ಐಪಿಎಲ್‌ನಲ್ಲಿ ಕೋಟಿ ರೂಪಾಯಿಗೆ ಹರಾಜಾಗಿದ್ದ 13 ವರ್ಷದ ವೈಭವ್ ವಿರುದ್ಧ ವಯಸ್ಸು ಮರೆಮಾಚಿದ ಆರೋಪ; ಸೂರ್ಯವಂಶಿ ತಂದೆಯಿಂದ ಸ್ಪಷ್ಟನೆ
ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 1.1 ಕೋಟಿ ರೂ.ಗೆ ಖರೀದಿಸುವ ಮೂಲಕ ಅತ್ಯಂತ ಕಿರಿಯ ಐಪಿಎಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ವೈಭವ್ ವಯಸ್ಸು ಮರೆಮಾಚಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಅವರ ತಂದೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಾವಾಗಲೂ ಪ್ರತಿಭೆಗಳಿಗೆ ಅವಕಾಶಗಳನ್ನು ಪೂರೈಸುವ ವೇದಿಕೆಯಾಗಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಎರಡು ದಿನಗಳ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಬಿಹಾರದ 13 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಿದೆ. ರಾಹುಲ್ ದ್ರಾವಿಡ್ ತರಬೇತುದಾರರಾಗಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ವೈಭವ್ ಅವರನ್ನು 1.1 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ವೈಭವ್ ಸೂರ್ಯವಂಶಿ ಈಗ ಶ್ರೀಮಂತ ಲೀಗ್ ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರ (13 ವರ್ಷ, 243 ದಿನಗಳು) ಎಂಬ ಹೆಗ್ಗಳಿಗೆ ಪಾತ್ರವಾಗಿರುತ್ತಾರೆ. ಈ ದಾಖಲೆಯ ಸುದ್ದಿ ಎಲ್ಲೆಡೆ ಬಿತ್ತರವಾಗುತ್ತಿದ್ದ ನಡುವೆಯೇ ವೈಭವ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅದು ವಯಸ್ಸಿಗೆ ಸಂಬಂಧಿಸಿದ ಆರೋಪ. ವೈಭವ್ ಸೂರ್ಯವಂಶಿ ಅವರ ವಯಸ್ಸು 15 ವರ್ಷ. ಆದರೆ 13 ವರ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗೂತ್ತಿದ್ದಂತೆ ಈ ಆರೋಪಕ್ಕೆ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಪುತ್ರನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗೆಳೆದಿರುವ ಸಂಜೀವ್, ವೈಭವ್ 8 ವರ್ಷವನಿದ್ದಾಗಲೇ ಬಿಸಿಸಿಐ ಮೂಳೆ ಪರೀಕ್ಷೆ ಮಾಡಿತ್ತು. ವಯಸ್ಸಿನ ಸಂಬಂಧ ಮತ್ತೊಮ್ಮೆ ತಮ್ಮ ಮಗನನ್ನು ಪರೀಕ್ಷೆಗೊಳಪಡಿಸಲು ತಾವು ಸಿದ್ಧರಿದ್ದೇವೆ. ನಾವು ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ.
ವಿವಿಧ ಕಾರಣಗಳಿಂದ 13 ವರ್ಷದ ವೈಭವ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಶತಕ ದಾಖಲಿಸಿದ ಅತ್ಯಂತ ಕಿರಿಯ ಬ್ಯಾಟರ್ (13 ವರ್ಷ, 288 ದಿನಗಳು) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಯೂತ್ ಟೆಸ್ಟ್ ನಲ್ಲಿ 62 ಎಸೆತಗಳಲ್ಲಿ 104 ರನ್ ಗಳಿಸಿದ ಈ ಸಾಧನೆ ಮಾಡಿದ್ದರು. ಬಾಂಗ್ಲಾದೇಶದ ಹಾಲಿ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರ 14 ವರ್ಷ 241 ದಿನಗಳ ದಾಖಲೆಯನ್ನು ವೈಭವ್ ಮುರಿದಿದ್ದ.
ವೈಭವ್ ಐತಿಹಾಸಿಕ ಸಾಧನೆ ಮಾಡಿದ ಕೂಡಲೇ, ಕೆಲವರು ವಯಸ್ಸಿನ ವಂಚನೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಈ ಹಿಂದೆ, ವೈಭವ್ ಅವರ ನಿಜವಾದ ವಯಸ್ಸು 15 ಎಂದು ಕೆಲವರು ಆರೋಪಿಸಿದ್ದರು. ಈ ಆರೋಪಗಳ ಬಗ್ಗೆ ವೈಭವ್ ತಂದೆ ಸಂಜೀವ್ ಸೂರ್ಯವಂಶಿ, "ಅವನು ಎಂಟೂವರೆ ವರ್ಷದವನಿದ್ದಾಗ ಮೊದಲ ಬಾರಿಗೆ ಬಿಸಿಸಿಐನ ಮೂಳೆ ಪರೀಕ್ಷೆಗೆ ಹಾಜರಾಗಿದ್ದ. ಈಗಾಗಲೇ ಭಾರತ ಅಂಡರ್ -19 ಆಡಿದ್ದಾನೆ ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು
ಸಮಸ್ತಿಪುರ ಮೂಲದ ವೈಭವ್ ಸೂರ್ಯವಂಶಿ ಈ ವರ್ಷದ ಆರಂಭದಲ್ಲಿ ಮುಂಬೈ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಐದು ರಣಜಿ ಟ್ರೋಫಿ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ನವೆಂಬರ್ 23 ರಂದು ರಾಜಸ್ಥಾನ ವಿರುದ್ಧ ಟಿ 20 ಗೆ ಪಾದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ವೈಭವ್ ಸೂರ್ಯವಂಶಿ ಕೂಡ ಟ್ರಯಲ್ ಗೆ ಹಾಜರಾಗಿದ್ದರು. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ಒಂದು ಓವರ್ ನಲ್ಲಿ 17 ರನ್ ಗಳಿಸುವ ಪಂದ್ಯದ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೀಯಾ ಎಂಬ ಟಾಸ್ಕ್ ನೀಡಿದ್ದರು ಎಂದು ಯುವಕನ ತಂದೆ ಬಹಿರಂಗಪಡಿಸಿದ್ದಾರೆ.
"ರಾಜಸ್ಥಾನ್ ರಾಯಲ್ಸ್ ಅವರನ್ನು ನಾಗ್ಪುರದಲ್ಲಿ ಟ್ರಯಲ್ಸ್ ಗೆ ಕರೆದಿತ್ತು. ವಿಕ್ರಮ್ ರಾಥೋರ್ ಸರ್ (ಬ್ಯಾಟಿಂಗ್ ಕೋಚ್) ಒಂದು ಓವರ್ನಲ್ಲಿ 17 ರನ್ ಗಳಿಸಬೇಕಾದ ಪಂದ್ಯದ ಪರಿಸ್ಥಿತಿಯನ್ನು ನೀಡಿದರು. ಇದು 3 ಚಕ್ಕಾ ಮಾರಾ ಅಲ್ಲ. ಟ್ರಯಲ್ಸ್ ನಲ್ಲಿ ಅವರು ಮೂರು ಸಿಕ್ಸರ್ ಗಳನ್ನು ಬಾರಿಸಿದರು. ಟ್ರಯಲ್ಸ್ ನಲ್ಲಿ ಆತ ಎಂಟು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದ್ದ ಎಂದು ಸಂಜೀವ್ ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಅವರು ಬಿಹಾರದ ಸಮಸ್ತಿಪುರ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಮೋತಿಪುರ ಗ್ರಾಮದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಪುತ್ರನನ್ನು ನಿತ್ಯ ಸಮಸ್ತಿಪುರ ಪಟ್ಟಣಕ್ಕೆ ತರಬೇತಿಗಾಗಿ ಕರೆದುಕೊಂಡು ಹೋಗುವುದು ಮತ್ತು ವಾಪಸ್ ಊರಿಗೆ ಕರೆದುಕೊಂಡು ಬರುವ ಕೆಲಸವನ್ನು ಮಾಡುತ್ತಾರೆ. ಪುತ್ರ ಕ್ರಿಕೆಟ್ ವೃತ್ತಿ ಬದುಕಿಗಾಗಿ ಶ್ರಮಿಸುತ್ತಿದ್ದಾರೆ.