ಲಂಡನ್ನ ಇಸ್ಕಾನ್ ದೇವಸ್ಥಾನದಲ್ಲಿ ಅನುಷ್ಕಾ ಶರ್ಮಾ ಜೊತೆ ಸಂಕೀರ್ತನೆಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ, ಹಳೆಯ ವಿಡಿಯೋ ವೈರಲ್
Virat Kohli: ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಲಂಡನ್ನ ಇಸ್ಕಾನ್ ಟೆಂಪಲ್ನಲ್ಲಿ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ.
ಟಿ20 ವಿಶ್ವಕಪ್ 2024 ವಿಜಯಯಾತ್ರೆ ಮುಗಿಸಿದ ಅದೇ ರಾತ್ರಿ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅವರು ಲಂಡನ್ಗೆ ಪ್ರಯಾಣ ಬೆಳೆಸಿದರು. ಇದರೊಂದಿಗೆ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ವಿರಾಟ್ ಲಂಡನ್ನಲ್ಲೇ ನೆಲೆಸಿದ್ದಾರೆ ಎಂದು ಸುದ್ದಿ ಹರಡಿತ್ತು. ಇದರ ನಡುವೆಯೇ ಲಂಡನ್ನಲ್ಲಿರುವ ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿದ್ದು, ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದಾರೆ. ವಿರುಷ್ಕಾ ಜೋಡಿಯ ಈ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋ ಈಗಿನದ್ದಲ್ಲ!
ಲಂಡನ್ನಲ್ಲಿ ಜರುಗಿದ ಕೃಷ್ಣ ದಾಸ್ ಎಂಬವರ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ಗಣ್ಯರು ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರೆ, ನನಗೆ ಸ್ಫೂರ್ತಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ಲಂಡನ್ನಲ್ಲಿ ಇಸ್ಕಾನ್ ಮಂದಿರದಲ್ಲಿ ಕೀರ್ತನೆ ಕೇಳುತ್ತಿದ್ದಾರೆಂದು ನೆಟ್ಟಿಗರೊಬ್ಬರು ಎಕ್ಸ್ ಖಾತೆಯಲ್ಲಿ ಪೋಸ್ಟ್ನೊಂದಿಗೆ ಕ್ಯಾಪ್ಶನ್ ಬರೆದಿದ್ದಾರೆ. ಇದು ಹಳೆಯ ವಿಡಿಯೋ ಆಗಿದೆ.
ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ದಿನಗಳಲ್ಲಿ ದೈವವನ್ನು ನಂಬುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಆಧ್ಯಾತ್ಮಕದ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಕಳೆದ 2 ವರ್ಷಗಳಿಂದ ದೇವಾಲಯಗಳಿಗೆ ಸತತ ಭೇಟಿ ಕೊಡುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೂ ಭೇಟಿ ಕೊಡುತ್ತಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಫೋಟೋವನ್ನು ತನ್ನ ವಾಲ್ಪೇಪರ್ನಲ್ಲಿ ಕೊಹ್ಲಿ ಇಟ್ಟುಕೊಂಡಿದ್ದಾರೆ. ಈ ಚಿತ್ರ ವೈರಲ್ ಆಗಿತ್ತು.
ಲಂಡನ್ನಲ್ಲೇ ನೆಲೆಸಿದ್ದಾರಾ ವಿರಾಟ್ ದಂಪತಿ?
ಇಂಟರ್ನ್ಯಾಷನಲ್ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಸ್ವಲ್ಪ ದಿನಗಳ ಕಾಲ ಯಾರ ಕಣ್ಣಿಗೂ ಕಾಣಿಸುವುದಿಲ್ಲ ಎಂದು ಆರ್ಸಿಬಿ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಹೇಳಿದ್ದರು. ಅದರಂತೆ ವಿದಾಯದ ನಂತರ ಭಾರತ ತೊರೆದು ಕುಟುಂಬ ಸಮೇತರ ಲಂಡನ್ನಲ್ಲಿ ವಾಸಿಸುವ ಸಾಧ್ಯತೆ ಇದೆ. ಅಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಅಕಾಯ್ಗೆ ಜನ್ಮ ನೀಡಿದಾಗಿನಿಂದಲೂ ವಿರುಷ್ಕಾ ದಂಪತಿ ಲಂಡನ್ನಲ್ಲೇ ಉಳಿದಿದೆ.
ಯುನೈಟೆಡ್ ಕಿಂಗ್ಡಮ್ ಕಂಪನಿಯೊಂದಕ್ಕೆ ವಿರಾಟ್ ಮತ್ತು ಅನುಷ್ಕಾ ನಿರ್ದೇಶಕರಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ದಂಪತಿಗಳು ಮ್ಯಾಜಿಕ್ ಲ್ಯಾಂಪ್ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಆಗಸ್ಟ್ 1, 2022ರಂದು ಆರಂಭಗೊಂಡ ಸಲಹಾ ಸಂಸ್ಥೆ ಇದಾಗಿದೆ. ಕಂಪನಿಯ ಅಧಿಕೃತ ಕಚೇರಿ ಯುಕೆಯ ವೆಸ್ಟ್ ಯಾರ್ಕ್ಶೈರ್ನಲ್ಲಿ ಇದೆ.
ಟಿ20 ಕ್ರಿಕೆಟ್ಗೆ ಕೊಹ್ಲಿ ಗುಡ್ಬೈ
ಕೊಹ್ಲಿ ಅವರು ಟಿ20 ವಿಶ್ವಕಪ್ ಟೂರ್ನಿ ಗೆದ್ದ ನಂತರ ಇಂಟರ್ನ್ಯಾಷನಲ್ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ ಭರ್ಜರಿ 76 ರನ್ ಸಿಡಿಸಿದ್ದ ಕೊಹ್ಲಿ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯದ ನಂತರ ಮಾತನಾಡಿ ಇದು ನನ್ನ ಕೊನೆಯ ಟಿ20 ವಿಶ್ವಕಪ್. ಟ್ರೋಫಿ ಗೆಲ್ಲಲು ಬಯಸಿದ್ದೆ, ಅದು ಇದು ಸಾಕಾರಾಗೊಂಡಿದೆ. ಅದ್ಭುತ ದಿನದಂದು ನಿವೃತ್ತಿ ಹೇಳುವ ಸೌಭಾಗ್ಯ ನನಗೆ ಒದಗಿ ಬಂದಿದ್ದು ನಿಜಕ್ಕೂ ಸಂತಸ ತಂದಿದೆ ಎಂದಿದ್ದರು. ಕೊಹ್ಲಿ 125 ಟಿ20ಐ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.