ಐಪಿಎಲ್ 2025ಕ್ಕೆ ಮೂವರನ್ನು ಉಳಿಸಿಕೊಳ್ಳಲು ಮುಂದಾದ ಆರ್‌ಸಿಬಿ; ಫಾಫ್ ಡು ಪ್ಲೆಸಿಸ್-ವಿರಾಟ್ ಕೊಹ್ಲಿ ಜೊತೆಗೆ ಈ ಆಟಗಾರ ರಿಟೈನ್
RCB IPL 2025: ಐಪಿಎಲ್ 2025ರ ಆವೃತ್ತಿಗೂ ಮುನ್ನ ಕೆಲವು ಆಟಗಾರರನ್ನು ಆರ್‌ಸಿಬಿ ತಂಡ ಉಳಿಸಿಕೊಳ್ಳುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ ಜೊತೆಗೆ ಇಬ್ಬರು ಅನುಭವಿ ಆಟಗಾರರನ್ನು ತಂಡ ಉಳಿಸಿಕೊಳ್ಳಬಹುದು. ಆ ಮೂರು ಆಟಗಾರರಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡಾ ಸೇರಿದ್ದಾರೆ.
ಐಪಿಎಲ್ 18ರ ಆವೃತ್ತಿಗೂ ಮುನ್ನ ಆಟಗಾರರ ರಿಟೆನ್ಷನ್ ಹಾಗೂ ಹರಾಜು ಪ್ರಕ್ರಿಯೆ ಕುರಿತು ಅಭಿಮಾನಿಗಳ ಲೆಕ್ಕಾಚಾರ ಶುರುವಾಗಿದೆ. ಐಪಿಎಲ್ 2025ರ ಕುರಿತು ಫ್ಯಾನ್ಸ್ ನಿರೀಕ್ಷೆ ಹೆಚ್ಚಲು ಪ್ರಮುಖ ಕಾರಣವೆಂದರೆ ಋತುವಿನ ಆರಂಭಕ್ಕೂ ಮೊದಲು ನಡೆಯಲಿರುವ ಮೆಗಾ-ಹರಾಜು. ಅದಕ್ಕೂ ಮುನ್ನ ಆಟಗಾರರ ಟ್ರೇಡಿಂಗ್ ಹಾಗೂ ಉಳಿಕೆ ಪ್ರಕ್ರಿಯೆ ಕೂಡಾ ಅಂತಿಮವಾಗಲಿದೆ. ಬಿಸಿಸಿಐ ಇತ್ತೀಚೆಗಷ್ಟೇ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಕುರಿತ ನಿಯಮಗಳನ್ನು ಪ್ರಕಟಿಸಿತು. ಸದ್ಯ ಪ್ರತಿ ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನೀಡಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಈ ನಡುವೆ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ತಂಡ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ. ಹೀಗಾಗಿ ಮುಂದಿನ ಸೀಸನ್‌ಗೆ ಮುಂಚಿತವಾಗಿ ತಂಡವನ್ನು ಪುನರ್ರಚಿಸಲು ಎದುರು ನೋಡುತ್ತಿದೆ. ಕಳೆದ ಕೆಲವು ಋತುಗಳಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಿದ್ದರೂ, ಟ್ರೋಫಿ ಮಾತ್ರ ಅಭಿಮಾನಿಗಳ ಪಾಲಿಗೆ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿ ತಂಡ ಯಾವೆಲ್ಲಾ ಆಟಗಾರರನ್ನು ಉಳಿಸಲಿದೆ ಹಾಗೂ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಲವು ವರದಿಗಳ ಪ್ರಕಾರ, ಕೆಲವೊಂದು ಆಟಗಾರರನ್ನು ತಂಡ ಉಳಿಸಿಕೊಳ್ಳುವುದು ಖಚಿತವಾಗಿದೆ. ಆರ್‌ಸಿಬಿ ತಂಡವು ಒಂದು ಬ್ರಾಂಡ್ ಆಗಿ ರೂಪುಗೊಳ್ಳುವಲ್ಲಿ ವಿರಾಟ್ ಕೊಹ್ಲಿ ಪಾಲು ದೊಡ್ಡದು. ಹೀಗಾಗಿ ಕಿಂಗ್ ಕೊಹ್ಲಿಯನ್ನು ತಂಡ ರಿಟೇನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸುದ್ದಿಸಂಸ್ಥೆ ಪಿಟಿಐ ವರದಿಯಂತೆ, ಆರ್‌ಸಿಬಿ ತಂಡವು ಈ ಬಾರಿ ಈ ಮೂರು ಆಟಗಾರರನ್ನು ಉಳಿಸಿಕೊಳ್ಳಬಹುದು.
ವಿರಾಟ್ ಕೊಹ್ಲಿ
ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ, ಐಪಿಎಲ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಐಪಿಎಲ್‌ನ ಒಂದೇ ತಂಡದ ಪರ ಆಡಿರುವ ವಿಶೇಷ ದಾಖಲೆ ಇವರ ಹೆಸರಲ್ಲಿದೆ. ವಿರಾಟ್ ಬೆಂಗಳೂರು ಪರ 252 ಪಂದ್ಯಗಳನ್ನು ಆಡಿದ್ದು, 38.67ರ ಸರಾಸರಿ ಮತ್ತು 131.97 ಸ್ಟ್ರೈಕ್ ರೇಟ್‌ನಲ್ಲಿ 8,004 ರನ್ ಗಳಿಸಿದ್ದಾರೆ. ಇವರನ್ನು ಉಳಿಸಿಕೊಳ್ಳುವುದರಲ್ಲಿ ಮ್ಯಾನೇಜ್‌ಮೆಂಟ್‌ಗೆ ಯಾವ ಗೊಂದಲವೂ ಇಲ್ಲ.
ಮೊಹಮ್ಮದ್ ಸಿರಾಜ್
ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಮುಂದಿನ ಸೀಸನ್‌ಗೆ ಮುಂಚಿತವಾಗಿ ಆರ್‌ಸಿಬಿ ಬಿಡುಗಡೆ ಮಾಡುವ ಕುರಿತು ಮಾತು ಕೇಳಿಬರುತ್ತಿವೆ. ಕಳೆದ ಕೆಲವು ತಿಂಗಳುಗಳಿಂದ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಆದರೆ, ವರದಿಗಳ ಪ್ರಕಾರ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವೇಗದ ಬೌಲರ್ ಮೇಲೆ ವಿಶ್ವಾಸವಿಟ್ಟಿದೆ. ಆರ್‌ಸಿಬಿ ಪರ 87 ಪಂದ್ಯಗಳನ್ನು ಆಡಿರುವ ಸಿರಾಜ್, 83 ವಿಕೆಟ್‌ಗಳನ್ನು ಪಡೆದಿದ್ದಾರೆ. ತಂಡದ ಅವಿಭಾಜ್ಯ ಅಂಗವಾಗಿರುವ ವೇಗಿ, ವಿರಾಟ್ ಅವರ ನೆಚ್ಚಿನ ಬೌಲರ್ ಕೂಡಾ ಹೌದು. ಹೀಗಾಗಿ ತಂಡ ಭಾರತದ ಅನುಭವಿಯನ್ನು ರಿಟೇನ್ ಮಾಡಬಹುದು.
ಫಾಫ್ ಡು ಪ್ಲೆಸಿಸ್
ವಿರಾಟ್ ಕೊಹ್ಲಿ ನಾಯಕನ ಸ್ಥಾನದಿಂದ ಕೆಳಗಿಳಿದ ನಂತರ ದಕ್ಷಿಣ ಆಫ್ರಿಕಾದ ಅನುಭವಿ ಕ್ರಿಕೆಟಿಗ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡರು. ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲದಿದ್ದರೂ, ಅವರ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೆ, ಡು ಪ್ಲೆಸಿಸ್ ಕೂಡಾ ತಂಡದ ಪ್ರಬಲ ಆರಂಭಿಕ ಆಟಗಾರನಾಗಿ ಅಮೋಘ ಪ್ರದರ್ಶನ ನೀಡಿದ್ದಾರೆ. ಫ್ರಾಂಚೈಸಿ ಪರ ಫಾಫ್ ಆಡಿದ 45 ಪಂದ್ಯಗಳಲ್ಲಿ, 38.05ರ ಸರಾಸರಿ ಮತ್ತು 146.99ರ ಸ್ಟ್ರೈಕ್ ರೇಟ್‌ನಲ್ಲಿ 1,636 ರನ್ ಗಳಿಸಿದ್ದಾರೆ.