ಜಿಂಬಾಬ್ವೆ ವಿರುದ್ಧದ ಮೊದಲ 2 ಟಿ20 ಪಂದ್ಯಗಳಿಗೆ ಸಾಯಿ ಸುದರ್ಶನ್, ಹರ್ಷಿತ್ ರಾಣಾ, ಜಿತೇಶ್ ಶರ್ಮಾಗೆ ಸ್ಥಾನ
Zimbabwe vs India: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಜಿಂಬಾಬ್ವೆ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ಅವರ ಬದಲಿಗೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ತುಂಬಲಿದ್ದಾರೆ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಜೈಸ್ವಾಲ್, ದುಬೆ ಮತ್ತು ಸ್ಯಾಮ್ಸನ್; ಶನಿವಾರ ಆರಂಭವಾಗಲಿರುವ ಸರಣಿಗೆ ಜಿಂಬಾಬ್ವೆಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೆ, ಟಿ20 ವಿಶ್ವಕಪ್ ಗೆದ್ದ ಭಾರತದ ತಂಡದ ಭಾಗವಾಗಿದ್ದ ಈ ಮೂವರು ಇನ್ನೂ ಬಾರ್ಬಡೋಸ್‌ನಲ್ಲಿಯೇ ಇದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ತಂಡದಲ್ಲಿದ್ದ ಈ ಮೂವರು ರೋಹಿತ್ ಶರ್ಮಾ ನೇತೃತ್ವದ ತಂಡದೊಂದಿಗೆ ಇನ್ನಷ್ಟೇ ಭಾರತ ತಲುಪಬೇಕಿದೆ. ಹೀಗಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಈಗಾಗಲೇ ಭಾರತ ತಂಡ ಜಿಂಬಾಬ್ವೆಗೆ ಹಾರಿದೆ. ಶುಭ್ಮನ್ ಗಿಲ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಅವರೊಂದಿಗೆ ಐಪಿಎಲ್ ಸ್ಟಾರ್‌ಗಳಾದ ಅಭಿಷೇಕ್ ಶರ್ಮಾ, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್ ಮತ್ತು ರಿಯಾನ್ ಪರಾಗ್ ಕೂಡಾ ಪ್ರಯಾಣಿಸಿದ್ದಾರೆ.
ಐಪಿಎಲ್ 2024ರ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುದರ್ಶನ್, ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಶಿವಂ ದುಬೆ ಆರಂಭದಲ್ಲಿ ಈ ತಂಡದ ಭಾಗವಾಗಿರಲಿಲ್ಲ. ಆದರೆ ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಮೊದಲ ಎರಡು ಪಂದ್ಯಗಳಿಂದ ಈಗ ದುಬೆ ಹೊರಬಿದ್ದಿದ್ದಾರೆ.
ಅಭಿಷೇಕ್, ಪರಾಗ್ ಮತ್ತು ತುಷಾರ್ ದೇಶಪಾಂಡೆ ಇದೇ ಮೊದಲ ಬಾರಿಗೆ ಭಾರತ ತಂಡದ ಪರ ನೀಲಿ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ತ ಭಾರತ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಲು ಗಿಲ್ ಸಜ್ಜಾಗಿದ್ದಾರೆ.
ಜಿಂಬಾಬ್ವೆ ವಿರುದ್ಧದ ಮೊದಲ ಮತ್ತು ಎರಡನೇ ಟಿ20 ಪಂದ್ಯಕ್ಕೆ ಭಾರತ ತಂಡ
ಶುಭ್ಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಆವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್ಷಿತ್ ರಾಣಾ.
ಭಾರತ vs ಜಿಂಬಾಬ್ವೆ ಟಿ20ಐ ಸರಣಿ ವೇಳಾಪಟ್ಟಿ
- 1 ನೇ ಟಿ20 - ಶನಿವಾರ, ಜುಲೈ 6
- 2 ನೇ ಟಿ20 - ಭಾನುವಾರ, ಜುಲೈ 7
- 3 ನೇ ಟಿ20 - ಬುಧವಾರ, ಜುಲೈ 10
- 4 ನೇ ಟಿ20 - ಶನಿವಾರ, ಜುಲೈ 13
- 5 ನೇ ಟಿ20 - ಭಾನುವಾರ, ಜುಲೈ 14
ಜಿಂಬಾಬ್ವೆ ಕ್ರಿಕೆಟ್ ತಂಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ಪ್ರವಾಸ; ಪೂರ್ಣ ವೇಳಾಪಟ್ಟಿ, ತಂಡಗಳು, ದಿನಾಂಕ, ಲೈವ್ ಸ್ಟ್ರೀಮಿಂಗ್ ಮಾಹಿತಿ