ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ; ಎರಡು ದಿನಗಳ ಹಗಲು-ರಾತ್ರಿ ಪಂದ್ಯ ಸೇರ್ಪಡೆ
Australia vs India: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಡುವೆ ಭಾರತ ತಂಡವು ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಎರಡು ದಿನಗಳ ಪಿಂಕ್ ಬಾಲ್ ಪಂದ್ಯವನ್ನು ಆಡಲಿದೆ. ಇದು ಎರಡು ದಿನಗಳ ಕಾಲ ರಾತ್ರಿ-ಹಗಲು ನಡೆಯಲಿದೆ.
ಶ್ರೀಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಮುಗಿಸಿ ತವರಿಗೆ ಮರಳಿರುವ ಭಾರತ ಕ್ರಿಕೆಟ್ ತಂಡವು, ಸದ್ಯ ವಿಶ್ರಾಂತಿಯಲ್ಲಿದೆ. ಒಂದು ತಿಂಗಳ ವಿರಾಮದ ಬಳಿಕ, ಮುಂದಿನ ತಿಂಗಳಿಂದ ಮತ್ತೆ ತಂಡ ಮೈದಾನಕ್ಕಿಳಿಯಲಿದೆ. ಈ ವರ್ಷದ ಕೊನೆಯಲ್ಲಿ ಭಾರತವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಬಾರ್ಡರ್-ಗವಾಸ್ಕರ್ ಟ್ರೋಫಿ ಅತ್ಯಂತ ಮಹತ್ವದ್ದು. ಇದೀಗ ಐದು ಟೆಸ್ಟ್ ಪಂದ್ಯಗಳ ಸರಣಿಯ ನಡುವೆ ಹೊನಲು ಬೆಳಕಿನ ಪಂದ್ಯವನ್ನೂ ಭಾರತ ತಂಡ ಆಡಲಿದೆ. ಕ್ಯಾನ್ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧ ಎರಡು ದಿನಗಳ ಪಿಂಕ್ ಬಾಲ್ ಪಂದ್ಯವನ್ನು ಭಾರತ ತಂಡ ಆಡಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದು ಹೆಚ್ಚುವರಿ ಪಂದ್ಯವಾಗಿದ್ದು, ಹಗಲು ಮತ್ತು ರಾತ್ರಿ ನಡೆಯಲಿದೆ.
ಇಂಡೋ-ಆಸೀಸ್ ಸರಣಿಯಲ್ಲಿ ಈ ಬಾರಿ ಒಟ್ಟು ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದರ ನಡುವೆ 2 ದಿನಗಳ ಡೇ-ನೈಟ್ ಪಂದ್ಯ ನಡೆಯಲಿದೆ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್ಬೆರಾದ ಮನುಕಾ ಓವಲ್‌ನಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ನಡುವೆ ಪಂದ್ಯ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.
ಎರಡು ದಿನಗಳ ಈ ಪಂದ್ಯವು ಹಗಲು-ರಾತ್ರಿ ಪಂದ್ಯವಾಗಿದೆ. ಈ ಪಂದ್ಯ ನಡೆದ ಬಳಿಕ ಅಡಿಲೇಡ್‌ನಲ್ಲಿ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಅಡಿಲೇಡ್ ಟೆಸ್ಟ್ ಕೂಡಾ ಡೇ-ನೈಟ್ ಪಂದ್ಯವಾಗಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಗುಲಾಬಿ ಚೆಂಡಿನಲ್ಲಿ ಹೊನಲು ಬೆಳಕಿನ ಈ ಪಂದ್ಯವು ಭಾರತಕ್ಕೆ ಅಭ್ಯಾಸ ಪಂದ್ಯದಂತಾಗಲಿದೆ.
ಕೊನೆಯ ಡೇ-ನೈಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು
2020ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉಭಯ ದೇಶಗಳ ನಡುವೆ ಕೊನೆಯ ಬಾರಿಗೆ ಹಗಲು-ರಾತ್ರಿ ಟೆಸ್ಟ್ ನಡೆದಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾವು ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಬಾರಿಯ ಅಡಿಲೇಡ್ ಓವಲ್ ಪಂದ್ಯದ ಮೂಲಕ ಉಭಯ ತಂಡಗಳು ಗುಲಾಬಿ ಚೆಂಡಿನಲ್ಲಿ ಎರಡನೇ ಬಾರಿ ಆಡಲು ಸಜ್ಜಾಗಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 30 ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಐದು ಟೆಸ್ಟ್ ಪಂದ್ಯಗಳು ನಡೆಯುತ್ತಿದೆ. ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನವನ್ನು ಭದ್ರಪಡಿಸಲು ಉಭಯ ದೇಶಗಳಿಗೂ ಈ ಸರಣಿ ನಿರ್ಣಾಯಕವಾಗಿದೆ. ಪ್ರಸ್ತುತ, ಭಾರತವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಆಸೀಸ್ ಹಾಲಿ ಟೆಸ್ಟ್ ಚಾಂಪಿಯನ್.
ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ
- ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
- ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು-ರಾತ್ರಿ)
- ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
- ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
- ಐದನೇ ಟೆಸ್ಟ್: ಜನವರಿ 3-7, ಸಿಡ್ನಿ
- ಅಭ್ಯಾಸ ಪಂದ್ಯ: ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ vs ಭಾರತ, ನವೆಂಬರ್ 30, ಕ್ಯಾನ್ಬೆರಾ.
ಭಾರತ ಕ್ರಿಕೆಟ್ ತಂಡದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಭಾರತ ಕ್ರಿಕೆಟ್ ತಂಡದ ಮುಂದಿನ ಪಂದ್ಯ ಯಾವಾಗ? ತವರಿನ ಸರಣಿಗೂ ಮುನ್ನ ರೋಹಿತ್ ಬಳಗಕ್ಕೆ ಸುದೀರ್ಘ ವಿಶ್ರಾಂತಿ