರ 129 ಟಿ20 ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್, 121.18ರ ಸ್ಟ್ರೈಕ್ ರೇಟ್‌ನಲ್ಲಿ 2551 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಅವರದ್ದು ಇನ್ನೂ ಅಮೋಘ ಪ್ರದರ್ಶನ. 126 ಇನ್ನಿಂಗ್ಸ್‌ಗಳಲ್ಲಿ, ಶಕೀಬ್ 149 ವಿಕೆಟ್‌ ಕಿತ್ತಿದ್ದಾರೆ. ಕೊನೆಯ ಬಾರಿಗೆ ಅವರು ಬಾಂಗ್ಲಾದೇಶ ಪರ ಟಿ20 ವಿಶ್ವಕಪ್‌ನಲ್ಲಿ ಕಾಣಿಸಿಕೊಂಡರು.

Whats_app_banner