ಕೆಕೆಆರ್ ಕೈಬಿಟ್ಟರೆ ಆರ್‌ಸಿಬಿ ಸೇರುತ್ತೇನೆ ಎಂದ ಸ್ಫೋಟಕ ಬ್ಯಾಟರ್; ವಿರಾಟ್ ಕೊಹ್ಲಿ ಟೀಮ್ಗೆ ಈತ ಬಂದ್ರೆ ಏನು ಲಾಭ?
ಮೆಗಾ ಹರಾಜಿಗೂ ಮುನ್ನ ರಿಂಕು ಸಿಂಗ್ ಅವರನ್ನು ಕೆಕೆಆರ್ ಬಿಡುಗಡೆ ಮಾಡಿದರೆ, ಆರ್‌ಸಿಬಿ ತಂಡಕ್ಕೆ ಹೋಗುವ ಬಯಕೆ ಸ್ಫೋಟಕ ಬ್ಯಾಟರ್ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ಉಳಿಸಿಕೊಳ್ಳದಿದ್ದರೆ ನೀವು ಯಾವ ತಂಡವನ್ನು ಸೇರಲು ಬಯಸುತ್ತೀರಿ ಎಂದು ಕೇಳಿದಾಗ, ಬೆಂಗಳೂರು ಎಂದು ರಿಂಕು ಹೇಳಿದ್ದಾರೆ.
ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ (Rinku Singh) ತಮ್ಮ ಐಪಿಎಲ್ ವೃತ್ತಿಜೀವನವನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ಮೂಲಕ ಪ್ರಾರಂಭಿಸಿದರು. 2018ರಲ್ಲಿ ಕೋಲ್ಕತ್ತಾ 10 ಲಕ್ಷ ರೂಪಾಯಿ ನೀಡಿ ಇವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಇದಾದ ನಂತರ ಅವರು ಕೆಕೆಆರ್ ಪರ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾಗೂ ಆಯ್ಕೆಯಾಗಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಶಾರುಖ್ ಖಾನ್ ತಂಡದೊಂದಿಗೆ ರಿಂಕು 6 ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಇದರ ಹೊರತಾಗಿಯೂ, ರಿಂಕು ಅವರು ಕೆಕೆಆರ್ ಬಗ್ಗೆ ಭ್ರಮನಿರಸನಗೊಂಡಿರುವಂತೆ ತೋರುತ್ತಿದೆ.
ರಿಂಕು ಸಿಂಗ್ ಅವರನ್ನು ಮೆಗಾ ಹರಾಜಿಗೂ ಮುನ್ನ ಒಂದು ವೇಳೆ ಕೆಕೆಆರ್ ಫ್ರಾಂಚೈಸಿ ಬಿಡುಗಡೆ ಮಾಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ತಂಡವು ಉಳಿಸಿಕೊಳ್ಳದಿದ್ದರೆ ನೀವು ಯಾವ ತಂಡವನ್ನು ಸೇರಲು ಬಯಸುತ್ತೀರಿ ಎಂದು ಕೇಳಿದಾಗ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ರಿಂಕು ಹೇಳಿದ್ದಾರೆ. ರಿಂಕು ಆರ್‌ಸಿಬಿ ಸೇರಿದರೆ, ಫ್ರಾಂಚೈಸಿ 3 ಬಹುದೊಡ್ಡ ಪ್ರಯೋಜನಗಳನ್ನು ಪಡೆಯಬಹುದು.
ಹೊಸ ಫಿನಿಶರ್
ರಿಂಕು ಸಿಂಗ್ ತಮ್ಮ ಫಿನಿಶಿಂಗ್ ಕೌಶಲ್ಯಕ್ಕೆ ಬಹಳ ಪ್ರಸಿದ್ಧರಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಭಾರತೀಯ ತಂಡಕ್ಕಾಗಿ ಅಂತಿಮ ಹಂತದಲ್ಲಿ ಭರ್ಜರಿ ರನ್ ಗಳಿಸಿ ಪಂದ್ಯಗಳನ್ನು ಫಿನಿಶ್ ಮಾಡಿದ್ದಾರೆ. ಇದೀಗ ದಿನೇಶ್ ಕಾರ್ತಿಕ್ ಕೂಡ ಐಪಿಎಲ್ನಿಂದ ನಿವೃತ್ತಿ ಪಡೆದಿದ್ದಾರೆ. ಹೀಗಾಗಿ ಆರ್‌ಸಿಬಿ ನೂತನ ಫಿನಿಶರ್ನ ಹುಡುಕಾಟದಲ್ಲಿದೆ. ಈ ಪಾತ್ರವನ್ನು ನಿಭಾಹಿಸಲು ರಿಂಕು ಪರ್ಫೆಕ್ಟ್ ಆಟಗಾರ.
ಬ್ಯಾಟಿಂಗ್‌ನಲ್ಲಿ ಡೆಪ್ತ್
ರಿಂಕು ಸಿಂಗ್ ಆಗಮನದಿಂದ ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಡೆಪ್ತ್ ಹೆಚ್ಚಲಿದೆ. ರಿಂಕು ಈಗ ಅನುಭವಿ ಬ್ಯಾಟರ್ ಆಗಿದ್ದು, ಅವರ ಆಗಮನದಿಂದ ಬೆಂಗಳೂರಿನ ಬ್ಯಾಟಿಂಗ್ ಇನ್ನಷ್ಟು ಬಲಿಷ್ಠವಾಗಲಿದೆ.
ಗನ್ ಫೀಲ್ಡರ್
ಬ್ಯಾಟಿಂಗ್ ಜೊತೆಗೆ ರಿಂಕು ಸಿಂಗ್ ಅತ್ಯುತ್ತಮ ಫೀಲ್ಡರ್ ಕೂಡ ಹೌದು. ಅವರು ತಮ್ಮ ಫೀಲ್ಡಿಂಗ್‌ನಿಂದ ಆರ್‌ಸಿಬಿಗಾಗಿ ಪಂದ್ಯವನ್ನು ಗೆಲ್ಲಿಸಬಹುದು. ಇದಲ್ಲದೇ ಇತ್ತೀಚೆಗಷ್ಟೇ ಶ್ರೀಲಂಕಾ ಪ್ರವಾಸದ ವೇಳೆ ಪಂದ್ಯವೊಂದರಲ್ಲಿ ತಮ್ಮ ಬೌಲಿಂಗ್ ಮೂಲಕವೂ ರಿಂಕು ಎಲ್ಲರ ಮನಗೆದ್ದಿದ್ದರು. ಅಗತ್ಯವಿದ್ದರೆ ರಿಂಕು ಬೌಲ್ ಕೂಡ ಮಾಡಬಹುದು.
2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಸಂಚಲನ ಮೂಡಿಸಿದ್ದರು. ಈ ಸಾಧನೆಯಿಂದಲೇ ಅವರಿಗೆ ದೇಶಾದ್ಯಂತ ಮನ್ನಣೆ ಸಿಕ್ಕಿದ್ದು, ಕೆಲ ತಿಂಗಳ ನಂತರ ಟೀಮ್ ಇಂಡಿಯಾಗೆ ಆಯ್ಕೆಯಾದರು. ಇದರ ಹೊರತಾಗಿಯೂ, ಕೆಕೆಆರ್ ಅವರನ್ನು ಬಿಡುಗಡೆ ಮಾಡಿದರೆ, ಅವರು ಆರ್‌ಸಿಬಿ ಪರ ಆಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಇದರ ಹಿಂದೆ ರಿಂಕು ದೊಡ್ಡ ಕಾರಣವನ್ನೇ ನೀಡಿದ್ದಾರೆ. ಸ್ಪೋರ್ಟ್ ತಕ್ ವರದಿಯ ಪ್ರಕಾರ, ಆರ್‌ಸಿಬಿಗಾಗಿ ಆಡಲು ದೊಡ್ಡ ಕಾರಣ ವಿರಾಟ್ ಕೊಹ್ಲಿ ಎಂದು ಅವರು ಹೇಳಿದ್ದಾರೆ.
ವರದಿ: ವಿನಯ್ ಭಟ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಅದೇ ಸ್ಟೈಲ್, ಅದೇ ವೇಗ; ಜಸ್ಪ್ರೀತ್ ಬುಮ್ರಾರಂತೆ ಬೌಲಿಂಗ್ ಮಾಡ್ತಾಳೆ ಬೆಂಗಳೂರು ಶಾಲೆಯ ಹುಡುಗಿ -Video