ಶತಕದೊಂದಿಗೆ 37ನೇ ಬಾರಿ 5 ವಿಕೆಟ್ ಕಿತ್ತ ಆರ್ ಅಶ್ವಿನ್; ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 280 ರನ್‌ ಗೆಲುವು-ravichandran ashwin century and 37th five wicket haul help india to win vs bangladesh in first test ind vs ban jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶತಕದೊಂದಿಗೆ 37ನೇ ಬಾರಿ 5 ವಿಕೆಟ್ ಕಿತ್ತ ಆರ್ ಅಶ್ವಿನ್; ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 280 ರನ್‌ ಗೆಲುವು

ಶತಕದೊಂದಿಗೆ 37ನೇ ಬಾರಿ 5 ವಿಕೆಟ್ ಕಿತ್ತ ಆರ್ ಅಶ್ವಿನ್; ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 280 ರನ್‌ ಗೆಲುವು

India vs Bangladesh 1st Test: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಅನುಭವಿ ಸ್ಪಿನ್ನರ್‌ ಆರ್‌ ಅಶ್ವಿನ್‌ ಶತಕ ಹಾಗೂ 37ನೇ ಬಾರಿ 5 ವಿಕೆಟ್‌ ಗೊಂಚಲು ಸಾಧನೆಯೊಂದಿಗೆ ಬಾಂಗ್ಲಾ ಸುಲಭ ತುತ್ತಾಯಿತು.

ಆರ್ ಅಶ್ವಿನ್ ದಾಖಲೆ; ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 280 ರನ್‌ ಗೆಲುವು
ಆರ್ ಅಶ್ವಿನ್ ದಾಖಲೆ; ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ 280 ರನ್‌ ಗೆಲುವು (AP)

ಭಾರತ ವಿರುದ್ಧದ ಚೊಚ್ಚಲ ಟೆಸ್ಟ್‌ ಗೆಲುವಿಗಾಗಿ ಬಾಂಗ್ಲಾದೇಶ ಇನ್ನೂ ಕಾಯಬೇಕಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 280 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಆಕರ್ಷಕ ಶತಕ ಹಾಗೂ ಕೊನೆಯ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ನೆರವಿಂದ ರೋಹಿತ್‌ ಶರ್ಮಾ ಬಳಗವು ಭರ್ಜರಿ ಗೆಲುವು ಒಲಿಸಿಕೊಂಡಿದೆ. ಅನುಭವಿ ಸ್ಪಿನ್ನರ್‌ ಅಶ್ವಿನ್‌, ತವರು ಅಭಿಮಾನಿಗಳ ಮುಂದೆ ಅಮೋಘ ಪ್ರದರ್ಶನ ನೀಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮೊದಲ ಪಂದ್ಯದಲ್ಲಿ ಅಮೋಘ ಗೆಲುವಿನೊಂದಿಗೆ, ಎರಡು ಪಂದ್ಯಗಳ ಸರಣಿಯಲ್ಲಿ ಭಾರತವು ಈಗ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ವಿಶೇಷ ಸಾಧನೆ ಮಾಡಿದೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 92 ವರ್ಷಗಳ ಸುದೀರ್ಘ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 580 ಟೆಸ್ಟ್‌ ಪಂದ್ಯ ಆಡಿರುವ ಭಾರತ 178 ಪಂದ್ಯಗಳಲ್ಲಿ ಸೋತಿದೆ. ಇಂದಿನ ಗೆಲುವಿನೊಂದಿಗೆ 179 ಪಂದ್ಯಗಳಲ್ಲಿ ಗೆದ್ದಿದೆ. ಸೋಲಿಗಿಂತ ಹೆಚ್ಚು ಗೆಲುವು ಬಂದಿದ್ದು ಇದೇ ಮೊದಲು.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 376 ರನ್‌ ಗಳಿಸಿ ಆಲೌಟ್‌ ಆಯ್ತು. ಅಶ್ವಿನ್‌ ಅಮೋಘ ಶತಕದೊಂದಿಗೆ ರವೀಂದ್ರ ಜಡೇಜಾ ಜೊತೆಗೆ ಆಕರ್ಷಕ ಜೊತೆಯಾಟವಾಡಿದರು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಬುಮ್ರಾ ಮ್ಯಾಜಿಕ್‌ಗೆ ನಲುಗಿ 149 ರನ್‌ಗಳಿಗೆ ಆಲೌಟ್‌ ಆಯ್ತು. ಎರಡನೇ ಇನ್ನಿಂಗ್ಸ್‌ ಆಡಿದ ಭಾರತವು ಶುಭ್ಮನ್‌ ಗಿಲ್‌ ಶತಕದ ನೆರವಿಂದ 4 ವಿಕೆಟ್‌ ಕಳೆದುಕೊಂಡು 287 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಒಲಿಯದ ಗೆಲುವು

ಕೊನೆಯ ಇನ್ನಿಂಗ್ಸ್‌ನಲ್ಲಿ ಬೆಟ್ಟದಂಥಾ ಗುರಿ ನೋಡಿ ಹೌಹಾರಿದ್ದ ಬಾಂಗ್ಲಾದೇಶ, ಗೆಲುವಿಗೆ ಸಾಧ್ಯವಿದ್ದ ಎಲ್ಲಾ ಪ್ರಯತ್ನಗಳನ್ನು ಮಾಡಿತು. ಮೂರನೇ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದ್ದ ಬಾಂಗ್ಲಾದೇಶ, ಇಂದು ನಡೆದ ನಾಲ್ಕನೇ ದಿನದಾಟದಲ್ಲಿ 234 ರನ್ ಗಳಿಗೆ ಆಲೌಟ್ ಆಯ್ತು.

ರವೀಂದ್ರ ಜಡೇಜಾ 58 ರನ್‌ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾದೇಶ ಪರ ಗರಿಷ್ಠ ರನ್‌ ಗಳಿಸಿದವರು ನಾಯಕ ನಜ್ಮುಲ್ ಹುಸೇನ್ ಶಾಂಟೊ. 127 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 82 ರನ್‌ ಪೇರಿಸಿದರು. ಶಾಂಟೊ ಮತ್ತು ಶಕೀಬ್ ಅಲ್ ಹಸನ್ (25) ಐದನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವಾಡಿದರು. ಅದರ ಹೊರತಾಗಿ ಎಲ್ಲೂ ತಂಡಕ್ಕೆ ಉತ್ತಮ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಆರ್‌ ಅಶ್ವಿನ್‌ 37ನೇ ಬಾರಿಗೆ ಐದು ವಿಕೆಟ್ ಗೊಂಚಲು

ಸ್ಟಾರ್ ಆಫ್ ಸ್ಪಿನ್ನರ್ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 37ನೇ ಬಾರಿಗೆ ಐದು ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾದ ದಿಗ್ಗಜ ಶೇನ್ ವಾರ್ನ್ ದಾಖಲೆಯನ್ನು ಸರಿಗಟ್ಟಿದರು. ಅಲ್ಲದೆ ನ್ಯೂಜಿಲೆಂಡ್ ದಿಗ್ಗಜ ರಿಚರ್ಡ್ ಹ್ಯಾಡ್ಲೀ ಅವರ 36 ವಿಕೆಟ್‌ಗಳ ದಾಖಲೆ ಮುರಿದರು. ಅತಿ ಹೆಚ್ಚು ಬಾರಿ 5 ವಿಕೆಟ್‌ ಕಬಳಿಸಿದ ಸಾಧನೆ ಲಂಕಾ ದಿಗ್ಗಜ ಮುತ್ತಯ್ಯ ಮುರಳೀಧರನ್‌ (67) ಹೆಸರಲ್ಲಿದೆ. ಮತ್ತೊಂದೆಡೆ ಟೆಸ್ಟ್ ಪಂದ್ಯದಲ್ಲಿ ಶತಕದ ಜೊತೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವುದು ಇದು ನಾಲ್ಕನೇ ಬಾರಿ.

mysore-dasara_Entry_Point