ಭಾರತ ತಂಡದ ಹೆಡ್ಕೋಚ್ ಸ್ಥಾನಕ್ಕೆ ಎಂಎಸ್ ಧೋನಿ ನೆಚ್ಚಿನ ತರಬೇತುದಾರ; ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಯಾರು?
Stephen Fleming : ಟೀಮ್ ಇಂಡಿಯಾ ಹೆಡ್ಕೋಚ್ ಸ್ಥಾನಕ್ಕೆ ಎಂಎಸ್ ಧೋನಿ ಅವರ ನೆಚ್ಚಿನ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ನೇಮಿಸಲು ಬಿಸಿಸಿಐ ಕಸರತ್ತು ನಡೆಸುತ್ತಿದೆ.
ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಅವರನ್ನು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಸಂಭಾವ್ಯ ಉತ್ತರಾಧಿಕಾರಿಯಾಗಿ ನೇಮಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಚಿಂತನೆ ನಡೆಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಅತ್ಯಂತ ಯಶಸ್ವಿ ಕೋಚ್ ಆಗಿರುವ ಫ್ಲೆಮಿಂಗ್ ಅವರನ್ನೇ ಭಾರತ ತಂಡಕ್ಕೂ ನೇಮಿಸಬೇಕು ಎಂದು ಅಭಿಮಾನಿಗಳಿಂದಲೂ ಆಗ್ರಹ ಕೇಳಿ ಬರುತ್ತಿದೆ.
ಭಾರತದ ಕೋಚ್ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಪ್ರಸ್ತುತ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಜೂನ್ ತಿಂಗಳಿಗೆ ಮುಕ್ತಾಯಗೊಳ್ಳಲಿದೆ. ದ್ರಾವಿಡ್ ಅವರು ಮತ್ತೆ ಅರ್ಜಿ ಸಲ್ಲಿಸಲು ಬಯಸುತ್ತಿಲ್ಲ ಎಂಬುದು ಈಗಾಗಲೇ ಖಚಿತಗೊಂಡಿದೆ. ಹಾಗಾಗಿ ನೂತನ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐ, ಷರತ್ತಿನೊಂದಿಗೆ ಅರ್ಜಿ ಆಹ್ವಾನಿಸಿದೆ. ಹೀಗಾಗಿ ವರ್ಷಕ್ಕೆ 10 ತಿಂಗಳ ಕಾಲ ತಂಡದ ಜೊತೆಗೆ ಇರಬೇಕಾದ ಕೆಲಸಕ್ಕೆ ಫ್ಲೆಮಿಂಗ್ ಅರ್ಜಿ ಸಲ್ಲಿಸುತ್ತಾರೆಯೇ?
2021ರ ಟಿ20 ವಿಶ್ವಕಪ್ ಮುಕ್ತಾಯಗೊಂಡ ನಂತರ ರವಿ ಶಾಸ್ತ್ರಿ ಅವರ ಜಾಗಕ್ಕೆ ಬಂದಿದ್ದ ರಾಹುಲ್ ದ್ರಾವಿಡ್ ಒಪ್ಪಂದ 2023ರ ಏಕದಿನ ಕ್ರಿಕೆಟ್ ವಿಶ್ವಕಪ್ವರೆಗೂ ಇತ್ತು. ಬಳಿಕ 2024ರ ಟಿ20 ವಿಶ್ವಕಪ್ವರೆಗೂ ವಿಸ್ತರಿಸಲಾಯಿತು. ಆದರೀಗ ಮುಂದಿನ ತಿಂಗಳಲ್ಲಿ ಜರುಗುವ ವಿಶ್ವಕಪ್ಗೆ ಅವರ ಅವಧಿ ಮುಕ್ತಾಯವಾಗಲಿದೆ. ಬಿಸಿಸಿಐ ಮತ್ತು ದ್ರಾವಿಡ್ ಇಬ್ಬರೂ ಸಹ ಅಧಿಕಾರ ವಿಸ್ತರಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ನೂತನ ಕೋಚ್ಗೆ ಅರ್ಜಿ ಆಹ್ವಾನಿಸಲಾಯಿತು.
2009ರಿಂದ ಸಿಎಸ್ಕೆ ತಂಡದಲ್ಲಿ ಸೇವೆ
ಟಿ20 ವಿಶ್ವಕಪ್ ನಂತರ ಭಾರತೀಯ ಪುರುಷರ ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ನೇಮಿಸುವ ಪ್ರಕ್ರಿಯೆಯನ್ನು ಬಿಸಿಸಿಐ ಸೋಮವಾರ (ಮೇ 13) ಅಧಿಕೃತವಾಗಿ ಪ್ರಾರಂಭಿಸಿದೆ. ಬಿಸಿಸಿಐ ಉನ್ನತ ಮೂಲಗಳ ಪ್ರಕಾರ, 2009 ರಿಂದ ಸಿಎಸ್ಕೆ ಮುಖ್ಯ ಕೋಚ್ ಆಗಿರುವ ಫ್ಲೆಮಿಂಗ್ , ದ್ರಾವಿಡ್‌ನಿಂದ ಅಧಿಕಾರ ವಹಿಸಿಕೊಳ್ಳಲು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ಎಲ್ಲಾ ಸ್ವರೂಪಗಳಲ್ಲಿ ಪರಿವರ್ತನೆಯ ಅವಧಿ ಪ್ರವೇಶಿಸುವ ಸಾಧ್ಯತೆಯಿದೆ.
ಐಪಿಎಲ್‌ನಲ್ಲಿ ಈಗಾಗಲೇ ಅನೌಪಚಾರಿಕ ಚರ್ಚೆಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಿಸಿಸಿಐ, ಫ್ಲೆಮಿಂಗ್ ಅವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. 51 ವರ್ಷದ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಫ್ರಾಂಚೈಸಿ ತೊರೆಯುವ ಕುರಿತು ಸಿಎಸ್‌ಕೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಥೇಟ್ ರಾಹುಲ್ ದ್ರಾವಿಡ್ ಅವರಂತೆಯೇ ವಿಶೇಷ ಗುಣಗಳನ್ನು ಹೊಂದಿರುವ ಸ್ಟೀಫನ್ ಫ್ಲೆಮಿಂಗ್ ಅತ್ಯುತ್ತಮ ಕೋಚ್ ಆಗಿದ್ದಾರೆ. ಹೀಗಾಗಿ ಅವರನ್ನೇ ಮುಂದಿನ ಮುಖ್ಯಕೋಚ್ ಪರಿಗಣಿಸಲಾಗಿದೆ.
ಚೆನ್ನೈಗೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ ಫ್ಲೆಮಿಂಗ್?
ಸ್ಟೀಫನ್ ಫ್ಲೆಮಿಂಗ್ ಅವರು ಕೋಚ್ ಆದ ನಂತರ ಸಿಎಸ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಂಡಿದೆ. ಆಟಗಾರರಿಂದ ಆಟವನ್ನು ತೆಗೆಯುವ ಸಾಮರ್ಥ್ಯ ಅವರಲ್ಲಿದೆ. ತಾಂತ್ರಿಕ ಜ್ಞಾನ ಹೊಂದಿರುವಂತ ವ್ಯಕ್ತಿ ಸ್ಟೀಫನ್ ಫ್ಲೆಮಿಂಗ್ ಅವರಿಗೆ ಆದ್ಯತೆ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇನ್ನು ಫ್ಲೆಮಿಂಗ್ ಟೀಮ್ ಇಂಡಿಯಾ ಮುಖ್ಯಕೋಚ್ ಆಗಲು ಟೀಮ್ ಇಂಡಿಯಾ ತೊರೆಯಲು ನಿರ್ಧರಿಸುತ್ತಾರೆಯೇ ಎಂಬುದು ಕುತೂಹಲಕಾರಿ ಅಂಶವಾಗಿದೆ.
ಎಂಎಸ್ ಧೋನಿ ಸಿಎಸ್ಕೆ ಕೋಚ್ ಆಗ್ತಾರಾ?
2024ರ ಐಪಿಎಲ್ ಧೋನಿ ಪಾಲಿಗೆ ಕೊನೆಯದ್ದು. ಈ ವಿಷಯ ಈಗಾಗಲೇ ಖಚಿತಗೊಂಡಿದೆ. ತನ್ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸಿ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಧೋನಿ ವಿದಾಯ ಹೇಳಿದರೆ, ಸಿಎಸ್ಕೆ ತಂಡಕ್ಕೆ ಕೋಚ್ ಆಗಲಿದ್ದಾರೆ ಎಂಬ ವರದಿಗಳಿವೆ. ಹೀಗಾಗಿ ಸ್ಟೀಫನ್ ಫ್ಲೆಮಿಂಗ್ ಅವರು ಸಿಎಸ್ಕೆ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಗುಸು ಗುಸು ನಡೆಯುತ್ತಿದೆ. ಇದೇ ಕಾರಣಕ್ಕೆ ಬಿಸಿಸಿಐ, ಫ್ಲೆಮಿಂಗ್ ಅವರನ್ನು ಸಂಪರ್ಕಿಸಿದೆ ಎಂಬ ಮಾಹಿಯಿ ಲಭ್ಯವಾಗಿದೆ.