ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ಕಳೆದ ಬಾರಿ ಅಮೇಥಿಯಲ್ಲಿ ಸೋಲು ಅನುಭವಿಸಿದ್ದ ರಾಹುಲ್ ಗಾಂಧಿ ಈ ಸಲ ರಾಯ್ ಬರೇಲಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅಮೇಥಿಯಲ್ಲಿ ಈ ಬಾರಿ ಕೆಎಲ್ ಶರ್ಮಾ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು ಇಲ್ಲಿದೆ ವಿವರ.

ಲೋಕಸಭಾ ಚುನಾವಣೆಗೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ  ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ.
ಲೋಕಸಭಾ ಚುನಾವಣೆಗೆ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ.

ನವದೆಹಲಿ/ ಬೆಂಗಳೂರು: ಬಹಳ ಕುತೂಹಲ ಕೆರಳಿಸಿದ್ದ ಅಮೇಥಿ ಕ್ಷೇತ್ರದಿಂದ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧಿಸ್ತಾ ಇಲ್ಲ. ಅವರು ರಾಯ್‌ಬರೇಲಿಯಿಂದ ಅಂದರೆ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಕೂಡ ನೆಹರು-ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ಕ್ಷೇತ್ರ.

ರಾಹುಲ್ ಗಾಂಧಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಗೆ ಎದುರಾಳಿಯಾಗಿದ್ದರು. ಸೋಲಿನ ಭೀತಿ ಕಾಡಿದ ಕಾರಣ ರಾಹುಲ್ ಗಾಂಧಿ ಕೇರಳದ ವಯನಾಡ್ ಅನ್ನು ಎರಡನೆ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು. ಅದಕ್ಕೂ ಮೊದಲು ದಶಕಗಳಿಂದ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ವಿಶೇಷವಾಗಿ ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯಾಗಿತ್ತು.

ರಾಹುಲ್ ಗಾಂಧಿ 2004 ರಿಂದ 2019 ರವರೆಗೆ ಸಂಸತ್ತಿನ ಕೆಳಮನೆಯಲ್ಲಿ ಅಮೇಥಿಯನ್ನು ಪ್ರತಿನಿಧಿಸಿದ್ದರು. ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ 2004 ರಿಂದ 2024 ರವರೆಗೆ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ವರ್ಷದ ಆರಂಭದಲ್ಲಿ, ಅವರು ಸ್ಥಾನವನ್ನು ತೊರೆದು ರಾಜ್ಯಸಭೆಗೆ ತೆರಳಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಇದ್ದವು.

ಹೀಗಾಗಿ ಈ ಬಾರಿ ಅಮೇಥಿಯಿಂದ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲ ಇತ್ತು. ಆದರೆ, ಅಮೇಥಿಯಿಂದ ಈ ಬಾರಿ ಕಣಕ್ಕೆ ಇಳಿದವರು ರಾಹುಲ್ ಗಾಂಧಿ ಆಪ್ತ ಕಾಂಗ್ರೆಸ್ ಮುಖಂಡ ಕಿಶೋರಿ ಲಾಲ್ ಶರ್ಮಾ. ಅವರು ಇಂದು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಕಿಶೋರಿ ಲಾಲ್ ಶರ್ಮಾ ಅಥವಾ ಕೆಎಲ್‌ ಶರ್ಮಾ ಯಾರು?

ಕಿಶೋರಿ ಲಾಲ್ ಶರ್ಮಾ ಗಾಂಧಿ ಕುಟುಂಬದ ವಿಶ್ವಾಸಾರ್ಹರು. ಕಾಂಗ್ರೆಸ್ ಪಕ್ಷದ ವಿಶೇಷವಾಗಿ ನೆಹರು- ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಅವರು ಕೆಎಲ್ ಶರ್ಮಾ ಎಂದೇ ಜನಪ್ರಿಯರು. ಅವರು ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ಕ್ಷೇತ್ರ ಪ್ರತಿನಿಧಿಯಾಗಿದ್ದರು. ಕಿಶೋರಿ ಲಾಲ್ ಶರ್ಮಾ ಅವರು ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿರ್ವಹಿಸುತ್ತಿದ್ದ ಪ್ರಮುಖ ವ್ಯಕ್ತಿ.

ಕಿಶೋರಿ ಲಾಲ್ ಶರ್ಮಾ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಕೆಎಲ್ ಶರ್ಮಾ ಪಂಜಾಬ್ ಮೂಲದವರು. 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕರ್ತನಾಗಿ ಅಮೇಥಿಗೆ ಬಂದಿದ್ದರು. ಅವರು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪ್ರಧಾನಿ (ದಿವಂಗತ) ರಾಜೀವ್ ಗಾಂಧಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.

1990ರ ದಶಕದಲ್ಲಿ ಪಕ್ಷಕ್ಕಾಗಿ ಕೆಲಸ ಶುರುಮಾಡಿದ ಕೆಎಲ್ ಶರ್ಮಾ

1991ರಲ್ಲಿ ರಾಜೀವ್ ಗಾಂಧಿ ಅವರ ನಿಧನದ ಬಳಿಕ ಕೆಎಲ್ ಶರ್ಮಾ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. 1990 ರ ದಶಕದಲ್ಲಿ ಗಾಂಧಿ ಕುಟುಂಬವು ಚುನಾವಣಾ ರಾಜಕೀಯದಿಂದ ದೂರವಿದ್ದಾಗ, ಅವರು ಇತರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. 1999 ರಲ್ಲಿ ಸೋನಿಯಾ ಗಾಂಧಿ ಅವರ ಮೊದಲ ಚುನಾವಣಾ ಗೆಲುವಿನಲ್ಲಿ ಕಿಶೋರಿ ಲಾಲ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಅಮೇಥಿಯ ವಿಜಯದೊಂದಿಗೆ ಸೋನಿಯಾ ಗಾಂಧಿ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿದರು.

ಸೋನಿಯಾ ಗಾಂಧಿ ಅಮೇಥಿ ಕ್ಷೇತ್ರವನ್ನು ತೊರೆದು ರಾಯ್ ಬರೇಲಿಗೆ ತೆರಳಿದ ನಂತರ, ಕೆಎಲ್ ಶರ್ಮಾ ಅವರೊಂದಿಗೆ ರಾಯ್‌ಬರೇಲಿಗೆ ತೆರಳಿದರು. ರಾಹುಲ್ ಗಾಂಧಿ 2004ರಲ್ಲಿ ಅಮೇಥಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ, ಕೆಎಲ್ ಶರ್ಮಾ ಅಮೇಥಿ ಮತ್ತು ರಾಯ್ ಬರೇಲಿ ಎರಡರಲ್ಲೂ ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಕೆಎಲ್ ಶರ್ಮಾ ಬಿಹಾರ ಮತ್ತು ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.

ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಮೇ 20 ರಂದು ಮತದಾನ ನಡೆಯಲಿದೆ.

Whats_app_banner