ಕೆಎಲ್ ರಾಹುಲ್ ಎಲ್ಎಸ್ಜಿಯಿಂದ ರಿಲೀಸ್? ರಿಷಭ್ ಪಂತ್ ಮೇಲೆ ಕಣ್ಣಾಕಿದ ಲಕ್ನೋ ಸೂಪರ್ ಜೈಂಟ್ಸ್
KL Rahul: ಲಕ್ನೋ ಸೂಪರ್ ಜೈಂಟ್ಸ್ ತಂಡವು ನಾಯಕ ಕೆಎಲ್ ರಾಹುಲ್ ಅವರನ್ನು ಕೈಬಿಡಲು ಚಿಂತಿಸಿದ್ದು, ಅವರ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲು ಯೋಜನೆ ರೂಪಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ಮುನ್ನ ನಾಯಕ ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈಬಿಡಲು ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿದರೆ, ಆತನನ್ನು ರಾಹುಲ್ ಸ್ಥಾನಕ್ಕೆ ಖರೀದಿಸಲು ಯೋಜನೆ ಹಾಕಿಕೊಂಡಿದೆ. ಡಿಸಿ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಪಂತ್ ನಮ್ಮ ಮೊದಲ ಆಯ್ಕೆ ಎಂದು ಘೋಷಿಸಿದ್ದರು. ಇತ್ತೀಚಿನ ವರದಿಗಳು ಪಂತ್ರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ರಿಟೆನ್ಶನ್ ಪಟ್ಟಿ ಬಿಡುಗಡೆಗೆ ಹಲವು ತಂಡಗಳು ಕಾಯುತ್ತಿವೆ. ಪಂತ್ ಉಳಿಸಿಕೊಳ್ಳಬೇಕೇ ಬೇಡವೇ ಎನ್ನುವ ಅಂತಿಮ ನಿರ್ಧಾರ ಕೈಗೊಳ್ಳಲು ಫ್ರಾಂಚೈಸಿ ಸಮಯ ತೆಗೆದುಕೊಳ್ಳುತ್ತಿದೆ. ಜೆಎಸ್ಡಬ್ಲ್ಯು, ಜಿಎಂಆರ್ ಡೆಲ್ಲಿ ಮಾಲೀಕತ್ವ ವಿಭಜನೆಯಾಗಿದ್ದು, ಜಿಎಂಆರ್ ಗ್ರೂಪ್ ಮುಂದಿನ 2 ವರ್ಷಗಳವರೆಗೆ ಫ್ರ್ಯಾಂಚೈಸ್‌ನ ಉಸ್ತುವಾರಿ ವಹಿಸಲಿದೆ. ಹಾಗಾಗಿ, ಪಂತ್ ಉಳಿಸಿಕೊಳ್ಳುವುದರ ಬಗ್ಗೆ ಹೊಸ ಅನುಮಾನ ಹುಟ್ಟಿದೆ. ಈ ಬೆನ್ನಲ್ಲೇ ಲಕ್ನೋ ಜೊತೆಗೆ ಪಂಜಾಬ್ ಕಿಂಗ್ಸ್ ಕೂಡ ರಿಷಭ್ರನ್ನೇ ನಾಯಕತ್ವಕ್ಕೆ ನೆಚ್ಚಿಕೊಂಡಿದೆ.
ಜಿಎಂಆರ್ ಮತ್ತು ಜೆಎಸ್ಡಬ್ಲ್ಯು ಈಗ ವಿಭಜನೆಯಾಗಿದ್ದು, 2025 ಮತ್ತು 2026ರ ಆವೃತ್ತಿಯ ಐಪಿಎಲ್ಗೆ ಜಿಎಂಆರ್ ಡೆಲ್ಲಿ ಕ್ಯಾಪಿಟಲ್ಸ್ ಜವಾಬ್ದಾರಿ ಹೊರಲಿದೆ. ಆದರೆ ಜೆಎಸ್ಡಬ್ಲ್ಯು, ವುಮೆನ್ಸ್ ಪ್ರೀಮಿಯರ್ ಲೀಗ್ ತಂಡ ಮತ್ತು ಸೌತ್ ಆಫ್ರಿಕಾ ಲೀಗ್ನ ಪ್ರಿಟೋರಿಯಾ ಕ್ಯಾಪಿಟಲ್ಸ್ ಅನ್ನು ಆ ಎರಡು ವರ್ಷಗಳವರೆಗೆ ನಿರ್ವಹಿಸಲಿದೆ. ಹಲವು ಫ್ರಾಂಚೈಸ್ಗಳು ಡೆಲ್ಲಿ ರಿಟೆನ್ಶನ್ ಪಟ್ಟಿ ಪ್ರಕಟಿಸಲು ಕಾಯುತ್ತಿವೆ. ಒಂದು ವೇಳೆ ಡೆಲ್ಲಿಯಿಂದ ಪಂತ್ ರಿಲೀಸ್ ಆದರೆ, ಎಷ್ಟು ಖರ್ಚು ಮಾಡಬಹುದು ಎಂದು ಫ್ರಾಂಚೈಸಿಗಳು ಲೆಕ್ಕಾಚಾರ ಹಾಕಿಕೊಳ್ಳುತ್ತಿವೆ. ಅದರಲ್ಲೂ ಎಲ್ಎಸ್ಜಿ, ಪಂಜಾಬ್ ತಂಡಗಳು ಮುಂಚೂಣಿಯಲ್ಲಿವೆ.
ಹೊರ ನಡೆದ್ರಾ ಕೆಎಲ್ ರಾಹುಲ್?
ನಾಯಕ ಕೆಎಲ್ ರಾಹುಲ್ ಅವರಿಂದ ಬೇರೆಯಾಗಲು ಲಕ್ನೋ ಸೂಪರ್ ಜೈಂಟ್ಸ್ ಸಿದ್ಧವಾಗಿದೆ ಎಂದು ವರದಿಯಾಗಿದೆ. 2024ರ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಮಾಲೀಕ ಸಂಜೀವ್ ಗೋಯೆಂಕಾ, ರಾಹುಲ್ರೊಂದಿಗೆ ಕೋಪದಿಂದ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಅಲ್ಲಿಂದ ಇಲ್ಲಿಯ ತನಕ ರಾಹುಲ್ರನ್ನು ಕೈ ಬಿಡುವ ವರದಿಗಳು ಹೆಚ್ಚಾಗುತ್ತಿವೆ. ಮೂಲಗಳ ಪ್ರಕಾರ ರಾಹುಲ್ ಸ್ಟ್ರೈಕ್ರೇಟ್ಗೆ ಅಸಮಾಧಾನ ಹೊಂದಿದೆ. ಹಾಗಾಗಿ ಅವರನ್ನು ಮುಂದಿವರೆಸಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ. ಕೆಎಲ್ ರಾಹುಲ್, ಐಪಿಎಲ್ 2024ರಲ್ಲಿ 14 ಪಂದ್ಯಗಳಲ್ಲಿ 136.13 ರ ಸ್ಟ್ರೈಕ್ ರೇಟ್‌ನಲ್ಲಿ 520 ರನ್ ಗಳಿಸಿದರು.
ಮೆಗಾ ಹರಾಜು ನಡೆಯುವ ದಿನಾಂಕ?
18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂದು ವರದಿಯಾಗಿದೆ. ಇದೇ ವೇಳೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸಹ ನಡೆಯಲಿದ್ದು, ನವೆಂಬರ್ 22 ರಿಂದ 26ರವರೆಗೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಮಿಲಿಯನ್ ಡಾಲರ್ ಟೂರ್ನಿಯ ಮೆಗಾ ಹರಾಜು ಮತ್ತು ಪರ್ತ್ ಟೆಸ್ಟ್ ನಡುವೆ ಯಾವುದೇ ರೀತಿಯ ಸಂಭಾವ್ಯ ಘರ್ಷಣೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಪ್ರಸ್ತುತ ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಅಕ್ಟೋಬರ್ 31ರಂದು ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕಿದ್ದು, ಅಂತಿಮ ಹಂತದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿವೆ.