ಬಾರ್ಬಡೋಸ್ ಟು ದೆಹಲಿ; 16 ಗಂಟೆಗಳ ಸುದೀರ್ಘ ಪ್ರಯಾಣದಲ್ಲಿ ರೋಹಿತ್, ಕೊಹ್ಲಿ, ಬುಮ್ರಾ, ದ್ರಾವಿಡ್ ಮಾಡಿದ್ದೇನು?
Indian Cricket Team: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರಾಹುಲ್ ದ್ರಾವಿಡ್ ಅವರು ಏರ್ ಇಂಡಿಯಾ ವಿಮಾನದಲ್ಲಿ ನಡೆಸಿದ ಚಟುವಟಿಕೆಗಳ ಸಂಪೂರ್ಣ ವಿವರಗಳು ಇಲ್ಲಿದೆ.
ಕಾಯುವಿಕೆ ಕೊನೆಗೂ ಕೊನೆಗೊಂಡಿತು! ಹೌದು, ಟಿ20 ವಿಶ್ವಕಪ್ ಚಾಂಪಿಯನ್ ಆದ ಬೆನ್ನಲ್ಲೇ ಟೀಮ್ ಇಂಡಿಯಾ ಭಾರತಕ್ಕೆ ಬರುವುದು ಯಾವಾಗ ಎಂಬುದು ಅತಿ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಕಪ್ ಗೆದ್ದು ಐದು ದಿನಗಳ ನಂತರ ತಾಯ್ನಾಡಿಗೆ ರೋಹಿತ್ ಪಡೆ ಆಗಮಿಸಿದೆ. ಗುರುವಾರ ಮುಂಜಾನೆ 6.20ರ ಸುಮಾರಿಗೆ ಟ್ರೋಫಿಯೊಂದಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಭಾರತದ ವಿಶ್ವಕಪ್ ಹೀರೋಗಳು ತವರಿಗೆ ತಲುಪಲು 5 ದಿನಗಳು ಬೇಕಾಯಿತು. ವಿಮಾನ ಹತ್ತಿದ ನಂತರ 16 ಗಂಟೆಗಳ ಸುದೀರ್ಘ ಪ್ರಯಾಣ ನಡೆಸಿದರು. ಬೆರಿಲ್ ಚಂಡಮಾರುತ ದ್ವೀಪರಾಷ್ಟ್ರ ಕೆರಿಬಿಯನ್ಗೆ ಅಪ್ಪಳಿಸಿದ ಕಾರಣ ವಿಮಾನ ಸೇವೆಯನ್ನು 3 ದಿನಗಳ ರದ್ದುಗೊಳಿಸಲಾಗಿತ್ತು. ಹೀಗಾಗಿ ಭಾರತ ತಂಡ ಅಲ್ಲಿಯೇ ಉಳಿದುಕೊಂಡಿತ್ತು. ನಂತರ ಬಿಸಿಸಿಐ ವಿಶೇಷ ಚಾರ್ಟಡ್ ಫ್ಲೈಟ್ ವ್ಯವಸ್ಥೆಯ ಮೂಲಕ ಕರೆತರಲಾಯಿತು.
ರೋಹಿತ್ ಶರ್ಮಾ ನೇತೃತ್ವದ ತಂಡ, ಅವರ ಕುಟುಂಬ ಸದಸ್ಯರು, ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿ, ಬಿಸಿಸಿಐ ಅಧಿಕಾರಿಗಳು, ಪತ್ರಕರ್ತರು ಬಾರ್ಬಡೋಸ್ನಲ್ಲಿ ಸಿಲುಕಿದ್ದರು. 3 ದಿನಗಳ ಸ್ಥಗಿತದ ನಂತರ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸಿದ ಕೂಡಲೇ ಆಟಗಾರರನ್ನು ಮನೆಗೆ ಕರೆತರಲು ಬಿಸಿಸಿಐ ವಿಶೇಷ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಬೇಕಾಗಿತ್ತು. ಇದರ ಪ್ರಯಾಣ ಒಟ್ಟು 16 ಗಂಟೆಗಳು ಎಂಬುದು ವಿಶೇಷ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29 ರಂದು (ಶನಿವಾರ) ನಡೆದ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸಿ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದು ಬೀಗಿತು. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ವಿಜಯದ ನಂತರ ಇದು ಭಾರತದ ಮೊದಲ ವಿಶ್ವಕಪ್ ಟ್ರೋಫಿಯಾಗಿದೆ. ಹೋಟೆಲ್ಗಳಲ್ಲೂ ವಿಜಯೋತ್ಸವ ಮುಂದುವರೆದಿತ್ತು.
ನಾಲ್ಕು ದಿನಗಳ ಕಾಯುವಿಕೆಯ ನಂತರ ಮುಂದಿನ 48 ಗಂಟೆಗಳಲ್ಲಿ ಮತ್ತೊಂದು ಚಂಡಮಾರುತದ ಮುನ್ಸೂಚನೆ ಇರುವುದರಿಂದ ಭಾರತೀಯ ಕ್ರಿಕೆಟಿಗರನ್ನು ರಕ್ಷಿಸಲು ಚಾರ್ಟರ್ ವಿಮಾನವನ್ನು ಕಳುಹಿಸುವಂತೆ ಬಿಸಿಸಿಐ ಏರ್ ಇಂಡಿಯಾಕ್ಕೆ ಎಸ್ಒಎಸ್ ಕರೆ ಮಾಡಿತ್ತು. ಚಾಂಪಿಯನ್ ಆಟಗಾರರನ್ನು ತವರಿಗೆ ಕರೆತರಲು ಏರ್ ಇಂಡಿಯಾ ನ್ಯೂಜೆರ್ಸಿಯಿಂದ ನವದೆಹಲಿಗೆ ನಿಗದಿತ ವಿಮಾನ ರದ್ದುಗೊಳಿಸಿತ್ತು.
ಏರ್ ಇಂಡಿಯಾ ವಿಶೇಷ ಚಾರ್ಟರ್ ವಿಮಾನ AIC24WC - ಏರ್ ಇಂಡಿಯಾ ಚಾಂಪಿಯನ್ಸ್ 24 ವಿಶ್ವಕಪ್ ಎಂಬ ಹೆಸರಿನೊಂದಿಗೆ ಸ್ಥಳೀಯ ಸಮಯ ಬೆಳಿಗ್ಗೆ 4:50ರ ಸುಮಾರಿಗೆ ಬಾರ್ಬಡೋಸ್ನಿಂದ ಹೊರಟಿತು, 16 ಗಂಟೆಗಳ ನಿರಂತರ ಪ್ರಯಾಣದ ನಂತರ ಗುರುವಾರ ಬೆಳಿಗ್ಗೆ 6:20ರ ಸುಮಾರಿಗೆ (ಭಾರತೀಯ ಕಾಲಮಾನ) ದೆಹಲಿಗೆ ಬಂದಿಳಿದಿದೆ. ಇದು ಸುದೀರ್ಘ ಹಾರಾಟವಾಗಿತ್ತು.
ಈ ಅವಧಿಯಲ್ಲಿ ಬಿಸಿಸಿಐ ವಿಮಾನದೊಳಗಿನ ಮನಸ್ಥಿತಿಯ ಇಣುಕುನೋಟಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಯುಜ್ವೇಂದ್ರ ಚಹಲ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೆರಿಬಿಯನ್ ದ್ವೀಪಗಳಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರನ್ನು ಈ ವಿಮಾನವು ತವರಿಗೆ ಕರೆತಂದಿತು. 16 ಗಂಟೆಗಳ ಸುದೀರ್ಘ ವಿಮಾನ ಪ್ರಯಾಣದಲ್ಲಿ ಭಾರತೀಯ ಕ್ರಿಕೆಟಿಗರು ಏನು ಮಾಡಿದರು ಎಂಬುದರ ವಿವರಗಳನ್ನು ಹಂಚಿಕೊಂಡರು.
ಭಾರತೀಯ ಕ್ರಿಕೆಟಿಗರು ಏನು ಮಾಡಿದರು?
ವಿಮಾನ ಹತ್ತಿದ ಬೆನ್ನಲ್ಲೇ ಪ್ರತಿಯೊಬ್ಬರೂ ಕುಟುಂಬದಂತೆ ವರ್ತಿಸಬೇಕು. ಇದನ್ನು ಖಾಸಗಿ ವ್ಯವಹಾರವನ್ನಾಗಿ ಮಾಡಬೇಕೆಂದು ಕ್ರಿಕೆಟಿಗರು ಬಯಸಿದ್ದರು. ವಿಮಾನದೊಳಗೆ ಯಾವುದೇ ವಿಡಿಯೋ ಚಿತ್ರೀಕರಿಸದಂತೆ ಅಥವಾ ಫೋಟೋಗಳನ್ನು ಕ್ಲಿಕ್ ಮಾಡದಂತೆ ಬಿಸಿಸಿಐ ವಿಶೇಷ ವಿನಂತಿಯನ್ನು ಮಾಡಿತ್ತು ಎಂದು ವಿಶೇಷ ಏರ್ ಇಂಡಿಯಾ ವಿಮಾನದಲ್ಲಿದ್ದ ವಿವಿಧ ಸುದ್ದಿ ಸಂಸ್ಥೆಗಳ ವರದಿಗಾರರು ತಿಳಿಸಿದ್ದಾರೆ.
ವಿಶ್ವಕಪ್ಗಾಗಿ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದ್ದಕ್ಕಾಗಿ ಭಾರತೀಯ ತಂಡಕ್ಕೆ ಧನ್ಯವಾದ ಹೇಳಲು ಏರ್ ಇಂಡಿಯಾ ಪೈಲಟ್ ವಿಶೇಷ ಪ್ರಕಟಣೆ ಹೊರಡಿಸಿದ್ದಾರೆ. ಪ್ರಯಾಣದ ಮಧ್ಯದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಗೌರವಿಸಲು ವಿಶೇಷ ಘೋಷಣೆ ಕೂಗಲಾಯಿತು. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಲ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಹಲವಾರು ಆಟಗಾರರು ಎಕಾನಮಿ ವಿಭಾಗಕ್ಕೆ ತೆರಳಿ ಪತ್ರಕರ್ತರೊಂದಿಗೆ ಚಾಟ್ ಮಾಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಪಂದ್ಯಾವಳಿಯ ಆಟಗಾರ ಜಸ್ಪ್ರೀತ್ ಬುಮ್ರಾ ತಮ್ಮ ಮಗ ಅಂಗದ್ ಅವರೊಂದಿಗೆ ಕುಳಿತು ದೀರ್ಘ ವಿಮಾನ ಪ್ರಯಾಣ ನಡೆಸಿದರು. ಮಾಧ್ಯಮ ಸಿಬ್ಬಂದಿ ಟಿ20 ವಿಶ್ವಕಪ್ ಟ್ರೋಫಿಯನ್ನು ಹಿಡಿದು ಅದರೊಂದಿಗೆ ಫೋಟೋ ತೆಗೆದುಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತು. ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಅಭಿನಂದಿಸುವ ಫಲಕಗಳನ್ನು ಹಿಡಿದು ರಾಷ್ಟ್ರಧ್ವಜವನ್ನು ಬೀಸುತ್ತಾ, ವಿಜಯಶಾಲಿ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ನವದೆಹಲಿಯಲ್ಲಿ ಇಳಿದ ನಂತರ ಆಟಗಾರರು ಐಟಿಸಿ ಮೌರ್ಯ ಹೋಟೆಲ್ ತಲುಪಿದರು. ಆಟಗಾರರು ಪ್ರಧಾನಿ ಮೋದಿ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಲಿದ್ದಾರೆ. ನಂತರ ಅವರು ಮುಂಬೈಗೆ ಹಾರಲಿದ್ದಾರೆ. ಮರಿನ್ ಡ್ರೈವ್ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಸಂಜೆ 5 ಗಂಟೆಗೆ ತೆರೆದ ಬಸ್ನಲ್ಲಿ ರೋಡ್ ಶೋ ನಡೆಯಲಿದೆ.