ಕನ್ನಡ ಸುದ್ದಿ  /  ಕ್ರಿಕೆಟ್  /  ತನ್ನದೇ ದೇಶದ ಮಾಜಿ ಆಟಗಾರರು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಬಾಬರ್‌ ಅಜಮ್

ತನ್ನದೇ ದೇಶದ ಮಾಜಿ ಆಟಗಾರರು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಬಾಬರ್‌ ಅಜಮ್

ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಲುಬೇಗನೆ ಎಲಿಮನೇಟ್‌ ಆದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್‌, ತಮ್ಮದೇ ದೇಶದ ಮಾಜಿ ಆಟಗಾರರು ಮತ್ತು ಅಭಿಮಾನಿಗಳಿಂದ ಟೀಕೆಗೆ ಗುರಿಯಾದರು. ಇದೀಗ ದೇಶದ ಹಿರಿಯ ಕ್ರಿಕೆಟಿಗರು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಬಾಬರ್‌ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಮಾಜಿ ಆಟಗಾರರು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಬಾಬರ್‌ ಅಜಮ್
ಮಾಜಿ ಆಟಗಾರರು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಬಾಬರ್‌ ಅಜಮ್ (AP)

ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಗ್ರೂಪ್‌ ಹಂತದಲ್ಲೇ ನಿರ್ಗಮಿಸಿತು. ಆ ಬಳಿಕ ತಂಡದ ನಾಯಕ ಬಾಬರ್ ಅಜಮ್ (Babar Azam) ಮೇಲೆ ಪಾಕ್‌ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಟಿ20 ವಿಶ್ವಕಪ್ ಅಭಿಯಾನದ ವೇಳೆ ಬಾಬರ್‌ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಯೂಟ್ಯೂಬರ್ ಮತ್ತು ಮಾಜಿ ಕ್ರಿಕೆಟಿಗರ ವಿರುದ್ಧ ಬಾಬರ್‌ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವಿಶ್ವಕಪ್‌ನಲ್ಲಿ ಕಳಪೆ ಅಭಿಯಾನದಿಂದಾಗಿ ಬಾಬರ್ ಮತ್ತು ಪಾಕಿಸ್ತಾನ ತಂಡದ ಆಟಗಾರರ ಮೇಲೆ ಪಾಕ್‌ನ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಕಟು ಟೀಕೆ ಮಾಡುತ್ತಿದ್ದಾರೆ. ತಂಡದಲ್ಲಿ ಒಗ್ಗಟ್ಟಿಲ್ಲ ಎಂಬೆಲ್ಲಾ ಹೇಳಿಕೆಗಳು ಮಾಜಿ ಕ್ರಿಕೆಟಿಗರಿಂದಲೇ ಹೊರಬರುತ್ತಿವೆ. ಈ ನಡುವೆ ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಆಡುವಾಗ ಬಾಬರ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮ ಅಭಿಯಾನ ಕೂಡಾ ನಡೆದಿತ್ತು. ಇದರಿಂದ ಪಾಕ್‌ ನಾಯಕ ನಿರಾಶೆಗೊಂಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ.

ಸದ್ಯ ಯೂಟ್ಯೂಬರ್‌ಗಳು ಮತ್ತು ಮಾಜಿ ಕ್ರಿಕೆಟಿಗರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾನೂನು ಇಲಾಖೆ ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ತಂಡದ ಕಳಪೆ ಪ್ರದರ್ಶನಕ್ಕೆ ನಾಯಕನನ್ನು ಗುರಿಯಾಗಿಸಲಾಗಿದೆ. ಹೀಗಾಗಿ ನಾಯಕ ಸ್ಥಾನದಿಂದ ಮತ್ತೊಮ್ಮೆ ಬಾಬರ್‌ ಕೆಳಗಿಳಿಯುವ ಸಾಧ್ಯತೆಯೂ ದಟ್ಟವಾಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲೂ ಪಾಕಿಸ್ತಾನ ಟೂರ್ನಿಯಿಂದ ಬೇಗನೆ ನಿರ್ಗಮಿಸಿತ್ತು. ಆ ಬಳಿಕ ಬಾಬರ್‌ ನಾಯಕತ್ವದಿಂದ ಕೆಳಗಿಳಿದರು. ಬಳಿಕ ನಾಯಕನಾಗಿ ಶಹೀನ್‌ ಅಫ್ರಿದಿ ಅವರನ್ನು ನೇಮಿಸಲಾಯ್ತು. ಆದರೆ, ಚುಟುಕು ವಿಶ್ವಕಪ್‌ಗೂ ಮುನ್ನ ಮತ್ತೆ ಬಾಬರ್‌ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯ್ತು.

ಟೂರ್ನಿ ಮುಗಿದರೂ ಅಮೆರಿಕದಲ್ಲಿ ಪಾಕ್‌ ಆಟಗಾರರ ಮಸ್ತಿ

ಟೂರ್ನಿಯಿಂದ ಬಲುಬೇಗನೆ ಹೊರಬಿದ್ದ ಪಾಕಿಸ್ತಾನ ತಂಡದ ಕೆಲವು ಆಟಗಾರರು ಮತ್ತು ಅಧಿಕಾರಿಗಳು ಈಗಾಗಲೇ ತವರಿಗೆ ಮರಳಿದ್ದಾರೆ. ನಸೀಮ್ ಶಾ, ಉಸ್ಮಾನ್ ಖಾನ್ ಮತ್ತು ಹಿರಿಯ ವ್ಯವಸ್ಥಾಪಕ ವಹಾಬ್ ರಿಯಾಜ್ ಇದರಲ್ಲಿ ಸೇರಿದ್ದಾರೆ. ಆದರೆ, 15 ಸದಸ್ಯರ ತಂಡದ ಕೆಲವು ಆಟಗಾರರು ಪಂದ್ಯಾವಳಿ ಮುಗಿದ ನಂತರವೂ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಳಿದುಕೊಂಡಿದ್ದಾರೆ. ನಾಯಕ ಬಾಬರ್ ಅಜಮ್‌, ಇಮಾದ್ ವಾಸಿಮ್, ಹ್ಯಾರಿಸ್ ರೌಫ್, ಶದಾಬ್ ಖಾನ್ ಮತ್ತು ಅಜಂ ಖಾನ್ ಶನಿವಾರ ನಿರ್ಗಮಿಸುವ ನಿರೀಕ್ಷೆಯಿದೆ.

ಇದೇ ವೇಳೆ ಪಾಕಿಸ್ತಾನ ತಂಡವು ಫಿಕ್ಸಿಂಗ್‌ ಮಾಡಿದೆ ಎಂಬ ಆರೋಪವೂ ವ್ಯಾಪಕವಾಗಿ ಹಬ್ಬಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಸಿಬಿ, ಫಿಕ್ಸಿಂಗ್‌ ಸಾಬೀತುಪಡಿಸುವ ಸಾಕ್ಷಿಗಳನ್ನು ಒದಗಿಸಿ ಎಂದು ಬಹಿರಂಗ ಸವಾಲು ಹಾಕಿದೆ.

ಟೂರ್ನಿಯಲ್ಲಿ ಭಾರತ ತಂಡದೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನವು, ಸಹ-ಆತಿಥೇಯ ಅಮೆರಿಕ ಮತ್ತು ಭಾರತದ ವಿರುದ್ಧ ಸತತ ಸೋಲುಗಳನ್ನು ಅನುಭವಿಸಿತು. ಆ ಬಳಿಕ ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3 ವಿಕೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿ ತನ್ನ ಅಭಿಯಾನ ಕೊನೆಗೊಳಿಸಿತು.