ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಸಂಘಟಿತ ದಾಳಿಗೆ ಬೆದರಿದ ಬಾಂಗ್ಲಾದೇಶ; ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭರ್ಜರಿ ಜಯ

ಭಾರತದ ಸಂಘಟಿತ ದಾಳಿಗೆ ಬೆದರಿದ ಬಾಂಗ್ಲಾದೇಶ; ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭರ್ಜರಿ ಜಯ

India vs Bangladesh: ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಭಾರತ ಕ್ರಿಕೆಟ್‌ ತಂಡ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ, ಆಸೀಸ್‌ ಹಾಗೂ ಭಾರತ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಲಿವೆ. ಇದೇ ವೇಳೆ ಅಫ್ಘನ್‌ ಹಾಗೂ ಬಾಂಗ್ಲಾ ಟೂರ್ನಿಯಿಂದ ಹೊರಬೀಳಲಿದೆ.

ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ
ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ (Surjeet Yadav)

ಟಿ20 ವಿಶ್ವಕಪ್ 2024ರ ಸೂಪರ್ 8 ಮುಖಾಮುಖಿಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 50 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಭಾರತ, ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲಿಂಗ್‌ನಲ್ಲಿ ಕುಲ್ದೀಪ್‌ ಯಾದವ್‌ ಮೂರು ಪ್ರಮುಖ ವಿಕೆಟ್‌ ಕಿತ್ತರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಹಾರ್ದಿಕ್ ಪಾಂಡ್ಯ ಅಜೇಯ ಅರ್ಧಶತಕ ಹಾಗೂ ಆಟಗಾರರ ಸಂಘಟಿತ ಪ್ರದರ್ಶನದ ನೆರವಿಂದ 5 ವಿಕೆಟ್‌ ನಷ್ಟಕ್ಕೆ 196 ರನ್‌ ಕಲೆ ಹಾಕಿತು. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಈವರೆಗೆ ನಡೆದಿರುವ ಟಿ20 ಪಂದ್ಯಗಳಲ್ಲಿ ಇದು ಗರಿಷ್ಠ ಸ್ಕೋರ್‌ ಆಗಿದೆ. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಬಾಂಗ್ಲಾದೇಶ 8 ವಿಕೆಟ್‌ ಕಳೆದುಕೊಂಡು ಕೇವಲ 146 ರನ್‌ ಮಾತ್ರ ಗಳಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ಕೊಟ್ಟರು. ಆದರೆ, 11 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದ್ದ ರೋಹಿತ್ ಶರ್ಮಾ ಮೊದಲನೆಯವರಾಗಿ ಔಟಾದರು. ಅಷ್ಟರಲ್ಲೇ ಇವರಿಬ್ಬರ ನಡುವೆ 22 ಎಸೆತಗಳಲ್ಲಿ 39 ರನ್‌ಗಳ ಜೊತೆಯಾಟ ಬಂದಿತ್ತು.

ಟ್ರೆಂಡಿಂಗ್​ ಸುದ್ದಿ

ಹಾರ್ದಿಕ್‌ ಪಾಂಡ್ಯ ಅರ್ಧಶತಕ

ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ರಿಷಬ್ ಪಂತ್ ಕೂಡಾ ವೇಗವಾಗಿ ಬ್ಯಾಟ್‌ ಬೀಸಿದರು. ಈ ನಡುವೆ ಆರನೇ ಓವರ್‌ನ ಅಂತಿಮ ಎಸೆತದಲ್ಲಿ ಟೀಮ್ ಇಂಡಿಯಾ ಐವತ್ತು ರನ್ ಪೂರೈಸಿತು. ಒಂಬತ್ತನೇ ಓವರ್‌ನಲ್ಲಿ ಭಾರತ ಎರಡನೇ ವಿಕೆಟ್ ಕಳೆದುಕೊಂಡಿತು. ಬಲಗೈ ವೇಗಿ ತಂಜಿಮ್ ಹಸನ್ ಸಾಕಿಬ್ ಎಸೆತದಲ್ಲಿ ವಿರಾಟ್ ಕೊಹ್ಲಿ 37 ರನ್ (28 ಎಸೆತ, 1 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಅದೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ (2 ಎಸೆತ, 1 ಸಿಕ್ಸರ್) ಕೂಡಾ ಒಂದು ಸಿಕ್ಸರ್‌ ಸಿಡಿಸಿ ಔಟಾದರು. 8.3 ಓವರ್ ವೇಳೆಗೆ ಭಾರತ 77 ರನ್‌ ವೇಳೆಗೆ 3 ವಿಕೆಟ್‌ ಕಳೆದುಕೊಂಡಿತು.

ಲೆಗ್ ಸ್ಪಿನ್ನರ್ ರಿಶಾದ್ ಹೊಸೈನ್ ಅವರ ಬೌಲಿಂಗ್‌ನಲ್ಲಿ ಪಂತ್ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಮೊತ್ತವನ್ನು 100 ರನ್‌ ಗಡಿ ದಾಟಿಸಿದರು. 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 36 ರನ್ ಗಳಿಸಿದ ಪಂತ್ 12ನೇ ಓವರ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು. ಶಿವಂ ದುಬೆ ಮೂರು ಸಿಕ್ಸರ್‌ ಸಹಿತ 24 ಎಸೆತಗಳಲ್ಲಿ 34 ರನ್ ಪೇರಿಸಿದರು. ಸ್ಫೋಟಕ ಇನ್ನಿಂಗ್ಸ್‌ ಆಡಿದ ಹಾರ್ದಿಕ್ ಪಾಂಡ್ಯ ಕೇವಲ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 50 ರನ್ ಗಳಿಸಿದರು.

ಬಾಂಗ್ಲಾದೇಶ ಪರ ತಂಜಿಮ್ ಹಸನ್ ಸಾಕಿಬ್ ಮತ್ತು ರಿಶಾದ್ ಹೊಸೇನ್ ತಲಾ ಎರಡು ವಿಕೆಟ್ ಪಡೆದರು. ಶಕೀಬ್ ಅಲ್ ಹಸನ್ ಒಂದು ವಿಕೆಟ್ ಪಡೆದರು.‌

ಬಾಂಗ್ಲಾದೇಶ ಚೇಸಿಂಗ್

ಭಾರತ ನೀಡಿದ ಬೃಹತ್‌ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಲಿಟ್ಟನ್‌ ದಾಸ್‌ ಹಾಗೂ ತಂಜಿದ್‌ ಹಸನ್‌ 35 ರನ್‌ ಪೇರಿಸಿದರು. ಹಾರ್ದಿಕ್‌ ಪಾಂಡ್ಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ದಾಸ್‌, 13 ರನ್‌ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್‌ ನೀಡಿ ಔಟಾದರು. ಶಾಂಟೊ ಜೊತೆ ಜೊತೆಯಾಟ ಮುಂದುವರೆಸಿದ ತಂಜಿದ್‌, 29 ರನ್‌ ಗಳಿಸಿದ್ದಾಗ ಕುಲ್ದೀಪ್‌ ಯಾದವ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಟೂರ್ನಿಯಲ್ಲಿ ಬಾಂಗ್ಲಾ ಪರ ಉತ್ತಮ ಪ್ರದರ್ಶನ ನೀಡಿದ್ದ ತೌಹಿದ್‌ 4 ರನ್‌ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಅನುಭವಿ ಆಟಗಾರ ಶಕೀಬ್‌ ಅಲ್‌ ಹಸನ್‌ ಕೂಡಾ 11 ರನ್‌ ಗಳಿಸಿ ನಿರ್ಗಮಿಸಿದರು. ಕುಲ್ದೀಪ್‌ ಸತತ 3 ವಿಕೆಟ್‌ ಪಡೆದು ಮಿಂಚಿದರು.

ಮೂರು ಭರ್ಜರಿ ಸಿಕ್ಸರ್‌ ಸಹಿತ ಉತ್ತಮ ಲಯದಲ್ಲಿದ್ದ ಶಾಂಟೊ 40 ರನ್‌ ಗಳಿಸಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಅರ್ಷದೀಪ್‌ಗ್‌ ಜಾಕೆರ್‌ ಅಲಿ ಸುಲಭ ತುತ್ತಾದರು. 3 ಸಿಕ್ಸರ್‌ ಸಹಿತ ಸಿಡಿಯುವ ಪ್ರಯತ್ನ ಮಾಡಿದ ರಿಷದ್‌, 24 ರನ್‌ ಗಳಿಸಿದ್ದಾಗ ಬುಮ್ರಾ ಹೆಣೆದೆ ಬಲೆಯಲ್ಲಿ ಬಿದ್ದರು. ಅಷ್ಟರಲ್ಲೇ ಬಾಂಗ್ಲಾದೇಶದ ಗೆಲುವಿನ ಎಲ್ಲಾ ಅವಕಾಶಗಳು ಕಮರಿದವು.

ಭಾರತದ ಪರ ಕುಲ್ದೀಪ್‌ ಯಾದವ್‌ 3 ವಿಕೆಟ್‌ ಪಡೆದರೆ, ಬುಮ್ರಾ ಮತ್ತು ಅರ್ಷದೀಪ್‌ ತಲಾ 2 ವಿಕೆಟ್‌ ಕಿತ್ತರು. 

ಗೆಲುವಿನೊಂದಿಗೆ ಭಾರತ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿದೆ. ನಾಳಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆದ್ದರೆ, ಆಸೀಸ್‌ ಜೊತೆಗೆ ಭಾರತ ಕೂಡಾ ಅಧಿಕೃತವಾಗಿ ಸೆಮೀಸ್‌ ಪ್ರವೇಶಿಸಲಿದೆ.