ಶಹಬಾಜ್ ಸ್ಥಾನ ನಿರ್ಣಾಯಕ; ಕೆಕೆಆರ್ ವಿರುದ್ಧದ ಫೈನಲ್ ಪಂದ್ಯಕ್ಕೆ ಸನ್‌ರೈಸರ್ಸ್ ಸಂಭಾವ್ಯ ತಂಡ
KKR vs SRH IPL 2024 Final: ಚೆಪಾಕ್ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಗೆಲುವಿನಲ್ಲಿ ಸನ್‌ರೈಸರ್ಸ್ ಗೇಮ್ ಪ್ಲಾನ್ ವರ್ಕೌಟ್ ಆಗಿತ್ತು. ಇದೇ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಅದೇ ತಂತ್ರವನ್ನು ಕಾರ್ಯರೂಪಕ್ಕೆ ತರುವುದು ಪ್ಯಾಟ್ ಕಮಿನ್ಸ್ ಯೋಜನೆಯಾಗಿದೆ.
ಐಪಿಎಲ್ 2024ರ ಅಂತಿಮ ಫಲಿತಾಂಶಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಿರ್ಣಾಯಕ ಫೈನಲ್ ಪಂದ್ಯ ನಡೆಯುತ್ತಿದೆ. ಪ್ರಶಸ್ತಿ ಸುತ್ತಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡಗಳು ಮುಖಾಮುಖಿಯಾಗುತ್ತಿದ್ದು, ರೋಚಕ ಕದನದ ನಿರೀಕ್ಷೆ ಇದೆ. ಐಪಿಎಲ್ 2024ರ ಲೀಗ್ ಹಂತದ ಅಗ್ರ ಎರಡು ತಂಡಗಳಾಗಿರುವ ಕೆಕೆಆರ್ ಮತ್ತು ಎಸ್‌ಆರ್‌ಹೆಚ್, ಮತ್ತೊಮ್ಮೆ ರನ್ ಮಳೆ ಹರಿಸಲು ಸಜ್ಜಾಗಿವೆ. ಆದರೆ, ಚೆನ್ನೈನ ನಿಧಾನಗತಿಯ ಪಿಚ್ ಉಭಯ ತಂಡಗಳ ಸ್ಫೋಟಕ ಆಟಕ್ಕೆ ಹೇಗೆ ವರ್ತಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಅಹಮದಾಬಾದ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಕದನದಲ್ಲಿ ಎಸ್‌ಆರ್‌ಎಚ್ ತಂಡದ ವಿರುದ್ಧ ಗೆದ್ದ ಕೆಕೆಆರ್, ನೇರವಾಗಿ ಫೈನಲ್ ಪ್ರವೇಶಿಸಿತು. ಇದೇ ವೇಳೆ ಕೆಕೆಆರ್ ವಿರುದ್ಧ ಸೋತ ಸನ್‌ರೈಸರ್ಸ್, ಆ ಬಳಿಕ ಎರಡನೇ ಕ್ವಾಲಿಫೈಯರ್ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್‌ಗಳಿಂದ ಗೆದ್ದು ಮತ್ತೆ ಕೆಕೆಆರ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಶುಕ್ರವಾರವಷ್ಟೇ ಚೆಪಾಕ್ ಮೈದಾನದಲ್ಲಿ ರಾಜಸ್ಥಾನವನ್ನು ಸೋಲಿಸಿದ ಹೈದರಾಬಾದ್‌ಗೆ, ಈ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಅರಿವಾಗಿದೆ. ಕೆಕೆಆರ್ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಎಸ್‌ಆರ್‌ಎಚ್ ಸೋಲಿಸಿದ ಸಮಾಧಾನವಿದ್ದರೆ, ಚೆಪಾಕ್ ಮೈದಾನಲ್ಲಿ ಗೆದ್ದ ಸಮಾಧಾನ ಹೈದರಾಬಾದ್‌ನದ್ದು.
ರಾಜಸ್ಥಾನದ ವಿರುದ್ಧದ ತಂತ್ರವೇ ಕೋಲ್ಕತ್ತಾ ವಿರುದ್ಧ ಅನುಸರಣೆ
ಒಂದು ದಿನದ ವಿರಾಮದೊಂದಿಗೆ ಆರೆಂಜ್ ಆರ್ಮಿಯು ಫೈನಲ್ ಪಂದ್ಯ ಆಡುತ್ತಿದೆ. ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಪ್ಯಾಟ್ ಕಮ್ಮಿನ್ಸ್ ಪಡೆಯು, ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಯೋಜನೆ ರೂಪಿಸಿದೆ. ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ಪಿಚ್‌ಗೆ ಅನುಗುಣವಾಗಿ ಕಮಿನ್ಸ್ ಆಡುವ ತಂತ್ರ ರೂಪಿಸಿದ್ದರು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಬಳಸಿ ಮೇಲುಗೈ ಸಾಧಿಸಿದರು. ಕೆಕೆಆರ್ ವಿರುದ್ಧವೂ ಇದೇ ತಂತ್ರ ಮುಂದುವರೆಸುವ ಸಾಧ್ಯತೆ ಇದೆ.
ರಾಜಸ್ಥಾನ ವಿರುದ್ಧದ ಪಂದ್ಯಕ್ಕೆ ಆಡುವ ಬಳಗದಲ್ಲಿ ಹೈದರಾಬಾದ್ ಬದಲಾವಣೆ ಮಾಡಿತ್ತು. ವೇಗಿಗಳ ಸಾಲಿಗೆ ಉನದ್ಕತ್ ಮರಳಿದರೆ, ವಿಜಯಕಾಂತ್ ಬದಲಿಗೆ ಐಡೆನ್ ಮರ್ಕ್ರಾಮ್ ಆಡಿದರು. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಶಹಬಾಜ್ ಅಹ್ಮದ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಅಭಿಷೇಕ್ ಜೊತೆಗೂಡಿ ಸ್ಪಿನ್ ಮೋಡಿ ಮಾಡಿ ರಾಜಸ್ಥಾನದ ಬ್ಯಾಟಿಂಗ್ ಲೈನಪ್‌ಗೆ ಕಂಟಕರಾದರು. ಹೀಗಾಗಿ ಫೈನಲ್ ಪಂದ್ಯದಲ್ಲೂ ಇದೇ ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ತಂಡವು ಮೊದಲು ಬೌಲಿಂಗ್ ಮಾಡಿದರೆ, ಶಹಬಾಜ್ ಮೊದಲ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್, ಶಹಬಾಜ್ ಅಹ್ಮದ್ (ಇಂಪ್ಯಾಕ್ಟ್ ಆಟಗಾರ).
ಇದನ್ನೂ ಓದಿ | ಐಪಿಎಲ್ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್ vs ಎಸ್‌ಆರ್‌ಹೆಚ್ ಫೈನಲ್ ಎಲ್ಲಿ, ಯಾವಾಗ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)