ಕನ್ನಡ ಸುದ್ದಿ  /  ಕ್ರಿಕೆಟ್  /  ಉಡುಪಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ದಂಪತಿ ಭೇಟಿ; ನಿರರ್ಗಳವಾಗಿ ತುಳುವಿನಲ್ಲೇ ಮಾತಾಡಿದ ದೇವಿಶಾ ಶೆಟ್ಟಿ

ಉಡುಪಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ದಂಪತಿ ಭೇಟಿ; ನಿರರ್ಗಳವಾಗಿ ತುಳುವಿನಲ್ಲೇ ಮಾತಾಡಿದ ದೇವಿಶಾ ಶೆಟ್ಟಿ

Suryakumar Yadav: ಭಾರತ ತಂಡದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿ ಉಡುಪಿಯ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಉಡುಪಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ದಂಪತಿ ಭೇಟಿ; ನಿರರ್ಗಳವಾಗಿ ತುಳುವಿನಲ್ಲೇ ಮಾತಾಡಿದ ದೇವಿಶಾ ಶೆಟ್ಟಿ
ಉಡುಪಿ ಕಾಪು ಮಾರಿಗುಡಿಗೆ ಸೂರ್ಯಕುಮಾರ್ ದಂಪತಿ ಭೇಟಿ; ನಿರರ್ಗಳವಾಗಿ ತುಳುವಿನಲ್ಲೇ ಮಾತಾಡಿದ ದೇವಿಶಾ ಶೆಟ್ಟಿ

ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯನ್ನು ಗೆದ್ದುಕೊಂಡ ಬೆನ್ನಲ್ಲೇ ಟೀಮ್ ಇಂಡಿಯಾ ಸ್ಟೈಲಿಶ್ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಅಂದರೆ ದೇವಿಶಾ ಶೆಟ್ಟಿ ಅವರು ಮಂಗಳೂರಿನವರು. ಸೂರ್ಯ ಮತ್ತು ದೇವಿಶಾ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯಿತು.

ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸ್ಟಾರ್ ಕ್ರಿಕೆಟರ್‌ಗೆ ಭವ್ಯ ಸ್ವಾಗತ ಕೋರಲಾಯಿತು. ಕಾಪುವಿನಲ್ಲಿ (ಇಳಕಲ್ ಶಿಲೆ) ಹೊಸದಾಗಿ ನಿರ್ಮಾಣವಾಗುತ್ತಿರುವ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ನಿರ್ಮಾಣದ ಕುರಿತು ಹಾಗೂ ಕೆತ್ತನೆಯ ಶಿಲ್ಪಕಲೆಯ ಕುರಿತು ಸೂರ್ಯ ದಂಪತಿ ಮಾಹಿತಿ ಪಡೆದರು. ಈ ದೇವಸ್ಥಾನ ನಿರ್ಮಿಸಲು 40 ಕೋಟಿ ರೂ ವೆಚ್ಚ ಮಾಡಲಾಗಿದೆ. ಉಚ್ಚಂಗಿ ಗುಡಿ, ಗರ್ಭಗುಡಿ, ಸುತ್ತುಪೌಳಿ ಕಾಮಗಾರಿ ಶೇಕಡಾ 90 ಭಾಗ ಪೂರ್ಣವಾಗಿದೆ.

ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾತಾಡಿದ ಸೂರ್ಯಕುಮಾರ್, ಕಾಪು ಮಾರಿಯಮ್ಮನ ದರ್ಶನ ಪಡೆದ ಬಳಿಕ ಮನಸ್ಸಿಗೆ ನೆಮ್ಮದಿ ಕೊಟ್ಟಿತು. ವಿಶೇಷ ಪೂಜೆ ಸಲ್ಲಿಸಿದ್ದೆವು. ಜೀರ್ಣೋದ್ಧಾರಕ್ಕೆ ಭೇಟಿ ನೀಡಬೇಕು ಎಂಬ ಆಸೆ ಇದೆ. ಅವಕಾಶ ಸಿಕ್ಕರೆ ಖಂಡಿತ ಬರುವೆ. ವಿಶ್ವಕಪ್​ ವಿಜಯಯಾತ್ರೆ ನೋಡಿ ಬಹಳ ಸಂತೋಷವಾಯಿತು. ಕಾಪುವಿನಲ್ಲೂ ಸಹ ಜನರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತುಳುವಿನಲ್ಲೇ ಮಾತಾಡಿದ ದೇವಿಶಾ ಶೆಟ್ಟಿ

ಪತ್ನಿ ದೇವಿಶಾ ಅವರು ತುಳುವಿನಲ್ಲೇ ಮಾತನಾಡಿ ಗಮನ ಸೆಳೆದರು. ಕಾಪು ಮಾರಿಗುಡಿಗೆ ಬಂದ್ದದ್ದು ಮನಸ್ಸಿಗೆ ತುಂಬಾ ಖುಷಿಕೊಟ್ಟಿದೆ. 5 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದೆವು. ಮತ್ತೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಆಸೆ ಇತ್ತು. ಯಾವುದೇ ಟೂರ್ನಿ ಅಥವಾ ಸರಣಿ ಇಲ್ಲದೇ ಇದ್ದರೆ ದೇವಸ್ಥಾನ ಜೀರ್ಣೋದ್ಧಾರಕ್ಕೆ ಬರುತ್ತೇವೆ. ಕಾಪು ಮಾರಿಯಮ್ಮನನ್ನು ನೋಡಲು ಗಂಡನನ್ನೂ ಕರೆತಂದಿದ್ದೇನೆ. ದೇವಿಯಲ್ಲಿ ಏನೆಲ್ಲಾ ಪ್ರಾರ್ಥಿಸಿದ್ದೇನೆ ಎಂದು ಹೇಳಲ್ಲ ಎಂದರು.

ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪ ಇತ್ತು. ದೇವರಿಗೆ ಸಲ್ಲಿಸಿದ ಕಾಣಿಕೆ ಹೇಳಿಕೊಳ್ಳಲು ಇಷ್ಟವಿಲ್ಲ. ಭಾರತ ತಂಡವನ್ನು ಪ್ರತಿನಿಧಿಸಬೇಕು ಮತ್ತು ವಿಶ್ವಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟರ್‌ಗಳ ಕನಸು. ಕನಸು ಸಾಕಾರಗೊಂಡಿರುವುದಕ್ಕೆ ಖುಷಿ ಇದೆ. ಇಂತಹ ಹಲವು ಕನಸುಗಳನ್ನು ಕಂಡು ಮುಂದೆ ಸಾಗಬೇಕಿದೆ ಎಂದರು. ಭೇಟಿಯ ವೇಳೆ ಮುಖ ಮಂಟಪದ ಚಿನ್ನದ ಸಿಂಹಾಸನ ಹಾಗೂ ಕಲ್ಲಿನ ಕಂಬಗಳಿಗೆ ಚಿನ್ನಾಭರಣ ದಾನ ಮಾಡಿದರು. ಕೊನೆಯಲ್ಲಿ ಸೂರ್ಯಕುಮಾರ್ ದಂಪತಿಗೆ ದೇವಸ್ಥಾನ ಆಡಳಿತ ಮಂಡಳಿ ಸನ್ಮಾನ ಮಾಡಿತು.

ಕಾಪು ಶಾಸಕ ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ರವಿ ಸುಂದರ ಶೆಟ್ಟಿ, ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಆಡಳಿತಾಧಿಕಾರಿ ರವಿಕಿರಣ್, ಹಣಕಾಸು ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಾಡಿಕೆ. , ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಮನೋಹರ್ ಎಸ್.ಶೆಟ್ಟಿ ಮತ್ತು ಮಾಧವ್ ಆರ್.ಪಾಲನ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.