ಭಾರತ ಕ್ರಿಕೆಟ್‌ ತಂಡದ ಮುಂದಿನ ಪಂದ್ಯ ಯಾವಾಗ? ತವರಿನ ಸರಣಿಗೂ ಮುನ್ನ ರೋಹಿತ್‌ ಬಳಗಕ್ಕೆ ಸುದೀರ್ಘ ವಿಶ್ರಾಂತಿ-indian cricket team to have long break before playing next series against bangladesh ind vs ban ind vs sl virat kohli ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ಕ್ರಿಕೆಟ್‌ ತಂಡದ ಮುಂದಿನ ಪಂದ್ಯ ಯಾವಾಗ? ತವರಿನ ಸರಣಿಗೂ ಮುನ್ನ ರೋಹಿತ್‌ ಬಳಗಕ್ಕೆ ಸುದೀರ್ಘ ವಿಶ್ರಾಂತಿ

ಭಾರತ ಕ್ರಿಕೆಟ್‌ ತಂಡದ ಮುಂದಿನ ಪಂದ್ಯ ಯಾವಾಗ? ತವರಿನ ಸರಣಿಗೂ ಮುನ್ನ ರೋಹಿತ್‌ ಬಳಗಕ್ಕೆ ಸುದೀರ್ಘ ವಿಶ್ರಾಂತಿ

Bangladesh tour of India: ಭಾರತ ಕ್ರಿಕೆಟ್‌ ತಂಡವು ಒಂದು ತಿಂಗಳ ನಂತರ ಮುಂದಿನ ಪಂದ್ಯ ಆಡಲಿದೆ. ಟೆಸ್ಟ್‌‌ ಸರಣಿಯಲ್ಲಿ ಭಾಗಿಯಾಗಲು ಬಾಂಗ್ಲಾದೇಶ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ.

ತವರಿನ ಸರಣಿಗೂ ಮುನ್ನ ರೋಹಿತ್‌ ಬಳಗಕ್ಕೆ ಸುದೀರ್ಘ ವಿಶ್ರಾಂತಿ
ತವರಿನ ಸರಣಿಗೂ ಮುನ್ನ ರೋಹಿತ್‌ ಬಳಗಕ್ಕೆ ಸುದೀರ್ಘ ವಿಶ್ರಾಂತಿ (PTI)

ಶ್ರೀಲಂಕಾ ಪ್ರವಾಸದಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಸಿಕ್ಕಿತು. ಟಿ20 ಸರಣಿಯಲ್ಲಿ ಲಂಕನ್ನರ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದ ಭಾರತ ತಂಡ, ಏಕದಿನ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿತು. ನೂತನ ಕೋಚ್‌ ಗೌತಮ್‌ ಗಂಭೀರ್‌ ಸಾರಥ್ಯದಲ್ಲಿ ಅನುಭವಿ ಆಟಗಾರರೇ ತಂಡದಲ್ಲಿದ್ದರೂ ದ್ವೀಪರಾಷ್ಟ್ರದ ವಿರುದ್ಧ ಗೆಲುವು ಸಾಧ್ಯವಾಗಲಿಲ್ಲ. ಅನನುಭವಿ ಆಟಗಾರರೇ ತುಂಬಿರುವ ತಂಡವೊಂದರ ವಿರುದ್ಧ ಕಳಪೆ ಪ್ರದರ್ಶನವು ಭಾರತಕ್ಕೆ ಒಂದು ಪಾಠವಾಗಲಿದೆ. ಅಲ್ಲದೆ, ಸರಣಿಯಿಂದ ಗೌತಮ್‌ ಗಂಭೀರ್‌ ಭಾರತ ತಂಡವನ್ನು ಕಟ್ಟಲು ಒಂದಷ್ಟು‌ ಅಂಶಗಳನ್ನು ಕಂಡುಕೊಂಡಿದ್ದಾರೆ. ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಬಲ ತಂಡವೊಂದನ್ನು ಅಂತಿಮಗೊಳಿಸುವ ಸವಾಲು ರೋಹಿತ್‌ ಶರ್ಮಾ ಹಾಗೂ ಗೌತಮ್‌ ಗಂಭಿರ್‌ ಮುಂದಿದೆ.

ಸದ್ಯ ಲಂಕಾ ಸರಣಿಯಿಂದ ಭಾರತ ತವರಿಗೆ ಮರಳಿದೆ. ಮುಂದೆ ಸುದೀರ್ಘ ಒಂದು ತಿಂಗಳ ಕಾಲ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವ ತಂಡವಾಗಿರುವ ಭಾರತ, ಅಪರೂಪಕ್ಕೆ ತಿಂಗಳ ಕಾಲ ವಿಶ್ರಾಂತಿ ಪಡೆಯುತ್ತದೆ. ಹಾಗಿದ್ದರೆ, ಭಾರತ ತಂಡದ ಮುಂದಿನ ಸರಣಿ ಯಾವಾಗ, ಪಂದ್ಯಗಳು ಯಾವಾಗ ಆರಂಭವಾಗಲಿದೆ, ತವರಿನಲ್ಲಿ ಭಾರತದ ಪಂದ್ಯಗಳು ನಡೆಯಲು ಇನ್ನೆಷ್ಟು ದಿನಗಳಿವೆ ಎಂಬ ಮಾಹಿತಿ ಇಲ್ಲಿದೆ.

ಭಾರತದ ಮುಂದಿನ ಪಂದ್ಯ ಸೆಪ್ಟೆಂಬರ್‌ 19ರಂದು ನಡೆಯಲಿದೆ. ಸುಮಾರು 40 ದಿನಗಳ ವಿಶ್ರಾಂತಿ ಬಳಿಕ ಭಾರತೀಯರು ಮೈದಾನಕ್ಕಿಳಿಯಲಿದ್ದಾರೆ. ತವರಿನಲ್ಲಿ ನಡೆಯುವ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವು ಪ್ರವಾಸಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1ರವರೆಗೆ ಕಾನ್ಪುರದಲ್ಲಿ ನಡೆಯಲಿದೆ.

ಟೆಸ್ಟ್‌ ಸರಣಿ ನಂತರ ಉಭಯ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿವೆ. ಅಕ್ಟೋಬರ್‌ 6ರಿಂದ ಚುಟುಕು ಸರಣಿ ಆರಂಭವಾಗಲಿದ್ದು, 9 ಹಾಗೂ 12ರಂದು ನಂತರದ ಎರಡು ಪಂದ್ಯಗಳು ನಡೆಯಲಿವೆ. ಮೂರು ಪಂದ್ಯಗಳಿಗೆ ಕ್ರಮವಾಗಿ ಧರ್ಮಶಾಲಾ, ದೆಹಲಿ ಮತ್ತು ಹೈದರಾಬಾದ್‌ ಮೈದಾನಗಳು ಆತಿಥ್ಯ ವಹಿಸಲಿವೆ.

ವಿರಾಮವಿಲ್ಲದೆ ಸತತ ಪಂದ್ಯಗಳು

ಬಾಂಗ್ಲಾದೇಶ ಸರಣಿ ಆರಂಭವಾದ ಬಳಿಕ ಭಾರತಕ್ಕೆ ವಿರಾಮ ಇಲ್ಲ. ಬಾಂಗ್ಲಾದೇಶ ತವರಿಗೆ ಮರಳಿದ ಬೆನ್ನಲ್ಲೇ ನ್ಯೂಜಿಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದೆ. ಕಿವೀಸ್‌ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳು ಅಕ್ಟೋಬರ್‌ 16ರಂದು ಆರಂಭವಾಗಲಿದೆ. ನವೆಂಬರ್‌ 05ರವರೆಗೂ ಟೆಸ್ಟ್‌ ಸರಣಿ ನಡೆಯಲಿದೆ. ಬೆಂಗಳೂರು, ಪುಣೆ ಹಾಗೂ ಮುಂಬೈನಲ್ಲಿ ಪಂದ್ಯಗಳು ನಿಗದಿಯಾಗಿವೆ.

ಕಿವೀಸ್ ಸರಣಿ ಮುಗಿಸಿದ ಬಳಿಕ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯು ನವೆಂಬರ್‌ 08ರಿಂದ 15ರವರೆಗೆ ನಡೆಯಲಿದೆ. ಆ ಬಳಿಕ ಭಾರತವು ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಬಾರ್ಡರ್‌ - ಗವಾಸ್ಕರ್‌ ಟ್ರೋಫಿಯು ನವೆಂಬರ್‌ 22ರಿಂದ ಜನವರಿ 07ರವರೆಗೆ ನಡೆಯಲಿದೆ.