KL Rahul: ಕಾಡ್ಗಿಚ್ಚಿನಂತೆ ಹಬ್ಬಿದ ಕೆಎಲ್ ರಾಹುಲ್ ನಿವೃತ್ತಿ ಸುದ್ದಿ: ಅಸಲಿ ವಿಚಾರ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  Kl Rahul: ಕಾಡ್ಗಿಚ್ಚಿನಂತೆ ಹಬ್ಬಿದ ಕೆಎಲ್ ರಾಹುಲ್ ನಿವೃತ್ತಿ ಸುದ್ದಿ: ಅಸಲಿ ವಿಚಾರ ಇಲ್ಲಿದೆ ನೋಡಿ

KL Rahul: ಕಾಡ್ಗಿಚ್ಚಿನಂತೆ ಹಬ್ಬಿದ ಕೆಎಲ್ ರಾಹುಲ್ ನಿವೃತ್ತಿ ಸುದ್ದಿ: ಅಸಲಿ ವಿಚಾರ ಇಲ್ಲಿದೆ ನೋಡಿ

KL Rahul: ಕೆಎಲ್ ರಾಹುಲ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗುತ್ತಿರುವ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಇದರ ಅಸಲಿಯತ್ತೇನು? (ವರದಿ: ವಿನಯ್ ಭಟ್)

ಕೆಎಲ್ ರಾಹುಲ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ಪೋಸ್ಟ್ ವೈರಲ್
ಕೆಎಲ್ ರಾಹುಲ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ಪೋಸ್ಟ್ ವೈರಲ್

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿ ಆಡಿದ್ದರು. ದೀರ್ಘ ಸಮಯದ ಬಳಿಕ ಮೈದಾನಕ್ಕಿಳಿದ ರಾಹುಲ್ ಮತ್ತೆ ಕಳಪೆ ಪ್ರದರ್ಶನ ನೀಡಿದರು. ಇದೀಗ ಕೆಎಲ್ ರಾಹುಲ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸುದ್ದಿಯೊಂದು ವೈರಲ್ ಆಗುತ್ತಿದೆ. ಇದರಲ್ಲಿ ಅವರು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಎಂದು ಹೇಳಲಾಗುತ್ತಿರುವ ಸ್ಟೋರಿಯ ಸ್ಕ್ರೀನ್‌ಶಾಟ್ ಹರಿದಾಡುತ್ತಿದೆ.

ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್‌ಶಾಟ್​ನಲ್ಲಿ ಈ ರೀತಿ ಬರೆಯಲಾಗಿದೆ. ‘ಸಾಕಷ್ಟು ಬಾರಿ ಯೋಚಿಸಿದ ಬಳಿಕ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರೀಡೆ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಗಳಿಸಿದ ಅನುಭವಗಳು ಮತ್ತು ನೆನಪುಗಳಿಗೆ ನಿಜವಾಗಿಯೂ ಬೆಲೆಕಟ್ಟಲಾಗದು. ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಮತ್ತು ಅನೇಕ ಪ್ರತಿಭಾವಂತ ವ್ಯಕ್ತಿಗಳೊಂದಿಗೆ ಆಡಲು ನನಗೆ ಅವಕಾಶ ಸಿಕ್ಕಿತು, ಈ ಬಗ್ಗೆ ಗೌರವವಿದೆ. ಮುಂಬರುವ ಹೊಸ ಅಧ್ಯಾಯಕ್ಕೆ ನಾನು ಉತ್ಸುಕನಾಗಿದ್ದರೂ, ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆಯಲಾಗಿದೆ.

ಅಸಲಿ ವಿಚಾರ ಏನು?

ಕೆಎಲ್ ರಾಹುಲ್ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗುತ್ತಿರುವ ಈ ಇನ್​ಸ್ಟಾ ಸ್ಟೋರಿ ಸುಳ್ಳಾಗಿದೆ. ರಾಹುಲ್ ಅವರು ಈರೀತಿಯ ಯಾವುದೇ ಸ್ಟೋರಿಯನ್ನು ಪೋಸ್ಟ್ ಮಾಡಿಲ್ಲ. ನಿವೃತ್ತಿ ಪೋಸ್ಟ್ ವೈರಲ್ ಆಗುವ ಮುನ್ನ ರಾಹುಲ್ ಅವರು ತಮ್ಮ ಅಧಿಕೃತ ಇನ್​ಸ್ಟಾದಲ್ಲಿ ಮತ್ತೊಂದು ಸ್ಟೋರಿ ಹಂಚಿಕೊಂಡಿದ್ದರು. ಇದರಲ್ಲಿ ‘ನಾನು ಮಹತ್ವದ ಘೋಷಣೆ ಮಾಡಬೇಕಿದೆ’ ಎಂದು ಬರೆದುಕೊಂಡಿದ್ದಾರೆ. ಆದರೆ ರಾಹುಲ್ ಏನನ್ನು ಘೋಷಿಸಲಿದ್ದಾರೆ ಎಂಬುದನ್ನು ತಿಳಿಸಿರಲಿಲ್ಲ. ಇದಕ್ಕೆ ರೆಕ್ಕೆ-ಪುಕ್ಕ ಕಟ್ಟಿ ಹಲವು ನಕಲಿ ಪೋಸ್ಟ್‌ಗಳು ಹುಟ್ಟುಕೊಂಡಿವೆ.

ಬ್ರಾಂಡ್ ಪ್ರಚಾರ ಆಗಿರಬಹುದು

ಕೆಎಲ್ ರಾಹುಲ್ ಅವರು ಹೊಸ ಬ್ರಾಂಡ್‌ನೊಂದಿಗೆ ಕೈಜೋಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ ಅದರ ಪ್ರಚಾರಕ್ಕೆ ‘ನಾನು ಮಹತ್ವದ ಘೋಷಣೆ ಮಾಡಬೇಕಿದೆ’ ಎಂಬ ಸ್ಟೋರಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಪ್ರಚಾರದ ಮೊದಲು ಇದೇ ರೀತಿಯ ರಹಸ್ಯ ಪೋಸ್ಟ್‌ಗಳನ್ನು ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದೂ ಕೂಡ ಅದರ ಒಂದು ಭಾಗವಾಗಿದೆ ಎನ್ನಲಾಗಿದೆ.

ಭಾರತ ತಂಡಕ್ಕೆ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ರಾಹುಲ್, ಅಗ್ರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡರು. ಈವರೆಗೆ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 34.08 ಸರಾಸರಿಯಲ್ಲಿ 2,863 ರನ್ ಗಳಿಸಿದ್ದಾರೆ. ಏಕದಿನದಲ್ಲಿ 77 ಪಂದ್ಯಗಳಲ್ಲಿ 49.15 ರ ಅತ್ಯುತ್ತಮ ಸರಾಸರಿಯಲ್ಲಿ 2851 ರನ್ ಗಳಿಸಿದ್ದಾರೆ. 72 ಟಿ20 ಪಂದ್ಯಗಳಲ್ಲಿ 37.75ರ ಸರಾಸರಿಯಲ್ಲಿ 2265 ರನ್ ಗಳಿಸಿದ್ದಾರೆ.

Whats_app_banner