ಭಾರತದ ಪದಕದ ಭರವಸೆಗೆ ಭಾರಿ ಆಘಾತ; 2026ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇರಲ್ಲ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಶೂಟಿಂಗ್
ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಭರವಸೆ ಇರುವ ಹಲವು ಕ್ರೀಡೆಗಳನ್ನು ಕೂಟದಿಂದ ತೆಗೆದುಹಾಕಲಾಗಿದೆ. ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಶೂಟಿಂಗ್, ಟೇಬಲ್ ಟೆನಿಸ್, ಸ್ಕ್ವಾಷ್ ಮತ್ತು ಟ್ರಯಥ್ಲಾನ್ ಕ್ರೀಡೆಗಳು 2026ರ ಆವೃತ್ತಿಯಲ್ಲಿ ನಡೆಯಲ್ಲ.
ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ಆತಿಥ್ಯದಲ್ಲಿ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಭಾರತದ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಭಾರತ ಹೆಚ್ಚು ಪದಕಗಳನ್ನು ಗೆಲ್ಲುವ ಭರವಸೆಯ ಕ್ರೀಡೆಗಳನ್ನೇ ಕ್ರೀಡಾಕೂಟದಿಂದ ತೆಗೆದುಹಾಕಲಾಗಿದೆ. ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್ ಮತ್ತು ಶೂಟಿಂಗ್‌ನಂತಹ ಪ್ರಮುಖ ಕ್ರೀಡೆಗಳು ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆಯುವುದಿಲ್ಲ. ಸಂಪೂರ್ಣ ಈವೆಂಟ್ ಅನ್ನು ಬಜೆಟ್ ಸ್ನೇಹಿಯಾಗಿ ನಡೆಸುವ ಗುರಿ ಇಟ್ಟುಕೊಳ್ಳಲಾಗಿದ್ದು, 10 ವಿಭಾಗಗಳ ಕ್ರೀಡೆಯ ಪರಿಷ್ಕೃತ ಪಟ್ಟಿಯನ್ನು ಆತಿಥೇಯ ನಗರವು ಬಹಿರಂಗಪಡಿಸಿದೆ.
ಕೂಟಾ ವೆಚ್ಚ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಯನ್ನು ಮತ್ತಷ್ಟು ಸುಗಮಗೊಳಿಸಲು, ಟೇಬಲ್ ಟೆನಿಸ್, ಸ್ಕ್ವಾಷ್ ಮತ್ತು ಟ್ರಯಥ್ಲಾನ್ ಕ್ರೀಡೆಯನ್ನು ಸಹ ಹೊರಗಿಡಲಾಗುತ್ತಿದೆ. ಸಂಪೂರ್ಣ ಈವೆಂಟ್ ಕೇವಲ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಈ ಹಿಂದೆ, ಅಂದರೆ 2022ರ ಬರ್ಮಿಂಗ್ಹ್ಯಾಮ್ ಆವೃತ್ತಿಗೆ ಹೋಲಿಸಿದರೆ ಒಟ್ಟಾರೆ ಈವೆಂಟ್‌ಗಳ ಸಂಖ್ಯೆ ಕೂಡಾ ಒಂಬತ್ತರಷ್ಟು ಕಡಿಮೆಯಾಗುತ್ತದೆ.
2026ರ ಜುಲೈ 23ರಿಂದ ಆಗಸ್ಟ್ 2ರವರೆಗೆ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟ ನಿಗದಿಯಾಗಿದೆ. ಆ ಮೂಲಕ ಗ್ಲ್ಯಾಸ್ಗೋ ನಗರವು 12 ವರ್ಷಗಳ ನಂತರ ಕೂಡಕ್ಕೆ ಆತಿಥ್ಯ ವಹಿಸುತ್ತಿದೆ. ಈ ಬಾರಿಯ ಕೂಟವು ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಈಜು ಮತ್ತು ಪ್ಯಾರಾ ಈಜು, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್ಬಾಲ್, ವೇಟ್ಲಿಫ್ಟಿಂಗ್ ಮತ್ತು ಪ್ಯಾರಾ ಪವರ್ಲಿಫ್ಟಿಂಗ್, ಬಾಕ್ಸಿಂಗ್, ಜೂಡೋ, ಬೌಲ್ಸ್ ಮತ್ತು ಪ್ಯಾರಾ ಬೌಲ್ಸ್, ಜೊತೆಗೆ 3×3 ಬ್ಯಾಸ್ಕೆಟ್ಬಾಲ್ ಮತ್ತು 3×3 ಗಾಲಿಕುರ್ಚಿ ಬ್ಯಾಸ್ಕೆಟ್ಬಾಲ್ ಕ್ರೀಡೆಗಳನ್ನು ಒಳಗೊಂಡಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಪ್ರಕಟಿಸಿದೆ.
ನಾಲ್ಕು ಸ್ಥಳಗಳಲ್ಲಿ ಕ್ರೀಡೆಗಳು
ಕ್ರೀಡಾಕೂಟವು ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಸ್ಕಾಟ್ಲೆಂಡ್ ಕ್ರೀಡಾಂಗಣ, ಟಾಲ್ಕ್ರಾಸ್ ಇಂಟರ್ನ್ಯಾಷನಲ್ ಈಜು ಕೇಂದ್ರ, ಎಮಿರೇಟ್ಸ್ ಅರೆನಾ ಮತ್ತು ಸ್ಕಾಟಿಷ್ ಈವೆಂಟ್ ಕ್ಯಾಂಪಸ್ (ಎಸ್ಇಸಿ). ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿ ಹತ್ತಿರದ ಹೋಟೆಲ್‌ಗಳಲ್ಲಿ ಉಳಿಯಲಿದ್ದಾರೆ.
ಕ್ರೀಡೆಗಳ ಪಟ್ಟಿಯು ಕಡಿಮೆಯಾಗಿರುವುದು ಭಾರತದ ಪದಕದ ನಿರೀಕ್ಷೆಗಳಿಗೆ ಗಮನಾರ್ಹವಾಗಿ ಹೊಡೆತ ಬಿದ್ದಿದೆ. ಭಾರತವು ಪದಕ ಗೆಲ್ಲಬಲ್ಲ ಕ್ರೀಡೆಗಳನ್ನು ಹೊರಗಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಈ ಹಿಂದಿನ ಕ್ರೀಡಾಕೂಟಗಳಲ್ಲೂ ಭಾರತವು ರದ್ದಾಗಿರುವ ಕ್ರೀಡೆಗಳಲ್ಲಿ ಪದಕ ಗೆದ್ದಿತ್ತು. ನಾಲ್ಕು ವರ್ಷಗಳ ಹಿಂದೆ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಶೂಟಿಂಗ್ ಇರಲಿಲ್ಲ. ಈ ಬಾರಿ ಮತ್ತೆ ಶೂಟಿಂಗ್ ಮಿಸ್ ಆಗುತ್ತಿದೆ. 2010ರ ದೆಹಲಿ ಗೇಮ್ಸ್‌ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಬಿಲ್ಲುಗಾರಿಕೆಯನ್ನೂ ಕೈಬಿಡಲಾಗಿದೆ.
ಹಾಕಿಯೂ ಇಲ್ಲ
ಹಾಕಿ ಪಂದ್ಯ ಇಲ್ಲದಿರುವುದು ಭಾರತಕ್ಕೆ ಭಾರಿ ಹಿನ್ನಡೆಯಾಗಲಿದೆ. ಪುರುಷರ ತಂಡವು ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳ ಇತಿಹಾಸವನ್ನು ಹೊಂದಿದೆ. ಇದೇ ವೇಳೆ ಮಹಿಳಾ ತಂಡವು 2002ರಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಮೂರು ಪದಕಗಳನ್ನು ಹಾಕಿಯಲ್ಲಿ ಗೆದ್ದಿದೆ.
ಬ್ಯಾಡ್ಮಿಂಟ್‌ನ್‌ನಲ್ಲಿ ರಾಶಿ ಪದಕಗಳು ಮಿಸ್
ಭಾರತವು 10 ಚಿನ್ನ, 8 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 31 ಬ್ಯಾಡ್ಮಿಂಟನ್ ಪದಕಗಳನ್ನು ಗೆದ್ದಿದೆ. ಪುರುಷರ ಮತ್ತು ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿ 2026ರ ಆವೃತ್ತಿಗೆ ಪ್ರವೇಶಿಸಲು ಸಜ್ಜಾಗಿತ್ತು. ಶೂಟಿಂಗ್‌ನಲ್ಲಿ ಭಾರತ 63 ಚಿನ್ನ, 44 ಬೆಳ್ಳಿ ಮತ್ತು 28 ಕಂಚು ಸೇರಿದಂತೆ 135 ಪದಕಗಳನ್ನು ಗೆದ್ದರೆ, ಕುಸ್ತಿ 114 ಪದಕಗಳನ್ನು ಗೆದ್ದಿದೆ. ಆದರೆ ಈ ಕ್ರೀಡೆಗಳು ಈ ಬಾರಿ ನಡೆಯುತ್ತಿಲ್ಲ. 2022ರಲ್ಲಿ ನಡೆದ ವನಿತೆಯರ ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕವನ್ನು ಗಳಿಸಿತ್ತು. ಈ ಬಾರಿ ಚಿನ್ನ ಗೆಲ್ಲುವ ಬಯಕೆಗೂ ತಡೆಯಾಗಿದೆ.