ದೇಶ ಬಿಟ್ಟು ಪಲಾಯನ ಮಾಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷರು: ಇಕ್ಕಟ್ಟಿಗೆ ಸಿಲುಕಿದ ಐಸಿಸಿ
Bangladesh Cricket Board: ಭದ್ರತೆ ಗಮನದಲ್ಲಿಟ್ಟುಕೊಂಡು, ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024 ಪಂದ್ಯಾವಳಿಗೆ ಇತರ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದೆ. ಇದರ ಜತೆಗೆ ಬಾಂಗ್ಲಾದಲ್ಲಿ ಸುರಕ್ಷಿತವಾಗಿ ಟಿ20 ವಿಶ್ವಕಪ್ ನಡೆಸಲು ಸೇನೆಯ ನೆರವು ಪಡೆಯಬಹುದು ಎಂಬ ಸುದ್ದಿ ಕೂಡ ಬಂದಿದೆ.
ಮಹಿಳಾ ಟಿ20 ವಿಶ್ವಕಪ್ 2024 ಬಾಂಗ್ಲಾದೇಶದಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 20ರ ನಡುವೆ 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಈ 18 ದಿನಗಳಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಆದರೆ, ಸದ್ಯ ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಗೊಂದಲವನ್ನು ಗಮನಿಸಿದರೆ ಟೂರ್ನಿ ನಡೆಸುವುದು ಕಷ್ಟ ಎಂಬಂತೆ ಗೋಚರಿಸುತ್ತಿದೆ. ಈ ನಡುವೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಸೇರಿದಂತೆ ಅನೇಕ ದೊಡ್ಡ ಅಧಿಕಾರಿಗಳು ದೇಶವನ್ನು ತೊರೆದಿದ್ದಾರೆ. ಇದು ಐಸಿಸಿಗೆ ತಲೆನೋವು ತರಿಸಿದೆ.
ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಐಸಿಸಿ ಈ ಪಂದ್ಯಾವಳಿಗೆ ಇತರ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದೆ. ಇದರ ಜೊತೆಗೆ ಬಾಂಗ್ಲಾದಲ್ಲಿ ಸುರಕ್ಷಿತವಾಗಿ ಟಿ20 ವಿಶ್ವಕಪ್ ನಡೆಸಲು ಸೇನೆಯ ನೆರವು ಪಡೆಯಬಹುದು ಎಂಬ ಸುದ್ದಿ ಕೂಡ ಬಂದಿದೆ.
ಸೇನೆಗೆ ಪತ್ರ
ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದಿವೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಇದಾದ ಬಳಿಕ ಅವರ ಬೆಂಬಲಿಗರನ್ನೂ ಓಡಿಸಲಾಗುತ್ತಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್, ನಿರ್ದೇಶಕರು ಮತ್ತು ಅನೇಕ ಹಿರಿಯ ಅಧಿಕಾರಿಗಳು ದೇಶವನ್ನು ತೊರೆಯುವಂತೆ ಒತ್ತಾಯಿಸಲಾಯಿತು. ಶೇಖ್ ಹಸೀನಾ ಅವಾಮಿ ಲೀಗ್‌ನ ಬೆಂಬಲಿಗಳು ಎಂದು ನಂಬಲಾಗಿತ್ತು. ಇದಲ್ಲದೇ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಮಧ್ಯಂತರ ಸರ್ಕಾರ ರಚನೆಯಾಗಿದೆ.
ಪ್ರಸ್ತುತ, ಬಾಂಗ್ಲಾದೇಶದಲ್ಲಿ ಭದ್ರತೆಯು ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಸುವುದು ಕಷ್ಟ ಎನಿಸುತ್ತಿದೆ. ಈಗ ಬಿಸಿಬಿಗೆ ಉಳಿದಿರುವ ಕೊನೆಯ ಭರವಸೆ ಸೇನೆ. ಆದ್ದರಿಂದ ಮಂಡಳಿಯು ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಜ್ ಜಮಾನ್ ಅವರಿಗೆ ಪತ್ರ ಬರೆದು ಪಂದ್ಯಾವಳಿ ನಡೆಸಲು ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. ಅಂಪೈರ್ ಸಮಿತಿಯ ಅಧ್ಯಕ್ಷ ಇಫ್ತಿಕರ್ ಅಹ್ಮದ್ ಮಿಥು ಅವರು, ಮಂಡಳಿಯ ಬಹುತೇಕ ಸದಸ್ಯರು ದೇಶವನ್ನು ತೊರೆದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಟೂರ್ನಿಗೆ ಇನ್ನು 2 ತಿಂಗಳು ಮಾತ್ರ ಬಾಕಿ ಇರುವ ಕಾರಣ ಸೇನೆಯ ನೆರವು ಕೋರಲಾಗಿದೆ.
ಭದ್ರತೆ ಇದ್ದರಷ್ಟೆ ಟೂರ್ನಿ
ಈ ವಿಷಯವನ್ನು ಬಿಸಿಬಿ ಮತ್ತು ಐಸಿಸಿ ನಡುವೆ ಚರ್ಚಿಸಲಾಗಿದೆ ಎಂದು ಇಫ್ತಿಕರ್ ಅಹ್ಮದ್ ಮಿಥು ಹೇಳಿದ್ದಾರೆ. ಐಸಿಸಿ ಆಟಗಾರರ ಸುರಕ್ಷತೆಗೆ ಗ್ಯಾರಂಟಿ ಕೇಳಿದೆ. ಮಿಥು ಅವರ ಪ್ರಕಾರ ಇದು ಮಂಡಳಿಯ ಕೆಲಸವಲ್ಲ, ದೇಶದ ಭದ್ರತೆಯಲ್ಲಿ ತೊಡಗಿರುವ ಸಂಸ್ಥೆಗಳ ಕೆಲಸ. ಹಾಗಾಗಿ ಐಸಿಸಿ ಭದ್ರತೆಯನ್ನು ಖಾತರಿಪಡಿಸುವಂತೆ ಸೇನೆಗೆ ಪತ್ರ ಬರೆದಿದೆ. ಇದಕ್ಕೆ ಆದಷ್ಟು ಬೇಗ ಬಿಸಿಬಿ ಉತ್ತರ ನೀಡಬೇಕಿದೆ. ಆ ಬಳಿಕ ಈ ಟೂರ್ನಿಯನ್ನು ಎಲ್ಲಿ ಆಯೋಜಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಟಿ20 ವಿಶ್ವಕಪ್ ಅನ್ನು ಈ ದೇಶಗಳಲ್ಲಿಯೂ ನಡೆಸಬಹುದು
ಬಾಂಗ್ಲಾದೇಶದ ಹಿಂಸಾಚಾರದ ದೃಷ್ಟಿಯಿಂದ, ಬಾಂಗ್ಲಾದೇಶದ ಸಮಯಕ್ಕೆ ಹೊಂದಿಕೆಯಾಗುವ 3 ಆಯ್ಕೆಗಳನ್ನು ಐಸಿಸಿ ಅನ್ವೇಷಿಸಿದೆ. ಭಾರತ, ಶ್ರೀಲಂಕಾ ಮತ್ತು ಯುಎಇ ಇದಕ್ಕೆ ಪ್ರಮುಖ ಆಯ್ಕೆಯಾಗಿದೆ. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಮತ್ತು ಭದ್ರತೆ ನೀಡಲು ವಿಫಲವಾದರೆ, ಈ ಮೂರು ದೇಶಗಳಲ್ಲಿ ಒಂದನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ ಬಾಂಗ್ಲಾದೇಶದ ಹಿಂಸಾಚಾರದಿಂದ ಐಸಿಸಿ ಬಹುದೊಡ್ಡ ಸಮಸ್ಯೆಗೆ ಸಿಲುಕಿದ್ದು, ಆದಷ್ಟು ಬೇಗ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.
(ವರದಿ: ವಿನಯ್ ಭಟ್)
ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ; ಎರಡು ದಿನಗಳ ಹಗಲು-ರಾತ್ರಿ ಪಂದ್ಯ ಸೇರ್ಪಡೆ