ನೋಡೋಕೆ ನೀವು ಜ್ಯೂನಿಯರ್ ವಿರಾಟ್ ಕೊಹ್ಲಿ ತರ ಕಾಣಿಸ್ತಿದ್ದೀರಾ, ದೆಹಲಿಯಲ್ಲಿ ನಿಮಗಾಗಿಯೇ ಒಂದು ಸ್ಪರ್ಧೆ ನಡೀತಿದೆ ನೋಡಿ
Virat Kohli Lookalike: ಅಮೆರಿಕ ಮತ್ತು ಇತರೆ ದೇಶಗಳಲ್ಲಿ ಸೆಲೆಬ್ರಿಟಿ ಪ್ರತಿರೂಪದವರ ಸ್ಪರ್ಧೆ ಹೊಸದಲ್ಲ. ಭಾರತದಲ್ಲಿ ಇಂತಹ ಸ್ಪರ್ಧೆಯೊಂದು ಈಗ ಗಮನಸೆಳೆದಿದೆ. ನೋಡೋಕೆ ನೀವು ಜ್ಯೂನಿಯರ್ ವಿರಾಟ್ ಕೊಹ್ಲಿ ತರ ಕಾಣಿಸ್ತಿದ್ದೀರಾ, ದೆಹಲಿಯಲ್ಲಿ ನಿಮಗಾಗಿಯೇ ಒಂದು ಸ್ಪರ್ಧೆ ನಡೀತಿದೆ ನೋಡಿ. ವಿವರ ಇಲ್ಲಿದೆ.
Virat Kohli Lookalike Competition: ಸೆಲೆಬ್ರಿಟಿ ಪ್ರತಿರೂಪ ಹೊಂದಿರುವವರ ಸ್ಪರ್ಧೆ ವಿದೇಶದಲ್ಲಿ ಸಾಮಾನ್ಯ. ಅಂತಹ ಸ್ಪರ್ಧೆಗಳು ಈಗ ಭಾರತಕ್ಕೂ ಪದಾಪರ್ಣೆ ಮಾಡಿದ್ದು, ದೆಹಲಿಯಲ್ಲಿ ಇದೇ ಡಿಸೆಂಬರ್ 1 ರಂದು ವಿರಾಟ್ ಕೊಹ್ಲಿ ಪ್ರತಿರೂಪದವರ ಸ್ಪರ್ಧೆ ನಡೆಯಲಿದೆ. ಪ್ರತಿರೂಪದವರು ಅಂದರೆ ನಮ್ಮಲ್ಲಿ ಜ್ಯೂನಿಯರ್ ರಾಜ್ ಕುಮಾರ್, ಜ್ಯೂನಿಯರ್ ಅಪ್ಪು ಹೀಗೆಲ್ಲ ಗುರುತಿಸುತ್ತೇವಲ್ಲ ಅವರು. ನೋಡೋಕೆ ರಾಜ್ ಕುಮಾರ್, ಅಪ್ಪು ಅವರನ್ನೇ ಹೋಲುವವರು. ಹಾಗೆಯೇ ವಿರಾಟ್ ಕೊಹ್ಲಿ ಅವರನ್ನೇ ಹೋಲುವವರು ಇದ್ದರೆ ಅಂಥವರು ಈ ವಿರಾಟ್ ಕೊಹ್ಲಿ ಲುಕ್‌ಅಲೈಕ್ ಸ್ಪರ್ಧೆ (Virat Kohli Lookalike Competition) ನಲ್ಲಿ ಭಾಗವಹಿಸಬಹುದು. ದೆಹಲಿಯ ಲೋಧಿ ಗಾರ್ಡನ್ಸ್‌ನಲ್ಲಿ ಡಿಸೆಂಬರ್ 1 ರಂದು ಅಪರಾಹ್ನ 3 ಗಂಟೆಗೆ ಈ ಸ್ಪರ್ಧೆ ನಡೆಯಲಿದೆ ಎಂದು ಮೊಲಿನಾ ಎಂಬುವವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ.
ಏನಿದು ವಿರಾಟ್ ಕೊಹ್ಲಿ ಪ್ರತಿರೂಪದವರ ಸ್ಪರ್ಧೆ (ವಿರಾಟ್ ಕೊಹ್ಲಿ ಲುಕ್‌ಅಲೈಕ್ ಕಾಂಪಿಟೀಷನ್)
ಸೆಲೆಬ್ರಿಟಿ ಪ್ರತಿರೂಪದವರ ಸ್ಪರ್ಧೆ ಅಮೆರಿಕದಲ್ಲಿ ಶುರುವಾಗಿದ್ದು. ಟಿಮ್ಟೋಥೀ ಚಾಲಮೆಟ್ ಥೀಮ್‌ನೊಂದಿಗೆ ಆರಂಭವಾದ ಈ ಸ್ಪರ್ಧೆ ಅಲ್ಲಿ ಯಶಸ್ವಿಯಾಯಿತು. ಈ ಸೆಲೆಬ್ರಿಟಿ ಲುಕ್‌ಎಲೈಕ್ ಕಾಂಪಿಟೀಷನ್ ಈಗ ಭಾರತಕ್ಕೂ ಕಾಲಿರಿಸಿದೆ. ಡಿಸೆಂಬರ್ 1 ರಂದು ಅಪರಾಹ್ನ ವಿರಾಟ್ ಕೊಹ್ಲಿ ಪ್ರತಿರೂಪದವರ ಸ್ಪರ್ಧೆಯನ್ನು ಆಯೋಜಿಸಿರುವುದಾಗಿ ದೆಹಲಿ ರೀಡ್ಸ್‌ನ ಸಹ ಸಂಸ್ಥಾಪಕಿ ಮೊಲಿನಾ ಸಿಂಗ್ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಗೂಗಲ್ ಫಾರ್ಮ್ ಲಿಂಕ್ ಅನ್ನು ಶೇರ್ ಮಾಡಿದ್ದಾರೆ. ಅದನ್ನು ಕ್ಲಿಕ್ ಮಾಡಿದರೆ, ನೀವು ಯಾವ ರೀತಿ ಭಾಗವಹಿಸುತ್ತೀರಿ ಎಂಬುದರ ವಿವರ ಭರ್ತಿ ಮಾಡಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ.
“ನೋಡಿ, ನಾನು ತಮಾಷೆ ಮಾಡ್ತಾ ಇಲ್ಲ. ಪಶ್ಚಿಮ ದೆಹಲಿಯ ಈ ತಣ್ಣನೆ ವಾತಾವರಣದಲ್ಲಿ ಒಂದು ಸಣ್ಣ ಮನರಂಜನೆ ಯಾಕಾಗಬಾರದು. ನೋಡೋಕೆ ನೀವು ಜ್ಯೂನಿಯರ್ ವಿರಾಟ್ ಕೊಹ್ಲಿ ತರ ಕಾಣಿಸ್ತಿದ್ದೀರಾ? ಹಾಗಾದ್ರೆ ಪಶ್ಚಿಮ ದೆಹಲಿಯಲ್ಲಿ ನಿಮಗಾಗಿಯೇ ಒಂದು ಸ್ಪರ್ಧೆ ನಡೀತಿದೆ ನೋಡಿ, ಬನ್ನಿ” ಎಂದು ಮೊಲಿನಾ ಸಿಂಗ್ ಆಹ್ವಾನಿಸಿದ್ದಾರೆ.
ವಿರಾಟ್ ಕೊಹ್ಲಿ ಪ್ರತಿರೂಪದವರ ಸ್ಪರ್ಧೆಯ ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ
ಮೊಲಿನಾ ಸಿಂಗ್ ಅವರು ವಿರಾಟ್ ಕೊಹ್ಲಿ ಪ್ರತಿರೂಪದವರ ಸ್ಪರ್ಧೆಯ ಟ್ವೀಟ್ ಮಾಡಿ ಅದರಲ್ಲಿ ಕೊಹ್ಲಿ ಅವರ ಫೋಟೋವನ್ನು ಬಳಸಿದ್ದಾರೆ. ಅದರ ಮೇಲೆ ಸ್ಪರ್ಧೆಯ ವಿವರ ಹಾಕಿದ್ದಾರೆ. ಸ್ಪರ್ಧಿಯಾಗಿ, ನೋಡುಗರಾಗಿ, ಜಡ್ಜ್ ಆಗಿ ಭಾಗವಹಿಸವುದಕ್ಕೆ ಅವಕಾಶ ಇದೆ. ಗೆದ್ದವರಿಗೆ 1,000 ರೂಪಾಯಿ ನಗದು ಬಹುಮಾನ ಕೂಡ ಇದೆ ಎಂದು ಬರೆದುಕೊಂಡಿದ್ದಾರೆ.
ಅದಕ್ಕೆ ಪೂರಕ ಟ್ವೀಟ್‌ನಲ್ಲಿ ಮೊಲಿನಾ ಅವರು, ಸೆಲೆಬ್ರಿಟಿ ಲುಕ್ಅಲೈಕ್ ಕಾಂಪಿಟೀಷನ್ ಇಟ್ಕೊಂಡರೆ ನೀವೆಲ್ಲ ಬರುತ್ತೀರಲ್ಲವೇ ಎಂದು ವಿರಾಟ್ ಕೊಹ್ಲಿಯನ್ನು ಹೋಲುವವರೊಬ್ಬರ ಫೋಟೋವನ್ನೂ ಶೇರ್ ಮಾಡಿದ್ದರು.
ಇದೊಂದು ರೀತಿ ಚೆನ್ನಾಗಿದೆ. ಒಳ್ಳೆಯ ಮನರಂಜನೆ ಸಿಗಬಹುದು. ನಾನು ಬರುತ್ತೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ದೆಹಲಿಯ ಪ್ರತಿ ಗಲ್ಲಿಯಲ್ಲೂ ವಿರಾಟ್ ಕೊಹ್ಲಿ ಅವರನ್ನು ಹೋಲುವ 20 ಮಂದಿ ಇದ್ದಾರು ಎಂದು ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಹಂತದಲ್ಲಿ ಝಂಕಾರ್ ಬೀಟ್ಸ್ ನಟ ಇಮ್ರಾನ್ ಖಾನ್ ಅವರ ಪ್ರತಿರೂಪದವರ ಕಾಂಪಿಟೀಷನ್ ಮಾಡಬೇಕು ಎಂದು ಮತ್ತೊಬ್ಬರು ಹೇಳಿದ್ದರೆ, ನನ್ನ ಕಚೇರಿಯಲ್ಲಿ ರಣವೀರ್ ಸಿಂಗ್ ಅವರನ್ನು ಹೋಲುವ ವ್ಯಕ್ತಿ ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಮ್ಮ ಬಳಿ ಈಗಾಗಲೇ ಒಬ್ಬ ವಿಜೇತರಿದ್ದಾರೆ ಎಂದು ಒಬ್ಬರು ವಿರಾಟ್ ಕೊಹ್ಲಿ ಅವರ ಇನ್‌ಸ್ಟಾ ಗ್ರಾಂ ಖಾತೆಯ ಲಿಂಕ್ ಅನ್ನು ಶೇರ್ ಮಾಡಿದ್ದಾರೆ. ಒಟ್ಟಿನಲ್ಲಿ ಮೊಲಿನಾ ಅವರ ಟ್ವೀಟ್ 56 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಹೆಚ್ಚು ಜನರನ್ನು ತಲುಪಿದೆ. ಎಲ್ಲರೂ ಈಗ ಡಿಸೆಂಬರ್ 1ರ ವಿರಾಟ್ ಕೊಹ್ಲಿ ಲುಕ್‌ಅಲೈಕ್ ಕಾಂಪಿಟೀಷನ್ ಕಡೆಗೆ ಕುತೂಹಲದಿಂದ ಗಮನಹರಿಸಿದ್ದಾರೆ.