ಕನ್ನಡ ಸುದ್ದಿ  /  Cricket  /  Mitchell Starc Leaked 53 Runs In Ipl Debut Here Is How Much Kkr Will Pay Australia Bowler For Every Ball In Ipl 2024 Prs

53 ರನ್ ಕೊಟ್ಟ 24.75 ಕೋಟಿ ಪಡೆದ ಮಿಚೆಲ್ ಸ್ಟಾರ್ಕ್; ಪ್ರತಿ ಬಾಲ್​ ಮತ್ತು ಪಂದ್ಯಕ್ಕೆ ಈ ವೇಗಿ ಪಡೆಯುವ ವೇತನವೇಷ್ಟು?

Mitchell Starc: ಕೋಲ್ಕತ್ತಾ ನೈಟ್​ ರೈಡರ್ಸ್ ಬೌಲರ್​ ಮಿಚೆಲ್ ಸ್ಟಾರ್ಕ್​ ಅವರು ತಮ್ಮ ಐಪಿಎಲ್ ಕಂಬ್ಯಾಕ್ ಪಂದ್ಯದಲ್ಲಿ ವಿಕೆಟ್ ಪಡೆಯದೆ 53 ರನ್ ಬಿಟ್ಟುಕೊಟ್ಟಿದ್ದಾರೆ. ಹಾಗಾದರೆ 24.75 ಕೋಟಿ ಐಪಿಎಲ್ ವೇತನ ಪಡೆಯುವ ಸ್ಟಾರ್ಕ್​ ಅವರು ಪ್ರತಿ ಎಸೆತ, ಪಂದ್ಯಕ್ಕೆ ಪಡೆಯುವ ವೇತನ ಎಷ್ಟು?

53 ರನ್ ಚಚ್ಚಿಸಿಕೊಂಡ 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್
53 ರನ್ ಚಚ್ಚಿಸಿಕೊಂಡ 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್ (AFP)

ಆಸ್ಟ್ರೇಲಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಮಿಚೆಲ್ ಸ್ಟಾರ್ಕ್ (Mitchell Starc)​ ಅವರು ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ. 2023ರ ಡಿಸೆಂಬರ್​​ನಲ್ಲಿ ನಡೆದ ಮಿನಿ ಹರಾಜಿನಲ್ಲಿ 24.75 ಕೋಟಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು. ಆದರೆ 2024ರ ಐಪಿಎಲ್​ನಲ್ಲಿ ಅವರು ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದರು. ಸ್ಟಾರ್ಕ್ ಎಸೆದ 4 ಓವರ್​​ಗಳಲ್ಲಿ ವಿಕೆಟ್ ಪಡೆಯದೆ 53 ರನ್ ಬಿಟ್ಟು ಕೊಟ್ಟು ದುಬಾರಿಯಾದರು.

2016ರ ನಂತರ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ವಾಪಾಸ್ಸಾದ ಮಿಚೆಲ್ ಸ್ಟಾರ್ಕ್​, ತನ್ನ ಕಂಬ್ಯಾಕ್ ಪಂದ್ಯದಲ್ಲಿ ಅವರು ಅತ್ಯಂತ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದರು. ರನ್ ಸೋರಿಕೆ ಮಾಡಿದ್ದರ ಜೊತೆಗೆ ವಿಕೆಟ್ ಪಡೆಯದ ಮಿಚೆಲ್ ಸ್ಟಾರ್ಕ್​ ವಿರುದ್ಧ ಕೆಕೆಆರ್​ ಅಭಿಮಾನಿಗಳು ಕೋಪಗೊಂಡಿದ್ದಾರೆ. ಕಳಪೆ ಬೌಲಿಂಗ್​ ಮೂಲಕ ಕೆಕೆಆರ್ ಅನ್ನು ಸೋಲಿನ ದವಡೆಗೆ ಸಿಲುಕಿಸಿದ್ದ ಸ್ಟಾರ್ಕ್​ ವಿರುದ್ಧ ಪಡೆದ ಹಣಕ್ಕಾದರೂ ನ್ಯಾಯ ಕೊಡಬೇಕು ಎಂದು ಕಿಡಿಕಾರಿದ್ದಾರೆ.

ಓವರ್​ವೊಂದರಲ್ಲಿ 26 ರನ್ ನೀಡಿದ ಸ್ಟಾರ್ಕ್​

ಕೆಕೆಆರ್​​ ವಿರುದ್ಧದ ಪಂದ್ಯದಲ್ಲಿ ಕೊನೆಯ ಎರಡು ಓವರ್​​ಗಳಲ್ಲಿ ಸನ್​​ರೈಸರ್ಸ್​ ಹೈದರಾಬಾದ್ ಗೆಲ್ಲಲು 39 ರನ್ ಬೇಕಿತ್ತು. ಆಗ 19ನೇ ಓವರ್​ ಎಸೆಯಲು ಬಂದ ಮಿಚೆಲ್ ಸ್ಟಾರ್ಕ್​ ಬಿಟ್ಟುಕೊಟ್ಟಿದ್ದು 4 ಸಿಕ್ಸರ್​ ಸಹಿತ 26 ರನ್. ಇದರೊಂದಿಗೆ ಕೆಕೆಆರ್​ ಸೋಲಿನಂಚಿಗೆ ಬಂದು ಸಿಲುಕಿತ್ತು. ಅಲ್ಲದೆ, ಕೊನೆಯ ಓವರ್​​ನಲ್ಲಿ ಎಸ್​ಆರ್​ಹೆಚ್ ಗೆಲುವಿಗೆ ಕೇವಲ 13 ರನ್ ಬೇಕಾಯಿತು. ಅಂತಿಮ ಓವರ್​​ನಲ್ಲಿ ಹರ್ಷಿತ್ ರಾಣಾ 8 ರನ್ ಬಿಟ್ಟುಕೊಟ್ಟು 4 ರನ್​ಗಳ ರೋಚಕ ಗೆಲುವು ತಂದುಕೊಟ್ಟರು.

ಪ್ರತಿ ಎಸೆತ ಮತ್ತು ಪಂದ್ಯಕ್ಕೆ ಸ್ಟಾರ್ಕ್ ಪಡೆಯುವ ವೇತನವೆಷ್ಟು?

ಐಪಿಎಲ್​​ ಇತಿಹಾಸದಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಬಿಕರಿಯಾದ ಸ್ಟಾರ್ಕ್​ 24.75 ಕೋಟಿ ಪಡೆಯಲಿದ್ದಾರೆ. ಆದರೆ ಅವರು ಪ್ರತಿ ಎಸೆತ, ಪ್ರತಿ ಓವರ್​, ಪ್ರತಿ ಪಂದ್ಯಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ತಿಳಿದರೆ ಅಚ್ಚರಿಯಾಗುವುದು ಖಚಿತ. ಆಸೀಸ್ ಮಾರಕ ವೇಗಿ 2024ರ ಆವೃತ್ತಿಯ ಲೀಗ್​ ಹಂತದಲ್ಲಿ 14 ಪಂದ್ಯಗಳನ್ನಾಡಲಿದ್ದು, 336 ಎಸೆತಗಳನ್ನು ಎಸೆಯಲಿದ್ದಾರೆ. ಪ್ರತಿ ಪಂದ್ಯದಲ್ಲಿ ನಾಲ್ಕು ಓವರ್​​ಗಳಂತೆ ಟೂರ್ನಿಯಲ್ಲಿ ಒಟ್ಟು 56 ಓವರ್​​ಗಳನ್ನು ಎಸೆಯಲಿದ್ದಾರೆ.

ಐಪಿಎಲ್ ಈ ಋತುವಿನಲ್ಲಿ ಸ್ಟಾರ್ಕ್ ಅವರು ಬೌಲ್ ಮಾಡುವ ಪ್ರತಿ ಎಸೆತಕ್ಕೆ 7,36,607 ರೂಪಾಯಿ ಗಳಿಸುತ್ತಾರೆ. ಒಂದು ವೇಳೆ ಕೆಕೆಆರ್​​ ಪ್ಲೇಆಫ್ ಮತ್ತು ಫೈನಲ್ಸ್ ಪ್ರವೇಶಿಸಿದರೆ ಇದರ ಸಂಖ್ಯೆ 6.44 ಲಕ್ಷಕ್ಕೆ ಇಳಿಯುತ್ತದೆ. ಇದು ಕೆಕೆಆರ್​​ ಪ್ಲೇಆಫ್‌ ಮತ್ತು ಫೈನಲ್ಸ್ ಪ್ರವೇಶಿಸಿದರೆ ಮಾತ್ರ ಸಂಭವಿಸುತ್ತದೆ. ಇನ್ನು ಪ್ರತಿ ಲೀಗ್​ ಪಂದ್ಯಕ್ಕೆ ಸ್ಟಾರ್ಕ್​ ಅವರು 1.76+ ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. (ಇದು 14 ಲೀಗ್​ ಪಂದ್ಯಗಳಿಗೆ ಮಾಡಲಾದ ಲೆಕ್ಕಾಚಾರ)

ಪಿಎಸ್​ಎಲ್​ನಲ್ಲಿ ದುಬಾರಿ ಆಟಗಾರನಿಗಿಂತ ಹೆಚ್ಚು

ಮಿಚೆಲ್ ಸ್ಟಾರ್ಕ್​ ಅವರಿಗೆ ಒಂದು ಪಂದ್ಯದಲ್ಲಿ ಸಿಗುವ ವೇತನ ಪಾಕಿಸ್ತಾನ ಪ್ರೀಮಿಯರ್ ಲೀಗ್​ನ ದುಬಾರಿ ಆಟಗಾರನಿಂದ ಹೆಚ್ಚು ಎಂಬುದು ವಿಶೇಷ. ಸ್ಟಾರ್ಕ್​ ಒಂದು ಪಂದ್ಯಕ್ಕೆ 1.76+ ಕೋಟಿ ಪಡೆದರೆ, ಪಿಎಸ್​ಎಲ್​ನಲ್ಲಿ ದುಬಾರಿ ಆಟಗಾರನ ಬೆಲೆ 1.4 ಕೋಟಿ ರೂಪಾಯಿ. ಇದು ಸಂಪೂರ್ಣ ಟೂರ್ನಿ ಆಡಿದರೆ ಸಿಗುವ ಮೊತ್ತ. ದಾಖಲೆಯ ಮೊತ್ತ ಪಡೆಯುವ ಸ್ಟಾರ್ಕ್​ ಕಳೆದ ಪಂದ್ಯದಲ್ಲಿ ಎಸೆದ ನಾಲ್ಕು ಓವರ್​ಗಳಲ್ಲಿ 53 ರನ್ ಬಿಟ್ಟುಕೊಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಅಭ್ಯಾಸದ ವೇಳೆ ಸ್ಟಾರ್ಕ್​ಗೆ​ ಚಚ್ಚಿದ್ದ ರಿಂಕು

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವು ಐಪಿಎಲ್​ನಲ್ಲಿ ತನ್ನ ಅಭಿಯಾನ ಆರಂಭಿಸುವುದಕ್ಕೂ ಮುನ್ನ ಅಭ್ಯಾಸ ವೇಳೆ 50 ಲಕ್ಷ ವೇತನ ಪಡೆಯುವ ರಿಂಕು ಸಿಂಗ್ ಅವರು 24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್​ಗೆ ಬೆಂಡೆತ್ತಿದ್ದರು. ಆಸ್ಟ್ರೇಲಿಯಾ ವೇಗಿಯ ಬೌಲಿಂಗ್​​ನಲ್ಲಿ ಸಿಕ್ಸರ್​​ಗಳ ಸುರಿಮಳೆಗೈದಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಭ್ಯಾಸದ ವೇಳೆಯೇ ಹೀಗೆ ರನ್ ಬಿಟ್ಟುಕೊಟ್ಟರೆ ಪಂದ್ಯದಲ್ಲಿ ಇನ್ನು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಮಾನಿಗಳು ಅನುಮಾನ ಪಟ್ಟಿದ್ದರು. ಆದರೀಗ ಅಭಿಮಾನಿಗಳ ಅನುಮಾನ ನಿಜವಾಗಿದೆ.