ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll Result: ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಏನು ಕಾರಣ? ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಟಾಪ್ 10 ಅಂಶಗಳಿವು

Exit Poll Result: ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಏನು ಕಾರಣ? ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಟಾಪ್ 10 ಅಂಶಗಳಿವು

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 3 ರಿಂದ 5 ಸ್ಥಾನಗಳನ್ನು ಗಳಿಸಲಿದೆ ಎಂದು ವಿವಿಧ ಮತದಾನೋತ್ತರ ಸರ್ವೇಗಳು ಹೇಳಿವೆ. ಹಾಗಾದರೆ ಕೈ ನಾಯಕರ ಲೆಕ್ಕಾಚಾರಗಳು ಉಲ್ಟಾ ಆಯಿತೇ? ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಎಡವಿದ್ದು ಎಲ್ಲಿ. ಪ್ರಮುಖ 10 ಚರ್ಚೆಯ ವಿಷಯಗಳು ಇಲ್ಲಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಏನು ಕಾರಣ? ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಟಾಪ್ 10 ಅಂಶಗಳಿವು
ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಏನು ಕಾರಣ? ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಟಾಪ್ 10 ಅಂಶಗಳಿವು

ಬೆಂಗಳೂರು: ಲೋಕಸಭೆ ಚುನಾವಣೆಯ 7 ಹಂತದ (Lok Sabha Election 2024) ಮತದಾನ ಮುಗಿದಿದ್ದು, ನಿರೀಕ್ಷೆಯಂತೆ ಮತದಾನೋತ್ತರ ಸಮೀಕ್ಷೆಗಳು (Exit Poll 2024) ಬಹಿರಂಗವಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ (Karnataka Congress) ತನ್ನ ಸ್ಥಾನಗಳನ್ನು 3 ರಿಂದ 5ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ಅಂದಾಜಿಸಿವೆ. ಆದರೆ ಆಡಳಿತಾರೂಢ ಕಾಂಗ್ರೆಸ್‌ನ ಗ್ಯಾರಂಟಿಗಳ ಅಲೆಯಿಂದ ಎಲ್ಲಿ ಕಡಿಮೆ ಸ್ಥಾನಗಳು ಸಿಗುತ್ತವೆಯೋ ಎಂದು ಆತಂಕಗೊಂಡಿದ್ದ ಕರ್ನಾಟಕ ಬಿಜೆಪಿ (Karnataka BJP) ನಾಯಕರಿಗೆ ಸಮೀಕ್ಷೆಗಳು ಸಿಹಿ ಸುದ್ದಿಯನ್ನೇ ನೀಡಿವೆ. ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 28 ಕ್ಷೇತ್ರಗಳ ಪೈಕಿ 20 ರಿಂದ 25 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಎಂದು ಹೇಳಿವೆ. ಇದು ಕೇಸರಿ ನಾಯಕರಿಗೆ ನಿಟ್ಟುಸಿರು ಬಿಡುವಂತ ಸುದ್ದಿಯಾಗಿದ್ದರೂ 2019ಕ್ಕೆ ಹೋಲಿಸಿದರೆ ತನ್ನ ಗೆಲುವಿನ ಕ್ಷೇತ್ರಗಳಲ್ಲಿ 4 ರಿಂದ 6 ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಎರಡಂಕಿ ದಾಟುತ್ತೇವೆ ಎಂಬ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಆಡಳಿತಾರೂಢ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಸಿಗುವುದಿಲ್ಲ ಎಂದು ಸಮೀಕ್ಷೆಗಳು ಹೇಳಿವೆ. ಹಾಗಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಎಡವಿದ್ದು ಎಲ್ಲಿ, ಸಮೀಕ್ಷೆ ಹಿನ್ನೆಲೆಯಲ್ಲಿ ಚರ್ಚೆಯಾಗುತ್ತಿರುವ 10 ಅಂಶಗಳನ್ನು ನೋಡೋಣ.

  1. ಅತಿ ವಿಶ್ವಾಸ: ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕರು ದೇಶದಲ್ಲಿ ಪ್ರಧಾನಿ ಮೋದಿ ಅವರ ಅಲೆ ಕಡಿಮೆಯಾಗಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅತಿ ವಿಶ್ವಾಸದಿಂದ ಅಬ್ಬರ ಪ್ರಚಾರ ಮಾಡಿದ್ದಾರೆ. ಆದರೆ ಸಮೀಕ್ಷೆಗಳ ಪ್ರಕಾರ ಅದು ಉಲ್ಟಾ ಆದಂತೆ ಕಾಣುತ್ತಿದೆ
  2. ರಾಜ್ಯಕ್ಕೆ ಕಾಂಗ್ರೆಸ್, ದೇಶಕ್ಕೆ ಬಿಜೆಪಿ: ಕರ್ನಾಟಕದಲ್ಲಿ ಬಹುತೇಕ ಮತದಾರರ ಮತದಾಳದ ಮಾತಿದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬೇಕು, ದೇಶದ ಮಟ್ಟದಲ್ಲಿ ಎನ್‌ಡಿಎ ಸರ್ಕಾರವೇ ಬೆಸ್ಟ್ ಅನ್ನೋದು ಮತದಾರರ ಮಾತು. ಇದು ಕೂಡ ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿರಬಹುದು.
  3. ಗ್ಯಾರಂಟಿಗಳು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿವೆ. ಅಷ್ಟೇ ಅಲ್ಲ ಬಿಜೆಪಿ ಆಡಳಿತದ ರಾಜ್ಯಗಳು ಗ್ಯಾರಂಟಿಗಳ ಸ್ಕೀಮ್‌ಗಳನ್ನು ಜಾರಿಗೆ ತರುತ್ತಿವೆ. ಇದನ್ನು ಭಾರತದ ಮಟ್ಟಕ್ಕೂ ವಿಸ್ತರಿಸುವುದಾಗಿ ಚುನಾವಣೆ ಪ್ರಚಾರದ ವೇಳೆ ರಾಹುಲ್‌ ಗಾಂಧಿ ಘೋಷಿಸಿದ್ದರು. ಆದರೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಮತಗಳಾಗಿ ಪರಿವರ್ತನೆಯಾಗಿಲ್ಲ ಅನ್ನೋ ಚರ್ಚೆಯೂ ನಡೆಯುತ್ತಿದೆ.
  4. ನಾಯಕರ ಸಂಬಂಧಿಕರಿಗೆ ಟಿಕೆಟ್: ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್ ನಾಯಕರ ಮಕ್ಕಳು, ಪತ್ನಿ ಇಲ್ಲವೇ ಕುಟುಂಬದರಿಗೆ ಟಿಕೆಟ್ ನೀಡಲಾಗಿದೆ. ಕುಟುಂಬ ರಾಜಕಾರಣಕ್ಕೆ ಜನ ಬೆಂಬಲ ನೀಡಿಲ್ವಾ ಅನ್ನೋ ಚರ್ಚೆಗಳು ಶುರುವಾಗಿವೆ.
  5. ಒಳ ಏಟಿನ ಸಾಧ್ಯತೆ: ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭಾ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದರು. ಆದರೆ ಸಚಿವರು ಹಾಗೂ ಪಕ್ಷದ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಒಳ ಏಟಿನ ಸಾಧ್ಯತೆಯೂ ಇದೆ.
  6. ಆರೋಪಗಳಿಗೆ ತಿರುಗೇಟು: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊಟ್ಟಿದ್ದು ಚೊಂಬು ಎಂಬ ಜಾಹೀರಾತು ಪ್ರಚಾರ ಭಾರೀ ಸದ್ದು ಮಾಡಿತ್ತು. ಆದರೆ ಇದಕ್ಕೆ ಬಿಜೆಪಿ ತಿರುಗೇಟು ನೀಡಿತ್ತು. ಪರಿಶಿಷ್ಟರ, ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನು ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು ಎಂದು ತಿರುಗೇಟು ನೀಡಿತ್ತು.
  7. ಪ್ರಧಾನಿ ಮೋದಿ ಅಬ್ಬರದ ಪ್ರಚಾರ: ಆಡಳಿತ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ನಾಯಕರ ತಮ್ಮ ನೆಚ್ಚಿನ ನಾಯಕ ಪ್ರಧಾನಿ ಮೋದಿ ಅವರನ್ನು ಕರೆಸಿ ಅಬ್ಬರದ ಪ್ರಚಾರ ನಡೆಸಿದ್ದರು. ರಾಹುಲ್‌ ಗಾಂಧಿ ಕೂಡ ಪ್ರಚಾರ ನಡೆಸಿದರೂ ಪ್ರಭಾವ ಬೀರಿಲ್ಲವೇ ಎನ್ನುವುದೂ ಚರ್ಚೆಗೆ ಗ್ರಾಸವಾಗಿದೆ.
  8. ಮೈತ್ರಿ ಲೆಕ್ಕಾಚಾರ: ಜೆಡಿಎಸ್‌ನೊಂದಿಗೆ ಕಳೆದ ಬಾರಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ ಸಮನ್ವಯದ ಕೊರತೆ ಕಂಡು ಸೋಲು ಅನುಭವಿಸಿತ್ತು. ಈ ಬಾರಿ ಜೆಡಿಎಸ್‌ ಬಿಜೆಪಿ ಜತೆ ಸೇರಿರುವುದೂ ಆ ಪಕ್ಷಕ್ಕೆ ಹೊಡೆತ ನೀಡಿರುವ ಚರ್ಚೆಗಳು ನಡೆದಿವೆ.
  9. ನಗರ ಕೇಂದ್ರಿತ ಮತ ಯಾಚನೆ: ಕಾಂಗ್ರೆಸ್‌ ಪಕ್ಷ ನಗರ ಕೇಂದ್ರಿತವಾಗಿಯೇ ಮತ ಯಾಚನೆಗೆ ಒತ್ತು ನೀಡಿದ್ದು. ಕೆಳಹಂತಕ್ಕೆ ಇಳಿಯದೇ ಇರುವುದೂ ಕಾರಣ ಎನ್ನುವ ವ್ಯಾಖ್ಯಾನವನ್ನೂ ನೀಡಲಾಗುತ್ತಿದೆ.
  10. ಕಲ್ಯಾಣ ಕರ್ನಾಟಕದಲ್ಲಿನ ಬಿಜೆಪಿ ನಾಯಕರ ಟಿಕೆಟ್‌ ಹಂಚಿಕೆ ಗೊಂದಲ, ಹಳೆ ಮೈಸೂರು ಭಾಗದಲ್ಲಿನ ಪ್ರಯತ್ನಗಳಿಂದ ಕೆಲವೇ ಸ್ಥಾನಗಳಿಗೆ ಕಾಂಗ್ರೆಸ್‌ ಸೀಮಿತವಾಗಿಯೇ ಎಂಬ ಬಗ್ಗೆಯೂ ಪಕ್ಷದ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು