VIDEO: ತಿರುಗೋ ಫ್ಯಾನ್ ನಿಲ್ಲಿಸಿದ ಶಿಖರ್ ಧವನ್; ಕನ್ನಡ ಹಾಡು ಬಳಸಿ ನಕಲಿ ಲಡ್ಡು ಮುತ್ಯಾರನ್ನೇ ಇಮಿಟೇಟ್ ಮಾಡಿದ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  Video: ತಿರುಗೋ ಫ್ಯಾನ್ ನಿಲ್ಲಿಸಿದ ಶಿಖರ್ ಧವನ್; ಕನ್ನಡ ಹಾಡು ಬಳಸಿ ನಕಲಿ ಲಡ್ಡು ಮುತ್ಯಾರನ್ನೇ ಇಮಿಟೇಟ್ ಮಾಡಿದ ಕ್ರಿಕೆಟಿಗ

VIDEO: ತಿರುಗೋ ಫ್ಯಾನ್ ನಿಲ್ಲಿಸಿದ ಶಿಖರ್ ಧವನ್; ಕನ್ನಡ ಹಾಡು ಬಳಸಿ ನಕಲಿ ಲಡ್ಡು ಮುತ್ಯಾರನ್ನೇ ಇಮಿಟೇಟ್ ಮಾಡಿದ ಕ್ರಿಕೆಟಿಗ

Shikhar Dhawan: ಉತ್ತರ ಕರ್ನಾಟಕದ ಖ್ಯಾತ ಪವಾಡ ಪುರುಷ ಬಾಬಾ ಲಡ್ಡು ಮುತ್ಯಾರನ್ನು ಅನುಕರಿಸಿರುವ ಕ್ರಿಕೆಟಿಗ ಶಿಖರ್​ ಧವನ್ ಅವರು, ಆಧುನಿಕ ಲಡ್ಡು ಮುತ್ಯಾ ಬಾಬಾನನ್ನು ಅಣಕಿಸಿದ್ದಾರೆ.

ನಕಲಿ ಲಡ್ಡು ಮುತ್ಯಾರನ್ನೇ ಇಮಿಟೇಟ್ ಮಾಡಿದ ಕ್ರಿಕೆಟಿಗ
ನಕಲಿ ಲಡ್ಡು ಮುತ್ಯಾರನ್ನೇ ಇಮಿಟೇಟ್ ಮಾಡಿದ ಕ್ರಿಕೆಟಿಗ

ಆಗಸ್ಟ್ 24ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆರಂಭಿಕ ಆಟಗಾರ ಶಿಖರ್ ಧವನ್, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಪೋಸ್ಟ್​​ಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುವ ಗಬ್ಬರ್​, ಮತ್ತೊಂದು ವಿಡಿಯೋ ಹಂಚಿಕೊಂಡು ಭಾರೀ ಸದ್ದು ಮಾಡುತ್ತಿದ್ದಾರೆ. ಅದು ಕೂಡ ಕನ್ನಡದ ಹಾಡನ್ನು ಬಳಸಿ ರೀಲ್ಸ್ ಮಾಡಿರುವುದು ವಿಶೇಷ. ಉತ್ತರ ಕರ್ನಾಟಕದ ಖ್ಯಾತ ಪವಾಡ ಪುರುಷ ಬಾಬಾ ಲಡ್ಡು ಮುತ್ಯಾರನ್ನು ಅನುಕರಿಸಿರುವ ಧವನ್, ಆಧುನಿಕ ಲಡ್ಡು ಮುತ್ಯಾ ಬಾಬಾನನ್ನು ಕನ್ನಡ ಹಾಡಿನ ಮೂಲಕ ಲೇವಡಿ ಮಾಡಿದ್ದಾರೆ.

ಬಾಗಲಕೋಟೆ ಲಡ್ಡು ಮುತ್ಯಾ ಸಾಕಷ್ಟು ಭಕ್ತರನ್ನು ಹೊಂದಿದ್ದಾರೆ. ಆದರೆ, ಇದೀಗ ಆಧುನಿಕ ಲಡ್ಡು ಮುತ್ಯಾ ಎಂದು ಜನ ಕರೆಯುತ್ತಿರುವ ಮತ್ತೊಬ್ಬ ವ್ಯಕ್ತಿ ತನ್ನ ಕೈಯಿಂದ ತಿರುಗುವ ಫ್ಯಾನನ್ನು ನಿಲ್ಲಿಸಿ ಜನರ ಗಮನ ಸೆಳೆಯುತ್ತಿದ್ದಾನೆ. ಆಧುನಿಕ ಲಡ್ಡು ಮುತ್ಯಾ ಇತ್ತೀಚೆಗೆ ಫ್ಯಾನ್ ನಿಲ್ಲಿಸಿರುವುದನ್ನೇ ನಕಲು ಮಾಡಿರುವ ಧವನ್, ಟ್ರೋಲ್ ಮಾಡಿದ್ದಾರೆ. ವಿಡಿಯೋದಲ್ಲಿ ಕುರ್ಚಿ ಮೇಲೆ ಕುಳಿತಿರುವ ಶಿಖರ್ ಧವನ್​ರನ್ನು ಮೂವರು ಎತ್ತಿ ಹಿಡಿದಿದ್ದು, ತಿರುಗುತ್ತಿರುವ ಫ್ಯಾನ್ ಅನ್ನು ಕ್ರಿಕೆಟಿಗ ಹಿಡಿದು ತಡೆದು ನಿಲ್ಲಿಸಿದ್ದಾರೆ. ಉಳಿದಂತೆ ಇಬ್ಬರು ಆಶೀರ್ವಾದ ಮಾಡುವಂತೆ ನಟಿಸಿದ್ದಾರೆ. ಅಲ್ಲದೆ, ವಿಡಿಯೋಗೆ ಫ್ಯಾನ್‌ ವಾಲೇ ಬಾಬಾ ಕಿ ಜೈ ಹೋ ಎನ್ನುವ ಅಡಿ ಬರಹ ನೀಡಿದ್ದಾರೆ.

ಆಧುನಿಕ ಲಡ್ಡು ಮುತ್ಯಾ ತನ್ನ ಕೈಯಿಂದ ತಿರುಗುವ ಫ್ಯಾನ್ ಅನ್ನು ನಿಲ್ಲಿಸಿ ಎಲ್ಲರಿಗೂ ಒಂದೇ ಕೈಯಿಂದ ಆಶೀರ್ವದಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಜನರು ಲಡ್ಡು ಮುತ್ಯಾ ಎಂದು ಹೇಳಿ ಆಶೀರ್ವಾದ ಪಡೆಯುತ್ತಿದ್ದಾರೆ. ಫ್ಯಾನ್ ಮುಟ್ಟಿ ಮಾಡರ್ನ್ ಲಡ್ಡು ಮುತ್ಯಾ ಆಗಲು ಯತ್ನಿಸುತ್ತಿರುವ ಈತ ಯಾರು, ಎಲ್ಲಿಂದ ಬಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ ಧವನ್ ಮಾಡಿರುವ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಖರ್ ಧವನ್ ವೃತ್ತಿಜೀವನ

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಧವನ್, 34 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 7 ಶತಕ ಸಹಿತ 2315 ರನ್ ಕಲೆ ಹಾಕಿದ್ದಾರೆ. 167 ಏಕದಿನದಲ್ಲಿ 6793 ರನ್ ಗಳಿಸಿದ್ದು, 17 ಶತಕ ಬಾರಿಸಿದ್ದಾರೆ. ಇನ್ನು ಟಿ20ಐ ಕ್ರಿಕೆಟ್​​ನಲ್ಲಿ 68 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 11 ಅರ್ಧಶತಕ ಸಹಿತ 1759 ರನ್ ಗಳಿಸಿದ್ದಾರೆ. ರೋಹಿತ್ ಜೊತೆಗೆ ಏಕದಿನದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದ್ದರು. ಧವನ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡಿದ್ದರು. ಭಾರತಕ್ಕೆ ಚೊಚ್ಚಲ ಪ್ರವೇಶಕ್ಕೂ ಮುನ್ನ ತಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದರು. 2007/08 ಋತುವಿನಲ್ಲಿ ರಣಜಿ ಟ್ರೋಫಿ ಗೆದ್ದ ದೆಹಲಿ ತಂಡದ ಭಾಗವಾಗಿದ್ದರು.

Whats_app_banner