ವಿಶ್ವದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ; 103 ರನ್ ಸಿಡಿಸಿದರೆ ಸಚಿನ್ ಸೇರಿ ದಿಗ್ಗಜರ ದಾಖಲೆಗಳು ಧೂಳೀಪಟ
Virat Kohli: 2023ರ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.
ಪ್ರಸಕ್ತ ಸಾಲಿನ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಗೆ (Asia Cup 2023) ಭರ್ಜರಿ ಸಿದ್ದತೆ ನಡೆಸಿರುವ ವಿರಾಟ್ ಕೊಹ್ಲಿ (Virat Kohli), ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಂತೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆ ಮುರಿಯಲು ಸಿದ್ಧವಾಗಿದ್ದಾರೆ. ಆ ಮೂಲಕ ಮತ್ತೊಂದು ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ರೆಡಿಯಾಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಇನ್ನು 102 ರನ್ ಸಿಡಿಸಿದರೆ, ಸಚಿನ್ ವಿಶ್ವದಾಖಲೆ ಬ್ರೇಕ್ ಆಗಲಿದೆ.
ವಿಶ್ವ ದಾಖಲೆಗೆ ಕೊಹ್ಲಿ ಸಜ್ಜು
ಏಷ್ಯಾಕಪ್ ಟೂರ್ನಿಯಲ್ಲಿ 103 ರನ್ ಸಿಡಿಸಿದ್ದೇ ಆದರೆ ಕೊಹ್ಲಿ, ಏಕದಿನ ಕ್ರಿಕೆಟ್ (ODI Cricket) ಮಾದರಿಯಲ್ಲಿ 13 ಸಾವಿರ ರನ್ ಪೂರ್ಣಗೊಳಿಸಲಿದ್ದಾರೆ. ಆ ಮೂಲಕ ಏಕದಿನದಲ್ಲಿ ಈ ಸಾಧನೆ ಮಾಡಿದ ವಿಶ್ವದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಸಚಿನ್ ದಾಖಲೆಯನ್ನು ಬ್ರೇಕ್ ಮಾಡಲಿದ್ದಾರೆ. ಬ್ಯಾಟಿಂಗ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ 321 ಪಂದ್ಯಗಳಲ್ಲಿ 13 ಸಾವಿರ ರನ್ ಪೂರೈಸಿದ್ದರು.
ಆದರೆ ಕೊಹ್ಲಿ ಕೇವಲ 275 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದು, 12898 ರನ್ ಸಿಡಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ದಾಖಲೆ ಮಾತ್ರವಲ್ಲ, ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರರಾದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮತ್ತು ಸನತ್ ಜಯಸೂರ್ಯ ಅವರ ದಾಖಲೆಯನ್ನೂ ಧೂಳೀಪಟಗೊಳಿಸಲು ಸಜ್ಜಾಗಿದ್ದಾರೆ.
ಏಷ್ಯಾಕಪ್ನಲ್ಲೂ ದಾಖಲೆಗಳನ್ನು ನಿರ್ಮಿಸಲು ರೆಡಿ
ಏಷ್ಯಾಕಪ್ ಟೂರ್ನಿಯಲ್ಲಿ ಕೊಹ್ಲಿ ಈವರೆಗೂ 11 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದು, 613 ರನ್ ಸಿಡಿಸಿದ್ದಾರೆ. 2012ರ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಕಿಂಗ್ ಕೊಹ್ಲಿ, ದಾಖಲೆಯ 183 ರನ್ ಸಿಡಿಸಿದ್ದರು. ಇನ್ನು ಬೆಂಕಿ-ಬಿರುಗಾಳಿ ಫಾರ್ಮ್ನಲ್ಲಿರುವ ಅವರು ಇನ್ನು 35 ರನ್ ಸಿಡಿಸಿದ್ದೇ ಆದರೆ ಮಾಜಿ ನಾಯಕ ಎಂಎಸ್ ಧೋನಿ ಅವರ ರನ್ಗಳ ದಾಖಲೆಯನ್ನೂ ಹಿಂದಿಕ್ಕಲಿದ್ದಾರೆ.
ಆ ಮೂಲಕ ಏಷ್ಯಾಕಪ್ನಲ್ಲಿ ಅಧಿಕ ರನ್ ಗಳಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿಕೆ ಕಾಣಲಿದ್ದಾರೆ. ಅಲ್ಲದೆ, ಈ ಟೂರ್ನಿಯಲ್ಲಿ 358 ರನ್ ಸಿಡಿಸಿದರೆ, ದಿಗ್ಗಜ ಸಚಿನ್ರ ಮತ್ತೊಂದು ಸಾರ್ವಕಾಲಿನ 971 ರನ್ಗಳ ರೆಕಾರ್ಡ್ ಅನ್ನೂ ಹಿಂದಿಕ್ಕಲು ರೆಡಿಯಾಗಿದ್ದಾರೆ. ಇದರೊಂದಿಗೆ ಇಬ್ಬರು ಲೆಜೆಂಡರಿ ಆಟಗಾರರ ರೆಕಾರ್ಡ್ ಮುರಿಯಲು ಸಜ್ಜಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 2ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ರೋಹಿತ್ ಪಡೆ, ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಉದ್ಘಾಟನಾ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ ದಾಖಲೆಯ ಅಂತರದ ಗೆಲುವು ಸಾಧಿಸಿದೆ.
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್/ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.