ಚೆನ್ನೈಗಿಂತಲೂ ನಿಧಾನಗತಿಯ ಕಾನ್ಪುರ ಪಿಚ್‌ನಲ್ಲಿ ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್; ವೇಗಿ ಕೈಬಿಟ್ಟು ಸ್ಪಿನ್ನರ್‌ಗೆ ಮಣೆ
India vs Bangladesh 2nd Test: ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಕಾನ್ಪುರದಲ್ಲಿ ನಡೆಯುತ್ತಿದೆ. ಪಂದ್ಯಕ್ಕೆ ಉಭಯ ತಂಡಗಳು ಒಬ್ಬರು ವೇಗಿಯನ್ನು ಕೈಬಿಡುವ ಸಾಧ್ಯತೆಯಿದೆ. ಚೆನ್ನೈಗಿಂತ ಪಿಚ್ ಪರಿಸ್ಥಿತಿ ಭಿನ್ನವಾಗಿರಲಿದ್ದು, ಸ್ಪಿನ್ನರ್‌ಗಳಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಮೂವರು ವೇಗಿಗಳನ್ನು ಕಣಕ್ಕಿಳಿಸಿತ್ತು. ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯದಲ್ಲಿ ಇಂಥಾ ಸನ್ನಿವೇಶ ಕಾಣುವುದು ಅಪರೂಪ. ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಎಂದೇ ಹೆಸರಾಗಿರುವ ಚೆಪಾಕ್‌ನಲ್ಲಿ ವೇಗಿಗಳಿಗೆ ಉಭಯ ತಂಡಗಳು ಒತ್ತು ನೀಡಿದ್ದವು. ಆದರೆ, ಎರಡನೇ ಟೆಸ್ಟ್‌ನಲ್ಲಿ ಈ ಸನ್ನಿವೇಶ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೈದಾನದ ಕಪ್ಪು ಮಣ್ಣಿನ ಪಿಚ್‌ನಲ್ಲಿ ಕಡಿಮೆ ಬೌನ್ಸ್‌ನಿಂದಾಗಿ ಸ್ಪಿನ್ನರ್‌ಗಳಿಗೆ ನೆರವಾಗುವ ಲಕ್ಷಣವಿದೆ.
ಎರಡನೇ ಟೆಸ್ಟ್ ಪಂದ್ಯಕ್ಕೆ ಗ್ರೀನ್ ಪಾರ್ಕ್‌ನಲ್ಲಿನ ಪಿಚ್ ಸಮತೋಲಿತವಾಗಿರುತ್ತದೆ ಎಂದು ಇಎಸ್‌ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಮೊದಲ ಪಂದ್ಯ ನಡೆದ ಚೆಪಾಕ್ ಕ್ರೀಡಾಂಗಣದಲ್ಲಿ ಪಿಚ್‌ಗಿಂತ ಇಲ್ಲಿ ಬೌನ್ಸ್ ತುಂಬಾ ಕಡಿಮೆ ಇರುತ್ತದೆ. ಪಂದ್ಯ ಮುಂದುವರೆದಂತೆ ಪಿಚ್ ಮತ್ತಷ್ಟು ನಿಧಾನಗತಿ ಪಡೆದುಕೊಳ್ಳುತ್ತದೆ. ಅಲ್ಲದೆ, ಬೌನ್ಸ್ ಕೂಡಾ ಕಡಿಮೆಯಾಗುತ್ತದೆ. ಏಕೆಂದರೆ ಮೈದಾನದ ಪಿಚ್‌ಗೆ ಕಪ್ಪು ಮಣ್ಣಿನ ಬಳಕೆಯಾಗಿದೆ.
ಚೆನ್ನೈನಲ್ಲಿ ಕೆಂಪು ಮಣ್ಣಿನ ಪಿಚ್ ಬಳಕೆಯಿಂದ ಉತ್ತಮ ಬೌನ್ಸ್ ಹಾಗೂ ಚೆಂಡಿನ ವೇಗದ ಹರಿವಿಗೆ ನೆರವಾಯ್ತು. ಉಭಯ ತಂಡಗಳು ಆಡುವ ಬಳಗದಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯಿತು. ಪಿಚ್ ಸ್ವರೂಪವೇ ಈ ಕಾಂಬಿನೇಷನ್‌ಗೆ ಪ್ರಮುಖ ಕಾರಣ. ಪಂದ್ಯದ ಮೊದಲ ಸೆಷನ್‌ನಲ್ಲಿ ಭಾರತ ಬ್ಯಾಟಿಂಗ್ ಮಾಡಿದಾಗ, ಬಾಂಗ್ಲಾದೇಶದ ವೇಗದ ಬೌಲರ್‌ಗಳು ಸಂಪೂರ್ಣವಾಗಿ ಪ್ರಾಬಲ್ಯ ಮೆರೆದರು. ಆದರೆ, ಪಂದ್ಯ ಮುಂದುವರೆದಂತೆ ಸಾಂಪ್ರದಾಯಿಕ ಸ್ಪಿನ್ನರ್‌ಗಳು ಸಾಮರ್ಥ್ಯ ಪ್ರದರ್ಶಿಸಿದರು. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ತತ್ತಸಿದ ಬಾಂಗ್ಲಾದೇಶ, ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭದ ಹೊರತಾಗಿಯೂ 234 ರನ್‌ಗಳಿಗೆ ಆಲೌಟ್ ಆಯ್ತು. ಭಾರತವು 280 ರನ್‌ಗಳ ಐತಿಹಾಸಿಗ ಜಯ ಸಾಧಿಸಿತು.
ಆಡುವ ಬಳಗಕ್ಕೆ ಕುಲ್ದೀಪ್ ಯಾದವ್
ಸದ್ಯ ಪಿಚ್ ಪರಿಸ್ಥಿತಿಯಲ್ಲಿನ ಬದಲಾವಣೆಯಿಂದಾಗಿ ಎರಡನೇ ಟೆಸ್ಟ್‌ನಲ್ಲಿ ಉಭಯ ತಂಡಗಳ ಆಡುವ ಬಳಗದಲ್ಲೂ ಪ್ರಮುಖ ಬದಲಾವಣೆಯಾಗುವ ಸಾಧ್ಯತೆ ಇದೆ. ಭಾರತವು ಒಬ್ಬ ವೇಗದ ಬೌಲರ್ ಅನ್ನು ಕೈಬಿಟ್ಟು ಕುಲ್ದೀಪ್ ಯಾದವ್ ಅಥವಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಅಥವಾ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಿ ಯಶ್ ದಯಾಳ್ ಟೆಸ್ಟ್ ಪದಾರ್ಪಣೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ದಯಾಳ್ ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ಪರ ಆಡುವುದರಿಂದ ಅವರಿಗೆ ಕಾನ್ಪುರ ಪಿಚ್ ಕುರಿತು ಚೆನ್ನಾಗಿ ತಿಳಿದಿದೆ. ಹೀಗಾಗಿ ಆರ್‌ಸಿಬಿ ವೇಗಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ. ಮತ್ತೊಂದೆಡೆ ಆಕಾಶ್ ದೀಪ್ ಹಾಗೂ ಸಿರಾಜ್ ಕೈಬಿಟ್ಟು, ಬುಮ್ರಾ ಹಾಗೂ ದಯಾಳ್ ಅವರನ್ನು ವೇಗಿಗಳಾಗಿ ಉಳಿಸಿಕೊಂಡರೂ ಅಚ್ಚರಿ ಇಲ್ಲ.
ಕಾನ್ಪುರ ಟೆಸ್ಟ್ ಇತಿಹಾಸ
ಕಳೆದ ಎಂಟು ವರ್ಷಗಳಲ್ಲಿ ಕಾನ್ಪುರ ಮೈದಾನದಲ್ಲಿ ಎರಡು ಪಂದ್ಯಗಳಷ್ಟೇ ನಡೆದಿವೆ. ಇದು ಮೂರನೇ ಟೆಸ್ಟ್ ಪಂದ್ಯ. ಈ ಹಿಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿತ್ತು. 2016ರಲ್ಲಿ 197 ರನ್‌ಗಳಿಂದ ಗೆದ್ದರೆ, 2021ರಲ್ಲಿ ನಡೆದ ಪಂದ್ಯವು ಡ್ರಾ ಆಗಿತ್ತು. ಈ ಎರಡೂ ಪಂದ್ಯಗಳು ಪೂರ್ಣ ಐದು ದಿನಗಳ ಕಾಲ ನಡೆದವು. ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು.