ವನಿತೆಯರನ್ನು ಬಿಡದೆ ಕಾಡಿದ ಆರ್‌ಸಿಬಿ ಆಟಗಾರ್ತಿ; ಭಾರತ ವಿರುದ್ಧ 76 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್, ಸರಣಿ ಸಮಬಲ
India Women vs New Zealand Women: ಭಾರತ ಮತ್ತು ನ್ಯೂಜಿಲೆಂಡ್ ವನಿತೆಯರ ನಡುವಿನ ಸರಣಿ ನಿರ್ಣಾಯಕ ಪಂದ್ಯವು ಅಕ್ಟೋಬರ್ 29ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಕೊನೆಯ ಪಂದ್ಯದಲ್ಲಿ ಗೆಲ್ಲುವ ತಂಡವು ಸರಣಿ ಗೆಲುವಿನೊಂದಿಗೆ ಬೀಗಲಿದೆ.
ಭಾರತ ವನಿತೆಯರ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವನಿತೆಯರ ತಂಡ (India Women vs New Zealand Women) 76 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯು 1-1ರಿಂದ ಸಮಬಲಗೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ 59 ರನ್‌ಗಳಿಂದ ಗೆದ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯದಲ್ಲಿ ವಿಶ್ವಚಾಂಪಿಯನ್ ಕಿವೀಸ್ ಗೆದ್ದು ಬೀಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಿವೀಸ್ ನೀಡಿದ 260 ರನ್‌ಗಳ ಬೃಹತ್ ಮೊತ್ತ ಚೇಸಿಂಗ್ ಮಾಡುವುದು ಭಾರತದ ಪಾಲಿಗೆ ದೊಡ್ಡ ಸವಾಲಾಗಿತ್ತು. ಇದರ ಲಾಭ ಪಡೆದ ಕಿವೀಸ್ ಅರ್ಹ ಗೆಲಲುವು ಸಾಧಿಸಿತು.
ಚೇಸಿಂಗ್ ವೇಳೆ ಭಾರತ ತಂಡದ ಆರಂಭಿಕರು ಹೊಸ ಚೆಂಡನ್ನು ಸಮರ್ಥವಾಗಿ ಎದುರಿಸಲು ಪರದಾಡಿದರು. ಆರ್‌ಸಿಬಿ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಆರಂಭದಲ್ಲೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ತಹುಹು ಮತ್ತು ಜೆಸ್ ಕೆರ್ ಟೀಮ್ ಇಂಡಿಯಾಗೆ ಆರಂಭಿಕ ಹೊಡೆತ ನೀಡಿದರು. ಆ ಬಳಿಕ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಉತ್ತಮ ಜೊತೆಯಾಟವಾಡುವ ಸುಳಿವು ಕೊಟ್ಟರು. ಆದರೆ ಅನುಭವಿ ಆಟಗಾರ್ತಿ ಸೋಫಿ ಡಿವೈನ್ ಚಾಣಾಕ್ಷ ಬೌಲಿಂಗ್‌ಗೆ ಇಬ್ಬರು ಬಲಿಷ್ಠ ಆಟಗಾರ್ತಿಯರು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಇಬ್ಬರನ್ನು ಒಬ್ಬರ ನಂತರ ಮತ್ತೊಬ್ಬರಂತೆ ಪೆವಿಲಿಯನ್ ಕಳುಹಿಸಿದರು.
ರಾಧಾ ಯಾದವ್ ಮತ್ತು ಸೈಮಾ ಠಾಕೂರ್ ಜೊತೆಯಾಟ
ಅದಕ್ಕೂ ಮೊದಲು ಯಾಸ್ತಿಕಾ ಭಾಟಿಯಾ 12 ರನ್ ಗಳಿಸಿ ಔಟಾದರೆ, ನಾಯಕಿ ಕೌರ್ 24 ಮತ್ತು ಜೆಮಿಮಾ ರೋಡ್ರಿಗಸ್ 17 ರನ್ ಗಳಿಸಿ ಔಟಾದರು. ತೇಜಲ್ ಹಸಬ್ನಿಸ್ 15 ರನ್ ಗಳಿಸಿದರೆ, ದೀಪ್ತಿ ಶರ್ಮಾ ಆಟ 15ಕ್ಕೆ ಅಂತ್ಯವಾಯ್ತು. ತಂಡ 8 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದಾಗ ಒಂದು ಹಂತದಲ್ಲಿ ರಾಧಾ ಯಾದವ್ ಮತ್ತು ಸೈಮಾ ಠಾಕೂರ್ ಉತ್ತಮ ಪ್ರತಿರೋಧವೊಡ್ಡಿದರು. ಕಿವೀಸ್ ಅನುಭವಿಗಳನ್ನು ಸಮರ್ಥವಾಗಿ ಎದುರಿಸಿ 70 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಇವರ ಆಟದ ನೆರವಿಂದ ತಂಡದ ಮೊತ್ತ 150ರ ಗಡಿ ದಾಟಿತು. ಆದರೆ ಕೆರ್ ಮತ್ತು ಸೋಫಿ ಡಿವೈನ್ ಮತ್ತೆ ಮ್ಯಾಜಿಕ್ ಮಾಡಿ ಇಬ್ಬರ ವಿಕೆಟ್ ಕಬಳಿಸಿದರು. ಭಾರತ ತಂಡವು 47.1 ಓವರ್‌ಗಳಲ್ಲಿ 183 ರನ್‌ಗೆ ಆಲೌಟ್ ಆಗುವುದರೊಂದಿಗೆ ಸೋಲು ಒಪ್ಪಿಕೊಂಡಿತು.
ಕಿವೀಸ್ ಪ್ರಬಲ ಬ್ಯಾಟಿಂಗ್
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಉತ್ತಮ ಮೊತ್ತ ಕಲೆ ಹಾಕಿತು. ಸುಜಿ ಬೇಟ್ಸ್ (58) ಮತ್ತು ಜಾರ್ಜಿಯಾ ಪ್ಲಿಮ್ಮರ್ ಮೊದಲ ವಿಕೆಟ್‌ಗೆ 87 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಇವರ ಜೊತೆಯಾಟಕ್ಕೆ ದೀಪ್ರಿ ಶರ್ಮಾ ಬ್ರೇಕ್ ಕೊಟ್ಟರು. ಭಾರತವನ್ನು ಕೊನೆಯವರೆಗೂ ಬಿಡದೆ ಕಾಡಿದವರು ಸೋಫಿ ಡಿವೈನ್. ಆರ್‌ಸಿಬಿ ಆಟಗಾರ್ತಿ ಅಬ್ಬರದ ಬ್ಯಾಟಿಂಗ್ ನಡೆಸಿ 79 ರನ್ ಕಲೆ ಹಾಕಿದರು. ಆದರೆ, ರಾಧಾ ಯಾದವ್ ಎಸೆತದಲ್ಲಿ ಜೆಮಿಮಾ ಹಿಡಿದ ಆಕರ್ಷಕ ಕ್ಯಾಚ್‌ಗೆ ಡಿವೈನ್ ವಿಕೆಟ್ ಒಪ್ಪಿಸಬೇಕಾಯ್ತು. ಮ್ಯಾಡಿ ಗ್ರೀನ್ 42 ರನ್ ಗಳಿಸಿದರು. ಜೆಸ್ ಕೆರ್ ಅಜೇಯ 12 ರನ್ ಸಿಡಿಸಿದರು.
ಉಭಯ ತಂಡಗಳ ನಡುವಿನ ಕೊನೆಯ ಹಾಗೂ ಸರಣಿ ನಿರ್ಣಾಯಕ ಪಂದ್ಯವು ಅಕ್ಟೋಬರ್ 29ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಕೊನೆಯ ಪಂದ್ಯವು ಫೈನಲ್ ಪಂದ್ಯದ ಜೋಶ್ ಹುಟ್ಟುಹಾಕಿದ್ದು, ಗೆಲ್ಲುವ ತಂಡವು ಸರಣಿ ಗೆಲುವಿನೊಂದಿಗೆ ಬೀಗಲಿದೆ.