ನನ್ನ ಮಗನ ಕರಿಯರ್ ಹಾಳು ಮಾಡಿದ್ದೇ ಕೊಹ್ಲಿ, ರೋಹಿತ್, ಧೋನಿ, ದ್ರಾವಿಡ್; ಸಂಜು ಸ್ಯಾಮ್ಸನ್ ತಂದೆ ಗಂಭೀರ ಆರೋಪ
ಭಾರತ ತಂಡದ ನಾಯಕರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ನನ್ನ ಮಗನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಹಾಳುಮಾಡಿದರು ಎಂದು ಸಂಜು ಸ್ಯಾಮ್ಸನ್ ಅವರ ತಂದೆ ವಿಶ್ವನಾಥ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಸತತ 2 ಪಂದ್ಯಗಳಲ್ಲಿ ಡಕೌಟ್ ಆಗಿರುವ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಭಾರತದ ಸ್ಟಾರ್ ಕ್ರಿಕೆಟಿಗರ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ಸತತ ಎರಡು ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿಕೆಟ್ ಕೀಪರ್, ಸತತವಾಗಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಅವರ ತಂದೆಯವರು, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ವಿರುದ್ಧ ಆರೋಪ ಮಾಡಿದ್ದು, ವಾಗ್ದಾಳಿ ನಡೆಸಿದ್ದಾರೆ.
ನಾಲ್ವರ ಮೇಲೆ ಸಂಜು ತಂದೆ ಗಂಭೀರ ಆರೋಪ
ಸಂಜು ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ತಮ್ಮ ಮಗನ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂದು ಭಾರತ ತಂಡದ ನಾಯಕತ್ವ ಮತ್ತು ಟೀಮ್ ಮ್ಯಾನೇಜ್ಮೆಂಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಮಲಯಾಳಿ ಸುದ್ದಿ ಸಂಸ್ಥೆ ಮೀಡಿಯಾ ಒನ್ಗೆ ನೀಡಿದ ಸಂದರ್ಶನದಲ್ಲಿ ವಿಶ್ವನಾಥ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸ್ಯಾಮ್ಸನ್ ಅವರ ಪ್ರಗತಿಗೆ ತಡೆ ಹಾಕಿದವರನ್ನು ಅಪರಾಧಿಗಳು ಎಂದು ಕರೆದಿದ್ದಾರೆ. ನನ್ನ ಮಗನ ವೃತ್ತಿಜೀವನದ 10 ವರ್ಷ ವ್ಯರ್ಥ ಮಾಡಿದ್ದು, ಮೂರರಿಂದ ನಾಲ್ವರು. ಅವರೆಂದರೆ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಜಿ, ವಿರಾಟ್ ಕೊಹ್ಲಿ ಜಿ, ರೋಹಿತ್ ಶರ್ಮಾ ಜಿ ಮತ್ತು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಜಿ. ಇವರಿಂದಲೇ ನನ್ನ ಮಗನ ಭವಿಷ್ಯ ಹಾಳಾಯಿತು ಎಂದು ದೂಷಿಸಿದ್ದಾರೆ.
ನಿಯಮಿತವಾಗಿ ಅವಕಾಶ ಕೊಡಲಿಲ್ಲ ಎಂದ ವಿಶ್ವನಾಥ್
ಸ್ಯಾಮ್ಸನ್ 2015ರಲ್ಲಿ ತಮ್ಮ 21 ನೇ ವಯಸ್ಸಿನಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದರು. ದೇಶೀಯ ಕ್ರಿಕೆಟ್ನಲ್ಲಿ ಭರವಸೆಯ ಮತ್ತು ಅತ್ಯಂತ ಪ್ರತಿಭಾವಂತ ಆಟಗಾರನಾಗಿದ್ದರು. ಆದರೆ ರೋಹಿತ್ ಮತ್ತು ಕೊಹ್ಲಿಯಂತಹ ಬ್ಯಾಟರ್ಗಳು ಸ್ಥಿರತೆಯ ಕೊರತೆ ಇದ್ದರೂ ತಂಡಕ್ಕೆ ಪ್ರವೇಶಿಸುವ ಮಾರ್ಗವನ್ನು ನಿರ್ಬಂಧಿಸಿದ್ದರು. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನದ ಜೊತೆಗೆ ಪ್ರಬುದ್ಧತೆ ತೋರುತ್ತಿರುವ ಕಾರಣ ಸ್ಯಾಮ್ಸನ್ 2021 ರಲ್ಲಿ ಮತ್ತೆ ತಂಡಕ್ಕೆ ಮರಳಿದರು. ಈ ನಾಲ್ಕು ಜನರು ನನ್ನ ಮಗನ ಜೀವನದ 10 ವರ್ಷಗಳನ್ನು ವ್ಯರ್ಥ ಮಾಡಿದರು. ಆದರೆ ಕೊಹ್ಲಿ, ಧೋನಿ, ರೋಹಿತ್, ದ್ರಾವಿಡ್ ಅವರು, ಸಂಜುನನ್ನು ಹೆಚ್ಚು ನೋಯಿಸಿದಷ್ಟೂ ಸಂಜು ಬಿಕ್ಕಟ್ಟಿನಿಂದ ಪುಟಿದೆದ್ದು ಬಂದರು ಎಂದು ಅವನ ತಂದೆ ವಾದಿಸಿದ್ದಾರೆ. ನಿಯಮಿತವಾಗಿ ಅವಕಾಶ ಕೊಟ್ಟಿದ್ದರೆ ಯಾವಾಗಲೋ ತನ್ನ ಪ್ರತಿಭೆ ಹೊರಬರುತ್ತಿತ್ತು ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆಲುವಿನ ನಂತರ ಕೊಹ್ಲಿ ಮತ್ತು ರೋಹಿತ್ ಅವರ ದ್ವಿ ನಿವೃತ್ತಿಯ ನಂತರ ಸ್ಯಾಮ್ಸನ್ ಈಗ ಭಾರತದ ಟಿ20 ಆರಂಭಿಕ ಆಟಗಾರನಾಗಲು ಧ್ರುವ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದು ಆ ಸ್ಥಾನದಲ್ಲಿ ಉಳಿಯುವಂತೆ ಮಾಡಿದೆ. 2022 ಮತ್ತು 2023ರಲ್ಲಿ 14 ಟಿ20 ಪಂದ್ಯಗಳಲ್ಲಿ ಅವಕಾಶ ಪಡೆದಿರುವ ಸ್ಯಾಮ್ಸನ್ಗೆ ಅವಕಾಶ ನೀಡಿದ ಹೊಸ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರನ್ನು ವಿಶ್ವನಾಥ್ ಶ್ಲಾಘಿಸಿದ್ದಾರೆ.
ಐಪಿಎಲ್ನಲ್ಲಿ ಅದ್ಭುತ ಆರಂಭ ಪಡೆದರೂ ಟೂರ್ನಿಯಲ್ಲಿ ಮುಂದುವರೆದಂತೆ ಅವರು ಆ ಫಾರ್ಮ್ ಕಳೆದುಕೊಂಡರು. ಆಗಾಗ್ಗೆ ಭಾರತ ತಂಡದಲ್ಲಿ ಅವಕಾಶ ಪಡೆದರೂ ಸದ್ದು ಮಾಡುವಲ್ಲಿ ವಿಫಲರಾದರು. ಇದರಿಂದ ಭಾರೀ ಟೀಕೆ ಎದುರಿಸಿದ್ದರು. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ನಾಯಕತ್ವ ವಹಿಸಿಕೊಂಡ ನಂತರ, ಸ್ಯಾಮ್ಸನ್ ಪ್ರಬುದ್ಧ ಆಟ ಪ್ರದರ್ಶಿಸಿದರು. ಕಳೆದ 4 ಋತುಗಳಲ್ಲಿ ಮೂರರಲ್ಲಿ 450+ ರನ್ ಗಳಿಸಿದ್ದಾರೆ. ಪ್ರಸ್ತುತ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಸ್ಯಾಮ್ಸನ್ ಮುಂಬರುವ ವರ್ಷಗಳಲ್ಲಿ ಟಿ20 ಕ್ರಿಕೆಟ್ನ ಭಾರತದ ಆರಂಭಿಕ ಬ್ಯಾಟಿಂಗ್ನ ಭವಿಷ್ಯವಾಗಲಿದ್ದಾರೆ ಎಂದರೆ ತಪ್ಪಾಗಲ್ಲ.