Shikhar Dhawan: ಬೆಳ್ಳಂಬೆಳಗ್ಗೆ ನಿವೃತ್ತಿಯ ಆಘಾತ ನೀಡಿದ ಶಿಖರ್ ಧವನ್; ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗಬ್ಬರ್ ವಿದಾಯ-shikhar dhawan announces retirement from international and domestic cricket posts emotional message for fans vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Shikhar Dhawan: ಬೆಳ್ಳಂಬೆಳಗ್ಗೆ ನಿವೃತ್ತಿಯ ಆಘಾತ ನೀಡಿದ ಶಿಖರ್ ಧವನ್; ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗಬ್ಬರ್ ವಿದಾಯ

Shikhar Dhawan: ಬೆಳ್ಳಂಬೆಳಗ್ಗೆ ನಿವೃತ್ತಿಯ ಆಘಾತ ನೀಡಿದ ಶಿಖರ್ ಧವನ್; ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗಬ್ಬರ್ ವಿದಾಯ

Shikhar Dhawan: 38 ನೇ ವಯಸ್ಸಿನ ಶಿಖರ್ ಧವನ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್ ಜೀವನದ ಒಂದು ಹಂತವನ್ನು ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶಿಖರ್ ಧವನ್ ವಿದಾಯ.
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶಿಖರ್ ಧವನ್ ವಿದಾಯ.

Shikhar Dhawan: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಂದು (ಆಗಸ್ಟ್ 24) ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ನೇ ವಯಸ್ಸಿನ ಧವನ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್ ಜೀವನದ ಒಂದು ಹಂತವನ್ನು ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾರೆ.

34 ಟೆಸ್ಟ್‌ಗಳು, 167 ಏಕದಿನ ಪಂದ್ಯ ಮತ್ತು 68 ಟಿ20I ಗಳನ್ನು ಆಡಿರುವ ಧವನ್, ತಮ್ಮ ನಿವೃತ್ತಿಯ ಪೋಸ್ಟ್‌ನಲ್ಲಿ ಬಿಸಿಸಿಐ, DDCA ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಟೀಮ್ ಇಂಡಿಯಾಕ್ಕೆ ಯುವ ಆಟಗಾರರು ಪದಾರ್ಪಣೆ ಮಾಡಿದ ಪರಿಣಾಮ 2022 ರಿಂದ ಇವರು ತಂಡದಿಂದ ಹೊರಗುಳಿದಿದ್ದರು. ಓಪನರ್​ಗಳಾದ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಧವನ್​ಗೆ ಭಾರತ ತಂಡಕ್ಕೆ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ.

ಧವನ್ ನಿವೃತ್ತಿ ವಿಡಿಯೋದಲ್ಲಿ ಏನಿದೆ?

‘ನಾನು ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ, ನನ್ನ ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ಹೆಮ್ಮೆ ಹೃದಯದಲ್ಲಿದೆ. ನನಗೆ ಅವಕಾಶ ನೀಡಿದ ಬಿಸಿಸಿಐ, ಡಿಡಿಸಿಎ ಮತ್ತು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಎಲ್ಲರೂ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ನಾನು ಇನ್ನು ಮುಂದೆ ನನ್ನ ದೇಶಕ್ಕಾಗಿ ಆಡುವುದಿಲ್ಲ ಎಂಬ ಬೇಸರವಿದೆ, ಆದರೆ ನಾನು ದೇಶಕ್ಕಾಗಿ ಆಡಿದ್ದೇನೆ ಎಂದು ಖಂಡಿತ ಸಂತೋಷವಾಗಿದೆ. ಇದು ನನ್ನ ಜೀವನದ ದೊಡ್ಡ ವಿಷಯ.’

‘ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್, ನನ್ನ ತಂಡ ಮತ್ತು ನನ್ನ ಸಹ ಆಟಗಾರರು ಸೇರಿದಂತೆ ಈ ಕ್ರಿಕೆಟ್ ಪಯಣದಲ್ಲಿ ನನ್ನನ್ನು ಬೆಂಬಲಿಸಿದವರಿಗೆ ಕೃತಜ್ಞನಾಗಿದ್ದೇನೆ. ನನಗೊಂದು ಕುಟುಂಬ ಸಿಕ್ಕಿತ್ತು, ಅದರಿಂದ ಹೆಸರು ಬಂತು, ನಿಮ್ಮೆಲ್ಲರ ಪ್ರೀತಿ ಸಿಕ್ಕಿತು. ಕಥೆಯಲ್ಲಿ ಮುಂದುವರಿಯಲು, ಪುಟಗಳನ್ನು ತಿರುಗಿಸುವುದು ಅವಶ್ಯಕ. ನಾನು ಕೂಡ ಅದೇ ರೀತಿ ಮಾಡುತ್ತೇನೆ. ಇಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ.’

ಧವನ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು 2315 ರನ್ ಕಲೆಹಾಕಿದ್ದಾರೆ. ಏಕದಿನದಲ್ಲಿ 6793 ರನ್ ಮತ್ತು ಟಿ20ಯಲ್ಲಿ 1759 ರನ್ ಗಳಿಸಿದ್ದಾರೆ. ರೋಹಿತ್ ಜೊತೆಗೆ ಏಕದಿನದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿದ್ದರು. ಧವನ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಗಾಗಿ ಆಡಿದರು ಮತ್ತು ಭಾರತಕ್ಕೆ ಚೊಚ್ಚಲ ಪ್ರವೇಶಕ್ಕೂ ಮುನ್ನ ತಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರು 2007/08 ಋತುವಿನಲ್ಲಿ ರಣಜಿ ಟ್ರೋಫಿ ಗೆದ್ದ ದೆಹಲಿ ತಂಡದ ಭಾಗವಾಗಿದ್ದರು.

ಧವನ್ ಸುದೀರ್ಘ ಐಪಿಎಲ್ ವೃತ್ತಿಜೀವನವನ್ನು ಕೂಡ ಹೊಂದಿದ್ದಾರೆ. 2008 ರಿಂದ 2024 ರವರೆಗೆ ಪ್ರತಿ ಕ್ರೀಡಾಋತುವಿನಲ್ಲೂ ಆಡಿದ್ದಾರೆ. ಡೆಲ್ಲಿ ಡೇರ್​ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ನೊಂದಿಗೆ ಐಪಿಎಲ್ ಜೀವನ ಪ್ರಾರಂಭಿಸಿದರು. ಅವರು ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ಗಾಗಿಯೂ ಆಡಿದ್ದರು.