ಮುಂಬೈ ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್; ಫೈನಲ್ನಲ್ಲಿ ವಿದರ್ಭ ವಿರುದ್ಧ 169 ರನ್ಗಳ ಜಯ
Ranji Trophy Final : ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು 169 ರನ್ಗಳ ಅಂತರದಿಂದ ಸೋಲಿಸಿದ ಮುಂಬೈ ತಂಡವು ದಾಖಲೆಯ 42ನೇ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ.
ದಾಖಲೆಯ ರಣಜಿ ಟ್ರೋಫಿಗೆ ಮುಂಬೈ ತಂಡ ಮುತ್ತಿಕ್ಕಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಮಣಿಸಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ದಾಖಲೆಯ 42ನೇ ಟ್ರೋಫಿಯನ್ನು ಎತ್ತಿಹಿಡಿದಿದೆ. ಫೈನಲ್ನಲ್ಲಿ 169 ರನ್‌ಗಳಿಂದ ಸೋಲನುಭವಿಸಿದ ವಿದರ್ಭ, 3ನೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು ರನ್ನರ್ಅಪ್ಗೆ ತೃಪ್ತಿಯಾಗಿದೆ.
538 ರನ್ಗಳ ದೊಡ್ಡ ಮೊತ್ತದ ಗುರಿ ಪಡೆದಿದ್ದ ವಿದರ್ಭ, ಕರುಣ್ ನಾಯರ್ (74), ಅಕ್ಷಯ್ ವಾಡ್ಕರ್ (102), ಹರ್ಷ ದುಬೆ ಹೋರಾಟದ ನಡುವೆಯೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಈ ಹಿಂದೆ ಫೈನಲ್ಗೇರಿದ್ದ ಎರಡೂ ಬಾರಿಯೂ ಟ್ರೋಫಿ ಗೆದ್ದಿದ್ದ ವಿದರ್ಭ ಈ ಬಾರಿ ರನ್ನರ್ಅಪ್ನೊಂದಿಗೆ ಟೂರ್ನಿಯನ್ನು ಮುಗಿಸಿದೆ.
5 ವಿಕೆಟ್‌ಗೆ 248 ರನ್‌ಗಳಿಂದ 5ನೇ ದಿನದಾಟ ಆರಂಭಿಸಿದ ವಿದರ್ಭ, ಮುಂಬೈ ಗೆಲುವಿಗೆ ಕಾಯುವಂತೆ ಮಾಡಿತು. 5ನೇ ದಿನದಂದು ಗೆಲ್ಲಲು ಇನ್ನೂ 290 ರನ್ಗಳು ಅಗತ್ಯ ಇತ್ತು. ಆದರೆ ವಿದರ್ಭ ಪರ ಅಕ್ಷಯ್ (102) ಮತ್ತು ಹರ್ಷ್ ದುಬೆ (65) ಅವರು ಆರನೇ ವಿಕೆಟ್‌ಗೆ 130 ರನ್ಗಳ ದಿಟ್ಟ ಹೋರಾಟವು ವ್ಯರ್ಥ ಎನಿಸಿತು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಶಾರ್ದೂಲ್ ಠಾಕೂರ್ (75) ಅವರ ಭರ್ಜರಿ ಅರ್ಧಶತಕದ ನೆರವಿನಿಂದ 64.3 ಓವರ್ಗಳಲ್ಲಿ 224 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ವಿದರ್ಭ 105 ರನ್ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು.'
ಇದರೊಂದಿಗೆ 119 ರನ್ಗಳ ಮುನ್ನಡೆ ಪಡೆದ ಮುಂಬೈ, ಎರಡನೇ ಇನ್ನಿಂಗ್ಸ್ನಲ್ಲೂ ಭರ್ಜರಿ ಪ್ರದರ್ಶನ ನೀಡಿತು. ಮುಷೀರ್ ಖಾನ್ (136), ಅಜಿಂಕ್ಯ ರಹಾನೆ (73), ಶ್ರೇಯಸ್ ಅಯ್ಯರ್ (95) ಮತ್ತು ಶಾಮ್ಸ್ ಮುಲಾನಿ (50) ಅವರ ಅದ್ಭುತ ಪ್ರದರ್ಶನದ ನೆರವಿನಿಂದ 2ನೇ ಇನ್ನಿಂಗ್ಸ್ನಲ್ಲಿ 130.2 ಓವರ್ಗಳಲ್ಲಿ 418 ರನ್ ಕಲೆ ಹಾಕಿತು.
ಮುನ್ನಡೆ ಪಡೆದಿದ್ದ 119 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕಲೆ ಹಾಕಿದ್ದ 418 ರನ್ ಸೇರಿ ಮುಂಬೈ, ವಿದರ್ಭ ತಂಡಕ್ಕೆ 537 ರನ್ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ವಿದರ್ಭ, 134.3 ಓವರ್ಗಳಲ್ಲಿ 368 ರನ್ ಗಳಿಸಿ 169 ರನ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ಮುಂಬೈ ಚಾಂಪಿಯನ್ ಪಟ್ಟ ಅಲಂಕರಿಸಿ ಸಂಭ್ರಮಿಸಿತು.
14 ಎಸೆತಗಳಲ್ಲಿ ಕೊನೆಯ 5 ವಿಕೆಟ್ ಕುಸಿತ
ಅಕ್ಷಯ್ ಮತ್ತು ಹರ್ಷ್ ದುಬೆ ವಿಕೆಟ್ ಬೆನ್ನಲ್ಲೇ ವಿದರ್ಭ 14 ರನ್ಗಳ ಅಂತರದಲ್ಲಿ ಕೊನೆಯ 5 ವಿಕೆಟ್ಗಳನ್ನು ಕಳೆದುಕೊಂಡಿತು. ಅಕ್ಷಯ್ ಔಟಾದ ಬಳಿಕ ಹರ್ಷ್, ಆದಿತ್ಯ ಸರ್ವಾತೆ, ಯಶ್ ಠಾಕೂರ್, ಉಮೇಶ್ ಯಾದವ್ ಔಟಾಗಿ ಹೊರ ನಡೆದರು. ಮುಂಬೈ ಪರ ತನುಷ್ ಕೋಟ್ಯಾನ್ 4, ತುಷಾರ್ ದೇಶಪಾಂಡೆ ಮತ್ತು ಮುಷೀರ್ ಖಾನ್ ತಲಾ 2 ವಿಕೆಟ್, ಧವಳ್ ಕುಲಕರ್ಣಿ, ಶಾಮ್ಸ್ ಮುಲಾನಿ ತಲಾ 1 ವಿಕೆಟ್ ಪಡೆದರು.
ಫೈನಲ್ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ
ಮುಂಬೈ ಮೊದಲ ಇನಿಂಗ್ಸ್ 224/10
ವಿದರ್ಭ ಮೊದಲ ಇನಿಂಗ್ಸ್ 105/10
ಮುಂಬೈ 2ನೇ ಇನಿಂಗ್ಸ್ 418/10
ವಿದರ್ಭ 2ನೇ ಇನಿಂಗ್ಸ್ 368/10
ಅತಿ ಹೆಚ್ಚು ರಣಜಿ ಗೆದ್ದ ತಂಡಗಳು
ರಣಜಿ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಂಡಗಳ ಪೈಕಿ ಮುಂಬೈ ಅಗ್ರಸ್ಥಾನದಲ್ಲಿದೆ. ಮುಂಬೈ ಒಟ್ಟು 42 ಬಾರಿ ರಣಜಿ ಚಾಂಪಿಯನ್ ಆಗಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 8 ಬಾರಿ ಟ್ರೋಫಿ ಗೆದ್ದಿದೆ. ದೆಹಲಿ 7, ಮಧ್ಯಪ್ರದೇಶ ಮತ್ತು ಬರೋಡಾ ತಲಾ 5, ವಿದರ್ಭ ಸೇರಿ 8 ತಂಡಗಳು ತಲಾ 2 ಬಾರಿ ರಣಜಿ ಗೆದ್ದಿವೆ.
ಗೆದ್ದವರಿಗೆ ಸಿಕ್ಕ ಬಹುಮಾನವೆಷ್ಟು?
2023-24ರ ದೇಶೀಯ ಋತುವಿನಿಂದ ರಣಜಿ ಟ್ರೋಫಿ ವಿಜೇತ ತಂಡ ಮುಂಬೈ 5 ಕೋಟಿ ಪಡೆಯಲಿದೆ. ರನ್ನರ್ಸ್ ಅಪ್ ವಿದರ್ಭ ತಂಡ 3 ಕೋಟಿ ಬಹುಮಾನ ಮೊತ್ತ ಪಡೆಯಲಿದೆ.