ಕನ್ನಡ ಸುದ್ದಿ  /  ಕ್ರಿಕೆಟ್  /  ಪಾತ್ರಗಳು ಬೇರೆ, ಗುರಿ ಒಂದೇ; ಭಾರತ ಕ್ರಿಕೆಟ್ ತಂಡದ ನೂತನ ಹೆಡ್​ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ

ಪಾತ್ರಗಳು ಬೇರೆ, ಗುರಿ ಒಂದೇ; ಭಾರತ ಕ್ರಿಕೆಟ್ ತಂಡದ ನೂತನ ಹೆಡ್​ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ

Gautam Gambhir: ರಾಹುಲ್ ದ್ರಾವಿಡ್ ಅವರಿಂದ ತೆರವಾದ ಭಾರತ ಕ್ರಿಕೆಟ್ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವರು ಹೊಸದಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಅವರ ಮೊದಲ ಪ್ರಕ್ರಿಯೆ ಏನು?

ಪಾತ್ರಗಳು ಬೇರೆ, ಗುರಿ ಒಂದೇ; ಭಾರತ ಕ್ರಿಕೆಟ್ ತಂಡದ ನೂತನ ಹೆಡ್​ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ
ಪಾತ್ರಗಳು ಬೇರೆ, ಗುರಿ ಒಂದೇ; ಭಾರತ ಕ್ರಿಕೆಟ್ ತಂಡದ ನೂತನ ಹೆಡ್​ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ

ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್ (Rahul Dravid) ಯುಗ ಅಂತ್ಯಗೊಂಡ ಬೆನ್ನಲ್ಲೇ ಭಾರತೀಯ ಕ್ರಿಕೆಟ್​ ತಂಡದ (Indian Cricket Team) ಹೊಸ ಯುಗ ಆರಂಭವಾಗಿದೆ. ಟಿ20 ವಿಶ್ವಕಪ್ 2024 (T20 World Cup 2024) ಗೆದ್ದ ಬಳಿಕ ದ್ರಾವಿಡ್ ಅವರಿಂದ ತೆರವಾದ ಹೆಡ್​ಕೋಚ್ ಹುದ್ದೆಗೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ನೇಮಕಗೊಂಡಿದ್ದಾರೆ. ಇದು ಕೇವಲ ಔಪಚಾರಿಕ ಘೋಷಣೆ ಆಗಿದೆ. ಏಕೆಂದರೆ, ಗಂಭೀರ್ ಅವರೇ ಕೋಚ್​ ಆಗುತ್ತಾರೆ ಎಂಬುದು ಮೊದಲೇ ಜಗಜ್ಜಾಹೀರಾಗಿತ್ತು. 42 ವರ್ಷದ ಗೌತಿ ಭಾರತ ತಂಡದ ಉನ್ನತ ಹುದ್ದೆ ಅಲಂಕರಿಸಿದ್ದರ ಕುರಿತು ಪ್ರತಿಕ್ರಿಯಿಸಿದ್ದಾರೆ.

ಒಂದು ಕಾಲದಲ್ಲಿ ಆಟಗಾರನಾಗಿ ಭಾರತ ತಂಡಕ್ಕೆ ಅಪಾರ ಯಶಸ್ಸು ತಂದುಕೊಟ್ಟಿದ್ದ ಗಂಭೀರ್ ಕೋಚ್ ಆಗಿ ಸಲ್ಲಿಸಲು ಸನ್ನದ್ಧರಾಗಿದ್ದಾರೆ. ವಿಭಿನ್ನ ಪಾತ್ರ ಹೊಂದಿದ್ದರೂ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡುವುದೇ ನಮ್ಮ ಗುರಿ ಎಂದು ಗಂಭೀರ್ (ಜುಲೈ 9) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ತ್ರಿವರ್ಣ ಧ್ವಜ ಹಂಚಿಕೊಂಡಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗೌತಿ, ಕೋಚ್ ಆಗಿ ಸೇವೆ ಸಲ್ಲಿಸಿಲ್ಲ. 2022 ಮತ್ತು 2023ರಲ್ಲಿ ಎಲ್​ಎಸ್​ಜಿ ಮೆಂಟರ್​ ಆಗಿದ್ದರು.

ಗೌತಮ್ ಗಂಭೀರ್ ಪ್ರತಿಕ್ರಿಯೆ

ಅಧಿಕೃತವಾಗಿ ಟೀಮ್ ಇಂಡಿಯಾ ಹೆಡ್​ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್​ ಪ್ರತಿಕ್ರಿಯಿಸಿದ್ದಾರೆ. ಭಾರತ ದೇಶ ನನ್ನ ಗುರುತಾಗಿದೆ. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ಜೀವನದ ಅತಿ ದೊಡ್ಡ ಗೌರವ. ವಿಭಿನ್ನ ಜವಾಬ್ದಾರಿಯೊಂದಿಗೆ ತಂಡಕ್ಕೆ ಮರಳುತ್ತಿರುವುದಕ್ಕೆ ನನಗೆ ಗೌರವ ಇದೆ. ಆದರೆ ಎಂದಿನಂತೆ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡುವುದು ನನ್ನ ಗುರಿ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಗಂಭೀರ್ ಅವರ ಅಧಿಕಾರವಧಿ ಮೂರುವರೆ ವರ್ಷ. 2027ರಲ್ಲಿ ತನ್ನ ಅಧಿಕಾರ ಕೊನೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಭಾರತ ತಂಡವು 140 ಕೋಟಿ ಭಾರತೀಯರ ಕನಸುಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದೆ. ಕನಸುಗಳನ್ನು ನನಸಾಗಿಸಲು ನಾನು ನನ್ನ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತೇನೆ ಎಂದು ಗಂಭೀರ್ ಬರೆದಿದ್ದಾರೆ. ಜಯ್​ ಶಾ ಅವರು ಮಾಡಿದ್ದ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದ ಗಂಭೀರ್, ನಿರಂತರ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು ಜಯ್ ಶಾ ಭಾಯ್. ಈ ಪ್ರಯಾಣದ ಭಾಗವಾಗಿರುವುದಕ್ಕೆ ಹರ್ಷವಾಗುತ್ತಿದೆ. ಇಡೀ ತಂಡವು ಒಟ್ಟಾಗಿ ಶ್ರೇಷ್ಠತೆ ಮತ್ತು ಹೊಸ ಎತ್ತರಕ್ಕಾಗಿ ಶ್ರಮಿಸುತ್ತದೆ ಎಂದಿದ್ದಾರೆ.

ಗಂಭೀರ್ ನೀಡುವ ಮೂರುವರೆ ವರ್ಷಗಳ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 5 ಐಸಿಸಿ ಟೂರ್ನಿಗಳನ್ನು ಆಡಬೇಕಿದೆ. ಎಲ್ಲ ಐಸಿಸಿ ಟೂರ್ನಿಗಳನ್ನೂ ಗೆಲ್ಲುವ ಗುರಿ ಹಾಕಿದ್ದಾರೆ ಗಂಭೀರ್​. ಗಂಭೀರ್ ಅವರು ವಾರ್ಷಿಕ 12 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. 

ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿಜೀವನ

ಗೌತಮ್ ಗಂಭೀರ್ 2003ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆಗೈದರು. 2004ರಲ್ಲಿ ಟೆಸ್ಟ್​ ಮತ್ತು 2007ರಲ್ಲಿ ಟಿ20ಐ ಕ್ರಿಕೆಟ್​ಗೆ ಡೆಬ್ಯೂ ಮಾಡಿದರು. ಒಡಿಐನಲ್ಲಿ 147 ಪಂದ್ಯಗಳನ್ನಾಡಿದ್ದು 34 ಅರ್ಧಶತಕ, 11 ಶತಕ ಸಹಿತ 5238 ರನ್ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 58 ಪಂದ್ಯಗಳ ಪೈಕಿ 104 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದಿದ್ದು 22 ಅರ್ಧಶತಕ, 9 ಶತಕ ಸಹಿತ 4154 ರನ್ ಸಿಡಿಸಿದ್ದಾರೆ. ಇನ್ನು 37 ಟಿ20ಐ ಪಂದ್ಯಗಳಲ್ಲಿ 7 ಅರ್ಧಶತಕಗಳ ಸಹಿತ 932 ರನ್ ಸಿಡಿಸಿದ್ದಾರೆ. ಅವರು ಭಾರತದ ಪರ ಕೊನೆಯದಾಗಿ ಆಡಿದ್ದು 2016ರಲ್ಲಿ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ