T20 World Cup 2024: ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನ ತಂಡಕ್ಕೆ ಬೇಕು ಭಾರತದ ಸಹಾಯ
T20 World Cup 2024 : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಎರಡಕ್ಕೆ ಎರಡೂ ಸೋತಿರುವ ಪಾಕಿಸ್ತಾನ ತಂಡಕ್ಕೆ ಸೂಪರ್-8ಕ್ಕೆ ಅರ್ಹತೆ ಭಾರತ ಮತ್ತು ಐರ್ಲೆಂಡ್ ತಂಡದ ಸಹಾಯ ಅಗತ್ಯವಾಗಿದೆ.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜೂನ್ 9ರ ಭಾನುವಾರ ನಡೆದ ಭಾರತ ತಂಡದ ವಿರುದ್ಧ ಪಾಕಿಸ್ತಾನ (India vs Pakistan) ಗೆಲ್ಲಲು ವಿಫಲವಾಯಿತು. ಭಾರತ 19 ಓವರ್ಗೆ 119 ರನ್ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾಲಿ ವಿಶ್ವಕಪ್ನಲ್ಲಿ ಪಾಕಿಸ್ತಾನಕ್ಕೆ ಇದು 2ನೇ ಸೋಲು. ಭಾರತ ತಂಡಕ್ಕೂ ಮುನ್ನ ಯುನೈಟೆಡ್ ಸ್ಟೇಟ್ಸ್ಗೆ ಸೂಪರ್ ಓವರ್ನಲ್ಲಿ ಪಾಕ್ ಸೋತಿತ್ತು. ಇದೀಗ ಬಾಬರ್ ಪಡೆ ವಿಶ್ವಕಪ್ನಿಂದ ಹೊರಬೀಳುವ ಆತಂಕಕ್ಕೆ ಸಿಲುಕಿದ್ದು, ಟೀಮ್ ಇಂಡಿಯಾ ಸಹಾಯದ ಮೊರೆ ಹೋಗಿದೆ.
ಎ ಗುಂಪಿನಲ್ಲಿ ಪಾಕಿಸ್ತಾನ ತಂಡವು ತನ್ನ ಮುಂದೆ ಕೊನೆಯ 2 ಗುಂಪು ಪಂದ್ಯಗಳನ್ನು ಹೊಂದಿದೆ. ಕೆನಡಾ-ಐರ್ಲೆಂಡ್ ವಿರುದ್ಧ ಅಂತಿಮ ಎರಡು ಪಂದ್ಯಗಳನ್ನು ಆಡಲಿದೆ. ಈ ಎರಡು ಗೆದ್ದರೆ, ಬಾಬರ್ ಪಡೆ, 4 ಅಂಕ ತಲುಪಲಿದೆ. ಪಾಕಿಸ್ತಾನ ತಂಡದಂತೆಯೇ ಐರ್ಲೆಂಡ್ ಎರಡಕ್ಕೆ ಎರಡೂ ಸೋತಿದೆ. ಕೆನಡಾ ಮಾತ್ರ ಒಂದು ಗೆದ್ದಿದೆ. ಅಮೆರಿಕ ಮತ್ತು ಭಾರತ 4 ಅಂಕ ಪಡೆದಿದ್ದು ಸೂಪರ್-8ಕ್ಕೆ ಪ್ರವೇಶಿಸುವ ಸನಿಹಕ್ಕೆ ಬಂದು ನಿಂತಿವೆ. ಆದರೆ ಸತತ ಎರಡು ಪಂದ್ಯ ಸೋತಿರುವ ಪಾಕಿಸ್ತಾನ ತಂಡಕ್ಕೆ ಸೂಪರ್-8 ಪ್ರವೇಶಿಸಲು ಇನ್ನೂ ಅವಕಾಶ ಇದೆ. ಅದು ಸಾಧ್ಯವಾಗಬೇಕೆಂದರೆ ಭಾರತ ಮತ್ತು ಐರ್ಲೆಂಡ್ ತಂಡಗಳ ನೆರವು ಅತ್ಯಗತ್ಯವಾಗಿದೆ.
ಪಾಕಿಸ್ತಾನ ಸೂಪರ್-8ಕ್ಕೆ ಪ್ರವೇಶಿಸಲು ಅಮೆರಿಕ ಸೋಲಬೇಕು
ಭಾರತ ಮತ್ತು ಅಮೆರಿಕ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದರೆ ಸೂಪರ್-8ಕ್ಕೆ ಅಧಿಕೃತವಾಗಿ ಪ್ರವೇಶಿಸಲಿದ್ದರೆ, ಉಳಿದ ತಂಡಗಳು ಅಧಿಕೃತವಾಗಿ ಹೊರಬೀಳಲಿವೆ. ಆದರೆ, ಈ ಎರಡು ತಂಡಗಳು ಜೂನ್ 12ರಂದು ಮುಖಾಮುಖಿಯಾಗಲಿದ್ದು, ಗೆದ್ದವರು ನೇರವಾಗಿ ಸೂಪರ್-8ಕ್ಕೆ ಪ್ರವೇಶ ಮಾಡಲಿದ್ದಾರೆ. ಆದರೆ, ಸೋತ ತಂಡವು ಮತ್ತೊಂದು ಅವಕಾಶ ಕಾಯಬೇಕಿದೆ. ಇಲ್ಲಿ ಭಾರತವೇ ಗೆಲ್ಲಬೇಕು ಎಂದು ಪಾಕ್ ಪ್ರಾರ್ಥಿಸಬೇಕು. ತದನಂತರ ಅಮೆರಿಕ, ಐರ್ಲೆಂಡ್ ವಿರುದ್ಧವೂ ಸೋಲಬೇಕು. ಇದು ಪಾಕ್ಗೆ ಹೆಚ್ಚು ಲಾಭ ತಂದುಕೊಡಲಿದೆ.
ಒಂದು ವೇಳೆ ಇದು ಸಾಧ್ಯವಾದರೆ, ಪಾಕಿಸ್ತಾನ ತನ್ನ ಉಳಿದ ಎರಡೂ ಪಂದ್ಯಗಳಲ್ಲೂ ಗೆಲ್ಲಲೇಬೇಕು. ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಜಯ ಸಾಧಿಸಬೇಕು. ಬೃಹತ್ ರನ್ ರೇಟ್ ಕಾಯ್ದುಕೊಳ್ಳಬೇಕು. ಅಲ್ಲದೆ, ಭಾರತ ತಂಡವು ಎರಡಕ್ಕೆ ಎರಡೂ ಸೋತರೂ ಪಾಕಿಸ್ತಾನ ಸೂಪರ್-8 ಪ್ರವೇಶಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಆದರೆ ಭಾರತ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಸೋಲುವುದು ಅಸಾಧ್ಯ. ಹಾಗಾಗಿ ಪಾಕ್ ಅಮೆರಿಕ ತಂಡದ ಸೋಲಿಗೆ ಪ್ರಾರ್ಥಿಸುವುದು ಬಿಟ್ಟರೆ ಬೇರೆ ಆಯ್ಕೆಯಿಲ್ಲ.
ಮಳೆ ಬಂದರೆ ಏನು ಕಥೆ?
ಮತ್ತೊಂದೆಡೆ ಪಾಕಿಸ್ತಾನ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಒಂದು ಅಂಕ ಕಳೆದುಕೊಂಡರೂ ಲೀಗ್ನಿಂದಲೇ ನಿರ್ಗಮಿಸಲಿದೆ. ಮಳೆಯಿಂದ ಒಂದು ಪಂದ್ಯ ರದ್ದಾದರೂ ಅಲ್ಲಿಗೆ ಪಾಕಿಸ್ತಾನದ ಟಿ20 ವಿಶ್ವಕಪ್ ಪ್ರಯಾಣ ಕೊನೆಗೊಳ್ಳುತ್ತದೆ. ಇದರೊಂದಿಗೆ ಬಾಬರ್ ಅಜಮ್ ಅವರ ಭರವಸೆಗಳು ನೀರಸವಾಗುತ್ತವೆ. ಮಳೆಯೂ ಪಾಕಿಸ್ತಾನಕ್ಕೆ ವಿಲನ್ ಆದರೂ ಅಚ್ಚರಿ ಇಲ್ಲ. ಏಕೆಂದರೆ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮಳೆ ಭೀತಿ ಆವರಿಸಿತ್ತು. ಆದರೆ ಅಂತಿಮವಾಗಿ ಬಿಡುವು ನೀಡಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಗ್ರೂಪ್ ಚಾಂಪಿಯನ್ ಆಗಿ ಸೂಪರ್-8ಕ್ಕೆ ಹೋಗುವ ಫೇವರಿಟ್ ಎನಿಸಿದೆ. ಗುಂಪಿನಲ್ಲಿ 2ನೇ ತಂಡವಾಗಿ ಮುಂದಿನ ಸುತ್ತಿಗೆ ಪ್ರವೇಶಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಪಾಕಿಸ್ತಾನ ಹೋರಾಡಲಿವೆ. ಈ ಸಂದರ್ಭದಲ್ಲಿ ಅಜಮ್ ಪಡೆಗಿಂತ ಅಮೆರಿಕ ಅದ್ಭುತ ಫಾರ್ಮ್ನಲ್ಲಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಅಮೆರಿಕ ಉಳಿದ ಎರಡಲ್ಲಿ ಹೀನಾಯವಾಗಿ ಸೋತರೆ, ಪಾಕಿಸ್ತಾನ ಮುಂದಿನ ಹಂತಕ್ಕೆ ಹೋಗಲು ಉಳಿದೆರಡು ಗೆಲ್ಲಲೇಬೇಕು. ಅದು ಕೂಡ ದೊಡ್ಡ ಅಂತರದ ಗೆಲುವಾಗಬೇಕು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ