ಕನ್ನಡ ಸುದ್ದಿ  /  ಕ್ರಿಕೆಟ್  /  ವಿಚ್ಛೇದನ ವದಂತಿ ನಡುವೆ ವಿದೇಶಕ್ಕೆ ಹಾರಿದ ಹಾರ್ದಿಕ್ ಪಾಂಡ್ಯ; ಅಲ್ಲಿಂದಲೇ ಭಾರತ ಟಿ20 ವಿಶ್ವಕಪ್ ತಂಡ ಸೇರ್ಪಡೆ

ವಿಚ್ಛೇದನ ವದಂತಿ ನಡುವೆ ವಿದೇಶಕ್ಕೆ ಹಾರಿದ ಹಾರ್ದಿಕ್ ಪಾಂಡ್ಯ; ಅಲ್ಲಿಂದಲೇ ಭಾರತ ಟಿ20 ವಿಶ್ವಕಪ್ ತಂಡ ಸೇರ್ಪಡೆ

ವಿಚ್ಛೇದನ ವದಂತಿ ನಡುವೆ ನ್ಯೂಯಾರ್ಕ್‌ಗೆ ಹಾರಿರುವ ಹಾರ್ದಿಕ್ ಪಾಂಡ್ಯ, ಅಲ್ಲಿಂದ ಯಾವಾಗ ಅಮೆರಿಕ ಪ್ರಯಾಣಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ನ್ಯೂಯಾರ್ಕ್‌ನಲ್ಲಿ ಭಾರತದ ಮೊದಲ ಅಭ್ಯಾಸ ಅವಧಿಗೂ ಮುಂಚಿತವಾಗಿ ತಂಡ ಸೇರುವ ಮಾಹಿತಿ ಸಿಕ್ಕಿದೆ.

ವಿಚ್ಛೇದನ ವದಂತಿ ನಡುವೆ ವಿದೇಶಕ್ಕೆ ಹಾರಿದ ಹಾರ್ದಿಕ್ ಪಾಂಡ್ಯ
ವಿಚ್ಛೇದನ ವದಂತಿ ನಡುವೆ ವಿದೇಶಕ್ಕೆ ಹಾರಿದ ಹಾರ್ದಿಕ್ ಪಾಂಡ್ಯ (PTI)

ಜೂನ್ 2ರಿಂದ ಆರಂಭವಾಗುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಲು, ಈಗಾಗಲೇ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಮೊದಲ ಬ್ಯಾಚ್‌ನ ತಂಡವು ಅಮೆರಿಕ ತಲುಪಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ಮೊದಲ ಹಂತದ ತಂಡ ಈಗಾಗಲೇ ನ್ಯೂಯಾರ್ಕ್‌ನಲ್ಲಿ ಲ್ಯಾಂಡ್‌ ಆಗಿದೆ. ತಂಡದೊಂದಿಗೆ ಕೆಲ ಪ್ರಮುಖ ಆಟಗಾರರು ಗೈರಾಗಿದ್ದರು. ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಹೀನಾಯ ಸೋಲು ಅನುಭವಿಸಿದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅಮೆರಿಕಕ್ಕೆ ಪ್ರಯಾಣಿಸಿಲ್ಲ.

ಟ್ರೆಂಡಿಂಗ್​ ಸುದ್ದಿ

ಹಾರ್ದಿಕ್‌ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಸಂಬಂಧದಲ್ಲಿ ಬಿರುಕು ಬಿದ್ದಿರುವ ಕುರಿತು ವರದಿಗಳಿವೆ. ಈ ನಡುವೆ ಇವರ ನಡುವೆ ವಿಚ್ಛೇದನ ಆಗಿರುವ ಕುರಿತು ವದಂತಿಗಳಿವೆ. ಅದಕ್ಕೆ ಪುಷ್ಠಿ ನೀಡುವ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಈ ನಡುವೆ ಹಾರ್ದಿಕ್ ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಐಪಿಎಲ್‌ನಲ್ಲಿ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಟೂರ್ನಿಗೆ ವಿದಾಯ ಹೇಳಿತ್ತು. ಈ ನಡುವೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್‌ ಉಪನಾಯಕನಾಗಿ ಆಡಲಿದ್ದಾರೆ. ಹೀಗಾಗಿ ಸದ್ಯ ವಿದೇಶದಲ್ಲಿರುವ ಪಾಂಡ್ಯ, ಅಲ್ಲಿಂದಲೇ ನೇರವಾಗಿ ನ್ಯೂಯಾರ್ಕ್‌ಗೆ ಪ್ರಯಾಣಿಸಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ಆದರೆ, ಹಾರ್ದಿಕ್ ಅಮೆರಿಕಕ್ಕೆ ಯಾವಾಗ ಹಾರುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ನ್ಯೂಯಾರ್ಕ್‌ನಲ್ಲಿ ಭಾರತದ ಮೊದಲ ಅಭ್ಯಾಸ ಅವಧಿಗೂ ಮುನ್ನ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಾರೆ ಎಂದು ವರದಿ ದೃಢಪಡಿಸಿದೆ.‌

ಐವರು ಆಟಗಾರರು ಜೊತೆಗೆ ಪ್ರಯಾಣ

ಈ ನಡುವೆ ಮೇ 25ರಂದು ಚೆನ್ನೈನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಆಡಿದ್ದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ ಚಹಾಲ್ ಮತ್ತು ಆವೇಶ್ ಖಾನ್, ಐಪಿಎಲ್ ಫೈನಲ್ ಆಡಿದ ಕೋಲ್ಕತಾ ನೈಟ್ ರೈಡರ್ಸ್‌ ಸದಸ್ಯ ರಿಂಕು ಸಿಂಗ್ ಅವರೊಂದಿಗೆ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

ಈಗಾಗಲೇ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್,‌ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರಿಸರ್ವ್‌ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಖಲೀಲ್ ಅಹ್ಮದ್ ಶನಿವಾರ ರಾತ್ರಿ ಮುಂಬೈನಿಂದ ಹೊರಟು ಭಾನುವಾರ ಸಂಜೆ ನ್ಯೂಯಾರ್ಕ್ ತಲುಪಿದ್ದಾರೆ.

ವಿರಾಟ್‌ ಕೊಹ್ಲಿ ಎಲ್ಲಿದ್ದಾರೆ

ಅತ್ತ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್‌ ಕೊಹ್ಲಿ ಕೂಡಾ ಅಮೆರಿಕಕ್ಕೆ ಹಾರಿಲ್ಲ. ತಮ್ಮ ವಿರಾಮದ ಅವಧಿಯನ್ನು ವಿಸ್ತರಿಸಲು ಬಿಸಿಸಿಐನಿಂದ ಅನುಮತಿ ಪಡೆದಿರುವ ಕೊಹ್ಲಿ ಟೂರ್ನಿಯ ಆರಂಭಕ್ಕೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಭಾರತ ಅಭ್ಯಾಸ ಪಂದ್ಯವನ್ನು ಆಡಲಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್‌ ಆದ ಭಾರತ, ಈ ಬಾರಿ ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ