ಸಿರಾಜ್ರಿಂದ 10 ಓವರ್ ಹಾಕಿಸಲು ಟ್ರೈನರ್ ಬಿಡಲಿಲ್ಲ; ತೀವ್ರ ವಿರೋಧದ ಬಳಿಕ ರೋಹಿತ್ ಸ್ಪಷ್ಟನೆ
Mohammed Siraj-Rohit Sharma: ವಿಕೆಟ್ ಬೇಟೆಯಾಡುತ್ತಿದ್ದ ಮೊಹಮ್ಮದ್ ಸಿರಾಜ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ನೀಡಿದ್ದಕ್ಕೆ ಕ್ರಿಕೆಟ್ ಪಂಡಿತರು ಅಸಮಾಧಾನ ಹೊರ ಹಾಕಿದ್ದಾರೆ. ತೀವ್ರ ವಿರೋಧ ವ್ಯಕ್ತವಾದ ನಂತರ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಏಷ್ಯಾಕಪ್ ಟೂರ್ನಿಯ ಫೈನಲ್ (Asia Cup 2023) ಗೆದ್ದು ಟೀಮ್ ಇಂಡಿಯಾ (Team India) ಚಾಂಪಿಯನ್ ಆಗಿದೆ. 8ನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ. 2018ರಲ್ಲಿ ಕೊನೆಯದಾಗಿ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ, 2022ರ ಟೂರ್ನಿಯಲ್ಲಿ ಸೂಪರ್-4 ಹಂತದಲ್ಲೇ ಹೊರ ಬಿದ್ದಿತ್ತು. ಆದರೆ ಕೊನೆಗೂ ಪ್ರಮುಖ ಟೂರ್ನಿಯೊಂದರಲ್ಲಿ ಟ್ರೋಫಿ ಗೆಲ್ಲಲು ಸಾಧ್ಯವಾಗಿದೆ. ಇದೆಲ್ಲವನ್ನೂ ಸಾಧ್ಯವಾಗಿಸಿದ್ದು ಮೊಹಮ್ಮದ್ ಸಿರಾಜ್ (Mohammed Siraj).
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪ್ರಚಂಡ ಬೌಲಿಂಗ್ ನಡೆಸಿದ ಸಿರಾಜ್, 7 ಓವರ್ಗಳಲ್ಲಿ 1 ಮೇಡನ್ ಸಹಿತ 21 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯ 3 ವಿಕೆಟ್, ಬುಮ್ರಾ 1 ವಿಕೆಟ್ ಪಡೆದು ಸಿರಾಜ್ಗೆ ಸಾಥ್ ನೀಡಿದರು. ಹಾಗಾಗಿ ಎದುರಾಳಿಯನ್ನು 15.2 ಓವರ್ಗಳಲ್ಲಿ 50 ರನ್ಗೆ ಆಲೌಟ್ ಮಾಡುವಲ್ಲಿ ಯಶಸ್ಸು ಕಂಡರು. ಆದರೆ, 6.1 ಓವರ್ಗಳಲ್ಲೇ ಗೆಲುವಿನ ನಗೆ ಬೀರಿ ಚಾಂಪಿಯನ್ ಆಯಿತು.
ರೋಹಿತ್ ವಿರುದ್ಧ ಸಾಕಷ್ಟು ಟೀಕೆ
ಆದರೆ, ವಿಕೆಟ್ ಬೇಟೆಯಾಡುತ್ತಿದ್ದ ಸಿರಾಜ್ ಬದಲಿಗೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯಗೆ ಬೌಲಿಂಗ್ ನೀಡಿದ್ದಕ್ಕೆ ಕ್ರಿಕೆಟ್ ಪಂಡಿತರು, ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಸಿರಾಜ್ಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದರೆ, ಇನ್ನಷ್ಟು ವಿಕೆಟ್ ಪಡೆದು ದಾಖಲೆ ಬರೆಯುತ್ತಿದ್ದರು ಎಂಬುದು ಹಲವರ ವಾದ. ಕ್ಯಾಪ್ಟನ್ ರೋಹಿತ್ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದಕ್ಕೀಗ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಸ್ಪಷ್ಟನೆ ನೀಡಿದ ರೋಹಿತ್
ಮೊಹಮ್ಮದ್ ಸಿರಾಜ್ ಅವರಿಂದ 10 ಓವರ್ಗಳ ಹಾಕಿಸುವ ಉದ್ದೇಶ ಹೊಂದಿದ್ದೆ. ಆದರೆ ಟ್ರೈನರ್ ಅದಕ್ಕೆ ಅವಕಾಶ ನೀಡಲಿಲ್ಲ. ನಮ್ಮ ತರಬೇತುದಾರರಿಂದ ನನಗೆ ಸಂದೇಶ ಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ ನಾಯಕ ರೋಹಿತ್. ಅವರು ಬೌಲಿಂಗ್ ಮಾಡಿದ್ದರೆ, ಇನ್ನಷ್ಟು ವಿಕೆಟ್ ಪಡೆಯುತ್ತಿದ್ದರು. ಆದರೆ ಇದನ್ನೇ ಅತಿಯಾಗಿ ಉತ್ಪ್ರೇಕ್ಷೆ ಮಾಡಬೇಡಿ ಎಂದರು.
ಸಿರಾಜ್ರನ್ನು ಕೊಂಡಾಡಿದ ನಾಯಕ
ಪಂದ್ಯದ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್, ಸಿರಾಜ್ ಬೌಲಿಂಗ್ ಸಾಧನೆಯನ್ನು ಕೊಂಡಾಡಿದರು. ಅವರು ಭಾರತದ ಹೊಸ ಹೀರೋ ಎಂದು ಶ್ಲಾಘಿಸಿದರು. ಸಿರಾಜ್ಗೆ ಬೌಲಿಂಗ್ ಮಾಡುವ ಉತ್ಸಾಹ ಹೆಚ್ಚಿತ್ತು. ಆದರೆ ಏಕದಿನ ವಿಶ್ವಕಪ್ಗೂ ಮುನ್ನ ಆತನ ಮೇಲೆ ಅನಗತ್ಯ ಹೊರೆ ಹಾಕಲು ತರಬೇತುದಾರ ಬಯಸಲಿಲ್ಲ. ಇದೇ ಕಾರಣಕ್ಕೆ 10 ಓವರ್ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದರು.
ಏಷ್ಯಾಕಪ್ ಫೈನಲ್ ಸಿರಾಜ್ ದಿನವಾಗಿತ್ತು ಎಂದ ರೋಹಿತ್
ಈ ವರ್ಷದ ಜನವರಿಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದ್ದರು. ಸರಣಿಯ ಕೊನೆಯ ಪಂದ್ಯವನ್ನಾಡಿದ್ದ ಸಿರಾಜ್, ಲಂಕಾದ ಬ್ಯಾಟಿಂಗ್ ಲೈನಪ್ ಅನ್ನು ಧೂಳೀಪಟಗೊಳಿಸಿದ್ದರು. ಸಿರಾಜ್ ಸಾಧನೆ ನನಗೆ ನೆನಪಿದೆ. ತಿರುವನಂತಪುರದಲ್ಲಿ ಲಂಕಾ ವಿರುದ್ಧ ಇದೇ ರೀತಿಯಲ್ಲಿ ಬೌಲಿಂಗ್ ಮಾಡಿದ್ದರು. ಅಂದು 4 ವಿಕೆಟ್ ಪಡೆದು ಮಿಂಚಿದ್ದರು. ಅವರು ಸತತವಾಗಿ 10 ಓವರ್ ಎಸೆದಿದ್ದರು ಎಂದು ರೋಹಿತ್, ಸಿರಾಜ್ರ ಹಿಂದಿನ ಬೌಲಿಂಗ್ ಸಾಧನೆಯನ್ನು ನೆನೆದಿದ್ದಾರೆ. ಭಾರತ ತಂಡಕ್ಕೆ ವಿಭಿನ್ನ ಹೀರೊ ಪತ್ತೆಯಾಗಿದ್ದಾರೆ. ಏಷ್ಯಾಕಪ್ ಫೈನಲ್ ಸಿರಾಜ್ರ ದಿನವಾಗಿತ್ತು ಎಂದಿದ್ದಾರೆ.