MCG Pitch Report: ಎಂಸಿಜಿ ಪಿಚ್‌ನಿಂದ ಏನನ್ನು ನಿರೀಕ್ಷಿಸಬಹುದು; 4ನೇ ಟೆಸ್ಟ್ಗೂ ಮುನ್ನವೇ ಬಹಿರಂಗಪಡಿಸಿದ ಕ್ಯುರೇಟರ್
India vs Australia 4th Test: ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಿಚ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಸಂಬಂಧಿಸಿ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಪಿಚ್ ಕ್ಯುರೇಟರ್ ಬಹಿರಂಗಪಡಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಆರಂಭಗೊಳ್ಳಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಮೆಗಾ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಪ್ರಸ್ತುತ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಮೆಲ್ಬೋರ್ನ್ ಟೆಸ್ಟ್ ಗೆದ್ದವರು ಮುನ್ನಡೆ ಪಡೆಯಲಿದ್ದಾರೆ. ಅಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಗೆಲುವು ಅನಿವಾರ್ಯವಾಗಿದೆ. ಆದರೆ, ಬಾಕ್ಸಿಂಗ್ ಡೇ ಟೆಸ್ಟ್ಗೂ ಮುನ್ನ ಪಿಚ್ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಪಿಚ್ ಪರಿಸ್ಥಿತಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಕ್ಯುರೇಟರ್ ಮ್ಯಾಟ್ ಪೇಜ್ ಅವರು, ಡಿಸೆಂಬರ್ 26ರಂದು ಉಭಯ ತಂಡಗಳು ಆಡುವ ಪಿಚ್ ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಪಿಚ್ ಬ್ಯಾಟರ್ಗಳಿಗಿಂತ ಬೌಲರ್ಗಳಿಗೆ ಹೆಚ್ಚು ನೆರವಾಗಲಿದೆ ಎಂದು ಕ್ಯುರೇಟರ್ ಹೇಳಿದ್ದಾರೆ. ಟೆಸ್ಟ್ ಪಂದ್ಯಗಳ ರೋಚಕತೆ ಹೆಚ್ಚಿಸಲು, ತಂಡಗಳ ನಡುವೆ ಸ್ಪರ್ಧೆ ಉಂಟಾಗಲು ಪಿಚ್ ಸಮತಟ್ಟಾಗಿರಲಿದೆ. ಕೊಂಚ ಹುಲ್ಲು ಇರಲಿದೆ. ಹೊಸ ಚೆಂಡಿನೊಂದಿಗೆ ಬೌಲರ್ಗಳು ಪರಿಣಾಮಕಾರಿ ಪ್ರದರ್ಶನ ನೀಡಿದರೆ, ಚೆಂಡು ಹಳೆಯದಾದಂತೆ ಬ್ಯಾಟರ್ಸ್ ಮೇಲುಗೈ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಪಿಚ್ ಬೌಲರ್ಸ್ಗೆ ನೆರವಾಗುವುದೇ ನಮ್ಮ ಆದ್ಯತೆ
ಎಂಸಿಜಿ ಮೇಲ್ಮೈ ಸಮತಟ್ಟಾಗಿದೆ ಎಂದು ಪರಿಗಣಿಸಿದ ನಂತರ ಬೌಲರ್ ಸ್ನೇಹಿ ಪಿಚ್ಗಳಿಗೆ ಬದಲಿಸುವ ನಿರ್ಧಾರವನ್ನು 2017ರಲ್ಲಿ ತೆಗೆದುಕೊಂಡೆವು ಎಂದು ಹೇಳಿದ್ದಾರೆ. 2017ರಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೆವು. ಅಂದು ಎಂಸಿಜಿ ಅಧಿಕಾರಿಗಳ ನಿರ್ಧಾರ ಒಂದೇ ಆಗಿತ್ತು. ತಂಡಗಳ ಪೈಪೋಟಿ ಹೆಚ್ಚಿರಬೇಕು. ವಿಕೆಟ್ ಬೇಟೆಗೆ ಸಂಬಂಧಿಸಿ ಹೆಚ್ಚಿನ ಆದ್ಯತೆ ಇರಬೇಕು. ಬ್ಯಾಟರ್ಗಳಿಂತ ಬೌಲರ್ಗಳು ಕೊಂಚ ಪ್ರಾಬಲ್ಯ ಸಾಧಿಸಬೇಕು ಎಂಬುದು ನಮ್ಮ ನಿರ್ಧಾರವಾಗಿತ್ತು. ಅದಕ್ಕಾಗಿ ಈ ಪಿಚ್ ಸಿದ್ದಪಡಿಸಿ ಬೌಲರ್ಗಳಿಗೆ ನೆರವಾಗುವಂತೆ ನೋಡಿದ್ದೇವೆ ಎಂದಿದ್ದಾರೆ.
ವೇಗಿಗಳು ಈ ಪಿಚ್ನಲ್ಲಿ ಬೌಲಿಂಗ್ ಮಾಡಲು ಉತ್ಸುಕರಾಗುತ್ತಾರೆ. ಆದರೆ, ಪರ್ತ್ ಮತ್ತು ಬ್ರಿಸ್ಬೇನ್ ಪಿಚ್ಗಳಲ್ಲಿ ಆಗುವಷ್ಟು ವೇಗ, ಇಲ್ಲಿ ಇರುವುದಿಲ್ಲ. ಆಸ್ಟ್ರೇಲಿಯಾದ ಪ್ರತಿ ಮೈದಾನದ ಪಿಚ್ ವಿಭಿನ್ನವಾಗಿದೆ. ಅದರಂತೆ ಮೆಲ್ಬೋರ್ನ್ ಪಿಚ್ ಸಹ ವಿಭಿನ್ನ. ಇಲ್ಲಿನ ಮೇಲ್ಮೈ ಸ್ಪಿನ್ನರ್ಗಳಿಗೆ ನೆರವಾಗುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ. ಕಳೆದ 4 - 5 ವರ್ಷಗಳಲ್ಲಿ ಇಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳನ್ನು ಗಮನಿಸಿದ್ದೀರಿ ಎಂದಾದರೆ ನಿಮಗೊಂದು ಉತ್ತರ ಸಿಗಬಹುದು. ಇದು ಸ್ಪಿನ್‌ಗಿಂತ ಹೆಚ್ಚು ಸೀಮ್ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.
ಮೂರು ಪಂದ್ಯಗಳ ವಿವರ
ಮೊದಲ ಟೆಸ್ಟ್ ಪಂದ್ಯ (ಪರ್ತ್): ಭಾರತ ತಂಡಕ್ಕೆ 295 ರನ್ಗಳ ಜಯ
ಎರಡನೇ ಟೆಸ್ಟ್ ಪಂದ್ಯ (ಅಡಿಲೇಡ್): ಆಸ್ಟ್ರೇಲಿಯಾ ತಂಡಕ್ಕೆ 10 ವಿಕೆಟ್ಗಳ ಗೆಲುವು
ಮೂರನೇ ಟೆಸ್ಟ್ ಪಂದ್ಯ (ಗಬ್ಬಾ): ಪಂದ್ಯ ಡ್ರಾನಲ್ಲಿ ಅಂತ್ಯ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಅಂಕಿ-ಅಂಶ
- ಒಟ್ಟು ಪಂದ್ಯಗಳು - 117
- ಮೊದಲು ಬ್ಯಾಟಿಂಗ್ ಗೆಲುವು - 57
- ಮೊದಲು ಬೌಲಿಂಗ್ ಸೋಲು - 42
- ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ - 307
- ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ - 312
- ಮೂರನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ - 252
- ನಾಲ್ಕನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ - 172
- ಗರಿಷ್ಠ ಮೊತ್ತ - 624/8 (142 ಓವರ್) ಆಸ್ಟ್ರೇಲಿಯಾ vs ಪಾಕಿಸ್ತಾನ
- ಕಡಿಮೆ ಮೊತ್ತ - 36/10 ( 23.2 ಓವರ್) ಸೌತ್ ಆಫ್ರಿಕಾ vs ಆಸ್ಟ್ರೇಲಿಯಾ
- ಅತ್ಯಧಿಕ ಸ್ಕೋರ್ ಚೇಸಿಂಗ್ - 332/7 (159.5 ಓವರ್) ಇಂಗ್ಲೆಂಡ್ vs ಆಸ್ಟ್ರೇಲಿಯಾ
- ಕಡಿಮೆ ಸ್ಕೋರ್ ಡಿಫೆಂಡ್ - 83/10 (48.4 ಓವರ್) ಆಸ್ಟ್ರೇಲಿಯಾ vs ಭಾರತ