ಕನ್ನಡ ಸುದ್ದಿ  /  Cricket  /  Gujarat Titans Vs Mumbai Indians Weather Report And Pitch Report Of Ahmedabad Stadium Ipl 2024 Match 5 Gt Vs Mi Prs

ಮಾಜಿ ತಂಡದ ಸವಾಲಿಗೆ ಹಾರ್ದಿಕ್ ಸಿದ್ಧ; ಮುಂಬೈ-ಗುಜರಾತ್ ಪಂದ್ಯದ ಪಿಚ್ ಮತ್ತು ಹವಾಮಾನ ವರದಿ ವಿವರ ಇಲ್ಲಿದೆ

Gujarat Titans vs Mumbai Indians: ಐಪಿಎಲ್​ನ ಐದನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನವು ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಮುಂಬೈ-ಗುಜರಾತ್ ಪಂದ್ಯದ ಪಿಚ್ ಮತ್ತು ಹವಾಮಾನ ವರದಿ ವಿವರ ಇಲ್ಲಿದೆ
ಮುಂಬೈ-ಗುಜರಾತ್ ಪಂದ್ಯದ ಪಿಚ್ ಮತ್ತು ಹವಾಮಾನ ವರದಿ ವಿವರ ಇಲ್ಲಿದೆ

2024ರ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಐಪಿಎಲ್​ನ ಐದನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ - ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವದ ಅತಿದೊಡ್ಡ ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣವು ಈ ಮದಗಜಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. ನೂತನ ನಾಯಕರೊಂದಿಗೆ ಉಭಯ ತಂಡಗಳು ಯಾವ ರೀತಿಯ ಪ್ರದರ್ಶನ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ.

2022ರಲ್ಲಿ ಮುಂಬೈ ತೊರೆದು ಗುಜರಾತ್ ಸೇರಿದ್ದ ಹಾರ್ದಿಕ್​ ಪಾಂಡ್ಯ ಮತ್ತೆ ಅಂಬಾನಿ ಬ್ರಿಗೇಡ್ ಸೇರಿದ್ದಲ್ಲದೆ, ನಾಯಕತ್ವವನ್ನೂ ಪಡೆದಿದ್ದಾರೆ. ಮತ್ತೊಂದು ವಿಶೇಷ ತಮ್ಮ ಮಾಜಿ ತಂಡದ ಎದುರೇ ಐಪಿಎಲ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷ. 2022 ಮತ್ತು 2023ರಲ್ಲಿ ಗುಜರಾತ್ ಫ್ರಾಂಚೈಸಿಯನ್ನು ಎರಡು ಬಾರಿ ಫೈನಲ್​ಗೇರಿಸಿದ್ದರು ಹಾರ್ದಿಕ್. ಈಗ ಟೈಟಾನ್ಸ್ ನಾಯಕನಾಗಿ ಶುಭ್ಮನ್ ಗಿಲ್ ನೇಮಕವಾಗಿದ್ದು, ತಮ್ಮ ಮಾಜಿ ನಾಯಕನ ವಿರುದ್ಧವೇ ಸೆಣಸಾಟ ನಡೆಸಲು ಸಿದ್ಧರಾಗಿದ್ದಾರೆ.

ಕಳೆದ ವರ್ಷ ಉಭಯ ತಂಡಗಳ ಪ್ರದರ್ಶನ

ಕಳೆದ ಐಪಿಎಲ್​ನಲ್ಲಿ ಗುಜರಾತ್ ಮತ್ತು ಮುಂಬೈ ತಂಡಗಳು ಪ್ಲೇಆಫ್ ಪ್ರವೇಶಿಸಿದ್ದವು. ಎಲಿಮಿನೇಟರ್​ ಜಯಿಸಿ ಎರಡನೇ ಕ್ವಾಲಿಫೈಯರ್ ಪ್ರವೇಶಿಸಿದ್ದ ಮುಂಬೈ, ಗುಜರಾತ್ ಎದುರು ಕಾದಾಟ ನಡೆಸಿತ್ತು. ಆದರೆ ಅಂದು ಎಂಐ ಸೋಲಿಸಿದ ಜಿಟಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೋತು ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. 2023ರ ಐಪಿಎಲ್​ ಅಂಕಪಟ್ಟಿಯಲ್ಲಿ ಜಿಟಿ ಅಗ್ರಸ್ಥಾನ ಪಡೆದಿದ್ದರೆ, ಮುಂಬೈ 4ನೇ ಸ್ಥಾನ ಪಡೆದಿತ್ತು.

ಉಭಯ ತಂಡಗಳ ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 04

ಗುಜರಾತ್ ಗೆಲುವು - 02

ಮುಂಬೈ ಗೆಲುವು - 02

ಎರಡು ತಂಡಗಳ ನಡುವೆ ಗರಿಷ್ಠ ಸ್ಕೋರ್​ - 233 (ಜಿಟಿ)

ಎರಡು ತಂಡಗಳ ನಡುವೆ ಕನಿಷ್ಠ ಸ್ಕೋರ್​ - 152 (ಎಂಐ)

ಪಿಚ್ ರಿಪೋರ್ಟ್

ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದ ಪಿಚ್‌ ಬ್ಯಾಟರ್‌ಗಳಿಗೆ ಸ್ವರ್ಗತಾಣ. ಟಾಸ್‌ ಗೆದ್ದ ತಂಡವೇ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಮೈದಾನದ ಹುಲ್ಲು ಹಾಸಿನಲ್ಲಿ ತೇವಾಂಶ ಹೆಚ್ಚು ಕಾಣಸಿಗುವುದಿಲ್ಲ. ಸ್ಪಿನ್ನರ್‌ಗಳು ಸಹ ಇಲ್ಲಿ ಯಶಸ್ಸು ಕಾಣಲಿದ್ದಾರೆ. ಉಭಯ ತಂಡಗಳಲ್ಲಿ ಪರಿಣತ ಸ್ಪಿನ್ನರ್‌ಗಳಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ 28 ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ ಚೇಸಿಂಗ್​ ತಂಡಗಳು 15 ಬಾರಿ ಗೆದ್ದಿವೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು 13 ಬಾರಿ ಗೆದ್ದಿವೆ.

ಹವಾಮಾನ ವರದಿ

ಭಾನುವಾರದಂದು ತಾಪಮಾನವು 33 ಡಿಗ್ರಿ ತಲುಪುತ್ತದೆ ಎಂದು ಮುನ್ಸೂಚಿಸಲಾಗಿದೆ. ಆರ್ದ್ರತೆಯ ಮಟ್ಟ ಸುಮಾರು 19 ರಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಮಳೆಯ ಆತಂಕ ಇಲ್ಲ. ಈ ಹೈವೋಲ್ಟೇಜ್ ಕದನವನ್ನು ಪ್ರೇಕ್ಷಕರು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್​), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್​, ವಿಜಯ್ ಶಂಕರ್​, ರಶೀದ್ ಖಾನ್, ಕಾರ್ತಿಕ್ ತ್ಯಾಗಿ, ಉಮೇಶ್ ಯಾದವ್, ಸಾಯಿ ಕಿಶೋರ್​.

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ (ನಾಯಕ), ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ, ಲೂಕ್ ವುಡ್.