ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ತುಂಬಾ ನಗುತ್ತಿದ್ದಾರೆ; ಖುಷಿಯಾಗಿರುವಂತೆ ನಟಿಸುತ್ತಿದ್ದಾರೆ ಎಂದ ಕೆವಿನ್ ಪೀಟರ್ಸನ್

ಹಾರ್ದಿಕ್ ಪಾಂಡ್ಯ ತುಂಬಾ ನಗುತ್ತಿದ್ದಾರೆ; ಖುಷಿಯಾಗಿರುವಂತೆ ನಟಿಸುತ್ತಿದ್ದಾರೆ ಎಂದ ಕೆವಿನ್ ಪೀಟರ್ಸನ್

Hardik Pandya: ಅಭಿಮಾನಿಗಳ ನಡೆಯಿಂದಾಗಿ ಹಾರ್ದಿಕ್ ಪಾಂಡ್ಯ ತುಂಬಾ ಬೇಸರಗೊಂಡಿದ್ದಾರೆ. ಆದರೆ ಅವರು ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ನಗುತ್ತಿರುವಂತೆ ನಾಟಕ ಮಾಡುತ್ತಿದ್ದಾರೆ ಎಂದು ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.‌

ಹಾರ್ದಿಕ್ ಪಾಂಡ್ಯ ಖುಷಿಯಾಗಿರುವಂತೆ ನಟಿಸುತ್ತಿದ್ದಾರೆ ಎಂದ ಕೆವಿನ್ ಪೀಟರ್ಸನ್
ಹಾರ್ದಿಕ್ ಪಾಂಡ್ಯ ಖುಷಿಯಾಗಿರುವಂತೆ ನಟಿಸುತ್ತಿದ್ದಾರೆ ಎಂದ ಕೆವಿನ್ ಪೀಟರ್ಸನ್ (PTI)

ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಇತ್ತೀಚಿನ ದಿನಗಳಲ್ಲಿ ತುಂಬಾ ನಗುತ್ತಿದ್ದಾರೆ. ತಾನು ಸಂತೋಷದಿಂದ ಇರುವಂತೆ ನಟಿಸುತ್ತಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಪ್ರಸಕ್ತ ಆವೃತ್ತಿಯ ಆರಂಭಕ್ಕೂ ಮುನ್ನ, ರೋಹಿತ್‌ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಳಿಸಿ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸಲಾಯ್ತು. ಆ ಬಳಿಕ ಹಾರ್ದಿಕ್‌ ವಿರುದ್ಧ ಹಿಟ್‌ಮ್ಯಾನ್‌ ಅಭಿಮಾನಿಗಳು ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇದರಿಂದ ಹಾರ್ದಿಕ್‌ ಮಾನಸಿಕವಾಗಿ ಬೇಸರಗೊಡಿರುವುದು ಅವರ ನಡವಳಿಕೆಯಿಂದಲೇ ಸ್ಪಷ್ಟವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಸಕ್ತ ಆವೃತ್ತಿಯ ಆರಂಭದಿಂದಲೂ, ಮುಂಬೈ ತಂಡದ ಪಂದ್ಯಗಳ ವೇಳೆ ಹಾರ್ದಿಕ್‌ ವಿರುದ್ಧ ಎಲ್ಲೆಡೆ ಘೋಷಣೆಗಳು ಕೇಳಿ ಬಂದಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಂತೂ ರೋಹಿತ್‌ ಶರ್ಮಾ ಪರ ಘೋಷಣೆಗಳು ಮಾತ್ರವೇ ಮೊಳಗಿದವು. ಭಾನುವಾರ ನಡೆದ ಸಿಎಸ್‌ಕೆ ಮತ್ತು ಮುಂಬೈ ತಂಡಗಳ ನಡುವಿನ ಪಂದ್ಯದ ಸಮಯದಲ್ಲೂ ಇದೇ ಪುನರಾವರ್ತನೆಯಾಯ್ತು. ಟಾಸ್ ಪ್ರಕ್ರಿಯೆಯಿಂದ ಹಿಡಿದು, ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿ ಅವರ ಕೈಯಲ್ಲಿ ಸಿಕ್ಸರ್ ಹೊಡೆಸಿಕೊಳ್ಳುತ್ತಿರುವಾಗಲೂ ಅಭಿಮಾನಿಗಳ ವರ್ತನೆ ಹಾಗೆಯೇ ಮುಂದುವರೆದಿತ್ತು.

ಪಾಂಡ್ಯ ವಿರುದ್ಧ ಅಭಿಮಾನಿಗಳ ವರ್ತನೆಗೆ ಹಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಥವರಲ್ಲಿ ಕೆವಿನ್‌ ಪೀಟರ್ಸನ್‌ ಅಗ್ರಪಂಕ್ತಿಯಲ್ಲಿದ್ದಾರೆ. ಭಾನುವಾರ ಕೂಡಾ ಸಿಎಸ್‌ಕೆ ವಿರುದ್ಧದ ಪಂದ್ಯದ ಸಮಯದಲ್ಲಿ ಫ್ಯಾನ್ಸ್‌ ನಡೆಯನ್ನು ಪೀಟರ್ಸನ್‌ ಖಂಡಿಸಿದ್ದಾರೆ. ಅಭಿಮಾನಿಗಳ ನಡೆಯಿಂದಾಗಿ ಪಾಂಡ್ಯ ತುಂಬಾ ಬೇಸರಗೊಂಡಿದ್ದಾರೆ. ಆದರೆ ಅವರು ಅದನ್ನು ಮೇಲಿಂದ ತೋರಿಸಿಕೊಳ್ಳದೆ ನಗುತ್ತಿರುವಂತೆ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.‌

ಪಾಂಡ್ಯ ನಿಜಕ್ಕೂ ಖುಷಿಯಾಗಿಲ್ಲ

“ಆಟದೊಂದಿಗೆ ಸಂಬಂಧವೇ ಇರದ ವಿಚಾರಗಳು ಹಾರ್ದಿಕ್ ಪಾಂಡ್ಯ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ ಎಂದು ನನಗನಿಸುತ್ತಿದೆ. ಅವರು ಟಾಸ್ ಪ್ರಕ್ರಿಯೆ ವೇಳೆ ತುಂಬಾ ನಗುತ್ತಿರುತ್ತಾರೆ. ತಾನು ತುಂಬಾ ಸಂತೋಷವಾಗಿರುವಂತೆ ವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ನಿಜಕ್ಕೂ ಖುಷಿಯಾಗಿಲ್ಲ. ನಾನು ಅದನ್ನು ಹತ್ತಿರದಿಂದ ನೋಡಿದ್ದೇನೆ” ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುವಾಗ ಪೀಟರ್ಸನ್ ಹೇಳಿದ್ದಾರೆ.

ಇದನ್ನೂ ಓದಿ | ನಾಲ್ಕೇ ಎಸೆತಗಳಲ್ಲಿ ಧೋನಿ 20 ರನ್; ಮಹೇಂದ್ರನ ರೌದ್ರಾವತಾರಕ್ಕೆ ದಾಖಲೆಗಳು ಛಿದ್ರ! ಬೆಂಕಿ ಬ್ಯಾಟಿಂಗ್ ವಿಡಿಯೋ ನೋಡಿ

“ಸಿಎಸ್‌ಕೆ ಮಾಜಿ ನಾಯಕ ಧೋನಿ ಆಟವನ್ನು ನೋಡಿ ವಾಂಖೆಡೆ ಅಭಿಮಾನಿಗಳು ಖುಷಿಯಿಂದ ಬೊಬ್ಬೆ ಹಾಕಿದರು. ಸಹಜವಾಗಿ ಮಾಹಿ ಆಟವನ್ನು ನೋಡಿ ಅವರು ಸಂತೋಷಪಡುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ಅದು ಪಾಂಡ್ಯ ಅವರಿಗೆ ನೋವುಂಟುಮಾಡುತ್ತದೆ. ಏಕೆಂದರೆ ಅವರಿಗೂ ಭಾವನೆಗಳಿವೆ. ಏಕೆಂದರೆ ಅವರು ಕೂಡಾ ಭಾರತೀಯ ಕ್ರಿಕೆಟಿಗ. ಅಭಿಮಾನಿಗಳಿಂದ ಇಂಥಾ ವರ್ತನೆಯನ್ನು ಯಾರೂ ಬಯಸುವುದಿಲ್ಲ” ಎಂದು ಪೀಟರ್ಸನ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಋತುರಾಜ್ ಮತ್ತು ಶಿವಂ ದುಬೆ ಅರ್ಧಶತಕದ ನೆರವಿಂದ ಸಿಎಸ್‌ಕೆ ತಂಡವು 20 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಬೃಹತ್ ಗುರಿ ಬೆನ್ನಟ್ಟಿದ ಮುಂಬೈ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ರೋಹಿತ್​ ಶರ್ಮಾ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

IPL_Entry_Point