ಅನುಭವಿ ಸ್ಪಿನ್ನರ್​ಗೆ ಮಣೆ, ಹೈದರಾಬಾದ್ ವೇಗಿಗೆ ಕೊಕ್; ವಿಶ್ವಕಪ್ ಫೈನಲ್​ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಅನುಭವಿ ಸ್ಪಿನ್ನರ್​ಗೆ ಮಣೆ, ಹೈದರಾಬಾದ್ ವೇಗಿಗೆ ಕೊಕ್; ವಿಶ್ವಕಪ್ ಫೈನಲ್​ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

ಅನುಭವಿ ಸ್ಪಿನ್ನರ್​ಗೆ ಮಣೆ, ಹೈದರಾಬಾದ್ ವೇಗಿಗೆ ಕೊಕ್; ವಿಶ್ವಕಪ್ ಫೈನಲ್​ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

India vs Australia Final: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ಇದೆ. ಅನುಭವಿ ಸ್ಪಿನ್ನರ್​​ ತಂಡಕ್ಕೆ ಮರಳಿದ್ದು, ಈ ವೇಗಿಯೊಬ್ಬರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಎದುರಿನ ಫೈನಲ್ ಕದನಕ್ಕೆ ಭಾರತ ತಂಡದಲ್ಲಿ 1 ಬದಲಾವಣೆ ಸಾಧ್ಯತೆ.
ಆಸ್ಟ್ರೇಲಿಯಾ ಎದುರಿನ ಫೈನಲ್ ಕದನಕ್ಕೆ ಭಾರತ ತಂಡದಲ್ಲಿ 1 ಬದಲಾವಣೆ ಸಾಧ್ಯತೆ.

ಐಸಿಸಿ ಕ್ರಿಕೆಟ್​ ವಿಶ್ವಕಪ್ (ICC Cricket World Cup 2023) ಗೆಲ್ಲಲು ಭಾರತ ತಂಡದ ಕನಸಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​ ಮೈದಾನದಲ್ಲಿ (Narendra Modi Stadium, Ahmedabad) 2023ರ ಐಸಿಸಿ ವಿಶ್ವಕಪ್‌ ಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು (India vs Australia Final) ಕಾದಾಡಲಿವೆ. ಪ್ರಸಕ್ತ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯದ ನಗೆ ಬೀರಿರುವ ಭಾರತ, ಫೈನಲ್​​​ನಲ್ಲೂ ಗೆದ್ದು ವಿಶ್ವ ಕಿರೀಟಕ್ಕೆ ಮುತ್ತಿಕ್ಕಲು ಸಜ್ಜಾಗಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಸೇನೆ 70 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿತು. ಆ ಮೂಲಕ 1983 ಮತ್ತು 2011ರ ವಿಶ್ವಕಪ್ ನಂತರ 3ನೇ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಲೀಗ್​​​ನಲ್ಲಿ ಮೊದಲ ಎರಡು ಪಂದ್ಯದಲ್ಲಿ ಸೋತಿದ್ದು ಹೊರತುಪಡಿಸಿ ಸತತ 8ರಲ್ಲಿ (ಲೀಗ್, ಸೆಮಿಫೈನಲ್ ಸೇರಿ) ಗೆದ್ದು ಫೈನಲ್​ಗೇರಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಜರುಗಿದ 2ನೇ ಸೆಮಿ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತು. ಆ ಮೂಲಕ ಫೈನಲ್​​ನಲ್ಲಿ ಭಾರತ ತಂಡದ ಎದುರು ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲೂ ಗೆದ್ದು 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆದ್ರೆ ಮಹತ್ವದ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ ಇದೆ.

ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​​​ನಲ್ಲಿ ಅತ್ಯದ್ಭುತ ನಿರ್ವಹಣೆ ತೋರುತ್ತಿರುವ ಟೀಮ್ ಇಂಡಿಯಾ, ಈ ಬಾರಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ 2003ರ ಸೋಲಿನ ಸೇಡಿಗೆ ಸಜ್ಜಾಗಿದೆ. ಅಲ್ಲದೆ, 2023ರ ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿ ಫೈನಲ್​​ನಲ್ಲೂ ಭಾರತ ತಂಡವು ಆಸ್ಟ್ರೇಲಿಯಾ ಎದುರು ಸೋತಿತ್ತು. ಈಗ ಇದರ ಸೇಡಿಗೂ ರೋಹಿತ್ ಪಡೆ ಸಜ್ಜಾಗಿದ್ದು, ಟ್ರೋಫಿ ಗೆಲ್ಲಲು ಪಣತೊಟ್ಟಿದೆ.

1 ಬದಲಾವಣೆ ಸಾಧ್ಯತೆ!

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಮೈದಾನದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪಂದ್ಯವು ನಡೆಯುತ್ತಿದೆ. ಬೌಂಡರಿಗಳು ದೊಡ್ಡದಾಗಿದ್ದು, ಹೆಚ್ಚುವರಿ ಸ್ಪಿನ್ನರ್​​ಗೆ ಮಣೆ ಹಾಕಲು ನಿರ್ಧರಿಸಿದೆ. ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳಾದ ಡೇವಿಡ್ ವಾರ್ನರ್​, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಅವರು ಭಾರತದ ಆಫ್​ ಸ್ಪಿನ್ನರ್​ ಅಶ್ವಿನ್​ ಎದುರು ರನ್ ಗಳಿಸಲು ಪರದಾಡುತ್ತಾರೆ.

ಹಾಗಾಗಿ ಆಸೀಸ್​ನ ಘಟಾನುಘಟಿ ಆಟಗಾರರನ್ನು ಕಟ್ಟಿ ಹಾಕಲು ಆರ್​ ಅಶ್ವಿನ್​ಗೆ ಮಣೆ ಹಾಕಲು ಟೀಮ್ ಮ್ಯಾನೇಜ್​ಮೆಂಟ್​ ಚಿಂತನೆ ನಡೆಸಿದೆ. ಅಶ್ವಿನ್ ತಂಡಕ್ಕೆ ಎಂಟ್ರಿಯಾದರೆ, ಮೊಹಮ್ಮದ್ ಸಿರಾಜ್​ರನ್ನು ಕೈಬಿಡುವ ಸಾಧ್ಯತೆ ಇದೆ. ಮತ್ತೊಂದೆಡೆ ಅಶ್ವಿನ್ ನೆಟ್ಸ್​ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ನಡೆಸುತ್ತಿದ್ದರೆ, ಸಿರಾಜ್​ ಗೈರಾಗಿದ್ದಾರೆ. ಆ ಮೂಲಕ ತಂಡದಲ್ಲಿ ಬದಲಾವಣೆಯಾಗುವ ಸುಳಿವು ನೀಡಿದ್ದಾರೆ.

ಫೈನಲ್‌ಗೆ ಭಾರತದ ಸಂಭಾವ್ಯ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭ್ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್ (ವಿಕೆಟ್ ಕೀಪರ್​), ಸೂರ್ಯಕುಮಾರ್‌ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌/ಮೊಹಮ್ಮದ್‌ ಸಿರಾಜ್‌, ಕುಲ್ದೀಪ್ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.

ಫೈನಲ್​ಗೆ ಆಸ್ಟ್ರೇಲಿಯಾ ಸಂಭಾವ್ಯ ತಂಡ

ಟ್ರಾವಿಸ್‌ ಹೆಡ್‌, ಡೇವಿಡ್‌ ವಾರ್ನರ್‌, ಮಿಚೆಲ್ ಮಾರ್ಷ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಸ್ ಇಂಗ್ಲಿಸ್‌ (ವಿಕೆಟ್ ಕೀಪರ್), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ಆ್ಯಡಂ ಜಂಪಾ, ಜೋಷ್ ಹೇಜಲ್‌ವುಡ್‌.

Whats_app_banner