ಒಂದು ಸೆಂಚುರಿ, ಎಷ್ಟೋ ರೆಕಾರ್ಡ್ಸ್ ಬ್ರೇಕ್; ರವಿಚಂದ್ರನ್ ಅಶ್ವಿನ್ ಶತಕಕ್ಕೆ ದಾಖಲೆಗಳು ಚಿಂದಿ ಚಿತ್ರಾನ್ನ
R Ashwin: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅದ್ಭುತ ಶತಕ ಸಿಡಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
Ravichandran Ashwin: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್ ಅವರು ಮನಮೋಹಕ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದಂದು ಅಶ್ವಿನ್, ಕೇವಲ 15 ರನ್ ಸೇರಿಸಿ ಔಟಾದರು. ಒಟ್ಟಾರೆ ಅವರು 133 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ 113 ರನ್ ಬಾರಿಸಿದ್ದಾರೆ. ಅಶ್ವಿನ್ ಸಿಡಿಸಿದ ಶತಕದಿಂದ ದಾಖಲಾದ ದಾಖಲೆಗಳೆಷ್ಟು? ಇಲ್ಲಿದೆ ಪಟ್ಟಿ, ಒಂದೊಂದಾಗಿಯೇ ನೋಡೋಣ.
ಅತ್ಯಧಿಕ 50+ ಮತ್ತು 30 ಬಾರಿ 5 ವಿಕೆಟ್
ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆಯಾಗಿದೆ. ಟೆಸ್ಟ್ನಲ್ಲಿ 20 ಸಲ 50+ ಸ್ಕೋರ್ ಮಾಡಿದ ಹಾಗೂ 30ಕ್ಕೂ ಹೆಚ್ಚು ಬಾರಿ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಕಿತ್ತಿರುವ ಮೊದಲ ಆಟಗಾರ ಅಶ್ವಿನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಶ್ವಿನ್ ಟೆಸ್ಟ್ನಲ್ಲಿ 14 ಅರ್ಧಶತಕ ಮತ್ತು ಆರು ಶತಕ ಸಿಡಿಸಿರುವುದರ ಜೊತೆಗೆ 36 ಬಾರಿ ಇನ್ನಿಂಗ್ಸ್ವೊಂದರಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ಸಾಧನೆಗೈದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ.
500+ ವಿಕೆಟ್ ಪಡೆದವರಲ್ಲಿ ಅತ್ಯಧಿಕ ಶತಕ
ಟೆಸ್ಟ್ ಕ್ರಿಕೆಟ್ನಲ್ಲಿ 500ಕ್ಕೂ ಅಧಿಕ ವಿಕೆಟ್ ಪಡೆದ ಆಟಗಾರರ ಸಂಖ್ಯೆ 9. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಜೇಮ್ಸ್ ಆ್ಯಂಡರ್ಸನ್, ಕುಂಬ್ಳೆ, ಸ್ಟುವರ್ಡ್ ಬ್ರಾಡ್, ಗ್ಲೇನ್ ಮೆಕ್ರಾತ್, ನಾಥನ್ ಲಿಯಾನ್, ಕರ್ಟ್ಲಿ ವಾಲ್ಶ್, ಅಶ್ವಿನ್ ಇವರು ಟೆಸ್ಟ್ನಲ್ಲಿ 500+ ವಿಕೆಟ್ ಪಡೆದವರು. ಆದರೆ, ಈ ಪೈಕಿ ಅಶ್ವಿನ್ ಮಾತ್ರ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರ ಎನಿಸಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಒಂದು ಸೆಂಚುರಿ ಸಿಡಿಸಿದ್ದು ಬಿಟ್ಟರೆ ಉಳಿದವರಿಂದ ಅದು ಸಾಧ್ಯವಾಗಿಲ್ಲ.
ಒಂದೇ ಮೈದಾನದಲ್ಲಿ ಹೆಚ್ಚು ಶತಕ, 5 ವಿಕೆಟ್ ಪತನ
ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ನಿರ್ದಿಷ್ಟ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಪಟ್ಟಿಗೆ ಅಶ್ವಿನ್ ಸೇರ್ಪಡೆಗೊಂಡಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿ ಐವರು ಸೇರ್ಪಡೆಗೊಂಡಿದ್ದು, ಅದರಲ್ಲಿ ಅಶ್ವಿನ್ ಕೂಡ ಒಬ್ಬರು. ಈ ಹಿಂದೆ ಇದೇ ಚೆಪಾಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದ್ದರು.
ಕೆಳ ಕ್ರಮಾಂಕದಲ್ಲಿ ಹೆಚ್ಚು ಶತಕ
ಟೆಸ್ಟ್ನಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅಶ್ವಿನ್ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಎಂಟನೇ ಸ್ಥಾನದಲ್ಲಿ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು 4 ಶತಕ ಬಾರಿಸಿದ್ದಾರೆ.
ಚೆಪಾಕ್‌ನಲ್ಲಿ ಅತ್ಯಧಿಕ ಜೊತೆಯಾಟ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಏಳನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದ್ದಾರೆ. ಈ ಜೋಡಿ 199 ರನ್ಗಳ ಜೊತೆಯಾಟವಾಡಿದೆ. ಈ ಹಿಂದೆ 2016ರಲ್ಲಿ ಇದೇ ಮೈದಾನದಲ್ಲಿ ಕರುಣ್ ನಾಯರ್ ಮತ್ತು ಜಡೇಜಾ ಅವರು 138 ರನ್ ಪಾಲುದಾರಿಕೆ ನೀಡಿದ್ದರು. ಇದೀಗ ಈ ದಾಖಲೆಯನ್ನು ಆ್ಯಷ್-ಜಡ್ಡು ಜೋಡಿ ಮುರಿದಿದೆ.
376ಕ್ಕೆ ಭಾರತ ಆಲೌಟ್
ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 376ಕ್ಕೆ ಆಲೌಟ್ ಆಗಿದೆ. ಮೊದಲ ದಿನದ ಅಂತ್ಯಕ್ಕೆ 339ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ದಿನ ಭೋಜನ ವಿರಾಮಕ್ಕೂ ಮೊದಲೇ ಆಲೌಟ್ ಆಗಿದೆ. 86 ರನ್ ಗಳಿಸಿ ಕ್ರೀಸ್ನಲ್ಲಿದ್ದ ರವೀಂದ್ರ ಜಡೇಜಾ ಅವರು ಬೇಗನೇ ಔಟ್ ಆದರೆ, ನಂತರ ಶತಕ ಸಿಡಿಸಿದ್ದ ಅಶ್ವಿನ್ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಬುಮ್ರಾ, ಆಕಾಶ್ ದೀಪ್ ಕಡಿಮೆ ರನ್ಗೆ ಔಟಾದರು. ಬಾಂಗ್ಲಾ ಪರ ಹಸನ್ ಮಹಮ್ಮದ್ 5 ವಿಕೆಟ್, ಟಸ್ಕಿನ್ ಅಹ್ಮದ್ 3, ನಹಿದ್ ರಾಣಾ, ಮೆಹದಿ ಹಸನ್ ಮಿರಾಜ್ ತಲಾ 1 ವಿಕೆಟ್ ಪಡೆದರು.