ಭಾರತದ ಶ್ರೇಷ್ಠ ಕ್ಷಣವಿದು; ಅಯೋಧ್ಯೆ ಶ್ರೀರಾಮನ ಪ್ರಾಣಪ್ರತಿಷ್ಠೆ ಆಹ್ವಾನ ಪಡೆದ ವೆಂಕಟೇಶ್ ಪ್ರಸಾದ್
Venkatesh Prasad: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಹಾಜರಾಗಲು ತಮಗೆ ಆಹ್ವಾನ ಬಂದಿದೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಪವಿತ್ರ ಕಾರ್ಯಕ್ರಮಕ್ಕೆ ಹಾಜರಾಗಲು ದೊರೆತ ಅವಕಾಶಕ್ಕೆ ಮಾಜಿ ವೇಗಿ ಖುಷಿಯಾಗಿದ್ದಾರೆ.
ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತ ಮುಕ್ತಾಯವಾಗಿದ್ದು, ಜನವರಿ 22ರಂದು ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಯಲಿದೆ. ರಾಮಲಲಾನನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಅಯೋಧ್ಯೆ ತೀರ್ಥಯಾತ್ರೆಗೆ ಸಜ್ಜಾಗಿದ್ದಾರೆ. ಈ ನಡುವೆ ದೇಶಾದ್ಯಂತ ಮಂತ್ರಾಕ್ಷತೆ ಜೊತೆಗೆ ಆಹ್ವಾನ ಪತ್ರಿಕೆ ವಿತರಣೆ ಕೂಡಾ ಭರದಿಂದ ಸಾಗುತ್ತಿದೆ.
ಐತಿಹಾಸಿಕ ಕಾರ್ಯಕ್ರಮಕ್ಕೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದ್ದು, ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರಿಗೂ ಆಮಂತ್ರಣ ಪತ್ರಿಕೆ ಸಿಕ್ಕಿದೆ. ಈ ಖುಷಿಯನ್ನು ಅವರು ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಹಾಜರಾಗಲು ತಮಗೆ ಆಹ್ವಾನ ಬಂದಿದೆ ಎಂದು ವೆಂಕಟೇಶ್ ಪ್ರಸಾದ್ ಬಹಿರಂಗಪಡಿಸಿದ್ದಾರೆ. ಪವಿತ್ರ ಕಾರ್ಯಕ್ರಮಕ್ಕೆ ಹಾಜರಾಗಲು ದೊರೆತ ಅವಕಾಶಕ್ಕೆ ಮಾಜಿ ವೇಗಿ ಖುಷಿಯಾಗಿದ್ದಾರೆ.
“ನನ್ನ ಜೀವಿತಾವಧಿಯಲ್ಲಿ ರಾಮಮಂದಿರದ ನಿರ್ಮಾಣವಾಗುವ ಭರವಸೆ ಮತ್ತು ಬಯಕೆ ಇತ್ತು. ಇದು ಎಂಥಾ ಕ್ಷಣ. ಜನವರಿ 22ರಂದು ಶಂಕುಸ್ಥಾಪನೆ ಮಾತ್ರ ನಡೆಯುತ್ತಿಲ್ಲ. ಭಾರತದ ಶ್ರೇಷ್ಠ ಕ್ಷಣದಲ್ಲಿ ಪಾಲ್ಗೊಳ್ಳುವ ಅತ್ಯಂತ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಜೀವಮಾನದಲ್ಲೊ ಭಾರತ ಅತ್ಯಂತ ವಿಶೇಷ ಕ್ಷಣವಿದು. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀ ರಾಮ್,” ಎಂದು ವೆಂಕಟೇಶ್ ಪ್ರಸಾದ್ ಎಕ್ಸ್ (ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Ayodhya: ಜ 22 ಕ್ಕೆ ಅಯೋಧ್ಯೆಯಲ್ಲಿ ರಾಮ ವಿಗ್ರಹದ ಪ್ರಾಣಪ್ರತಿಷ್ಠೆ, ಆರಂಭವಾಗಿದೆ ಅಕ್ಷತೆ ಹಂಚಿಕೆ; ಇಲ್ಲಿದೆ ಕಾರ್ಯಕ್ರಮ ವಿವರ
ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಅಂತಿಮ ಹಂತದ ಸಿದ್ಧತೆಗಳು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಜನವರಿ 16ರಿಂದಲೇ ಪೂಜಾ ವಿಧಿವಿಧಾನಗಳು ಆರಂಭಗೊಳ್ಳಲಿದೆ. ಅಯೋಧ್ಯೆಯಲ್ಲಿ ಏಳು ದಿನಗಳ ಕಾಲ ಧಾರ್ಮಿಕ ಪ್ರಕ್ರಿಯೆ ನಡೆಯಲಿದೆ.
ಜನವರಿ 22ರಂದು ಶ್ರೀ ರಾಮಲಲಾನ ಮಗುವಿನ ರೂಪದ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಶ್ರೀರಾಮನು ತನ್ನ ಭವ್ಯ ದೇವಾಲದ ಗರ್ಭಗುಡಿಯಲ್ಲಿ ವಿರಾಜಮಾನನಾಗಲಿದ್ದಾನೆ.
ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅಯೋಧ್ಯೆಯಲ್ಲಿ ಗಂಧಾಕ್ಷತೆಯನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಅಕ್ಷತೆ ವಿತರಿಸಲಾಗುತ್ತಿದೆ. ಅಕ್ಕಿಯೊಂದಿಗೆ ಅರಿಶಿನ ಹಾಗೂ ತುಪ್ಪ ಬೆರೆಸಿ ಅಕ್ಷತೆಯನ್ನು ತಯಾರಿಸಲಾಗಿದೆ. ಜನವರಿ 15ರವರೆಗೆ ಅಕ್ಷತೆಯನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ | Ayodhya Ram mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಕರ್ನಾಟಕ ಕಲಾವಿದ ಅರುಣ್ ಕೆತ್ತಿದ ರಾಮನ ವಿಗ್ರಹ ಆಯ್ಕೆ: ಯಾರು ಈ ಅರುಣ್ ಯೋಗಿರಾಜ್
ರಾಮಮಂದಿರದ ಚಿತ್ರವಿರುವ ಕಾಗದದ ಪೌಚ್‌ನಲ್ಲಿ ಟ್ರಸ್ಟ್‌ನ ಲೋಗೊ ಹಾಗೂ ಅಯೋಧ್ಯೆ ರಾಮ ಮಂದಿರದ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಶೀರ್ಷಿಕೆ ಹೊಂದಿರುವ ಹಾಗೂ ದೇವಾಲಯ ರಚನೆಯ ವಿವರ ಇರುವ ಕರಪತ್ರವನ್ನು ಜನರಿಗೆ ಹಂಚಲಾಗುತ್ತಿದೆ.
ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾರತ ಹಾಗೂ ವಿವಿಧ ದೇಶಗಳಲ್ಲಿ ಆಹ್ವಾನಿತರಾಗಿರುವ 7,000 ಅತಿಥಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಸಮಾರಂಭದಲ್ಲಿ ಸುಮಾರು 7ಲಕ್ಷಕ್ಕೂ ಅಧಿಕ ಭಕ್ತರು ಅಯೋಧ್ಯೆಗೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ವಿಡಿಯೋ ನೋಡಿ | DK Shivakumar:ರಾಜಕೀಯ ಭವಿಷ್ಯವನ್ನ ಅತಂತ್ರಗೊಳಿಸಲು ನನ್ನ ವಿರುದ್ಧ ಷಡ್ಯಂತ್ರ;ಸಿಬಿಐ ನೊಟೀಸ್ ಗೆ ಡಿಕೆ ಪ್ರತಿಕ್ರಿಯೆ