ಡ್ರಾನಲ್ಲಿ ಮುಗಿಯಬೇಕಿದ್ದ ಪಂದ್ಯ ಗೆದ್ದುಕೊಂಡ ಟೀಮ್ ಇಂಡಿಯಾ; ಬಾಂಗ್ಲಾದೇಶ ವಿರುದ್ಧ ಜಯಿಸಿ ದಾಖಲೆ ಬರೆದ ಭಾರತ
India vs Bangladesh 2nd Test: ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿ ಕ್ಲೀನ್ ಸ್ವೀಪ್ ಸಾಧಿಸಿತು.
ಕಾನ್ಪುರದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ, 2-0 ಅಂತರದಲ್ಲಿ ಸರಣಿ ಗೆದ್ದು ಸಂಭ್ರಮಿಸಿತು. ಡ್ರಾ ಮಾಡುವ ಅವಕಾಶ ತನ್ನ ಮುಂದಿದ್ದರೂ ಬ್ಯಾಟರ್ಗಳ ವೈಫಲ್ಯದಿಂದ ದಿನದಾಟ ಮುಗಿಯುವ ಮುನ್ನವೇ ಶರಣಾಯಿತು. ಮೊದಲ ದಿನದಾಟದಂದು 35 ಓವರ್ಗಳು ನಡೆದ ನಂತರ ಮಳೆ ಅಡ್ಡಿಪಡಿಸಿತು. ಎರಡು ಮತ್ತು 3ನೇ ದಿನವೂ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಉಳಿದ ಎರಡು ದಿನಗಳಲ್ಲಿ ಪಂದ್ಯ ಡ್ರಾ ಆಗುತ್ತದೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ಭಾರತ ತಂಡವು ಆಕ್ರಮಣಕಾರಿ ಆಟ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿತು. ಆ ಮೂಲಕ ಡ್ರಾನಲ್ಲಿ ಮುಗಿಯಬೇಕಿದ್ದ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆಯಿತು.
ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕೆಂಬ ಪಣತೊಟ್ಟು ಟೆಸ್ಟ್ ಕ್ರಿಕೆಟ್ನಲ್ಲಿ ಟಿ20 ಶೈಲಿಯ ಬ್ಯಾಟಿಂಗ್ ನಡೆಸಿದ ಭಾರತ, ಬಾಂಗ್ಲಾದೇಶ ಬೌಲರ್ಗಳಿಗೆ ಹಿಗ್ಗಾಮುಗ್ಗಾ ಬೆಂಡೆತ್ತಿತ್ತು. ಎರಡು ದಿನಗಳಲ್ಲಿ ರಿಸಲ್ಟ್ ಬರುತ್ತದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮಳೆ, ಒದ್ದೆಯಾದ ಔಟ್‌ಫೀಲ್ಡ್, ಕಳಪೆ ಒಳಚರಂಡಿ ವ್ಯವಸ್ಥೆ ಕಾರಣ 235 ಓವರ್ಸ್ ಕಳೆದುಹೋದರೂ ಭಾರತದ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಮತ್ತು ಬೊಂಬಾಟ್ ಬೌಲಿಂಗ್ನೊಂದಿಗೆ ಟೆಸ್ಟ್ ಕ್ರಿಕೆಟ್ನ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿಬಿಟ್ಟಿತು. ಮಳೆ ನಿಂತ ನಂತರ ಬ್ಯಾಟಿಂಗ್ ಮುಂದುವರೆಸಿದ್ದ ಬಾಂಗ್ಲಾ, ಪ್ರಥಮ ಇನ್ನಿಂಗ್ಸ್ನಲ್ಲಿ 233 ರನ್ಗಳಿಗೆ ಆಲೌಟ್ ಆಯಿತು. ಆದರೆ, ಜಯಿಸಲೇಬೇಕು ಎಂದು ಪಣತೊಟ್ಟು ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತಕ್ಕೆ ರೋಹಿತ್ ಮತ್ತು ಜೈಸ್ವಾಲ್ ವಿನಾಶಕಾರಿ ಆರಂಭ ಒದಗಿಸಿದರು.
ಈ ಪರಿಣಾಮ ವೇಗ ಅರ್ಧಶತಕ, ವೇಗದ ಶತಕ, ವೇಗದ 150, ವೇಗದ 200, ವೇಗದ 250 ರನ್ ಗಳಿಸಿದ ವಿಶ್ವದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಜೈಸ್ವಾಲ್-ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿದರೆ, ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಪರಿಣಾಮ ಭಾರತ ಕೇವಲ 34.4 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದರೊಂದಿಗೆ 52 ರನ್ಗಳ ಮುನ್ನಡೆ ಪಡೆಯಿತು. 52 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಡ್ರಾ ಸಾಧಿಸುವ ಲೆಕ್ಕಾಚಾರ ಹಾಕಿತ್ತು. ಆದರೆ ಟೀಮ್ ಇಂಡಿಯಾ ಬೌಲರ್ಗಳ ಅಬ್ಬರಕ್ಕೆ ಕೇವಲ 147 ರನ್ಗಳಿಗೆ ಆಲೌಟ್ ಆಗಿ 95 ರನ್ಗಳ ಗುರಿ ನೀಡಿತು. ಆದರೆ, ಭಾರತ ಟೀ ವಿರಾಮಕ್ಕೂ ಮುನ್ನವೇ 7 ವಿಕೆಟ್ಗಳಿಂದ ಗೆದ್ದು ಬೀಗಿತು. 17.2 ಓವರ್ಗಳಲ್ಲಿ ಜಯದ ನಗೆ ಬೀರಿತು.
ಜೈಸ್ವಾಲ್ ಎರಡು ಅರ್ಧಶತಕ, ಬೌಲರ್ಗಳು ಅಬ್ಬರ
ಮೊದಲ ಇನ್ನಿಂಗ್ಸ್ನಲ್ಲಿ 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್, ಎರಡನೇ ಇನ್ನಿಂಗ್ಸ್ನಲ್ಲೂ ಫಿಫ್ಟಿ ಬಾರಿಸಿದರು. ಕ್ರಮವಾಗಿ 72 ಮತ್ತು 51 ರನ್ ಸಿಡಿಸಿದರು. ಆ ಮೂಲಕ ದಾಖಲೆ ಬರೆದರು. ಮತ್ತೊಂದೆಡೆ ಬೌಲರ್ಗಳು ಸಹ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬುಮ್ರಾ 3 ವಿಕೆಟ್ ಪಡೆದರೆ, ಸಿರಾಜ್, ಅಶ್ವಿನ್, ಆಕಾಶ್ ದೀಪ್ ತಲಾ 2 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ನಲ್ಲಿ ಬುಮ್ರಾ, ಅಶ್ವಿನ್, ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ಮೊದಲ ಟೆಸ್ಟ್ನಲ್ಲಿ 280 ರನ್ಗಳಿಂದ ಗೆದ್ದಿದ್ದ ಭಾರತ, 2ನೇ ಟೆಸ್ಟ್ನಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.
ಭಾರತ ತಂಡ ದಾಖಲೆ
ಈ ಗೆಲುವಿನೊಂದಿಗೆ ಭಾರತ ದಾಖಲೆ ಬರೆಯಿತು. ತವರಿನಲ್ಲಿ ಸತತ18 ಟೆಸ್ಟ್ ಸರಣಿಗೆ ಮುತ್ತಿಕ್ಕಿತು. ಅಲ್ಲದೆ, ಭಾರತಕ್ಕೆ ಇದು 180ನೇ ಟೆಸ್ಟ್ ಪಂದ್ಯದ ಗೆಲುವಾಗಿದೆ. 2013ರಿಂದ ಭಾರತ ತವರಿನಲ್ಲಿ ಟೆಸ್ಟ್ ಸರಣಿ ಸೋತೇ ಇಲ್ಲ. ಆ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯ ಗೆದ್ದ ತಂಡ ಎನಿಸಿದೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 179 ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಇದು ಬಾಂಗ್ಲಾದೇಶದ ವಿರುದ್ಧ ಆಡಿದ್ದ 15 ಪಂದ್ಯಗಳಲ್ಲಿ ಭಾರತಕ್ಕೆ 13ನೇ ಗೆಲುವಾಗಿದೆ. ಉಳಿದ ಎರಡು ಪಂದ್ಯಗಳು ಡ್ರಾಗೊಂಡಿವೆ.