ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್

ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್

Dinesh Karthik Retirement : ಜೂನ್ 1ರಂದು 39ನೇ ವರ್ಷಕ್ಕೆ ಕಾಲಿಟ್ಟ ದಿನೇಶ್ ಕಾರ್ತಿಕ್ ಅವರು ತನ್ನ ಜನ್ಮದಿನದಂದೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್
ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ; ಜನ್ಮದಿನದಂದೇ ಡಿಕೆ ವಿದಾಯದ ಭಾವುಕ ಪೋಸ್ಟ್

ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್ (Dinesh Karthik Retirement) ಅಧಿಕೃತವಾಗಿ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಾನು ಅಧಿಕೃತವಾಗಿ ವಿದಾಯ ಹೇಳಿರುವ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಾನು ಬೆಳೆದ ಬಂದ ವಿಡಿಯೋವನ್ನು ಸಹ ಇದೇ ಪೋಸ್ಟ್​ನೊಂದಿಗೆ ಹಾಕಿದ್ದಾರೆ.

ಇಂದು (ಜೂನ್ 1ರಂದು) 39ನೇ ವರ್ಷಕ್ಕೆ ಕಾಲಿಟ್ಟ ದಿನೇಶ್ ಕಾರ್ತಿಕ್, ತನ್ನ ಹುಟ್ಟುಹಬ್ಬದ ದಿನವೇ ಕ್ರಿಕೆಟ್​​ನಿಂದ ಹಿಂದೆ ಸರಿದಿದ್ದಾರೆ. 2004ರ ಸೆಪ್ಟೆಂಬರ್​​​ನಲ್ಲಿ ಐತಿಹಾಸಿಕ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್​​ ವಿರುದ್ಧದ ಏಕದಿನ ಪಂದ್ಯದಲ್ಲಿ 19 ವರ್ಷದವನಾಗಿದ್ದಾಗ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು.

ಐಪಿಎಲ್ 2024ರ ಮೇ 22ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್​ ಪಂದ್ಯವೇ ಅವರ ಕೊನೆಯ ಕ್ರಿಕೆಟ್ ಪಂದ್ಯವಾಗಿತ್ತು. ಆದರೆ ಈ ಮಹತ್ವದ ಪಂದ್ಯದಲ್ಲಿ ಆರ್​​ಸಿಬಿ ಸೋತು ಹೊರಬಿತ್ತು. ಅವತ್ತೇ ಪಂದ್ಯದ ನಂತರ ತಂಡದ ಸದಸ್ಯರು ಮತ್ತು ಗೌರವ ಅಭಿನಂದನೆ ಸಲ್ಲಿಸಿದರು. ಐಪಿಎಲ್​​ನಲ್ಲಿ 6 ತಂಡಗಳ ಪರ ಕಣಕ್ಕಿಳಿದಿರುವ 39 ವರ್ಷದ ಆಟಗಾರ, ಇನ್ಮುಂದೆ ಯಾವುದೇ ಕ್ರಿಕೆಟ್​ನಲ್ಲೂ ಕಣಕ್ಕೆ ಇಳಿಯುವುದಿಲ್ಲ. ಅವರು ಕಾಮೆಂಟರಿ ಸೇವೆ ಮುಂದುವರೆಸಲಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ನಾನು ಪಡೆದ ಬೆಂಬಲ ಮತ್ತು ಪ್ರೀತಿಯಿಂದ ಮುಳುಗಿ ಹೋಗಿದ್ದೇನೆ. ಈ ಭಾವನೆಯನ್ನು ಸಾಧ್ಯವಾಗಿಸಿದ ಎಲ್ಲಾ ಅಭಿಮಾನಿಗಳಿಗೆ ನನ್ನ ಆಳವಾದ ಕೃತಜ್ಞತೆ ಮತ್ತು ಪ್ರಾಮಾಣಿಕ ಧನ್ಯವಾದಗಳು. ಸಾಕಷ್ಟು ಯೋಚಿಸಿದ ನಂತರ, ಕ್ರಿಕೆಟ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ನಾನು ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ. ಮುಂಬರುವ ಹೊಸ ಸವಾಲುಗಳನ್ನು ಎದುರಿಸಲು ಆಟವನ್ನು ತೊರೆಯಲಿದ್ದೇನೆ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಅವರು ತೀವ್ರ ಭಾವುಕರಾಗಿದ್ದಾರೆ.

ಈ ಸುದೀರ್ಘ ಪ್ರಯಾಣವನ್ನು ಆಹ್ಲಾದಕರ ಮತ್ತು ಆನಂದದಾಯಕವಾಗಿಸಿದ ನನ್ನ ಎಲ್ಲಾ ಕೋಚ್​​ಗಳು, ನಾಯಕರು, ಆಯ್ಕೆದಾರರು, ತಂಡದ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದ ಕೆಲವು ಅದೃಷ್ಟಶಾಲಿಗಳಲ್ಲಿ ನಾನು ಒಬ್ಬ ಎಂಬುದಕ್ಕೆ ಹೆಮ್ಮೆಪಡುತ್ತೇನೆ. ಇನ್ನೂ ಅನೇಕ ಅಭಿಮಾನಿಗಳು ಮತ್ತು ಸ್ನೇಹಿತರ ಅಭಿಮಾನವನ್ನು ಗಳಿಸಿದ ಅದೃಷ್ಟಶಾಲಿಯೂ ಹೌದು ಎಂದು ಹೇಳಿದ್ದಾರೆ.

ನನ್ನ ವೃತ್ತಿಜೀವನದಲ್ಲಿ ಸದಾ ಬೆಂಗಾವಲಾಗಿದ್ದ ಹೆತ್ತವರಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಅವರೇ ನನಗೆ ಆಧಾರಸ್ಥಂಭ. ಅವರ ಆಶೀರ್ವಾದವಿಲ್ಲದೆ ನಾನೇನು ಇಲ್ಲ. ಅವರಂತೆಯೇ ನನ್ನ ಬೆಂಬಲ ನೀಡಿದ ಪತ್ನಿ ದೀಪಿಕಾಗೆ ನಾನು ಸಾಕಷ್ಟು ಋಣಿಯಾಗಿದ್ದೇನೆ. ಎಲ್ಲಾ ಅಭಿಮಾನಿಗಳು ಮತ್ತು ಫಾಲೋವರ್ಸ್​​ಗೆ, ದೊಡ್ಡ ಧನ್ಯವಾದಗಳು. ನಿಮ್ಮ ಬೆಂಬಲ ಮತ್ತು ಶುಭ ಹಾರೈಕೆಗಳಿಲ್ಲದೆ ಕ್ರಿಕೆಟ್ ಮತ್ತು ಕ್ರಿಕೆಟಿಗರು ಒಂದೇ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಡಿಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್​

2004 ಸೆಪ್ಟೆಂಬರ್ 5ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಹಿರಿಯ ಆಟಗಾರ 20 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 30.21ರ ಬ್ಯಾಟಿಂಗ್ ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 26 ಟೆಸ್ಟ್​​ಗಳಲ್ಲಿ ಬ್ಯಾಟ್ ಬೀಸಿರುವ ವಿಕೆಟ್ ಕೀಪರ್, 25ರ ಸರಾಸರಿಯಲ್ಲಿ 1025 ರನ್ ಕಲೆ ಹಾಕಿದ್ದಾರೆ. ಇನ್ನು 60 ಟಿ20ಐ ಪಂದ್ಯಗಳಲ್ಲಿ 26.38ರ ಸರಾಸರಿಯಲ್ಲಿ 686 ರನ್ ಬಾರಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 1 ಶತಕ (ಟೆಸ್ಟ್​ನಲ್ಲಿ) ಮಾತ್ರ ದಾಖಲಿಸಿದ್ದಾರೆ.

ಡಿಕೆ ಐಪಿಎಲ್ ವೃತ್ತಿಜೀವನ

2008ರಿಂದ ಐಪಿಎಲ್​ ಈವರೆಗೂ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ದಿನೇಶ್ ಕಾರ್ತಿಕ್ ಅವರು 257 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲಿ 250+ ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರ ಪೈಕಿ ಡಿಕೆ ಕೂಡ ಒಬ್ಬರು. 234 ಇನ್ನಿಂಗ್ಸ್​​ಗಳಲ್ಲಿ 22 ಅರ್ಧಶತಕ ಬಾರಿಸಿರುವ ಹಿರಿಯ ಆಟಗಾರ 26.32ರ ಬ್ಯಾಟಿಂಗ್ ಸರಾಸರಿಯಲ್ಲಿ 4842 ರನ್​ ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್​ 135.36 ಹೊಂದಿದ್ದಾರೆ. 466 ಫೋರ್, 161 ಸಿಕ್ಸರ್​​ಗಳನ್ನು ಬಾರಿಸಿದ್ದಾರೆ.

Whats_app_banner